Thursday 18 September 2008

ಹುಣ್ಣಿಮೆಯ ಹೆಸರಿಗಿಲ್ಲಿ ಸದಾ ಗ್ರಹಣ!

ಪ್ರಜ್ಞಾ...

ಈ ಹೆಸರನ್ನ ಇಡಲು ಆಯಿಗೆ ತುಂಬ ಇಷ್ಟವಿತ್ತಂತೆ. ಹುಣ್ಣಿಮೆ ದಿನ ಹುಟ್ಟಿದ ಕೂಸಿಗೆ 'ಪೂರ್ಣಿಮಾ'ಗಿಂತ ಒಳ್ಳೆಯ ಹೆಸರು ಇನ್ಯಾವುದು ಎಂದು ಎಲ್ಲರೂ ಕೇಳಿದಾಗ ಆಯಿ ಒಪ್ಪಿದ್ದು ಈಗ ಇಪ್ಪತ್ತೇಳು ವರ್ಷದ ಹಿಂದಿನ ಕಥೆ.

ಮೊನ್ನೆ ಮೊನ್ನೆಯವರೆಗೆ ಎಲ್ಲ ಸರಿಯಾಗಿಯೇ ಇತ್ತು. ಕನ್ನಡ ಶಾಲೆ - ಹೈಸ್ಕೂಲು - ಕಾಲೇಜಿನಲ್ಲಿ ಈ ಹೆಸರು ತುಂಬ ಅಪರೂಪ ಎಂಬ ಕೋಡು ಬೇರೆ. ಮನೆಯಲ್ಲಿ ಕೂಸೇ ಕೂಸೇ, ಊರವರಿಗೆ ಏನವ್ವ ತಂಗಿ, ಗೆಳತಿಯರಿಗೆ ಮತ್ತು ಹತ್ತಿರದವರಿಗೆ ಪೂರ್ಣಿ. ಏನಿದೆ ಅಲ್ಲಿ ತಲೆ ಕೆಡಿಸಿಕೊಳ್ಳಲು? ನಿಮ್ಮಿಬ್ಬರ ಹೆಸರು 'ಮಧು ಪೂರ್ಣಿಮಾ' ಅಲ್ವಾ...? ಹಾಗಿದ್ರೆ ನೀವು ಹನಿಮೂನ್ ಜೋಡಿ ಎಂದು ಗೆಳೆಯನೊಬ್ಬ ಛೇಡಿಸಿದಾಗ ನಾಚಿಕೊಂಡ ನೆನಪು ಕೂಡ ಇದೆ.

ನಾಲಿಗೆ ಹೊರಳದ ಜನರಿರುವ ಈ ದೇಶಕ್ಕೆ ಬರುವವರೆಗೂ ನನ್ನ ಹೆಸರಿನ ಬಗ್ಗೆ ಆಗಾಗ ಹೆಮ್ಮೆಪಡುತ್ತಿದ್ದೆ ಅಂತ ಹೇಳಲು ತುಸು ಸಂಕೋಚ! ಇಲ್ಲಿಗೆ ಬಂದ ನಂತರ ಹೆಸರನ್ನ ಹೇಗೆ ಸರಳ ಮಾಡೋದು. ಅಂತ ಹತ್ತಾರು ಬಾರಿ ಯೋಚನೆ ಮಾಡಿದ್ದಿದೆ. ಪ್ರತಿ ದಿನ ಹೆಸರಿನ ಕಗ್ಗೊಲೆ ಆಗೋದು ಕೇಳಿ ಮುಖ ಚಿಕ್ಕದು ಮಾಡಿದ್ದಿದೆ.

ಕೆಲಸ ಹುಡುಕಲು ಶುರುಮಾಡಿದಾಗಿನಿಂದ ಆರಂಭವಾದ ಈ ನಾಮಾಮೃತ ಅಧ್ವಾನಕ್ಕೆ ಒಂದು ಪೂರ್ಣವಿರಾಮ ಅಂತ ಇರುವುದು ಡೌಟೇ! ಬೆಳಗ್ಗೆ ಹತ್ತೂವರೆಗೆ ಕಾಲ್ ಮಾಡಿದ ಲಿಂಡಾ 'ಕ್ಯಾನ್ ಐ ಸ್ಪೀಕ್ ಟು ಪ್ಯುಮೀನಾ ಪ್ಲೀಸ್..' ಅಂದರೆ ಸಂಜೆ ಐದಕ್ಕೆ ಕಾಲ್ ಮಾಡಿದ ಜೀನ್ 'ಇಸ್ ಇಟ್ ಪರೀನಾ..' ಎನ್ನುತ್ತಾಳೆ. ಮಾರನೇ ದಿನ ಬ್ರ್ಯಾನ್ 'ಹಾಯ್ ದೇರ್ - ವಾಂಟೆಡ್ ಟು ಟಾಕ್ ಟು ಪುಮಿನಿ ಬಾಟ್' ಅಂದಾಗ 'ರಾಂಗ್ ನಂಬರ್ರ್' ಅಂತ ಒದರಿ ಫೋನ್ ಕುಕ್ಕಿ ಬಿಡುವಷ್ಟು ಸಿಟ್ಟು.

ಅಳತೆ ಸರಿಯಿರದ ಜಾಕೆಟ್ ವಾಪಸ್ ಕೊಡಲು ಹೋದೆ ಒಮ್ಮೆ. ಫಾರ್ಮ್ ತುಂಬತೊಡಗಿದ ಸೇಲ್ಸ್ ಹುಡುಗಿ ಫೋನ್ ನಂಬರ್ , ಅಡ್ರೆಸ್ ಎಲ್ಲ ಬರೆದಾದ ಮೇಲೆ ಕೇಳಿದ್ದು ಹೆಸರು. ನಿಧಾನವಾಗೇ ಉಲಿದೆ. ಅವಳ ಕಣ್ಣು ಕಿರಿದಾಯ್ತು. ಫಾರ್ಮ್ ಮತ್ತು ಪೆನ್ನು ನನ್ನ ಕೈಗೆ ಬಂತು! ಅರ್ರೇ, ಎಂಥ ಜನನಪ್ಪಾ ಎಂದು ಒಳಬಾಯಿಯಲ್ಲೇ ಹಲುಬುತ್ತ ಹೆಸರು ಬರೆದು ಫಾರ್ಮ್ ಹಿಂದಿರುಗಿಸಿದೆ. 'ಪೂರ್.. ನೀಮಾ ಬಟ್ - ಐ ಫೈಂಡ್ ಇಟ್ ಫನ್ನಿ! ಡೋಂಟ್ ಟೇಕ್ ಇಟ್ ಟು ಹಾರ್ಟ್' ಎಂಬ ಮಾತಿಗೆ 'ಡೂ ಯೂ ವಾಂಟ್ ಟು ನೋ ದಿ ಮೀನಿಂಗ್ ಆಫ್ ಇಟ್' ಅಂತ ಉರಿ ಉರಿ ಮುಖ ಮಾಡಿ ಹೇಳಿ ಬಂದೆ. ಆದರೂ ಆ 'ಫನ್ನಿ' ಎಂಬ ಶಬ್ದಕ್ಕೆ ಇಡೀ ದಿನ ಮೂಡ್ ಆಫ್ ಮಾಡಿಸುವ ದೈತ್ಯ ಶಕ್ತಿ.

ಆಫೀಸಿನಲ್ಲಿ ಹೆಸರನ್ನು ಅರೂಪಗೊಳಿಸುವ ಮೊದಲು ನಾನೇ 'ಐಮ್ ಪೂರ್ಣಿ' ಅಂತ ಪರಿಚಯ ಮಾಡಿಕೊಂಡೆ. ಕೆಲಸಕ್ಕೆ ಹೋಗ ತೊಡಗಿ ಒಂದು ತಿಂಗಳಾಗಿರಬಹುದು, ಎಲಿಯಟ್ ಬಂದು 'ವಿ ವಾಂಟ್ ಟು ರೀನೇಮ್ ಯೂ' ಅಂದ. ನನ್ನ ಮುಖದ ತುಂಬ ಪ್ರಶ್ನೆ. 'ಕ್ಯಾನ್ ಐ ಕಾಲ್ ಯೂ ಜಾನ್?' ಅಂದ! ಒಂದು ಕೋಳಿ ಕೂಗಿದ ಮೇಲೆ ಹಿಂಡು ಕೋಳಿ ಸುಮ್ಮನಾದೀತೆ? ಇನ್ನೊಬ್ಬಳು 'ಪ್ಯೂನಮಾ' ಅಂದಳು. ಮತ್ತೊಬ್ಬ 'ಪನಾಮಾ'. ಮಗದೊಬ್ಬ 'ಪನಿನಿ' (ಬ್ರೆಡ್ ರೋಲ್ ಮತ್ತು ಟೊಮ್ಯಾಟೋ ಸಾಸ್ ಜೊತೆಗೆ ಮಾಡುವ ಖಾದ್ಯ ಗೊತ್ತಲ್ಲ). ಆ ಮೂಲೆಯಿಂದ ಒಂದು ದನಿ 'ಪಾಲಿಮರ್'. ಅದೋ ರಿಚರ್ಡ್ ಹೇಳಿದ 'ಪುನ್ಮೀನಾ'. ಟೋನಿಗೆ 'ಪ್ಯೂನಂ' ಈಸಿಯಂತೆ! ಫಿಲಿಪ್ ಗೆ ವಾರದ ಹಿಂದೆ ನಾನು ಹೇಳಿದ ಮಾತೇ ನೆನಪಿದೆ. ಅವ ನನಗೆ 'ಫುಲ್ ಮೂನ್' ಅಂತಾನಂತೆ. 'ಇಷ್ಟೆಲ್ಲ ಹಿಂಸೆ ಕೊಡಬೇಡಿ ನನ್ನ ಹೆಸರಿಗೆ' ಎಂದು ಕೂಗುವವರೆಗೂ ನಡೆದೇ ಇತ್ತು ಶತನಾಮಾವಳಿ , ಸಹಸ್ರನಾಮಾರ್ಚನೆ.

ಅಂತೂ ಇಂತು ಕಷ್ಟಪಟ್ಟು 'ಪೂನಿ' ಎಂದು ಕರೆಯಲು ಕಲಿಸಬೇಕಾದರೆ ಬರೋಬ್ಬರಿ ಆರು ತಿಂಗಳು ಹಿಡಿಯಿತು. 'ಪೂರ್ಣಿ' ಅಂತ ಕರೆಯಬಾರದಾ ಎಂದು ಆಗಾಗ ಅನ್ನಿಸುವುದುಂಟು. ನನ್ನ ಹೆಸರು 'ಪ್ರಜ್ಞಾ' ಆಗಿದ್ದರೆ ಅದು ಇನ್ನೇನು ಆಗುತ್ತಿತ್ತೋ ಅನ್ನುವುದನ್ನು ಆಯಿಯ ಎದುರೇ ಹೇಳಿ 'ಕ್ಕೆ ಕ್ಕೆ ಕ್ಕೆ' ಅಂತ ನಗಬೇಕು ಈ ಬಾರಿ...ಊರಿಗೆ ಹೋದಾಗ.


(’ದಟ್ಸ್ ಕನ್ನಡ’ಕ್ಕೊಂದು ಬೆಚ್ಚನೆಯ ಥಾಂಕ್ಸ್!)

Thursday 19 June 2008

ಸಾಕಿನ್ನು ಮರುಗಿದ್ದು

ತುಸು ಕಸಿವಿಸಿ
ಇಲ್ಲೇ ಎಲ್ಲೋ
ಮೂಲೆಯಲ್ಲಿ
ಮನಸೇ ಇರಬೇಕು
ಅಲ್ಲವಾದರೆ ಹೆಜ್ಜೆಯೇಕೆ
ತತ್ತರಿಸೀತು?

ಅದೋ, ಅವ ಹೇಳುತ್ತಿದ್ದಾನೆ
ದಿನದ ನಗುವಿಲ್ಲ
ಮುಖದಲ್ಲಿ
ಅಂಗಿ ಹಾಕಿದ್ದು
ತಿರುವುಮುರುವಂತೆ
ಅವಳು ಉಸುರಿದಳು
ಕಿವಿಯಲ್ಲಿ
ಅರೇ, ಇದು ಚಿತ್ತ ಸ್ವಾಸ್ಥ್ಯದ ಪ್ರಶ್ನೆಯೇ?
ಸುಮ್ಮನೇ ತಳಮಳ...

ನಡೆದದ್ದು ಅವರ
ಮೂಗಿನ ನೇರ ದಾರಿ ಹಿಡಿದೇ.
ಹಾಗಾದರೆ ತಪ್ಪಾಗಿದ್ದೆಲ್ಲಿ?
ಕೊನೆಗೂ ಮರೆತಿದ್ದು
ಮನೆಯ ಹಾದಿ!

ಕಣ್ಣ ಸುತ್ತಲಿನ ಕಪ್ಪು
ವರ್ತುಲ ಕಾಯುತ್ತಿರುವುದು
ನಿನ್ನ ಅಪ್ಪುಗೆಗಲ್ಲವೇ?
ತುಟಿಯ ಪಕ್ಕದ
ಮಚ್ಚೆಗೆ ಬೇಕಿರುವುದು
ಬೆಚ್ಚನೆಯ ನೇವರಿಕೆ ಅಲ್ಲವೇ?

Saturday 14 June 2008

ಬ್ರಿಟ್ ಬಿಟ್ಸ್

ಸೂ.ಪಿ
ನಮ್ಮಾಫೀಸಿನಲ್ಲೊಬ್ಬಳು ನಲವತ್ತರ ಸುಂದರಿ. ಹೆಸರು `Sue Power’. ಹದಿನಾಲ್ಕು ವರ್ಷಗಳಿಂದ ಸಿಖ್ ಒಬ್ಬನೊಡನೆ ’ಲಿವ್ ಇನ್’ ರಿಲೇಶನ್ ಅಂತೆ. ಅವನೆಸರು ‘ತರ್ಲೋಕ್’ (ತ್ರಿಲೋಕ್ ಇರಬಹುದು ಎಂಬುದು ನನ್ನ ಲೆಕ್ಕಚಾರ...). ಇವಳ ಬಾಯಲ್ಲಿ ಅವ ‘ಟಳಕ್’! ಮುಖ್ಯ ವಿಚಾರ ಅದಲ್ಲ. ಟಳಕ್ ತಂಗಿಯರಿಬ್ಬರು ಈ ಸುಂದರಿಯನ್ನ ‘ಸೂ.ಪಿ.’ ಅಂತ ಕರೀತಾರಂತೆ. ಏನು ಸೂ.ಪಿ ಅಂದ್ರೆ...? ಕೇಳಿದೆ. ‘ಸುರಿಂದರ್ ಪವರ್’ ಅಂತೆ!!!

ಮಗಳು ಬರ್ತಿದ್ದಾಳೆ
ಅಲೆನ್ ಹಾಲ್... ಐವತ್ತಾರಾದರೂ ಇಪ್ಪತ್ತೇ ಆದವರಷ್ಟು ಲವಲವಿಕೆ - ಜೀವನೋತ್ಸಾಹ. ನ್ಯೂಝೀಲ್ಯಂಡ್‌ಗೆ ಹೋದ ಮಗಳು ೨ ವರ್ಷದ ನಂತರ ಮತ್ತೆ ಮನೆಗೆ ಬರುವ ಸಂಭ್ರಮ ಇವನಿಗೆ. ಒಂದು ದಿನ ಮಗಳಿಗಾಗಿ ಹೊಸ ಬೆಡ್, ಮರುದಿನ ಮಗಳ ಕೋಣೆಗೆ ಹೊಸ ಕರ್ಟನ್, ಮಗಳಿಗಿಷ್ಟವಾಗುವ ಸೀಡಿ - ಬುಕ್‌ಗಾಗಿ ವೀಕೆಂಡ್‌ ಶಾಪಿಂಗ್. ಇವನ ಸಡಗರ ಕಂಡು ಒಂದಿನ ಕೇಳಿದೆ. ‘ಡು ಯೂ ರಿಯಲಿ ಮಿಸ್ ಯುವರ್ ಡಾಟರ್ ವೆನ್ ಶಿ ಇಸ್ ಇನ್ ನ್ಯೂಝೀಲ್ಯಾಂಡ್...?’ ಸ್ವಲ್ಪ ಹೊತ್ತು ಸುಮ್ಮನಾದ. ನಂತರ ನಿಧಾನ ಹೊರಟಿತು ಮಾತು. ‘ಐ ಕೆನಾಟ್ ಸೇ ವಿ ಡು ನಾಟ್ ಮಿಸ್ ಹರ್... ಬಟ್ ಕ್ಯಾನ್ ಡೆಫಿನಿಟ್ಲೀ ಸೇ, ವಿ ಡೋಂಟ್ ವಾಂಟ್ ದಟ್ ಡೇ - ವೆನ್ ಶಿ ಹೆಡ್ಸ್ ಟುವಾರ್ಡ್ಸ್ ಏರ್‌‌ಪೋರ್ಟ್’.

‘ಹೋಗಿ ಬರುತ್ತೇನೆ’ ಎನ್ನುವ ಸಮಯಕ್ಕೆ ಸರಿಯಾಗಿಯೇ ತೋಟದತ್ತ ಧಾವಿಸುವ ಅಪ್ಪಯ್ಯ ಅವತ್ತು ಇಡೀ ದಿನ ನೆನಪಾದ. ರಾತ್ರಿ ಕನಸಲ್ಲಿ ಬೆಂಗ್ಳೂರು ಬಸ್ ಹತ್ತಿಸಿ ಕೈ ಬೀಸುತ್ತಿರುವ ಅಣ್ಣ.

Sunday 13 April 2008

ಕನಸ ಕುದುರಿಸಿದವರು

ಆಗೆಲ್ಲ ನನ್ನ ಕಣ್ಣಲ್ಲೇ
ಕನಸುಗಳು ಗೂಡುಕಟ್ಟುತ್ತವೆ ಎಂದು
ಬೀಗುತ್ತಿದ್ದ ಕಾಲ
ವಯಸ್ಸು ಹದಿನೈದೋ ಹದಿನಾರೋ...
ಚಾದರದ ಒಳಗೊಳಗೇ ಮುದುರಿ,
ಮಗ್ಗುಲು ಬದಲಾಯಿಸದೆ
ಬೆಳಗು ಹಾಯಿಸಿದ ರಾತ್ರಿಗಳು
ಇಂದು ಯೋಚಿಸಿದರೆ
ತೀರ ಸಿಲ್ಲಿ ಸಿಲ್ಲಿ!

ಜಡೆ ಹೆಣೆಯುವಾಗ
ಕನ್ನಡಿಯ ಆ ತುದಿಯಲ್ಲಿ
ಯಾರೋ ಕಣ್ಣು ಮಿಟುಕಿಸಿದಂತೆ ಎನಿಸಿ
ಬೈತಲೆಗೆ ತುಟಿ ತಾಕಿಸಿದಂತೆ ಭ್ರಮಿಸಿ
ಸರಸರನೆ ಹೆಜ್ಜೆ ಹಾಕಿ
ಕಿಟಕಿಯ ಬದಿಯ ಜಾಗವನ್ನೇ ಆಯ್ದು
ರಸ್ತೆಯತ್ತ ನೋಟ ನೆಟ್ಟಾಗ
ಕಣ್ಣಲ್ಲಿ ಹಸಿ-ಹಸಿ ವಿರಹ...

ದೇಹ ಚಿಗಿತುಕೊಳ್ಳುವ ಹೊತ್ತಲ್ಲಿ
ಪ್ರತಿ ಎಲೆಯ ವಾಸನೆಯನ್ನೂ
ಗ್ರಹಿಸುವ ಉಮೇದಿನಲ್ಲಿ
ಕಣ್ಣಲ್ಲಿ ಗೂಡು ಕಟ್ಟಿದ್ದ ಕನಸು
ಒಬ್ಬರಿಂದೊಬ್ಬರಿಗೆ ವರ್ಗ
ವಾಗುತ್ತ - ಬಣ್ಣಬಣ್ಣದ
ಮೊಟ್ಟೆಗಳನ್ನು ಇಡುತ್ತ ಹೋದದ್ದು
ತಿಳಿಯಲೇ ಇಲ್ಲ
ಪುಟಾಣಿ ಅಲೆಗಳನ್ನು
ಗ್ರಹಿಸುವ ವಯಸ್ಸೂ ಅದಲ್ಲ

ದಿನ ಕಳೆದಂತೆ
ಕನಸು ಮೊಟ್ಟೆಗಳಲ್ಲಿ ಯಾವವೂ
ಮರಿಯಾಗದೆ ಜಳ್ಳಾಗಿ
ಬಿಟ್ಟವು ಬರಿದೇ ತಮ್ಮ
ಚಿಪ್ಪುಗಳನ್ನು ಉಳಿಸಿ...
ಆದರೂ
ನಿಮಗೆಲ್ಲ ಋಣಿ ನಾನು
ಅಂಗಾಂಗ ಚಿಗುರಿಸಿದ್ದಕ್ಕೆ
ಕನಸ ಕುದುರಿಸಿದ್ದಕ್ಕೆ.

Wednesday 5 March 2008

ಎಂದೋ ಕೇಳಿದ್ದು, ಕಂಡಿದ್ದು

ದಡದಡನೆ ಮೆಟ್ಟಿಲುಗಳನ್ನು ಇಳಿದ ಶಬ್ದ ಕೇಳಿ ‘ಕಸ್ತೂರಿ’ಯಲ್ಲಿ ಹುಗಿದುಹೋಗಿದ್ದ ನಾನು ತಲೆ ಎತ್ತಿ ನೋಡಿದೆ. ಸುಜಾತ್ ಚಿಕ್ಕಿ ತುಂಬ ಗಾಬರಿಯಾಗಿದ್ದಂತೆ ಕಂಡಳು. ‘ಚಿಕ್ಕಿ, ಎಂತಾ ಆತೆ...?’ ನನ್ನ ಪ್ರಶ್ನೆ. ‘ತಂಗೀ, ನೀ ಇಲ್ಲೇ ಇದ್ದಿದ್ಯ... ಎಂತೂ ಆಜಿಲ್ಯೆ ಮಗಾ...’ ಬಿಕ್ಕಳಿಕೆಯಲ್ಲಿ ಮುಗಿದ ಮಾತು. ಸರ ಸರನೆ ಒಳನಡೆದ ಚಿಕ್ಕಿ. ನನ್ನ ಮನಸ್ಸಿನಲ್ಲಿ ದೈತ್ಯಾಕಾರದ ಪ್ರಶ್ನಾರ್ಥಕ. ಹತ್ತು ನಿಮಿಷ ಬಿಟ್ಟು ಅಡುಗೆ ಮನೆಯತ್ತ ನಡೆಯುವಾಗ ಹಿಂದೆ, ಕಟ್ಟಿಗೆ ಸರಿಯುವ ಜಾಗದಲ್ಲಿ ದೊಡ್ಡಮ್ಮ - ಸುಜಾತ್ ಚಿಕ್ಕಿಯ ಪಿಸು ಪಿಸು ಕೇಳುತ್ತಿತ್ತು. ಚಿಕ್ಕಿಯ ದನಿ... ‘ ಯನ್ ಮಗಳು - ಮಗ ಇಬ್ರೂ ದೊಡ್ದಾಗ್ತಾ ಇದ್ದ, ಈ ಮನಶಾ ಹೀಂಗೆ ಮಾತಾಡ್ತಾ. ಅಕ್ಕಾ, ಇವತ್ ಹೇಳ್ಲೇ ಬೇಕು ಅಂದ್ಕಂಜಿ ಇವರತ್ರ. ಶಾರದತ್ಗೆ ಮುಖಾ ನೆನಪಾದ್ರೆ ಬೇಜಾರಾಗ್ತು...’ ಇದನ್ನ ಹಿಂಬಾಲಿಸಿದ್ದು ಬಿಕ್ಕಳಿಕೆ. ನನಗೆ ತಲೆ- ಬುಡ ಅರ್ಥ ಆಗಲಿಲ್ಲ. ಆಗ ನಾನು ಬಹುಶಃ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನಂತರ ಸುಮಾರು ವರ್ಷ ಶಾರದೆ ಅತ್ತೆ - ಅವಳ ಗಂಡ ಸುಜಾತ್ ಚಿಕ್ಕಿಯ ಮನೆಗೆ ಬರುತ್ತಿರಲಿಲ್ಲ, ತುಂಬ ಹತ್ತಿರದ ಸಂಬಂಧವಾದರೂ. ಶಾರದೆ ಅತ್ತೆಯ ಮಕ್ಕಳು ಮಾತ್ರ ಆಗಾಗ ಬರುತ್ತಿದ್ದರು.
____
ಇಷ್ಟೆಲ್ಲ ಆಗಿ ಏಳೆಂಟು ವರ್ಷದ ಮೇಲೆ ಮಾತಿನ ಮಧ್ಯೆ ದೊಡ್ಡಮ್ಮ ಹೇಳುತ್ತಿದ್ದರು... ‘ಸುಜಾತ್ ಚಿಕ್ಕಿ ಅನುಭವಿಸಿದ್ದು ಕಡಿಮೆ ಏನಲ್ಲ. ದಿನಾ ಹೋಗಿ - ಬಂದು ಮಾಡ್ತಾ ಇದ್ದ ಶಾರದೆ ಗಂಡ, ಸುಜಾತ್ ಚಿಕ್ಕಿ ಹತ್ರ ಹಲ್ ಕಿರೀತಿದ್ದಾ. ಕಡೀಗೆ ಒಂದಿನಾ ಅದು ತೀರಾ ಅತೀನೂ ಆತು. ಕಾಕಾನ್ ಸಿಟ್ಟಿಗೆ ಹೆದ್ರಿ ಸುಮ್ಮನಿದ್ದ ಸುಜಾತ್ ಚಿಕ್ಕಿ ಇವಂದು ಅತಿ ಆದಾಗಾ ಬಾಯಿ ಬಿಡ್ಲೇ ಬೇಕಾತು. ಮುಂದೆ ಏನಾತು ಹೇಳದು ಗೊತ್ತಿಲ್ಲೆ. ಅಂತೂ ಈಗೀಗ ಶಾರದೆ ಅತ್ತೆ - ಅದ್ರ ಗಂಡ ಮತ್ತೆ ಚಿಕ್ಕಿ ಮನೀಗೆ ಬರ್ತಾ ಇದ್ದ...’
ಆಗಲೇ ನನಗೆ ‘ತೀರಾ ಅತಿಯಾದ ದಿನ’ ಯಾವುದು ಅಂತ ಗೊತ್ತಾಗಿದ್ದು. ಚಿಕ್ಕಿಯ ಅಂದಿನ ಬಿಕ್ಕಳಿಕೆಯ ಅರ್ಥ ತಿಳಿದಿದ್ದು.
ದೊಡ್ಡಮ್ಮ ಹೇಳಿದ್ದು ದಿನವೆಲ್ಲ ಕೊರೆಯುತ್ತಿತ್ತು. ಚಿಕ್ಕಿ ಆ ಭಂಡನ ಕೆನ್ನೆಗೆ ಯಾಕೆ ಬಾರಿಸಲಿಲ್ಲ.. ಎಂದು ಪದೇ ಪದೇ ಅನ್ನಿಸುತ್ತಿತ್ತು. ಅಂಥ ಭಂಡನೊಡನೆ ಹತ್ತಿಪ್ಪತ್ತು ವರ್ಷ ಸಂಸಾರ ಮಾಡಿದ ಪಾಪದ ಶಾರದೆ ಅತ್ತೆ ಮುಂದಿನ ಸಲ ಸಿಕ್ಕಾಗ ಒಂದ್ನಾಲ್ಕು ಮಾತು ಹೆಚ್ಚಿಗೆಯೇ ಆಡಬೇಕು ಅಂದುಕೊಂಡ ಮೇಲೆ ಮನ ತುಸು ನಿರಾಳ.

Wednesday 20 February 2008

ಸಖ ಗೀತ

ಇವನ ಬಗ್ಗೆ ಬರೆಯಬೇಕಂತೆ-
ಬರವಣಿಗೆ ಎಂದರೇನು ಅಮಟೆಕಾಯಿಯಾ
ಕಲ್ಲು ಹೊಡೆದ ಮರುಕ್ಷಣ ಮಡಿಲಲ್ಲಿ ಬೀಳಲು
ಎಂದರೆ,
ತಲೆ ಮೇಲೆ ನಕ್ಷತ್ರವನ್ನೇ ಉದುರಿಸುವಷ್ಟು
ರೊಮ್ಯಾಂಟಿಕ್ ಆಗಿ ಕಣ್ ಹೊಡೆಯುವ
ಇವನ ಬಗ್ಗೆ ಬರೆಯಬೇಕಂತೆ!

ಇವನಿಗಾಗಿ ಹಾಡಬೇಕಂತೆ-
ಹಾಡುವಾಗ ಸಾಲು ಮರೆತರೆ
ನೀ ಸಾಥ್ ಕೊಡುವೆಯಾ
ಎಂದರೆ,
ಕಣ್ಮಿಟುಕಿಸಿ, ಗಂಟಲು ಸರಿಮಾಡಿ
‘ಲವ್ಯೂ...’ ಎಂದೊದರುವ
ಇವನಿಗಾಗಿ ಹಾಡಬೇಕಂತೆ !

ಇವನಿಗಾಗಿ ಬದುಕಬೇಕಂತೆ-
ನನ್ಬದುಕೆಲ್ಲ ನೀನೇ ಅಲ್ಲವೇನೋ...
ಎಂದರೆ,
ಪುಟಾಣಿ ಮಡಿಲಲ್ಲಿ ಅಡಗುವ
ಮಾತೇ ಬರದಷ್ಟು ಭಾವುಕನಾಗುವ
ಇವನಿಲ್ಲದೇ
ಬದುಕು ಖುಷಿಯಾಗಿರುವುದಾದರೂ ಹೇಗೆ..?

Sunday 17 February 2008

ದಕ್ಕಿದ್ದು

ತಣ್ಣಗಿನ ಗಾಳಿಯಲ್ಲಿ - ಮೋಡಗಳ ಮಡಿಲಲ್ಲಿ
ಇವರೆಲ್ಲರೊಡನೆ ಸಂಭ್ರಮಿಸುವಾಗ
ಥಟ್ಟನೆ ಒತ್ತರಿಸುವ ನೆನಪು-
ಗದರಿಸಿ ಓಡಿಸಿದರೂ
ಬೆದರಿಸಿ ಕಳಿಸಿದರೂ
ಮತ್ತಷ್ಟು ಸನಿಹ

ಕಡಲ ತಡಿಯಲ್ಲಿ
ತೀರದುದ್ದಕ್ಕೂ ಅಲೆಯುತ್ತಿರುವಾಗ
ಪ್ರತಿ ಅಲೆಯೂ ಹೊತ್ತು ತರುವ
ಹೊಸ ಹಂಬಲಗಳು-
ಈ ಹಂಬಲಗಳು ಮುಗಿಯುವುದೆಂದೋ,
ಆ ಅಲೆಗಳು ನಿಲ್ಲುವುದೆಂದೋ
ಮತ್ತದೇ ಅಸ್ಪಷ್ಟ ಅಂತರಂಗ...

ಹೂಗಿಡಗಳಿಗೆ ನೀರು ನೆಪಮಾತ್ರ
ದೃಷ್ಟಿ ಪೂರ್ತಿ ರಸ್ತೆಯತ್ತ
ಕಾಲ್ಬುಡದ ಮುಳ್ಳೂ ಲೆಕ್ಕಕ್ಕಿಲ್ಲ
ಮನದ ತುಂಬ
ಬಗೆಹರಿಯದ ಕಾತರಿಕೆ ಮಾತ್ರ...

ವರ್ಷಾಂತ್ಯದಲ್ಲಿ ಲೆಕ್ಕಾಚಾರಕ್ಕೆ ಕೂತರೆ
ನನ್ನಲ್ಲಿ ಉಳಿದಿದ್ದಿಷ್ಟೇ
ಅದೇ ಹಳೆಯ ಪರಿಭ್ರಮಣೆ,
ಮತ್ತದೇ ಹಳಸಲು ಸಂಕಲನ - ವ್ಯವಕಲನ.

Sunday 10 February 2008

ಅಜ್ಜೀ ನೀ ಇರಬೇಕಾಗಿತ್ತೇ...

ಇಂದು ನೀನಿಲ್ಲ,
ನಿನ್ನ ಕೆಂಪು ಮಡಿಯುಂಟು
ನಿನ್ನ ಬೋಳುತಲೆಯ ನೆನಪು ನನಗುಂಟು
ವರ್ಷಕ್ಕೊಮ್ಮೆ ನಿನ್ನ ಫೋಟೊ
ನನ್ನಿಂದ ಸಿಂಗರಿಸಿಕೊಳ್ಳುವುದೂ ಉಂಟು

ಈಗ ನೀನಿರುತ್ತಿದ್ದರೆ
ನಮ್ಮನೆ ಹೀಗಿರುತ್ತಿರಲಿಲ್ಲ
ಆಯಿಯ ಕಣ್ತಪ್ಪಿಸಿ ಮೂರೂ ದಿನ
ಒಳಗಿರುತ್ತಿರಲಿಲ್ಲ ನಾನು
ಅಪ್ಪಯ್ಯನ ಮಾತನ್ನು ಉಫ್ ಎನ್ನಿಸಿ
ಸ್ನಾನ ಸಂಧ್ಯಾವಂದನೆಗಳನ್ನು
ದೇವರಿಗೇ ಬಿಡುತ್ತಿರಲಿಲ್ಲ ಅಣ್ಣ
ನಿನ್ನ ಒಂದು ನಜರು ಆಯಿಯ ಮೇಲಿದ್ದರೆ
ಹಬ್ಬದಲ್ಲಿ ಹೋಳಿಗೆ ಊಟ ತಪ್ಪುತ್ತಿರಲಿಲ್ಲ
ಸಾಲ ಮಿತಿ ಮೀರುತ್ತಿರಲಿಲ್ಲ

‘ಕೂಸು ಹುಟ್ಟಿದಳು - ಕುನ್ನಾಶಿ ಹುಟ್ಟಿದಳು
ಬೆಳಗಿದ್ದ ಮನೆಯನ್ನು ತೊಳೆಯಲ್ಹುಟ್ಟಿದಳು,
ಮಾಣಿ ಹುಟ್ಟಿದನು - ಮಾರಾಜ ಹುಟ್ಟಿದನು
ಭತ್ತದ ಕಣಜವ ಕಟ್ಟಲ್ಹುಟ್ಟಿದನು’
ಇದು ನಿನ್ನ ಫೆವರಿಟ್ ಗಾದೆ, ನನ್ನ ಕೆಣಕಲು
ಆಗೆಲ್ಲ ನಾನು ಅಬ್ಬರಿಸುತ್ತಿದ್ದೆ
ನೀ ನನ್ನ ಸೆರಗೊಳಕ್ಕೆ
ಎಳಕೊಂಡು ಸಮಾಧಾನಿಸುತ್ತಿದ್ದೆ

ಈಗ ನೀನಿಲ್ಲ
ನಿನ್ನ ಬೆಚ್ಚನೆಯ ಮಡಿಲಿಲ್ಲ
ಕಾಗಕ್ಕ- ಗುಬ್ಬಕ್ಕನ ಕತೆ
ನನಗೆ ಕೇಳುತ್ತಿಲ್ಲ
ದಿನವೆಲ್ಲ ಅಪ್ಪಯ್ಯನ ತತ್ತ್ವಜ್ಞಾನದ ಕೊರೆತ
ಆಯಿಯ ಹಿತವಚನದೊಂದಿಗೆ ರಾತ್ರಿ
ಅಣ್ಣನೊಡನೆ ಕಿತ್ತಾಟದೊಂದಿಗೆ ಬೆಳಗು.