Wednesday, 20 February 2008

ಸಖ ಗೀತ

ಇವನ ಬಗ್ಗೆ ಬರೆಯಬೇಕಂತೆ-
ಬರವಣಿಗೆ ಎಂದರೇನು ಅಮಟೆಕಾಯಿಯಾ
ಕಲ್ಲು ಹೊಡೆದ ಮರುಕ್ಷಣ ಮಡಿಲಲ್ಲಿ ಬೀಳಲು
ಎಂದರೆ,
ತಲೆ ಮೇಲೆ ನಕ್ಷತ್ರವನ್ನೇ ಉದುರಿಸುವಷ್ಟು
ರೊಮ್ಯಾಂಟಿಕ್ ಆಗಿ ಕಣ್ ಹೊಡೆಯುವ
ಇವನ ಬಗ್ಗೆ ಬರೆಯಬೇಕಂತೆ!

ಇವನಿಗಾಗಿ ಹಾಡಬೇಕಂತೆ-
ಹಾಡುವಾಗ ಸಾಲು ಮರೆತರೆ
ನೀ ಸಾಥ್ ಕೊಡುವೆಯಾ
ಎಂದರೆ,
ಕಣ್ಮಿಟುಕಿಸಿ, ಗಂಟಲು ಸರಿಮಾಡಿ
‘ಲವ್ಯೂ...’ ಎಂದೊದರುವ
ಇವನಿಗಾಗಿ ಹಾಡಬೇಕಂತೆ !

ಇವನಿಗಾಗಿ ಬದುಕಬೇಕಂತೆ-
ನನ್ಬದುಕೆಲ್ಲ ನೀನೇ ಅಲ್ಲವೇನೋ...
ಎಂದರೆ,
ಪುಟಾಣಿ ಮಡಿಲಲ್ಲಿ ಅಡಗುವ
ಮಾತೇ ಬರದಷ್ಟು ಭಾವುಕನಾಗುವ
ಇವನಿಲ್ಲದೇ
ಬದುಕು ಖುಷಿಯಾಗಿರುವುದಾದರೂ ಹೇಗೆ..?

Sunday, 17 February 2008

ದಕ್ಕಿದ್ದು

ತಣ್ಣಗಿನ ಗಾಳಿಯಲ್ಲಿ - ಮೋಡಗಳ ಮಡಿಲಲ್ಲಿ
ಇವರೆಲ್ಲರೊಡನೆ ಸಂಭ್ರಮಿಸುವಾಗ
ಥಟ್ಟನೆ ಒತ್ತರಿಸುವ ನೆನಪು-
ಗದರಿಸಿ ಓಡಿಸಿದರೂ
ಬೆದರಿಸಿ ಕಳಿಸಿದರೂ
ಮತ್ತಷ್ಟು ಸನಿಹ

ಕಡಲ ತಡಿಯಲ್ಲಿ
ತೀರದುದ್ದಕ್ಕೂ ಅಲೆಯುತ್ತಿರುವಾಗ
ಪ್ರತಿ ಅಲೆಯೂ ಹೊತ್ತು ತರುವ
ಹೊಸ ಹಂಬಲಗಳು-
ಈ ಹಂಬಲಗಳು ಮುಗಿಯುವುದೆಂದೋ,
ಆ ಅಲೆಗಳು ನಿಲ್ಲುವುದೆಂದೋ
ಮತ್ತದೇ ಅಸ್ಪಷ್ಟ ಅಂತರಂಗ...

ಹೂಗಿಡಗಳಿಗೆ ನೀರು ನೆಪಮಾತ್ರ
ದೃಷ್ಟಿ ಪೂರ್ತಿ ರಸ್ತೆಯತ್ತ
ಕಾಲ್ಬುಡದ ಮುಳ್ಳೂ ಲೆಕ್ಕಕ್ಕಿಲ್ಲ
ಮನದ ತುಂಬ
ಬಗೆಹರಿಯದ ಕಾತರಿಕೆ ಮಾತ್ರ...

ವರ್ಷಾಂತ್ಯದಲ್ಲಿ ಲೆಕ್ಕಾಚಾರಕ್ಕೆ ಕೂತರೆ
ನನ್ನಲ್ಲಿ ಉಳಿದಿದ್ದಿಷ್ಟೇ
ಅದೇ ಹಳೆಯ ಪರಿಭ್ರಮಣೆ,
ಮತ್ತದೇ ಹಳಸಲು ಸಂಕಲನ - ವ್ಯವಕಲನ.

Sunday, 10 February 2008

ಅಜ್ಜೀ ನೀ ಇರಬೇಕಾಗಿತ್ತೇ...

ಇಂದು ನೀನಿಲ್ಲ,
ನಿನ್ನ ಕೆಂಪು ಮಡಿಯುಂಟು
ನಿನ್ನ ಬೋಳುತಲೆಯ ನೆನಪು ನನಗುಂಟು
ವರ್ಷಕ್ಕೊಮ್ಮೆ ನಿನ್ನ ಫೋಟೊ
ನನ್ನಿಂದ ಸಿಂಗರಿಸಿಕೊಳ್ಳುವುದೂ ಉಂಟು

ಈಗ ನೀನಿರುತ್ತಿದ್ದರೆ
ನಮ್ಮನೆ ಹೀಗಿರುತ್ತಿರಲಿಲ್ಲ
ಆಯಿಯ ಕಣ್ತಪ್ಪಿಸಿ ಮೂರೂ ದಿನ
ಒಳಗಿರುತ್ತಿರಲಿಲ್ಲ ನಾನು
ಅಪ್ಪಯ್ಯನ ಮಾತನ್ನು ಉಫ್ ಎನ್ನಿಸಿ
ಸ್ನಾನ ಸಂಧ್ಯಾವಂದನೆಗಳನ್ನು
ದೇವರಿಗೇ ಬಿಡುತ್ತಿರಲಿಲ್ಲ ಅಣ್ಣ
ನಿನ್ನ ಒಂದು ನಜರು ಆಯಿಯ ಮೇಲಿದ್ದರೆ
ಹಬ್ಬದಲ್ಲಿ ಹೋಳಿಗೆ ಊಟ ತಪ್ಪುತ್ತಿರಲಿಲ್ಲ
ಸಾಲ ಮಿತಿ ಮೀರುತ್ತಿರಲಿಲ್ಲ

‘ಕೂಸು ಹುಟ್ಟಿದಳು - ಕುನ್ನಾಶಿ ಹುಟ್ಟಿದಳು
ಬೆಳಗಿದ್ದ ಮನೆಯನ್ನು ತೊಳೆಯಲ್ಹುಟ್ಟಿದಳು,
ಮಾಣಿ ಹುಟ್ಟಿದನು - ಮಾರಾಜ ಹುಟ್ಟಿದನು
ಭತ್ತದ ಕಣಜವ ಕಟ್ಟಲ್ಹುಟ್ಟಿದನು’
ಇದು ನಿನ್ನ ಫೆವರಿಟ್ ಗಾದೆ, ನನ್ನ ಕೆಣಕಲು
ಆಗೆಲ್ಲ ನಾನು ಅಬ್ಬರಿಸುತ್ತಿದ್ದೆ
ನೀ ನನ್ನ ಸೆರಗೊಳಕ್ಕೆ
ಎಳಕೊಂಡು ಸಮಾಧಾನಿಸುತ್ತಿದ್ದೆ

ಈಗ ನೀನಿಲ್ಲ
ನಿನ್ನ ಬೆಚ್ಚನೆಯ ಮಡಿಲಿಲ್ಲ
ಕಾಗಕ್ಕ- ಗುಬ್ಬಕ್ಕನ ಕತೆ
ನನಗೆ ಕೇಳುತ್ತಿಲ್ಲ
ದಿನವೆಲ್ಲ ಅಪ್ಪಯ್ಯನ ತತ್ತ್ವಜ್ಞಾನದ ಕೊರೆತ
ಆಯಿಯ ಹಿತವಚನದೊಂದಿಗೆ ರಾತ್ರಿ
ಅಣ್ಣನೊಡನೆ ಕಿತ್ತಾಟದೊಂದಿಗೆ ಬೆಳಗು.