Thursday 18 September 2008

ಹುಣ್ಣಿಮೆಯ ಹೆಸರಿಗಿಲ್ಲಿ ಸದಾ ಗ್ರಹಣ!

ಪ್ರಜ್ಞಾ...

ಈ ಹೆಸರನ್ನ ಇಡಲು ಆಯಿಗೆ ತುಂಬ ಇಷ್ಟವಿತ್ತಂತೆ. ಹುಣ್ಣಿಮೆ ದಿನ ಹುಟ್ಟಿದ ಕೂಸಿಗೆ 'ಪೂರ್ಣಿಮಾ'ಗಿಂತ ಒಳ್ಳೆಯ ಹೆಸರು ಇನ್ಯಾವುದು ಎಂದು ಎಲ್ಲರೂ ಕೇಳಿದಾಗ ಆಯಿ ಒಪ್ಪಿದ್ದು ಈಗ ಇಪ್ಪತ್ತೇಳು ವರ್ಷದ ಹಿಂದಿನ ಕಥೆ.

ಮೊನ್ನೆ ಮೊನ್ನೆಯವರೆಗೆ ಎಲ್ಲ ಸರಿಯಾಗಿಯೇ ಇತ್ತು. ಕನ್ನಡ ಶಾಲೆ - ಹೈಸ್ಕೂಲು - ಕಾಲೇಜಿನಲ್ಲಿ ಈ ಹೆಸರು ತುಂಬ ಅಪರೂಪ ಎಂಬ ಕೋಡು ಬೇರೆ. ಮನೆಯಲ್ಲಿ ಕೂಸೇ ಕೂಸೇ, ಊರವರಿಗೆ ಏನವ್ವ ತಂಗಿ, ಗೆಳತಿಯರಿಗೆ ಮತ್ತು ಹತ್ತಿರದವರಿಗೆ ಪೂರ್ಣಿ. ಏನಿದೆ ಅಲ್ಲಿ ತಲೆ ಕೆಡಿಸಿಕೊಳ್ಳಲು? ನಿಮ್ಮಿಬ್ಬರ ಹೆಸರು 'ಮಧು ಪೂರ್ಣಿಮಾ' ಅಲ್ವಾ...? ಹಾಗಿದ್ರೆ ನೀವು ಹನಿಮೂನ್ ಜೋಡಿ ಎಂದು ಗೆಳೆಯನೊಬ್ಬ ಛೇಡಿಸಿದಾಗ ನಾಚಿಕೊಂಡ ನೆನಪು ಕೂಡ ಇದೆ.

ನಾಲಿಗೆ ಹೊರಳದ ಜನರಿರುವ ಈ ದೇಶಕ್ಕೆ ಬರುವವರೆಗೂ ನನ್ನ ಹೆಸರಿನ ಬಗ್ಗೆ ಆಗಾಗ ಹೆಮ್ಮೆಪಡುತ್ತಿದ್ದೆ ಅಂತ ಹೇಳಲು ತುಸು ಸಂಕೋಚ! ಇಲ್ಲಿಗೆ ಬಂದ ನಂತರ ಹೆಸರನ್ನ ಹೇಗೆ ಸರಳ ಮಾಡೋದು. ಅಂತ ಹತ್ತಾರು ಬಾರಿ ಯೋಚನೆ ಮಾಡಿದ್ದಿದೆ. ಪ್ರತಿ ದಿನ ಹೆಸರಿನ ಕಗ್ಗೊಲೆ ಆಗೋದು ಕೇಳಿ ಮುಖ ಚಿಕ್ಕದು ಮಾಡಿದ್ದಿದೆ.

ಕೆಲಸ ಹುಡುಕಲು ಶುರುಮಾಡಿದಾಗಿನಿಂದ ಆರಂಭವಾದ ಈ ನಾಮಾಮೃತ ಅಧ್ವಾನಕ್ಕೆ ಒಂದು ಪೂರ್ಣವಿರಾಮ ಅಂತ ಇರುವುದು ಡೌಟೇ! ಬೆಳಗ್ಗೆ ಹತ್ತೂವರೆಗೆ ಕಾಲ್ ಮಾಡಿದ ಲಿಂಡಾ 'ಕ್ಯಾನ್ ಐ ಸ್ಪೀಕ್ ಟು ಪ್ಯುಮೀನಾ ಪ್ಲೀಸ್..' ಅಂದರೆ ಸಂಜೆ ಐದಕ್ಕೆ ಕಾಲ್ ಮಾಡಿದ ಜೀನ್ 'ಇಸ್ ಇಟ್ ಪರೀನಾ..' ಎನ್ನುತ್ತಾಳೆ. ಮಾರನೇ ದಿನ ಬ್ರ್ಯಾನ್ 'ಹಾಯ್ ದೇರ್ - ವಾಂಟೆಡ್ ಟು ಟಾಕ್ ಟು ಪುಮಿನಿ ಬಾಟ್' ಅಂದಾಗ 'ರಾಂಗ್ ನಂಬರ್ರ್' ಅಂತ ಒದರಿ ಫೋನ್ ಕುಕ್ಕಿ ಬಿಡುವಷ್ಟು ಸಿಟ್ಟು.

ಅಳತೆ ಸರಿಯಿರದ ಜಾಕೆಟ್ ವಾಪಸ್ ಕೊಡಲು ಹೋದೆ ಒಮ್ಮೆ. ಫಾರ್ಮ್ ತುಂಬತೊಡಗಿದ ಸೇಲ್ಸ್ ಹುಡುಗಿ ಫೋನ್ ನಂಬರ್ , ಅಡ್ರೆಸ್ ಎಲ್ಲ ಬರೆದಾದ ಮೇಲೆ ಕೇಳಿದ್ದು ಹೆಸರು. ನಿಧಾನವಾಗೇ ಉಲಿದೆ. ಅವಳ ಕಣ್ಣು ಕಿರಿದಾಯ್ತು. ಫಾರ್ಮ್ ಮತ್ತು ಪೆನ್ನು ನನ್ನ ಕೈಗೆ ಬಂತು! ಅರ್ರೇ, ಎಂಥ ಜನನಪ್ಪಾ ಎಂದು ಒಳಬಾಯಿಯಲ್ಲೇ ಹಲುಬುತ್ತ ಹೆಸರು ಬರೆದು ಫಾರ್ಮ್ ಹಿಂದಿರುಗಿಸಿದೆ. 'ಪೂರ್.. ನೀಮಾ ಬಟ್ - ಐ ಫೈಂಡ್ ಇಟ್ ಫನ್ನಿ! ಡೋಂಟ್ ಟೇಕ್ ಇಟ್ ಟು ಹಾರ್ಟ್' ಎಂಬ ಮಾತಿಗೆ 'ಡೂ ಯೂ ವಾಂಟ್ ಟು ನೋ ದಿ ಮೀನಿಂಗ್ ಆಫ್ ಇಟ್' ಅಂತ ಉರಿ ಉರಿ ಮುಖ ಮಾಡಿ ಹೇಳಿ ಬಂದೆ. ಆದರೂ ಆ 'ಫನ್ನಿ' ಎಂಬ ಶಬ್ದಕ್ಕೆ ಇಡೀ ದಿನ ಮೂಡ್ ಆಫ್ ಮಾಡಿಸುವ ದೈತ್ಯ ಶಕ್ತಿ.

ಆಫೀಸಿನಲ್ಲಿ ಹೆಸರನ್ನು ಅರೂಪಗೊಳಿಸುವ ಮೊದಲು ನಾನೇ 'ಐಮ್ ಪೂರ್ಣಿ' ಅಂತ ಪರಿಚಯ ಮಾಡಿಕೊಂಡೆ. ಕೆಲಸಕ್ಕೆ ಹೋಗ ತೊಡಗಿ ಒಂದು ತಿಂಗಳಾಗಿರಬಹುದು, ಎಲಿಯಟ್ ಬಂದು 'ವಿ ವಾಂಟ್ ಟು ರೀನೇಮ್ ಯೂ' ಅಂದ. ನನ್ನ ಮುಖದ ತುಂಬ ಪ್ರಶ್ನೆ. 'ಕ್ಯಾನ್ ಐ ಕಾಲ್ ಯೂ ಜಾನ್?' ಅಂದ! ಒಂದು ಕೋಳಿ ಕೂಗಿದ ಮೇಲೆ ಹಿಂಡು ಕೋಳಿ ಸುಮ್ಮನಾದೀತೆ? ಇನ್ನೊಬ್ಬಳು 'ಪ್ಯೂನಮಾ' ಅಂದಳು. ಮತ್ತೊಬ್ಬ 'ಪನಾಮಾ'. ಮಗದೊಬ್ಬ 'ಪನಿನಿ' (ಬ್ರೆಡ್ ರೋಲ್ ಮತ್ತು ಟೊಮ್ಯಾಟೋ ಸಾಸ್ ಜೊತೆಗೆ ಮಾಡುವ ಖಾದ್ಯ ಗೊತ್ತಲ್ಲ). ಆ ಮೂಲೆಯಿಂದ ಒಂದು ದನಿ 'ಪಾಲಿಮರ್'. ಅದೋ ರಿಚರ್ಡ್ ಹೇಳಿದ 'ಪುನ್ಮೀನಾ'. ಟೋನಿಗೆ 'ಪ್ಯೂನಂ' ಈಸಿಯಂತೆ! ಫಿಲಿಪ್ ಗೆ ವಾರದ ಹಿಂದೆ ನಾನು ಹೇಳಿದ ಮಾತೇ ನೆನಪಿದೆ. ಅವ ನನಗೆ 'ಫುಲ್ ಮೂನ್' ಅಂತಾನಂತೆ. 'ಇಷ್ಟೆಲ್ಲ ಹಿಂಸೆ ಕೊಡಬೇಡಿ ನನ್ನ ಹೆಸರಿಗೆ' ಎಂದು ಕೂಗುವವರೆಗೂ ನಡೆದೇ ಇತ್ತು ಶತನಾಮಾವಳಿ , ಸಹಸ್ರನಾಮಾರ್ಚನೆ.

ಅಂತೂ ಇಂತು ಕಷ್ಟಪಟ್ಟು 'ಪೂನಿ' ಎಂದು ಕರೆಯಲು ಕಲಿಸಬೇಕಾದರೆ ಬರೋಬ್ಬರಿ ಆರು ತಿಂಗಳು ಹಿಡಿಯಿತು. 'ಪೂರ್ಣಿ' ಅಂತ ಕರೆಯಬಾರದಾ ಎಂದು ಆಗಾಗ ಅನ್ನಿಸುವುದುಂಟು. ನನ್ನ ಹೆಸರು 'ಪ್ರಜ್ಞಾ' ಆಗಿದ್ದರೆ ಅದು ಇನ್ನೇನು ಆಗುತ್ತಿತ್ತೋ ಅನ್ನುವುದನ್ನು ಆಯಿಯ ಎದುರೇ ಹೇಳಿ 'ಕ್ಕೆ ಕ್ಕೆ ಕ್ಕೆ' ಅಂತ ನಗಬೇಕು ಈ ಬಾರಿ...ಊರಿಗೆ ಹೋದಾಗ.


(’ದಟ್ಸ್ ಕನ್ನಡ’ಕ್ಕೊಂದು ಬೆಚ್ಚನೆಯ ಥಾಂಕ್ಸ್!)