ಪ್ರಜ್ಞಾ...
ಈ ಹೆಸರನ್ನ ಇಡಲು ಆಯಿಗೆ ತುಂಬ ಇಷ್ಟವಿತ್ತಂತೆ. ಹುಣ್ಣಿಮೆ ದಿನ ಹುಟ್ಟಿದ ಕೂಸಿಗೆ 'ಪೂರ್ಣಿಮಾ'ಗಿಂತ ಒಳ್ಳೆಯ ಹೆಸರು ಇನ್ಯಾವುದು ಎಂದು ಎಲ್ಲರೂ ಕೇಳಿದಾಗ ಆಯಿ ಒಪ್ಪಿದ್ದು ಈಗ ಇಪ್ಪತ್ತೇಳು ವರ್ಷದ ಹಿಂದಿನ ಕಥೆ.
ಮೊನ್ನೆ ಮೊನ್ನೆಯವರೆಗೆ ಎಲ್ಲ ಸರಿಯಾಗಿಯೇ ಇತ್ತು. ಕನ್ನಡ ಶಾಲೆ - ಹೈಸ್ಕೂಲು - ಕಾಲೇಜಿನಲ್ಲಿ ಈ ಹೆಸರು ತುಂಬ ಅಪರೂಪ ಎಂಬ ಕೋಡು ಬೇರೆ. ಮನೆಯಲ್ಲಿ ಕೂಸೇ ಕೂಸೇ, ಊರವರಿಗೆ ಏನವ್ವ ತಂಗಿ, ಗೆಳತಿಯರಿಗೆ ಮತ್ತು ಹತ್ತಿರದವರಿಗೆ ಪೂರ್ಣಿ. ಏನಿದೆ ಅಲ್ಲಿ ತಲೆ ಕೆಡಿಸಿಕೊಳ್ಳಲು? ನಿಮ್ಮಿಬ್ಬರ ಹೆಸರು 'ಮಧು ಪೂರ್ಣಿಮಾ' ಅಲ್ವಾ...? ಹಾಗಿದ್ರೆ ನೀವು ಹನಿಮೂನ್ ಜೋಡಿ ಎಂದು ಗೆಳೆಯನೊಬ್ಬ ಛೇಡಿಸಿದಾಗ ನಾಚಿಕೊಂಡ ನೆನಪು ಕೂಡ ಇದೆ.
ನಾಲಿಗೆ ಹೊರಳದ ಜನರಿರುವ ಈ ದೇಶಕ್ಕೆ ಬರುವವರೆಗೂ ನನ್ನ ಹೆಸರಿನ ಬಗ್ಗೆ ಆಗಾಗ ಹೆಮ್ಮೆಪಡುತ್ತಿದ್ದೆ ಅಂತ ಹೇಳಲು ತುಸು ಸಂಕೋಚ! ಇಲ್ಲಿಗೆ ಬಂದ ನಂತರ ಹೆಸರನ್ನ ಹೇಗೆ ಸರಳ ಮಾಡೋದು. ಅಂತ ಹತ್ತಾರು ಬಾರಿ ಯೋಚನೆ ಮಾಡಿದ್ದಿದೆ. ಪ್ರತಿ ದಿನ ಹೆಸರಿನ ಕಗ್ಗೊಲೆ ಆಗೋದು ಕೇಳಿ ಮುಖ ಚಿಕ್ಕದು ಮಾಡಿದ್ದಿದೆ.
ಕೆಲಸ ಹುಡುಕಲು ಶುರುಮಾಡಿದಾಗಿನಿಂದ ಆರಂಭವಾದ ಈ ನಾಮಾಮೃತ ಅಧ್ವಾನಕ್ಕೆ ಒಂದು ಪೂರ್ಣವಿರಾಮ ಅಂತ ಇರುವುದು ಡೌಟೇ! ಬೆಳಗ್ಗೆ ಹತ್ತೂವರೆಗೆ ಕಾಲ್ ಮಾಡಿದ ಲಿಂಡಾ 'ಕ್ಯಾನ್ ಐ ಸ್ಪೀಕ್ ಟು ಪ್ಯುಮೀನಾ ಪ್ಲೀಸ್..' ಅಂದರೆ ಸಂಜೆ ಐದಕ್ಕೆ ಕಾಲ್ ಮಾಡಿದ ಜೀನ್ 'ಇಸ್ ಇಟ್ ಪರೀನಾ..' ಎನ್ನುತ್ತಾಳೆ. ಮಾರನೇ ದಿನ ಬ್ರ್ಯಾನ್ 'ಹಾಯ್ ದೇರ್ - ವಾಂಟೆಡ್ ಟು ಟಾಕ್ ಟು ಪುಮಿನಿ ಬಾಟ್' ಅಂದಾಗ 'ರಾಂಗ್ ನಂಬರ್ರ್' ಅಂತ ಒದರಿ ಫೋನ್ ಕುಕ್ಕಿ ಬಿಡುವಷ್ಟು ಸಿಟ್ಟು.
ಅಳತೆ ಸರಿಯಿರದ ಜಾಕೆಟ್ ವಾಪಸ್ ಕೊಡಲು ಹೋದೆ ಒಮ್ಮೆ. ಫಾರ್ಮ್ ತುಂಬತೊಡಗಿದ ಸೇಲ್ಸ್ ಹುಡುಗಿ ಫೋನ್ ನಂಬರ್ , ಅಡ್ರೆಸ್ ಎಲ್ಲ ಬರೆದಾದ ಮೇಲೆ ಕೇಳಿದ್ದು ಹೆಸರು. ನಿಧಾನವಾಗೇ ಉಲಿದೆ. ಅವಳ ಕಣ್ಣು ಕಿರಿದಾಯ್ತು. ಫಾರ್ಮ್ ಮತ್ತು ಪೆನ್ನು ನನ್ನ ಕೈಗೆ ಬಂತು! ಅರ್ರೇ, ಎಂಥ ಜನನಪ್ಪಾ ಎಂದು ಒಳಬಾಯಿಯಲ್ಲೇ ಹಲುಬುತ್ತ ಹೆಸರು ಬರೆದು ಫಾರ್ಮ್ ಹಿಂದಿರುಗಿಸಿದೆ. 'ಪೂರ್.. ನೀಮಾ ಬಟ್ - ಐ ಫೈಂಡ್ ಇಟ್ ಫನ್ನಿ! ಡೋಂಟ್ ಟೇಕ್ ಇಟ್ ಟು ಹಾರ್ಟ್' ಎಂಬ ಮಾತಿಗೆ 'ಡೂ ಯೂ ವಾಂಟ್ ಟು ನೋ ದಿ ಮೀನಿಂಗ್ ಆಫ್ ಇಟ್' ಅಂತ ಉರಿ ಉರಿ ಮುಖ ಮಾಡಿ ಹೇಳಿ ಬಂದೆ. ಆದರೂ ಆ 'ಫನ್ನಿ' ಎಂಬ ಶಬ್ದಕ್ಕೆ ಇಡೀ ದಿನ ಮೂಡ್ ಆಫ್ ಮಾಡಿಸುವ ದೈತ್ಯ ಶಕ್ತಿ.
ಆಫೀಸಿನಲ್ಲಿ ಹೆಸರನ್ನು ಅರೂಪಗೊಳಿಸುವ ಮೊದಲು ನಾನೇ 'ಐಮ್ ಪೂರ್ಣಿ' ಅಂತ ಪರಿಚಯ ಮಾಡಿಕೊಂಡೆ. ಕೆಲಸಕ್ಕೆ ಹೋಗ ತೊಡಗಿ ಒಂದು ತಿಂಗಳಾಗಿರಬಹುದು, ಎಲಿಯಟ್ ಬಂದು 'ವಿ ವಾಂಟ್ ಟು ರೀನೇಮ್ ಯೂ' ಅಂದ. ನನ್ನ ಮುಖದ ತುಂಬ ಪ್ರಶ್ನೆ. 'ಕ್ಯಾನ್ ಐ ಕಾಲ್ ಯೂ ಜಾನ್?' ಅಂದ! ಒಂದು ಕೋಳಿ ಕೂಗಿದ ಮೇಲೆ ಹಿಂಡು ಕೋಳಿ ಸುಮ್ಮನಾದೀತೆ? ಇನ್ನೊಬ್ಬಳು 'ಪ್ಯೂನಮಾ' ಅಂದಳು. ಮತ್ತೊಬ್ಬ 'ಪನಾಮಾ'. ಮಗದೊಬ್ಬ 'ಪನಿನಿ' (ಬ್ರೆಡ್ ರೋಲ್ ಮತ್ತು ಟೊಮ್ಯಾಟೋ ಸಾಸ್ ಜೊತೆಗೆ ಮಾಡುವ ಖಾದ್ಯ ಗೊತ್ತಲ್ಲ). ಆ ಮೂಲೆಯಿಂದ ಒಂದು ದನಿ 'ಪಾಲಿಮರ್'. ಅದೋ ರಿಚರ್ಡ್ ಹೇಳಿದ 'ಪುನ್ಮೀನಾ'. ಟೋನಿಗೆ 'ಪ್ಯೂನಂ' ಈಸಿಯಂತೆ! ಫಿಲಿಪ್ ಗೆ ವಾರದ ಹಿಂದೆ ನಾನು ಹೇಳಿದ ಮಾತೇ ನೆನಪಿದೆ. ಅವ ನನಗೆ 'ಫುಲ್ ಮೂನ್' ಅಂತಾನಂತೆ. 'ಇಷ್ಟೆಲ್ಲ ಹಿಂಸೆ ಕೊಡಬೇಡಿ ನನ್ನ ಹೆಸರಿಗೆ' ಎಂದು ಕೂಗುವವರೆಗೂ ನಡೆದೇ ಇತ್ತು ಶತನಾಮಾವಳಿ , ಸಹಸ್ರನಾಮಾರ್ಚನೆ.
ಅಂತೂ ಇಂತು ಕಷ್ಟಪಟ್ಟು 'ಪೂನಿ' ಎಂದು ಕರೆಯಲು ಕಲಿಸಬೇಕಾದರೆ ಬರೋಬ್ಬರಿ ಆರು ತಿಂಗಳು ಹಿಡಿಯಿತು. 'ಪೂರ್ಣಿ' ಅಂತ ಕರೆಯಬಾರದಾ ಎಂದು ಆಗಾಗ ಅನ್ನಿಸುವುದುಂಟು. ನನ್ನ ಹೆಸರು 'ಪ್ರಜ್ಞಾ' ಆಗಿದ್ದರೆ ಅದು ಇನ್ನೇನು ಆಗುತ್ತಿತ್ತೋ ಅನ್ನುವುದನ್ನು ಆಯಿಯ ಎದುರೇ ಹೇಳಿ 'ಕ್ಕೆ ಕ್ಕೆ ಕ್ಕೆ' ಅಂತ ನಗಬೇಕು ಈ ಬಾರಿ...ಊರಿಗೆ ಹೋದಾಗ.
(’ದಟ್ಸ್ ಕನ್ನಡ’ಕ್ಕೊಂದು ಬೆಚ್ಚನೆಯ ಥಾಂಕ್ಸ್!)
15 comments:
ದೋಸ್ತಾ...
ಸೂಪರ್:-)
ನನ್ ಹೆಸರು ಶಂಥಾಲಾ ಆಕ್ಯ್ಂಡು ಇದ್ದು ಸಧ್ಯಕ್ಕೆ.ಅದ್ರಲ್ಲೇ ಸ್ವಲ್ಪ ಸ್ವಲ್ಪ ವ್ಯತ್ಯಾಸ ಆಗ್ತ ಇರ್ತು, ಆಗೆಲ್ಲ ನಿನ್ ಹೆಸ್ರಿಗಿರ ಗೋಳೆಲ್ಲ ನೆನಪಿಸ್ಗ್ಯಂಡು ಸಮಧಾನ ಮಾಡ್ಕ್ಯತ್ತಿ ಇನ್ಮೇಲಿಂದ.
ಮಸ್ತ ಬರದ್ದೆ. :-)
ಹಾಯ್ ಪೂರ್ಣಿಮಾ ರವರೆ,
ಒ೦ದು ಸು೦ದರವಾದ, ಅರ್ಥಪೂರ್ಣ ಹೆಸರು ಅ೦ದಗೆಟ್ಟಾಗ ಆಗುವ ಪೇಚಾಟವನ್ನು ಚೆನ್ನಾಗಿ ವಿವರಿಸಿದ್ದೀರಿ..
~ಸುಷ್ಮ ಸಿ೦ಧು .
ನಾಮಾವಂತಾರದ ಕಥೆ ವ್ಯಥೆಯನ್ನು ಬಹಳ ಚಂದವಾಗಿ ನಿರೂಪಿಸಿದ್ದೀರಿ
ಅದೇನೋ ಪರದೇಶ - ನಮ್ಮೂರುಗಳಲ್ಲೇ ಹೆಸರನ್ನು ಅಧ್ವಾನ ಮಾಡಿ ಕರೆಯುವ ಸಂದರ್ಭ ಇಲ್ಲವೇ!
ಕರ್ನಾಟಕದ ಉತ್ತರ ಭಾಗದಿಂದ ಮೇಲೆ ಹೊರಟಲ್ಲೆಲ್ಲಾ ಸರ್‍ನೇಮ್ ಇಲ್ವಾ? ಅಂತ ಹುಬ್ಬೇರಿಸುವುದು ಸಾಮಾನ್ಯ
ಶ್ರೀನಿವಾಸ - ಶ್ರೀನಿವಾಸನ್ ... ಎಲ್ಲರೂ ಮದರಾಸಿಗಳೇ!
ಚಂದದ ಬ್ಲಾಗಿನೊಳಗೆ ಕಾಲಿಡಲು ಅವಕಾಶವಿತ್ತಿದ್ದಕ್ಕೆ ವಂದನೆಗಳು - ಮತ್ತೆ ಮತ್ತೆ ಬರುವೆ
ಗುರುದೇವ ದಯಾ ಕರೊ ದೀನ ಜನೆ
Hi Poornima, I can understand, such a simple name like mine could be
In Russia I was "Khegde"
In Korea I am "Rameshi"
I had heard about your writing but not had an opportunity to read. Narration is excellent
ಪೂರ್ಣಿಮಾ, ನಾನು ಇಪ್ಪತ್ತೇಳು ವರ್ಷದ ಹಿಂದ ಆಯಿ ಜೊತೆ ಇದ್ದಿದ್ರೆ ಪ್ರಜ್ಞಾ ಅಂತನೆ ಹೆಸರಿಡೋಕೆ ಹೇಳ್ತಿದ್ದೆ....ನನ್ನ ಮಾತು ಕೇಳಿದ್ರೆ.....!ಹೆಸರು ಚೆನ್ನಾಗಿದೆ. ಸರಳ ಪೂರ್ಣಿಮಾ ಹೆಸರನ್ನ ಕರಿಯೋದಕ್ಕೆ ಮಾಡಿರೋ ಹತ್ತಿರದವರ/ಹತ್ತಿರದಲ್ಲದವರ ಜೊತೆಗಿನ ಸಾಹಸ ಹಾಗು ಅನುಭವನ ಚೆನ್ನಾಗಿ ಬರ್ದಿದಿರಾ.......ಹಾಗೆ ನನ್ನೀ ಹೆಸರನ್ನ ನೀನು ಹೇಗೇಗೆ ಕರೀಬಹುದು ಅಂತನು ಹೇಳಿ ಕೊಟ್ಟಿದಿರ ನಂಗೆ :) ಹೇಗ್ ಕರೀಲಿ?. ಮತ್ತೆ ಮತ್ತೆ ಬರೀತಾ ಇರಿ. ರಾಘು ತೆಳಗಡಿ
ಪೂರ್ಣಿಮಾ ಅವರೆ,
ನಗುವ ತರಿಸಿತು ನಿಮ್ಮ ಪರದಾಟ. ಆ ಪರದಾಟದೊಳಗಿನ ಅಸಹಾಯಕತೆಯನ್ನು ನಗುತ್ತಾ ನಗಿಸುತ್ತಾ ವಿವರಿಸುವ ನಿರೂಪಣಾ ಶೈಲಿ ತುಂಬಾ ಇಷ್ಟವಾಯಿತು. ನಿಮ್ಮ ಹೆಸರಿನ ತಿರುಚಾಟದ ಪ್ರಸಂಗವನ್ನೋದಿ ನನ್ನ ಹೆಸರಿನ ಕುರಿತಾದ ಒಂಡು ಘಟನೆ ನೆನಪಿಗೆ ಬಂತು.
ನಮ್ಮೂರು ಶಿರಸಿಯ ಬಳಿಯ ಒಂದು ಹಳ್ಳಿ. ಅಲ್ಲಿಗೆ ನಾವು ಹೋಗುತ್ತಿರುತ್ತೇವೆ. ಈಗೊಂದು ೪-೫ ವರುಷಗಳ ಹಿಂದೆ ಹೋದಾಗ ನಮ್ಮ ಮನೆಗೆಲಸಕ್ಕೆ ಬರುತ್ತಿದ್ದ ಚೌಡಿ ಎಂಬಾಕೆ ಒಂದು ದಿನ "ಅವ್ವಾರೆ ನಮ್ಮ್ ಮೊಮ್ಮಗ್ಳಿಗೆ ನಿನ್ನೆ ಹೆಸ್ರಿಟ್ರು...." ಅಂದ್ಳು. "ಹೌದಾನೇ.. ಖುಶಿ ಆತು.. ಎಂತ ಹೆಸ್ರಿಟ್ಟ್ರಿ?" ಎಂದು ಕೇಳಲು ಆಕೆ "ತ್ರಜಸಿನ" ಅಂದಳು. ಎಷ್ಟು ಯೋಚಿಸರೂ ಅರ್ಥವಾಗಲೇ ಇಲ್ಲ. ನಾನು ನನ್ನ ಕಸಿನ್ಸ್ ಎಲ್ಲಾ ಕುಳಿತಿದ್ವಿ. ಯಾರಿಗೂ ಹೊಳೆಯಲಿಲ್ಲ. "ಎಂತದೇ ಅದು? ಈ ಹೆಸ್ರು ಅರ್ಥನಾ ಆಗದಿಲ್ವಲ್ಲೇ?" ಎಂದು ಅವಳಲ್ಲೇ ಕೇಳಲು, "ಅಯ್ಯಾ ಅದು ನಿಮ್ಮ ಹೆಸ್ರೇಯಾ .." ಅನ್ನೋದೇ?! :( ಈಗಲೂ ಆಗ ಅಲ್ಲಿದ್ದ ನನ್ನ ಕಸಿನ್ಸ್ ಎಲ್ಲಾ ನನ್ನ "ತ್ರಜಸಿನ" ಎಂದು ಗೊಳಾಡಿಸುತ್ತಿರುತ್ತಾರೆ :)
ಚೆಂದದ ಹೆಸರು, ಚೆಂದದ ಬರಹ.
ಸಹಸ್ರನಾಮಾವಳಿಯಿಂದ ಕರೆಯಿಸಿಕೊಳ್ಳುತ್ತಿರುವ ನೀವೇ ಧನ್ಯರು. ನನಗೆ ಆ ಅದೃಷ್ಟ ಇಲ್ಲ.
ತುಂಬಾ ಚೆನ್ನಾಗಿದೆ ...ಹೀಗೆ ಮುಂದುವರಿಸಿ :)
ಹಾಗೆ ನಿಮ್ಮ ಬ್ಲಾಗ್ಗ್ ಲಿಂಕ್ ಅನ್ನು ಅನುಮತಿ ಇಲ್ಲದೆ ನನ್ನ ಬ್ಲಾಗ್ ನಲ್ಲಿ ಸೇರಿಸಿಕೊಂಡಿದ್ದಕ್ಕೆ....ಕ್ಷಮಿಸಿ :)
Shantala, Sushmasindhu, Shrinivas, Ramesh (Ramesh Kakaa..), Raghu, Tejaswini, Joman, Sunatha Kaka, Aprameya -
Thanks verymuch... :)
ಪೂರ್ಣಿಮಾ...
ನಿಮ್ಮ ಪರಿಸ್ಥಿತಿ ನಂದೂ ಆಗಿತ್ತು.
ನಮ್ಮನೆ ಕೆಲಸದ ಆಳು ನನಗೆ "ಪಕ್ಕೇಶ್ ಹೆಗ್ಡೆರೆ" ಅಂತಿದ್ದ.
ಇನ್ನು "ಕತಾರ್" ನಲ್ಲಿ "ಪ್ರಕ್ಷ್ ಹೆಜ್" ಆಗಿದ್ದೆ...
ಹಹ್ಹಾ ಚೆನ್ನಾಗಿ ಬರೆಯುತ್ತೀರಿ..
ಧನ್ಯವಾದಗಳು...
thanx for supporting
ಪೂರ್ಣಿಮಾ ಮೇಡಮ್,
ಬಲೇ ಚೆನ್ನಾಗಿದೆ....ನಿಮ್ಮ ಹೆಸರಿನ ಕಥೆ....ವಿಷ್ಣು ಸಹಸ್ರ , ನಾಮ ಲಲಿತ ಸಹಸ್ರ ನಾಮದಂತೆ ನಿಮ್ಮದೂ ಕೂಡ ಆಗಿದೆಯೆಲ್ಲಾ.....ಬರವಣಿಗೆಯಲ್ಲಿ ತಿಳಿಹಾಸ್ಯವಿದೆ..ಓದಿಸಿಕೊಂಡು ಹೋಗುತ್ತದೆ....ಮುಂದುವರಿಸಿ.....ಥ್ಯಾಂಕ್ಸ್.....
ಹ ಹ ಹಾ , ನಿಮ್ಮ ಚಂದದ ಹೆಸರಿಗಾದ ಅವಸ್ಥೆ ಓದಿ ನಗು ಬಂತು !
ಅದರಲ್ಲೂ "ಪೂರ್.. ನೀಮಾ ಬಟ್ " ನಿಮ್ಮ ಸಿಟ್ಟು ನೆತ್ತಿಗೇರಿದ್ದರಲ್ಲೇನೂ ಆಶ್ಚರ್ಯವಿಲ್ಲ ! ನಿರೂಪಣಾ ಶೈಲಿ ತುಂಬಾ ಚೆನ್ನಾಗಿದೆ .
Post a Comment