Friday, 16 January 2009

ಸುಪ್ತ

ಬೆರಳ ತುದಿ ಬಿಂದಿಯ ಹಣೆಗೇರಿಸದೆ
ಸುಮ್ಮನೆ ಚಿಮ್ಮಿದಾಗ
ತುಂಬು ನಗೆಯ ಆಯಿ
ಬಾಗಿಲಲ್ಲಿ ನಿಂತಂತೆ ಭಾಸ..

ಪಾರ್ಟಿ ಒಲ್ಲದ ಮಾಂಗಲ್ಯ
ದಿಂಬಿನಡಿ ಸೇರಿದ ದಿನ
ಅತ್ತೆಯ ಮೂರೆಳೆ ಸರ
ಕನಸಿನಲ್ಲಿ ಬಂದ ಹಾಗಿತ್ತಲ್ಲ..

ಮುಟ್ಟಾದ್ದು ನೆನಪಿರದೆ
ಮಂತ್ರ ಹಲುಬಿದ ಮುಂಜಾವು
ಅಷ್ಟಮಂಗಲದ ಬಗ್ಗೆ ಕೇಳಿದ್ದು ಮಾತ್ರ
ಮುರಿಯುವ ಟೊಂಗೆಯ ಮೇಲೆ ಕಾಗೆ ಕೂತಂತೆ..

ಮಗ್ಗುಲಾವರಿಸಿ ತಲೆ ನೇವರಿಸಿದವ
ಬಲಗಿವಿಯಲ್ಲಿ ಪಿಸುಗುಟ್ಟಿದರೆ-
ಮೊದಲ ಬಾರಿ ಬೆತ್ತಲಾದಷ್ಟೇ ಪುಳಕ..

ತಲೆ ಮೇಲಿನ ನೀರು-
ಕೊರಳ ಬಳಿ ಕೆಂಪಚ್ಚು
ಕಿವಿ ಬದಿಯ ಕಪ್ಪಚ್ಚು ಹಾದು
ಕೆಳಗಿಳಿವ ಖುಷಿ
ಕಣ್ಮುಚ್ಚಿ ಅನುಭವಿಸುವಾಗ
ಕನ್ಯಾಸಂಸ್ಕಾರದ ದಿನ
ಅಪ್ಪನ ತೊಡೆಯೇರಿ ಕೂತದ್ದೇ ನೆನಪು.

15 comments:

ಸಿಮೆಂಟು ಮರಳಿನ ಮಧ್ಯೆ said...

ಪೂರ್ಣಿಮಾ...

ಅಪ್ಪ, ಅಮ್ಮನ ಸಂಸ್ಕಾರ..
ಇತ್ತ..
ಬದುಕು..
ಬದುಕಿನ..
ಸತ್ಯ..ಮಿಥ್ಯ...
ದ್ವಂದ್ವ..ಗೊಂದಲಗಳ
ಭಾವ
ಚೆನ್ನಾಗಿವ್ಯಕ್ತವಾಗಿದೆ..

ಅಭಿನಂದನೆಗಳು..

ಶಾಂತಲಾ ಭಂಡಿ said...

ಪೂಣಿ...
ಬರದ್ರೆ ನೀ ಬರದಂಗೆ ಬರೆಯವ್ವೆ.
ಏನ್ ಹೇಳ್ಲಿ. ಎಲ್ಲಾ ಸಾಲೂ ಸೂಪರ್.
ಬರ್ದಿದ್ದನ್ನೆಲ್ಲ ಒಟ್ಟಿಗೂಡಿಸಿ ಒಂದು ಪುಸ್ತಕನಾದ್ರೂ ಮಾಡೆ. ರಾಶೀ ಚೆಂದ ಬರಿತೆ ಮಾರಾಯ್ತಿ ನೀನು. ಅದಕ್ಕೇ ನಿನ್ನ ಬರವಣಿಗೆ ಜೊತೆ ನೀನೂ ಇಷ್ಟ ಆಗ್ತೆ.

shivu said...

ಪೂರ್ಣಿಮಾ ಮೇಡಮ್,

ನೀವು ನನ್ನ ಬ್ಲಾಗಿಗೆ ಬಂದಿರಲ್ಲ...ನಿಮ್ಮ ಜಾಡು ಹಿಡಿದು ಬಂದರೆ ಮೊದಲ ಪಟ್ಟಿಗೆ ಎಂಥ ಅಧ್ಬುತ ಕವನ....

ಮಗ್ಗುಲಾವರಿಸಿ ತಲೆ ನೇವರಿಸಿದವ
ಬಲಗಿವಿಯಲ್ಲಿ ಪಿಸುಗುಟ್ಟಿದರೆ-
ಮೊದಲ ಬಾರಿ ಬೆತ್ತಲಾದಷ್ಟೇ ಪುಳಕ......ನನಗೆ ಬಲು ಇಷ್ಟವಾದ ಸಾಲುಗಳು.....

ನೀವು ನಾಗೇಂದ್ರನನ್ನು ಬೇಟಿಯಾಗಿದ್ದು ನನಗೆ ತುಂಬಾ ಖುಷಿಯಾಯಿತು...ನಾನು ಅವರ ಮನೆಯ ವಾತಾವರಣದ ಅಭಿಮಾನಿ....ಜೊತೆಗೆ ಅಲ್ಲಿನ ಮಕ್ಕಳ ಕ್ರಿಕೆಟ್ ಆಟದ ಸಹ ಆಟಗಾರಕೂಡ ಆಗಿದ್ದೇನೆ. ನಾನು ಅಲ್ಲಿಗೆ ಹೋದಾಗ ಕ್ರಿಕೆಟ್ ಆಟವಿದ್ದೇ ಇರುತ್ತದೆ.....

ಅದೆಲ್ಲಕ್ಕಿಂತ ಮುಖ್ಯವಾಗಿ ಅಲ್ಲಿನ ಪುಟಾಣಿಗಳಾದ ಭರತ್, ಜಯಂತ್, ಸ್ವಾತಿ, ವಿಕಾಶ್, ಸುಹಾಸ್......ಇವರೆಲ್ಲಾರ ಅಭಿಮಾನಿ ನಾನು...

ನಾನು ಛಾಯಾಕನ್ನಡಿಯಲ್ಲಿ ಕವನವೊಂದನ್ನು ಹಾಕಿದ್ದೇನೆ....ಬಿಡುವು ಮಾಡಿಕೊಂಡು ನೋಡಿ ಪ್ರತಿಕ್ರಿಯಿಸಿ.....ಥ್ಯಾಂಕ್ಸ್.....ನಿಮ್ಮ ಉಳಿದ ಕವನಗಳನ್ನು ಬಿಡುವು ಮಾಡಿಕೊಂಡು ನೋಡುತ್ತೇನೆ....

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

* ಪ್ರಕಾಶ್, ಶಾಂತಲಾ...
ನಿಂಗಕ್ಕೆ ಕವಿತೆ ಇಷ್ಟ ಆಗಿದ್ದು ನಂಗೆ ಸಂಭ್ರಮ ಅನ್ನಿಸ್ತಾ ಇದ್ದು!
ಎಂತಾ ಬರದ್ರೂ ಬಂದು ಖುಷಿ ಖುಷಿಯಾಗಿ ಬೆನ್ನು ತಟ್ತಿ. ಇದಕ್ಕಿಂತಾ ಪ್ರೋತ್ಸಾಹ ಇನ್ನೆಂತಾ ಬೇಕು ಅಲ್ದ..?

* ಶಿವು, ಕವಿತೆ ಮೆಚ್ಚಿದ್ದಕೆ ಆಭಾರಿ ನಾನು. ಮುತ್ಮುರ್ಡು ಊರು ತುಂಬಾ ಚೆನ್ನಾಗಿದೆ. ಮುಂದೆ ಅಡ್ಕೆ ತೋಟ, ಹಿಂದೆ ಗುಡ್ಡ- ಬೆಟ್ಟ. ಊರಿನ ಬಗ್ಗೆ- ಪುಟಾಣಿಗಳ ಬಗ್ಗೆ ಬರೀರಿ... ಓದಿ ಖುಷಿಪಡ್ಕ್ಕೆ ನಾವೆಲ್ಲ ಇದ್ದೀವಿ :-)

ಚಿತ್ರಾ said...

ಪೂರ್ಣಿಮಾ,
ನಿಮ್ಮ ಬ್ಲಾಗಿಗೆ ನನ್ನದು ಮೊದಲ ಭೇಟಿ . ಕವನ ರಾಶಿ ಇಷ್ಟ ಆತು. ನಿಧಾನವಾಗಿ ನಿಮ್ಮ ಹಳೆಯ ಬ್ಲಾಗ್ ಗಳನ್ನೂ ಓದಿದಿ. ಚಂದ ಬರೀತ್ರಿ ನೀವು.
ನನ್ನ ಬ್ಲಾಗಿಗೂ ಬನ್ನಿ ಒಮ್ಮೆ !

ಸಂತೋಷ್ ಚಿದಂಬರ್ said...

ಕವನ ಚೆನ್ನಾಗಿದೆ .. ನಿಮ್ ಬ್ಲಾಗಿನಿ ಬಣ್ಣ ಬದಲಾಯಿಸಿ ಯಾಕೆ ಅಂದ್ರೆ .. ಲಿಂಕು, ಹೆಸರು ಏನು ಕಾಣೋಲ್ಲ

ಸಾಗರದಾಚೆಯ ಇಂಚರ said...

ಪೂರ್ಣಿಮಾ,
ಸುಂದರ ಕವನ,

ಬರೆಯುತ್ತಿರಿ.

Mangala Bhat said...

hi ..putiya ...wah! wah! rashi cholo baradde ...ella saa;u valle meaningful iddu ..
hey putiya ...ninna hale blog yavadu nanagu tilasu naanu odikyandu santoshdinda irti :D

Thanks da

ಸುಶ್ರುತ ದೊಡ್ಡೇರಿ said...

ಅದೆಷ್ಟ್ ಚನಾಗ್ ಬರಿತೆ ಮಾರಾಯ್ತಿ ನೀನು.. ಉಫ್!

ಚಿತ್ರಾ ಕರ್ಕೇರಾ said...

ಪೂರ್ಣಿಮಾ..ನೀವು ತುಂಬಾ ಚೆನ್ನಾಗಿ ಬರೇತಿರಿ.
-ಚಿತ್ರಾ

kaligananath gudadur said...

Nijakku a nice effort. I am very fortune to have a creative freind.

ಕನಸು said...

ಹಾಯ್ ,
ಒಳ್ಳೆಯ ಕವಿತೆ..!

Dr.Gurumurthy Hegde said...

wonderful poornima,

heege kavana barita iri

ತೇಜಸ್ವಿನಿ ಹೆಗಡೆ- said...

ಪೂರ್ಣಿಮಾ,

ಒಂದೊಂದು ಸಾಲೂ ನೂರು ಮಾತುಗಳನ್ನು ಹೇಳಿದಂತಾಯಿತು. ನಿಜಕ್ಕೂ ಗಾಢವಾದ ಅಚ್ಚನ್ನು ಪ್ರತಿಬಿಂಬಿಸುತ್ತದೆ ನಿಮ್ಮ ಕವನ. ಬರುತ್ತಿರುವೆ. ಬರೆಯುತ್ತಿರಿ.

Rajesh Manjunath - ರಾಜೇಶ್ ಮಂಜುನಾಥ್ said...

ಪೂರ್ಣಿಮಾ ಮೇಡಂ,
ಕವನ ಬೊಂಬಾಟ್, ತುಂಬಾ ಚೆನ್ನಾಗಿದೆ...