Wednesday 6 October 2010

ಬ್ರಿಟ್ ಬಿಟ್ಸ್ ೪ - ತೆಂಗಿನಕಾಯ್ ಪುರಾಣ


ವತ್ತು ಆಫೀಸಿಗೆ ನಾನೊಬ್ಳೇ ಬಂದಿರಲಿಲ್ಲ. ನನ್ ಜೊತೆ ಒಂದು ತೆಂಗಿನಕಾಯಿ, ಒಂದು ಲಟ್ಟಣಿಗೆ, ಮತ್ತೊಂದು ಕಾಯಿ ತುರಿಯುವ ಮಶೀನ್ ಥರದ್ದು ಕೂಡಾ ಆಫೀಸ್‌ಗೆ ಬಂದಿದ್ವು!
ಆಫೀಸಿನಲ್ಲಿ ಸತ್ಯನಾರಾಯಣ ಪೂಜೆ ಇರ್ಲಿಲ್ಲಾರೀ.. ಇಂಡಿಯನ್ ಮೀಲ್ ಕೂಡಾ ಇರ್ಲಿಲ್ಲ. ನಮ್ಮಾಫೀಸಿನಲ್ಲಿ ಎಷ್ಟೊಂದು ಜನ ಒಡೆದ ತೆಂಗಿನ ಕಾಯಿಯನ್ನ ಜೀವನದಲ್ಲೇ ನೋಡದವರಿದ್ರು.. ಅವರೆದುರು ತೆಂಗಿನಕಾಯ್ ಒಡೆದು ತೋರಿಸುವುದಿತ್ತು, ಜೊತೆಗೆ ಅದರ ರುಚಿ ತೋರಿಸಿ ಮರುಳು ಮಾಡುವುದಿತ್ತು.

ಹಿನ್ನೆಲೆ: ’ವಾಟ್ ಹ್ಯಾವ್ ಯೂ ಗಾಟ್ ಫಾರ್ ದ ಲಂಚ್ ಟುಡೇ’ ಇದು ಪ್ರತಿದಿನ ಹನ್ನೆರಡೂಮುಕ್ಕಾಲಿಗೆ ನಾನು ಲಂಚ್‌ಬಾಕ್ಸ್ ಓಪನ್ ಮಾಡಿದೊಡನೆ ಕೇಳಿಬರುವ ಪ್ರಶ್ನೆ. ನಾನು ಬೇಕಂತಲೇ ’ಪು.ಳಿ.ಯೋ.ಗ.ರೆ’ ಅಂತ್ಲೋ, ’ಚಿ.ತ್ರಾ.ನ್ನ’ ಅಂತ್ಲೋ ಅಂದು ಈ ಹೈಕಳನ್ನ ಗೋಳಾಡಿಸ್ತೇನೆ. ಹತ್ತು ಸಲ ನಾ ಹೇಳಿದ್ದನ್ನ ರಿಪೀಟ್ ಮಾಡಲು ಟ್ರೈ ಮಾಡಿ, ಹತ್ತೂ ಸಲ ತಪ್ಪಿದ ಮೇಲೆ ’ಹೌ ಡಿಡ್ ಯೂ ಕುಕ್ ಇಟ್’ ಎಂಬ ಪ್ರಶ್ನೆ ಬಂತಂತಲೇ ಲೆಕ್ಕ. ಇನ್‌ಗ್ರೀಡಿಯಂಟ್ ಪಟ್ಟಿಯಲ್ಲಿ ಅಪರೂಪಕ್ಕೊಮ್ಮೆ ಫ್ರೆಶ್ ಕೊಕೊನಟ್ ಫ್ಲೇಕ್ಸ್ ಅಂತ ಬಂದ್ರೆ - ಕೊಕೊನಟ್ ಹೆಂಗೆ ಒಡೆದೆ? ಅದ್ರಿಂದ ಫ್ಲೇಕ್ಸ್ ಹೆಂಗೆ ತೆಗೆದೆ ಅನ್ನೋ ಪ್ರಶ್ನೆಗಳು. ಇದೇ ಕಾರಣದಿಂದ ಸೂಪರ್‌ಮಾರ್ಕೆಟ್‌ನಿಂದ ತಂದ ತೆಂಗಿನಕಾಯಿ, ಲಟ್ಟಣಿಗೆ (ತೆಂಗಿನ ಕಾಯಿ ಒಡೆಯುವುದಕ್ಕಂತ್ಲೇ ಎತ್ತಿ ಇಟ್ಟಿರೋದು), ಕಾಯಿ ತುರಿಯುವ ಮಶೀನ್ ನನ್ನ ಜೊತೆಯಲ್ಲಿ ಆಫೀಸಿಗೆ ಪಾದ ಬೆಳೆಸಿದ್ದು.

ಬೆಳಗ್ಗೆ ಆಫೀಸ್‌ಗೆ ಬಂದ ತಕ್ಷಣ ಅನೌನ್ಸ್ ಮಾಡಿ ಬಿಟ್ಟಿದ್ದೆ. ಹತ್ತೂವರೆಯ ಟೀ ಬ್ರೇಕ್‌ನಲ್ಲಿ ತೆಂಗಿನ ಕಾಯಿ ಒಡೆಯುವ/ತುರಿಯುವ ಕಾರ್ಯಕ್ರಮಕ್ಕೆ ಮುಹೂರ್ತ ಇದೆ ಎಂದು. ಅಲೆನ್, ಫಿಲ್ ಈ ಮಧ್ಯೆ ಅದೆಷ್ಟು ಸಾರಿ ಗಡಿಯಾರ ನೋಡಿದ್ರೋ ಗೊತ್ತಿಲ್ಲ. ಅಂತೂ ಸರಿಯಾಗಿ ಹತ್ತೂವರೆಗೆ ಒಂದು ಖಾಲಿ ಟೇಬಲ್ ಮೇಲೆ ಬೇಕಾದ ಸಲಕರಣೆ ಎಲ್ಲ ಇಟ್ಕೊಂಡು ಯುದ್ಧ ಸನ್ನದ್ಧಳಾದೆ. ನನ್ನ ಸುತ್ತ ಎಲ್ಲರೂ ತಲೆಗೊಂದು ಡೈಲಾಗ್ ಹೊಡೆಯುತ್ತ ನಿಂತಿದ್ದರು. ನನಗೆ ಅದ್ಯಾವುದರ ಮೇಲೂ ಲಕ್ಷ್ಯ ಇಲ್ಲ. ದೇವ್ರೇ ಒಂದೇ ಹೊಡೆತಕ್ಕೆ ಕಾಯಿ ಒಡೆದರೆ ಸಾಕಪ್ಪಾ, ಇಲ್ಲಾಂದ್ರೆ ಇವ್ರು ನನ್ನ ಹುರಿದು ಮುಕ್ಕಿಬಿಡ್ತಾರೆ ಅಂತ ಅಂದುಕೊಂಡೇ ಲಟ್ಟಣಿಗೆಯಿಂದ ತೆಂಗಿನಕಾಯಿಯ ಮೇಲೆ ಜಪ್ಪ ತೊಡಗಿದೆ. ದೊಡ್ಡಬ್ಬದಲ್ಲಿ (ದೀಪಾವಳಿ) ದನಬೈಲು ಕಟ್ಟೆಯ ಹತ್ತಿರ ನೂರರ ಲೆಕ್ಕದಲ್ಲಿ ತೆಂಗಿನಕಾಯಿ ಒಡೆಯುವ ಅಣ್ಣಂದಿರು ನೆನಪಾದರು. ಒಂದು.. ಎರಡು.. ಮೂರು.. ನಾಲ್ಕು.. ಊಹೂಂ.. ಸುತ್ತ ನಿಂತವರ ನಗು ಕಿವಿಗೆ ಅಪ್ಪಳಿಸ್ತಾ ಇತ್ತು. ’ದೇವ್ರೇ ಮರ್ಯಾದೆ ಪೂರ್ತಿ ತೆಗಿಬೇಡ್ವೋ’ ಅಂದುಕೊಳ್ಳುತ್ತಲೇ ಇನ್ನೊಂದು ಬಾರಿ ಜಪ್ಪಿದೆ ನೋಡಿ, ಲಟ್ಟಣಿಗೆ ಎರಡು ಹೋಳು! ಈಗ ನನಗೆ ನಗು ತಡೆಯಲಾಗಲಿಲ್ಲ. ನಗು ಜಾಸ್ತಿಯಾಗಿ ಕಣ್ಣಲ್ಲಿ ನೀರುಕ್ಕುತ್ತಿರುವುದು ಅಂದ್ರೆ ನಮ್ಮ ಆಫೀಸಿನವರು ಯಾರೂ ನಂಬಲಿಲ್ಲ. ಪುಣ್ಯಕ್ಕೆ ನಾನು ಕೆಲಸ ಮಾಡುತ್ತಿರುದು ಮ್ಯಾನುಫಾಕ್ಚರಿಂಗ್ ಕಂಪನಿಯಲ್ಲಿ. ಅದೆಲ್ಲಿಂದಲೋ ಒಂದು ಸುತ್ತಿಗೆ ಪ್ರತ್ಯಕ್ಷವಾಯ್ತು! ಸರಿ - ಸುತ್ತಿಗೆಯಲ್ಲಿ ಜಪ್ಪತೊಡಗಿದೆ. ಎರಡನೇ ಹೊಡೆತಕ್ಕೆ ಸಣ್ಣ ಬಿರುಕು ಬಿಟ್ಟ ತೆಂಗಿನಕಾಯಿಯ ನೀರನ್ನ ಕಪ್‌ನಲ್ಲಿ ಸಂಗ್ರಹ ಮಾಡಿ ಮೂರನೇ ಬಾರಿ ಜಪ್ಪಿದಾಗ ಅಂತೂ ಎರಡು ಭಾಗವಾಗಿ ತೆರಕೊಂಡ್ತು. ’ಒಹ್ ವಾ..ವ್’, ’ಲುಕ್ ಎಟ್ ದ ಕಲರ್’, ’ಇಟ್ ಮಸ್ಟ್ ಬಿ ಡ್ಯಾಮ್ ಟೇಸ್ಟಿ’ ಹೀಗೆ ಹೊರಡುತ್ತಿದ್ದ ಉದ್ಗಾರಗಳಿಗೇನೂ ಅಲ್ಲಿ ಬರ ಇರ್ಲಿಲ್ಲ.


ಮುಂದಿನ ಕಾರ್ಯಕ್ರಮ ಕಾಯಿ ತುರಿಯುವುದು. ಪುಟಾಣಿ ಮಶಿನನ್ನ ಟೇಬಲ್ ಟಾಪ್ ಮೇಲೆ ಪ್ರತಿಷ್ಠಾಪಿಸಿ* ನಿಧಾನಕ್ಕೆ ತುರಿಯತೊಡಗಿದೆ. ಇಲ್ಲಿ ನಾನು ಫೇಲ್ ಆಗ್ಲೇ ಇಲ್ಲ. ಐದೇ ನಿಮಿಷಕ್ಕೆ ಒಂದು ಕಾಯ್ಕಡಿ ಪೂರ್ತಿ ತುರಿದ ಜಾಣೆ ನಾನು! ಸರಿ - ಎಲ್ಲರೂ ಒಂದೊಂದು ಸ್ಪೂನ್ ಹಿಡಿದು ಬಿಜಿಯಾಗೇಬಿಟ್ರು. ಒಬ್ಬ ’ಡೆಲೀಶಿಯಸ್’ ಅಂದ, ಇನ್ನೊಬ್ಬ ’ರಿಯಲಿ ಯಮ್ಮೀ’ ಅಂದ, ಮೂಲೆಯಲ್ಲಿ ಇದ್ದ ಬಿಂಕದ ಸಿಂಗಾರಿ ಇನ್ನೊಬ್ಳು ’ನಾಟ್ ಬ್ಯಾಡ್’ ಅಂದ್ಲು. ಇವರೆಲ್ಲ ಹೀಗೆ ಗುಲ್ಲೆಬ್ಬಿಸ್ತಿರೋವಾಗ ನಾನು ಫುಲ್ ಫ್ಲಾಶ್‌ಬ್ಯಾಕ್‌ಗೆ ಹೋಗಿಯಾಗಿತ್ತು. ನಾವು ಚಿಕ್ಕವರಿರೋವಾಗ ತುರಿಯೋ ಮಣೆಯ ಎದುರು ಕೂತು, ಕಾಯಿ ತುರಿ ಗುಡ್ಡೆ ಆಗೋದನ್ನೇ ಕಾಯ್ತಾ, ಸಣ್ಣ ಗುಡ್ಡೆಯಾದ ಕೂಡ್ಲೇ ಅದ್ಕೆ ಕೈಹಾಕ್ತಾ ಇರೋ ಸೀನು, ಅಮ್ಮ ’ಕೊಳಕು ಕೈ ಆದ್ರೆ ತೊಳ್ಕಂಡು ಬಾ’ ಅಂತ ವಾರ್ನಿಂಗ್ ಕೊಡೋ ಸೀನು ಒಂದರ ಹಿಂದೊಂದು ನೆನಪಾಗ್ತ ಇತ್ತು.

* * * * * *


*ಪ್ರತಿಷ್ಠಾಪಿಸಿ - ಸರಿಯೋ?
ಪ್ರತಿಷ್ಟಾಪಿಸಿ - ಸರಿಯೋ?

9 comments:

ಸಾಗರದಾಚೆಯ ಇಂಚರ said...

ವಿವರಣೆ ಚೆನ್ನಾಗಿದ್ದು
ಪ್ರತಿಷ್ಟಾಪಿಸಿ ಸರಿ ಅನಿಸ್ತು

ಸೀತಾರಾಮ. ಕೆ. / SITARAM.K said...

ಪ್ರತಿಷ್ಠಾಪಿಸಿ -ಸರಿ
ತಮ್ಮ ತೆಂಗಿನ ಕಾಯಿ ತುರಿಯೋ ಪುರಾಣ ಚೆನ್ನಾಗಿದೆ.
ಅಂದ ಹಾಗೇ ತಾವು ಇರೋದು ಎಲ್ಲಿ . ತಮ್ಮ ಕೊಲಿಗ್ಸ್ ಗೇ ತೆಂಗಿನಕಾಯಿ ಗೊತ್ತಿಲ್ಲ ಎಂದರೆ ನೀವಿರೋದು ವಿದೇಶದಲ್ಲಿ ಅನ್ಕೊತಿನಿ.
ನಕ್ಕು ಸಾಕಾಯ್ತು.

ವಿ.ರಾ.ಹೆ. said...

ತೆಂಗಿನಕಾಯಿ ಚಾಕುದಲ್ಲಿ ಕೊಯ್ಯಬಹುದಂತೆ ಗೊತ್ತಾ? ಮುಂದಿನ ಸಲ ಅದನ್ನು ಮಾಡಿ ತೋರಿಸಿ. ನಿಮ್ ಬ್ರಿಟ್ಸ್ ಗಳನ್ನ ದಂಗುಬಡಿಸಿ :)

ಪ್ರತಿಷ್ಠಾಪಿಸಿ ಸರಿ .

ಚಿತ್ರಾ said...

ಪೂರ್ಣಿ ,
ಬ್ರಿಟನ್ ನಲ್ಲಿ ಭಾರತದ ತೆಂಗಿನಕಾಯಿ ಜಪ್ಪಿ ಒಡೆದ , ತೆಂಗಿನ ಕಾಯಿ ರುಚಿಯನ್ನು ಅವರಿಗೂ ತೋರಿಸಿದ ಜಾಣೆ ನೀನು ! ಅಲ್ಲ ಕೂಸೇ , ಲಟ್ಟಣಿಗೆಯಲ್ಲಿ ಹೆಂಗೆ ಒಡಿತೆ ನೀನು ಕಾಯಿನಾ? ನಂಗೂ ಆಶ್ಚರ್ಯ ಅಆತು . ಇರಲಿ , ಸುಮ್ ಸುಮ್ನೆ ೨೦೦ ವರ್ಷ ಅವರ ತಾತ -ಮುತ್ತಾತಂದಿರು ಭಾರತದಲ್ಲಿ ಇದ್ದು ಹೋದರೂ ಇನ್ನೂ ತೆಂಗಿನ ಕಾಯಿ ಬಗ್ಗೆ ಹೆಚ್ಚು ಗೊತ್ತಿಲ್ಯ ನಿಂಗಕ್ಕೆ ಹೇಳಿ ಸ್ವಲ್ಪ ರೇಗಿಸಲೇ ಅಡ್ಡಿಲ್ಲೆ ನೋಡು ನಿನ್ನ ಆಫೀಸ್ ನವರನ್ನ . ಹೋಯ್, ನೀನು ಇನ್ನು ಹಲಸಿನ ಕಾಯಿ ಚಿಪ್ಸ್, ಮತ್ತೆ , ಹಣ್ಣಿನ ಕಡುಬು ತಗಂಡು ಹೋಗಿದ್ರೆ .... ಆಮೇಲೆ ಹಲಸಿನ ಹಣ್ಣು ಕೊರೆಯೋ ಡೆಮೋ ಕೊಟ್ಟು ನೋಡ ಹಂಗಿದ್ರೆ .... ಅವೂ ಎಲ್ಲಾ ಸ್ವಲ್ಪ try ಮಾಡ ಹಂಗಿದ್ರೆ ......... . ಹಿ ಹಿ ಹಿ

ಸುಧೇಶ್ ಶೆಟ್ಟಿ said...

Chithra avarige doubt bandhanthe adhu hege lattaNigeyalli neevu thenginakaayi oditheeri antha aascharya aayithu... naanu kaththiyalli thengina kaayi odeyodhu :)

nimma blog officinalli odhuthiddaaga pakkada desk nalli koothidhdha northie huduganige nammalli thengina kaayi hege thurithaare antha saNNadhaagi vivarisabekaagi banthu :)

baraha nagisithu :)

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

@ ಗುರುಮೂರ್ತಿ - Thanks!
@ ಸೀತಾರಾಮ್ ಕೆ - ಓದಿ ನಕ್ಕಿದ್ದಕ್ಕೆ ಧನ್ಯವಾದಗಳು - ನಾನಿರೋದು ಲಂಡನ್.

@ ವಿಕ್ಕಿ, ಚಾಕುದಲ್ಲಿ ತೆಂಗಿನ ಕಾಯಿ ಕೊಯ್ಯದ? ಹ್ಮ್ - ವಿಚಾರ ಮಾಡಕಾತು.. ಸರೀ ಪ್ರಾಕ್ಟೀಸ್ ಮಾಡ್ಕೊಂಡು ಬಂದು ಪ್ರಾತ್ಯಕ್ಷಿಕೆ ತೋರಿಸ್ಬೇಕು - ಇಲ್ಲಾಂದ್ರೆ, ಗಣಪತಿ ಹೋಗಿ ಹನುಮಂತ ಆದಾನು!

@ ಚಿತ್ರಕ್ಕ, ಸುಧೇಶ್ - ಹೆಹೆ, ಇಲ್ಲಿಯ ತನಕವೂ ನಾನು ಮಾಡಿದ್ದು ಅದೇ- ಲಟ್ಟಣಿಗೆಯಲ್ಲಿ ತೆಂಗಿನಕಾಯಿ ಒಡೆದಿದ್ದು! ಇಲ್ಲಿಗೆ ಬಂದ ಹೊಸತರಲ್ಲಿ ನಮ್ಮತ್ರ ಕತ್ತಿ, ಸುತ್ತಿಗೆ ಅಥವಾ ಇತರೇ ಯಾವುದೇ ಕಬ್ಬಿಣದ ಆಯುಧ (!?)ಇರಲಿಲ್ಲ. ಹಾಗಾಗಿ ಮೊಟ್ಟ ಮೊದಲ ಬಾರಿಗೆ ತೆಂಗಿನಕಾಯ್ ಒಡೆಯುವ ಪ್ರಸಂಗ ಬಂದಾಗ ನನ್ನ ಕೈಗೆ ಸುಲಭವಾಗಿ ಸಿಕ್ಕಿದ್ದು ಈ ಲಟ್ಟಣಿಗೆಯೇ! ಕಚ್ಚು-ಕಚ್ಚಾದ ಈ ಲಟ್ಟಣಿಗೆಯನ್ನ ಲಟ್ಟಿಸಲು ಉಪಯೋಗಿಸದೇ, ಕಾಯಿ ಒಡೆಯಲೆಂದೇ ಪಕ್ಕಕ್ಕಿಟ್ಟೆ. ಇದು ತುಸು ದಪ್ಪ ಲಟ್ಟಣಿಗೆ ಆದ್ದರಿಂದ ಕಾಯಿ ಒಡೆಯುಯುವ ಕೈಂಕರ್ಯ ಅಷ್ಟೊಂದು ಕಷ್ಟ ಎಂದೂ ಆದದ್ದಿಲ್ಲ (ನಾನು ತೆಂಗಿನಕಾಯಿ ಕೊಂಡು ತರುವುದು ಹಬ್ಬಕ್ಕೆ- ಹುಣ್ಣಿಮೆಗೆ ಮಾತ್ರ). ಅದಿರ್ಲಿ, ಇಷ್ಟೆಲ್ಲ ವರ್ಷ ತನ್ನ ಮೇಲಾದ ಆಘಾತವನ್ನ ತಡೆದುಕೊಂಡೂ ನನ್ನ ಅಡಚಿಣಿ ಸುಧಾರಿಸಿದ ಲಟ್ಟಣಿಗೆ - ಹೀಗೆ ಎಲ್ಲರ ಎದುರು ಎರಡು ಹೋಳಾಗಿ ಬಿದ್ದು ನನ್ನ ಮಾನ ಹರಾಜು ಹಾಕುವುದೇ??!! ಇನ್ಮೇಲೆ ಸುತ್ತಿಗೆನೇ ಆಧರಿಸ್ತೇನೆ ಬಿಡಿ :)

Ittigecement said...

ಪೂರ್ಣಿಮಾ...

ಕಾಯಿ ಒಡೆಯುವ ಫೋಟೊ ಇದ್ದಿದ್ದಲ್ಲಿ ಇನ್ನೂ ಮಜಾ ಬರ್ತಾ ಇತ್ತು...

ಒಂಥರಾ ವಿಶಿಷ್ಟ ಅನುಭವ ಅಲ್ಲವಾ?


ನಮ್ಮನ್ನು ನಗಿಸಿದ್ದಕ್ಕೆ ಥ್ಯಾಂಕ್ಸು...

Anonymous said...

hey innu swalpa varshakke indiadallu ide stiti battenooo... kaayi odiyavu andre... devastaanakke hogi pujari hatra odsaduuu... antha...

Anonymous said...

Baaledindin bhajji torsidre...

i read all your blogs after i got link in "vijaya karnataka"... I felt why you wrote so less...

baravanige bhavagala meravanige thara tumba chenda agide..