ಆಗೆಲ್ಲ ನನ್ನ ಕಣ್ಣಲ್ಲೇ
ಕನಸುಗಳು ಗೂಡುಕಟ್ಟುತ್ತವೆ ಎಂದು
ಬೀಗುತ್ತಿದ್ದ ಕಾಲ
ವಯಸ್ಸು ಹದಿನೈದೋ ಹದಿನಾರೋ...
ಚಾದರದ ಒಳಗೊಳಗೇ ಮುದುರಿ,
ಮಗ್ಗುಲು ಬದಲಾಯಿಸದೆ
ಬೆಳಗು ಹಾಯಿಸಿದ ರಾತ್ರಿಗಳು
ಇಂದು ಯೋಚಿಸಿದರೆ
ತೀರ ಸಿಲ್ಲಿ ಸಿಲ್ಲಿ!
ಜಡೆ ಹೆಣೆಯುವಾಗ
ಕನ್ನಡಿಯ ಆ ತುದಿಯಲ್ಲಿ
ಯಾರೋ ಕಣ್ಣು ಮಿಟುಕಿಸಿದಂತೆ ಎನಿಸಿ
ಬೈತಲೆಗೆ ತುಟಿ ತಾಕಿಸಿದಂತೆ ಭ್ರಮಿಸಿ
ಸರಸರನೆ ಹೆಜ್ಜೆ ಹಾಕಿ
ಕಿಟಕಿಯ ಬದಿಯ ಜಾಗವನ್ನೇ ಆಯ್ದು
ರಸ್ತೆಯತ್ತ ನೋಟ ನೆಟ್ಟಾಗ
ಕಣ್ಣಲ್ಲಿ ಹಸಿ-ಹಸಿ ವಿರಹ...
ದೇಹ ಚಿಗಿತುಕೊಳ್ಳುವ ಹೊತ್ತಲ್ಲಿ
ಪ್ರತಿ ಎಲೆಯ ವಾಸನೆಯನ್ನೂ
ಗ್ರಹಿಸುವ ಉಮೇದಿನಲ್ಲಿ
ಕಣ್ಣಲ್ಲಿ ಗೂಡು ಕಟ್ಟಿದ್ದ ಕನಸು
ಒಬ್ಬರಿಂದೊಬ್ಬರಿಗೆ ವರ್ಗ
ವಾಗುತ್ತ - ಬಣ್ಣಬಣ್ಣದ
ಮೊಟ್ಟೆಗಳನ್ನು ಇಡುತ್ತ ಹೋದದ್ದು
ತಿಳಿಯಲೇ ಇಲ್ಲ
ಪುಟಾಣಿ ಅಲೆಗಳನ್ನು
ಗ್ರಹಿಸುವ ವಯಸ್ಸೂ ಅದಲ್ಲ
ದಿನ ಕಳೆದಂತೆ
ಕನಸು ಮೊಟ್ಟೆಗಳಲ್ಲಿ ಯಾವವೂ
ಮರಿಯಾಗದೆ ಜಳ್ಳಾಗಿ
ಬಿಟ್ಟವು ಬರಿದೇ ತಮ್ಮ
ಚಿಪ್ಪುಗಳನ್ನು ಉಳಿಸಿ...
ಆದರೂ
ನಿಮಗೆಲ್ಲ ಋಣಿ ನಾನು
ಅಂಗಾಂಗ ಚಿಗುರಿಸಿದ್ದಕ್ಕೆ
ಕನಸ ಕುದುರಿಸಿದ್ದಕ್ಕೆ.