Monday, 4 April 2011

ಹಬ್ಬವೆಂದರೆ...

ಯುಗಾದಿಯ ಮುಂಜಾವು
ಆಯಿ ಮಾಡಿದ ಅವಲಕ್ಕಿ ಒಗ್ಗರಣೆ
ಪರಿಮಳ ಅಡುಗೆ ಒಳ ದಾಟಿ
ತೋರಣ ಸಿಂಗರಿಸಿದ ಪ್ರಧಾನ ಬಾಗಿಲು ಮೀರಿ
ಆರು ಸಹಸ್ರ ಮೈಲು ಪಯಣಿಸಿ
ಸಪ್ತ ಸಾಗರದಲ್ಲಿ ಮುಳುಗೆದ್ದರೂ
ತನ್ನ ಘಮ ಉಳಿಸಿಕೊಂಡು ಬಂದಾಗ
ಇಲ್ಲಿ, ನನ್ನ ಕೈಲಿದ್ದ ಕಾರ್ನ್‌ಫ್ಲೇಕ್ಸ್ ಬೌಲು ಅರ್ಧ ಖಾಲಿ

ಹತ್ತೂಕಾಲು ಗಂಟೆಗೆ
ಒಂದು ಕಪ್ ಖಡಕ್ ಚಹಾದ ಜತೆಯಾದ
ಮಲ್ಟಿಗ್ರೇನ್ ರೈಸ್‌ಕೇಕ್
ಹೋಳಿಗೆ ಹೂರಣದ ಬಣ್ಣದಲ್ಲೇ ಕಂಡರೆ
ಅದು ನನ್ನ ತಪ್ಪಲ್ಲ - ಯುಗಾದಿಯದು.

ಹನ್ನೊಂದೂವರೆಗೆ ಟೇಬಲ್ ಪಕ್ಕದಲ್ಲಿ
ಪ್ರತ್ಯಕ್ಷನಾದ ಅರವತ್ತರ ಮ್ಯಾನೇಜರ್
ಕಳೆದ ವಾರವಷ್ಟೆ ಬಂದ ಆರ್ಡರ್ ನಾಪತ್ತೆ
ಎಂದು ಸಿಡಿಮಿಡಿಗುಟ್ಟಿದಾಗ,
ದೇವರಿಗೆ ಅಭಿಷೇಕ - ಆರತಿಯ ನಂತರ
’ಹೊಸ ಪಂಚಾಂಗ ತಂದಿಡ್ರೋ’ ಅಂತ
ಮಕ್ಕಳ ಮೇಲೆ ಆವಾಜ್ ಹಾಕುವ
ಅಜ್ಜನಂತೆ ಹೂಬೇ-ಹೂಬ್ ಕಂಡು
ಸಿಟ್ಟಿನ ಜಾಗದಲ್ಲಿ ಪ್ರೀತಿಯುಕ್ಕಿದ್ದೂ
ಯುಗಾದಿಯ ಮಧ್ಯಾನ್ನವೇ..

ಮಧ್ಯಾನ್ಹ ಡಬ್ಬಿಯಲ್ಲಿದ್ದ
ಸಪ್ಪೆ ಮೊಸರನ್ನದ ಪ್ರತಿ ತುತ್ತೂ
ಕೋಸಂಬ್ರಿ, ತುಪ್ಪದನ್ನ, ಅಂಬೊಡೆ
ಅಪ್ಪೆಹುಳಿಯನ್ನು ನೆನಪು ಮಾಡಿದಾಗ
ಹಬ್ಬದ ಸಂಜೆ
ಹೋಳಿಗೆಯಲ್ಲದಿದ್ದರೆ ಅದರ ತಮ್ಮ
ಹಯಗ್ರೀವವನ್ನಾದರೂ ಮಾಡಿಯೇ ಸಿದ್ಧ..
ನನ್ನಂಥ ’ಅಡುಗೆ ಕಳ್ಳಿ’ಯೂ
ಹಟ ಹೊರುವಂತೆ ಮಾಡಿದ ಯುಗಾದಿಯೇ
ನಿನಗೊಂದು ದೊಡ್ಡ ನಮಸ್ಕಾರ!

Tuesday, 11 January 2011

ಅಜ್ಜ!

ರ್ವರಿಗೂ ನಮಸ್ಕಾರ. ವಿಧಿವಶರಾಗಿ ಅಲ್ಲೆಲ್ಲೋ ದೂರದಲ್ಲಿದ್ದೇ ಇಲ್ಲಿ ನಡೆಯುತ್ತಿರುವ ಕಾರ್ಯಗಳತ್ತ ಕಣ್ಣಿಟ್ಟಿರುವ ಅಜ್ಜ ಗಣಪತಿ ಭಟ್ಟರಿಗೆ ಇಲ್ಲಿಂದಲೇ ಉದ್ದಂಡ ಪ್ರಣಾಮ.

ಈಗೊಂದು ತಿಂಗಳಿನಿಂದ ಪ್ರತಿ ಬಾರಿ ಫೋನ್ ಮಾಡಿದಾಗ ಅಜ್ಜನ ಅನಾರೋಗ್ಯ ತಿಳಿಯುತ್ತಲೇ ಇತ್ತು. ಅಜ್ಜ ತುಂಬ ಕೃಶನಾಗಿದ್ದಾನೆ; ತನ್ನಷ್ಟಕ್ಕೆ ತಾನೇ ಓಡಾಡಲಾರ; ಮೊನ್ನೆಅಂಗಳದಲ್ಲಿ ಆಯತಪ್ಪಿ ಬಿದ್ದ; ಅಜ್ಜ ಈಗ ಆಸ್ಪತ್ರೆಯಲ್ಲಿ ಇದ್ದಾನೆ - ಇಂಥ ವರದಿಯೆಲ್ಲ ಪ್ರತಿವಾರ ತಿಳಿಯುತ್ತಿದ್ದರೂ ಅಜ್ಜನನ್ನ ಆ ರೀತಿ ನೆನೆಸಿಕೊಳ್ಳಲು ನಮಗೆ ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಸದಾ ಚಟುವಟಿಕೆಯ, ದೊಡ್ಡ ದನಿಯಲ್ಲಿ ಮಾತನಾಡುವ- ನಗುವ, ಇದ್ದಕ್ಕಿಂದಂತೇ ಕಣ್ಣು ಕೆಂಪಾಗಿಸಿ ಹತ್ತಿರದವರನ್ನೂ ಹೆದರಿಸುವ, ಮೊಮ್ಮಕ್ಕಳನ್ನು ಸದಾ ಕೊಂಡಾಡುವ ಅಜ್ಜನನ್ನೇ ಕಂಡಿದ್ದ ನಾವು- ಮರಣಶಯ್ಯೆಯಲ್ಲಿ ಮಲಗಿದ್ದ ಅಜ್ಜನನ್ನು ಹೇಗೆ ನೆನೆಸಿಕೊಂಡೇವು?

ಅಜ್ಜನ ವೀರಗಾಥೆಗಳನ್ನ ಕಥೆಯಾಗಿ ಕೇಳಿಸಿಕೊಳ್ಳುತ್ತ ದೊಡ್ಡವರಾದವರು ನಾವು. ಅಜ್ಜ ಹುಲಿಯನ್ನು ಬೇಟೆಯಾಡಿ ಅದರ ಪಕ್ಕ ಕೂತ ಫೋಟೋವನ್ನು ಗೆಳೆಯ-ಗೆಳತಿಯರಿಗೆ ತೋರಿಸುತ್ತ ಹೆಮ್ಮೆ ಪಟ್ಟವರು ನಾವು. ಹಣ್ಣು ಹಣ್ಣು ಮುದುಕರಾದರೂ ಒಂದಿಲ್ಲೊಂದು ಸಾಹಸ ಮಾಡುತ್ತಲೇ ಎಲ್ಲರನ್ನು ಅಚ್ಚರಿಪಡಿಸತ್ತಿದ್ದ ಅಜ್ಜನನ್ನು ಅರಳುಗಣ್ಣಿನಲ್ಲಿ ನೋಡಿದ ಮೊಮ್ಮಕ್ಕಳು ನಾವು. ಕಳೆದ ಏಪ್ರಿಲಿನಲ್ಲಿ ನಾವು ಊರಿಗೆ ಬಂದಾಗಿನ ಒಂದು ಸಂರ್ಭ. ನಾವು ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರೆಲ್ಲ ಅಪರಾತ್ರಿಯಲ್ಲಿ ನಾಟಕಕ್ಕೆ ಹೊರಟಾಗ ಎಂಭತ್ತೈದು ದಾಟಿದ ಅಜ್ಜ ನಾನೂ ನಾಟಕಕ್ಕೆ ಬರುತ್ತೇನೆ’ ಎಂದರು. ಆಗ ಅವರ ಕಣ್ಣಲ್ಲಿ ಕಂಡದ್ದು ಆಹಾ... ಅದೆಂಥ ಜೀವನ ಪ್ರೀತಿ!

ಕೈ ಹಾಕಿದ ಕೆಲಸವನ್ನು ಮಾಡಿ ಮುಗಿಸುವ ಹಠ, ಧೈರ್ಯ, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ, ಸಾಹಸೀ ಮನೋಭಾವ ನಮ್ಮ ರಕ್ತದಲ್ಲಿ ಸ್ವಲ್ಪವಾದರೂ ಬಂದಿದ್ದರೆ ಅದಕ್ಕೆ ಕಾರಣ ಅಜ್ಜ- ಗಣಪತಿ ಭಟ್ಟರೇ.

ದೂರದ ದೇಶದಲ್ಲಿ ಇದ್ದಿದ್ದರಿಂದ ಸಣ್ಣಕೇರಿಯಲ್ಲಿ ನಡೆಯುತ್ತಿರುವ ಕಾರ್ಯಗಳಲ್ಲಿ ಪಾಲ್ಗೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಮೊಮ್ಮಗಳಾದ ನನಗೆ, ಹಾಗೂ ಅಜ್ಜನ ಇನ್ನೊಬ್ಬ ಮೊಮ್ಮ ವಿನಾಯಕನಿಗೆ ಬೇಸರವಿದೆ. ಆದರೆ, ಹತ್ತಿರದಲ್ಲೇ ಇದ್ದು- ಎಲ್ಲ ಕಾರ್ಯಕ್ರಮವನ್ನೂ ನಡೆಸಿಕೊಟ್ಟ ಮಕ್ಕಳು, ಮೊಮ್ಮಕ್ಕಳು, ಮಿಮ್ಮೊಕ್ಕಳನ್ನ ದೂರದಿಂದಲೇ ನೋಡಿ ಅಜ್ಜನ ಆತ್ಮ ತೃಪ್ತಿಪಟ್ಟಿರಬಹುದು ಎಂಬ ಭರವಸೆಯೂ ಇದೆ.

ನಮ್ಮ ಮುಂದಿನ ಪೀಳಿಗೆಗೆ ವಿವರಿಸಿ ಹೇಳಲು ಹತ್ತಾರು ಸಾಹಸದ ಕಥೆಗಳನ್ನು ಬಿಟ್ಟುಹೋದ ಅಜ್ಜ ಗಣಪತಿ ಭಟ್ಟರಿಗೆ ಮತ್ತೊಮ್ಮೆ ಸಾಷ್ಟಾಂಗ ಪ್ರಣಾಮ ಮಾಡುತ್ತ, ಅವರ ಜೀವನ ಪ್ರೀತಿಯನ್ನ ಹೆಜ್ಜೆ ಹೆಜ್ಜೆಗೂ ನೆನೆಯುತ್ತ ಈ ವಿಷಾದ ಸಂದೇಶವನ್ನು ಕಳುಹಿಸುತ್ತಿದ್ದೇನೆ.

ಇತಿ,
ಪೂರ್ಣಿಮಾ

(ನನ್ನ ಅಜ್ಜ ದೈವಾಧೀನರಾಗಿ ಇವತ್ತಿಗೆ ೧೪ ದಿನಗಳಾಯ್ತು. ಈ ಮೇಲಿನದ್ದು ನಾನು ಇಲ್ಲಿಂದ ಅಜ್ಜನ ಕ್ರಿಯಾದಿ ಕಾರ್ಯಕ್ರಮಕ್ಕಾಗಿ ಕಳುಹಿಸಿದ ವಿಷಾದ ಸಂದೇಶ. ಅಷ್ಟು ಹಳೆ ತರುವಾಯದವರಾದರೂ ತಮ್ಮ ದೇಹವನ್ನು ಧಾರವಾಡದ ಎಸ್.ಡಿ.ಎಂ ಕಾಲೇಜಿಗೂ, ಕಣ್ಣನ್ನು ರೋಟರಿ ಸಂಸ್ಥೆಗೂ ದಾನ ಮಾಡಿದ ಅಜ್ಜ ನಮ್ಮ ಮುಂದಿನ ತಲೆಮಾರುಗಳಿಗೆ ನಿಜಕ್ಕೂ ಆದರ್ಶ. ಇದು ತುಂಬ ಖಾಸಗಿ ವಿಷಯ - ಗೊತ್ತು! ಆದರೆ ಈ ಬ್ಲಾಗ್ ಕೂಡ ಖಾಸಗಿಯೇ ಅಲ್ವೇ?)