Friday 25 December 2009

ಬ್ರಿಟ್ ಬಿಟ್ಸ್ - ೩

ದಿನ- ಕ್ರಿಸ್‌ಮಸ್, ಸಮಯ - ಸಂಜೆ ಆರರಿಂದ ಆರೂಮೂವತ್ತು, ಲಂಡನ್

ಬೆಳಗ್ಗೆಯಿಂದ ಮನೆಯಲ್ಲಿ ಕೂತು ಬೋರಾಗುತ್ತಿತ್ತು. ಹೊರಗಡೆಯ ಕ್ರಿಸ್‌ಮಸ್ ಸಂಭ್ರಮ ನೋಡಿ ಬರೋಣ ಎನ್ನಿಸಿದ್ದು ಆರು ಗಂಟೆಗೆ. ಮನೆಯಿಂದ ಹೊರಟು ಒಂದು ಕಿಲೋಮೀಟರ್ ದೂರದವರೆಗೆ ಹಗೂರ ಹೆಜ್ಜೆಯನ್ನಿಟ್ಟು ಓಡಾಡಿ ಈಗಷ್ಟೇ ಬಂದಿದ್ದೇನೆ. ರಸ್ತೆಯೆಲ್ಲ ಖಾಲಿ ಖಾಲಿ - ಅಲ್ಲೊಂದು ಇಲ್ಲೊಂದು ಕಾರ್‌‍. ಇವತ್ತು ಕಾರ್‌ನಲ್ಲಿ ಕೂತವರೆಲ್ಲ ಒಂಟಿಯಲ್ಲ. ಹೆಂಡತಿ - ಮಕ್ಕಳೊಂದಿಗರು! ಬಹುಶ ಅಪ್ಪ ಅಮ್ಮನ ಜೊತೆಯೋ, ಅಜ್ಜಿ ತಾತನ ಜೊತೆಗೋ ‘ಕ್ರಿಸ್‌ಮಸ್‌ ಮೀಲ್’ ಮಾಡಲು ಹೊರಟಿರಬೇಕು. ಆದರೆ ಫುಟ್ ಪಾತಿನ ಮೇಲೆ ನನ್ನ ಬಿಟ್ಟರೆ ಇನ್ಯಾರೂ ಇಲ್ಲ.

ಇಪ್ಪತ್ತು- ಇಪ್ಪತ್ತೈದು ನಿಮಿಷದ ನಡಿಗೆಯಲ್ಲಿ ಒಂದು ನರಪಿಳ್ಳೆಯೂ ಫುಟ್ ಪಾತ್ ಮೇಲೆ ಸಿಗಲಿಲ್ಲ! ಕರ್ಟನ್‌ಗಳು ತೆರೆದುಕೊಂಡಿದ್ದ ಮನೆಗಳ ಎದುರು ನಾನು ಆದಷ್ಟೂ ಆಮೆ ವೇಗದಲ್ಲಿ ನಡೆಯತೊಡಗಿದೆ - ಒಳಗೆ ಏನು ನಡೆಯುತ್ತಿದೆ ಎಂಬ ಕುತೂಹಲ ನೋಡಿ..!

ಬೇರೆ ದಿನಗಳಲ್ಲಿ ಇಬ್ಬರಿದ್ದರೆ ಸಾಕು, ಮೂವರಿದ್ದರೆ ಹೆಚ್ಚು, ನಾಲ್ವರಿದ್ದರಂತೂ ಕೋಲಾಹಲ ಎಂಬಂತಿರುವ ಮನೆಗಳು ಇಂದು ಒಳಗಡೆಗೆ ಗಿಜಿಗುಡುತ್ತಿವೆ! ಒಂದು ಗುಂಪು ಲಿವಿಂಗ್ ರೂಮಿನಲ್ಲಿದ್ದರೆ ಇನ್ನೊಂದು ಗುಂಪು ಡೈನಿಂಗ್ ಟೇಬಲ್ ಸುತ್ತುವರೆದಿತ್ತು. ಅದೋ ಮುಂದಿನ ಮನೆಯೆದುರಿನ ಗಾರ್ಡನ್ನಿನಲ್ಲಿ ಮೂವರು ಮಕ್ಕಳು - ಮೈ ಕೊರೆಯುವ ಚಳಿಯೂ ಲೆಕ್ಕಕ್ಕಿಲ್ಲ ಈ ಪುಟಾಣಿಗಳಿಗೆ. ಇವತ್ತು ಮನೆಗಳಿಗೆಲ್ಲ ಸ್ವಲ್ಪ ಹೆಚ್ಚೇ ಶೃಂಗಾರ. ಹದಿನೈದು ದಿನಗಳ ಹಿಂದೆಯೇ ಕಿಟಕಿಯಿಂದ ಕಾಣುತ್ತಿದ್ದ ‘ಕ್ರಿಸ್‌ಮಸ್ ಟ್ರೀ’ಗಳು ಇವತ್ತೇಕೋ ತುಸು ಜಾಸ್ತಿ ಮಿಣಮಿಣಸುತ್ತಿವೆ ಅನ್ನಿಸಿತು. ಎಲ್ಲೋ ಒಂದೆರಡು ನಿಶ್ಶಬ್ದ ಮನೆಗಳನ್ನು ಬಿಟ್ಟರೆ ಬೀದಿಯುದ್ದಕ್ಕೂ ಕಂಡಿದ್ದು ಮೇಲೆ ಹೇಳಿದ ದೃಶ್ಯವೇ. ಹೀಗೆ ಕರ್ಟನ್ನಿನ ಹಿಂದೆ ಕಣ್ಣು ನೆಡುತ್ತಿದ್ದಾಗ ಮನೆಯ ಕಿಟಕಿಯಾಚೆಗೆ ಗ್ಲಾಸ್ ಹಿಡಿದು ನಿಂತ ತಾತನೊಬ್ಬ ಪಟ್ಟನೆ ಕರ್ಟನ್ ಎಳೆದು ಕಣ್ಣಲ್ಲೇ ’ಅಧಿಕ ಪ್ರಸಂಗಿ’ ಅಂದಿದ್ದನ್ನೂ ಬರೆಯದಿದ್ದರೆ ತಪ್ಪಾದೀತು!

ಮನೆಮನೆಯ ಕ್ರಿಸ್‌ಮಸ್ ಸಡಗರವನ್ನೂ, ಟೇಬಲ್ ಸುತ್ತ ಕೂತು ಅಪರೂಪಕ್ಕೊಮ್ಮೆ ನಡೆಯುವ ‘ಫ್ಯಾಮಿಲಿ ಮೀಲ್’ಅನ್ನೂ ನೋಡಿ ಮನೆಯತ್ತ ಹೆಜ್ಜೆ ಹಾಕುವಾಗ ’ಜಿಂಗಲ್ ಬೆಲ್ಸ್ ಜಿಂಗಲ್ ಬೆಲ್ಸ್ ಜಿಂಗಲ್ ಆಲ್ ದ ವೇ..’ ಎಂದು ಗೊತ್ತಿಲ್ಲದೇ ಗುಣುಗತೊಡಗಿದ್ದೆ. ಈ ಸಂಭ್ರಮವನ್ನೆಲ್ಲ ನೋಡಿ ಮನೆಗೆ ಹಿಂದಿರುಗಿದಾಗ ದಿಲ್ ಖುಷ್!


( ಕ್ರಿಸ್‌ಮಸ್ ಟೈಮಿನಲ್ಲಿ ನಾವು ಇಂಗ್ಲೆಂಡಿನಲ್ಲಿ ಇದ್ದಿದ್ದು ಕಮ್ಮಿಯೇ. ನಾನಿಲ್ಲಿಗೆ ಬಂದಿದ್ದು ಡಿಸೆಂಬರಿನಲ್ಲಿಯೇ. ಆಗ ಇಲ್ಲಿನ ಚಳಿ, ಜಾಗ, ಜನರಿಗೆ ಹೊಂದಿಕೊಳ್ಳುವ ಸಡಗರದಲ್ಲಿ ಕ್ರಿಸ್‌ಮಸ್ ಕಳೆದದ್ದೇ ಗೊತ್ತಾಗಲಿಲ್ಲ. ಈ ಬಾರಿ ಇಲ್ಲೇ ಇದ್ದ ಕಾರಣ ಬ್ರಿಟನ್ನಿನ ಕ್ರಿಸ್‌ಮಸ್ ಸಂಭ್ರಮ ಡಿಸೆಂಬರ್ ಮೊದಲ ವಾರದಿಂದಲೇ ಕಾಣತೊಡಗಿತ್ತು. ಕಲೀಗ್ಸ್ ಬಾಯಲ್ಲಿ ಕೇಳಿದ ಪ್ರಕಾರ - ಕ್ರಿಸ್‌ಮಸ್ ದಿನ ಕುಟುಂಬದ ಸದಸ್ಯರೆಲ್ಲ ಒಂದೇ ಕಡೆ ಸೇರಿ ಮಾಡುವ ‘ಫ್ಯಾಮಿಲಿ ಮೀಲ್’, ರೋಸ್ಟ್ ಮಾಡಿದ ಟರ್ಕಿ (ಕೋಳಿ..?!), ಊಟದ ಮುಂಚಿನ ಕ್ರಿಸ್‌ಮಸ್ ಕ್ರ್ಯಾಕರ್ಸ್ (ಉದ್ದನೆಯ ಕೊಳವೆಯಂಥದ್ದು, ಮಧ್ಯೆ ಪುಟಾಣಿ ಕೇಕ್, ಮಫಿನ್ ಇತ್ಯಾದಿ ಇರುವಂಥದ್ದು), ಲಿವಿಂಗ್ ರೂಮಿನಲ್ಲಿ ಅಲಂಕರಿಸಿಟ್ಟ ಕ್ರಿಸ್‌ಮಸ್ ಟ್ರೀ ಹತ್ತಿರದಲ್ಲಿ ಎಲ್ಲ ಉಡುಗೊರೆಗಳನ್ನು ಗುಡ್ಡೆ ಹಾಕಿಡುವುದು, ಊಟದ ಮೊದಲು ಉಡುಗೊರೆ ಬದಲಾಯಿಸಿಕೊಳ್ಳುವುದು ಇವೆಲ್ಲ ಕ್ರಿಸ್‌ಮಸ್‌ನ ಹೈಲೈಟ್‌ಗಳು)