Monday 4 April 2011

ಹಬ್ಬವೆಂದರೆ...

ಯುಗಾದಿಯ ಮುಂಜಾವು
ಆಯಿ ಮಾಡಿದ ಅವಲಕ್ಕಿ ಒಗ್ಗರಣೆ
ಪರಿಮಳ ಅಡುಗೆ ಒಳ ದಾಟಿ
ತೋರಣ ಸಿಂಗರಿಸಿದ ಪ್ರಧಾನ ಬಾಗಿಲು ಮೀರಿ
ಆರು ಸಹಸ್ರ ಮೈಲು ಪಯಣಿಸಿ
ಸಪ್ತ ಸಾಗರದಲ್ಲಿ ಮುಳುಗೆದ್ದರೂ
ತನ್ನ ಘಮ ಉಳಿಸಿಕೊಂಡು ಬಂದಾಗ
ಇಲ್ಲಿ, ನನ್ನ ಕೈಲಿದ್ದ ಕಾರ್ನ್‌ಫ್ಲೇಕ್ಸ್ ಬೌಲು ಅರ್ಧ ಖಾಲಿ

ಹತ್ತೂಕಾಲು ಗಂಟೆಗೆ
ಒಂದು ಕಪ್ ಖಡಕ್ ಚಹಾದ ಜತೆಯಾದ
ಮಲ್ಟಿಗ್ರೇನ್ ರೈಸ್‌ಕೇಕ್
ಹೋಳಿಗೆ ಹೂರಣದ ಬಣ್ಣದಲ್ಲೇ ಕಂಡರೆ
ಅದು ನನ್ನ ತಪ್ಪಲ್ಲ - ಯುಗಾದಿಯದು.

ಹನ್ನೊಂದೂವರೆಗೆ ಟೇಬಲ್ ಪಕ್ಕದಲ್ಲಿ
ಪ್ರತ್ಯಕ್ಷನಾದ ಅರವತ್ತರ ಮ್ಯಾನೇಜರ್
ಕಳೆದ ವಾರವಷ್ಟೆ ಬಂದ ಆರ್ಡರ್ ನಾಪತ್ತೆ
ಎಂದು ಸಿಡಿಮಿಡಿಗುಟ್ಟಿದಾಗ,
ದೇವರಿಗೆ ಅಭಿಷೇಕ - ಆರತಿಯ ನಂತರ
’ಹೊಸ ಪಂಚಾಂಗ ತಂದಿಡ್ರೋ’ ಅಂತ
ಮಕ್ಕಳ ಮೇಲೆ ಆವಾಜ್ ಹಾಕುವ
ಅಜ್ಜನಂತೆ ಹೂಬೇ-ಹೂಬ್ ಕಂಡು
ಸಿಟ್ಟಿನ ಜಾಗದಲ್ಲಿ ಪ್ರೀತಿಯುಕ್ಕಿದ್ದೂ
ಯುಗಾದಿಯ ಮಧ್ಯಾನ್ನವೇ..

ಮಧ್ಯಾನ್ಹ ಡಬ್ಬಿಯಲ್ಲಿದ್ದ
ಸಪ್ಪೆ ಮೊಸರನ್ನದ ಪ್ರತಿ ತುತ್ತೂ
ಕೋಸಂಬ್ರಿ, ತುಪ್ಪದನ್ನ, ಅಂಬೊಡೆ
ಅಪ್ಪೆಹುಳಿಯನ್ನು ನೆನಪು ಮಾಡಿದಾಗ
ಹಬ್ಬದ ಸಂಜೆ
ಹೋಳಿಗೆಯಲ್ಲದಿದ್ದರೆ ಅದರ ತಮ್ಮ
ಹಯಗ್ರೀವವನ್ನಾದರೂ ಮಾಡಿಯೇ ಸಿದ್ಧ..
ನನ್ನಂಥ ’ಅಡುಗೆ ಕಳ್ಳಿ’ಯೂ
ಹಟ ಹೊರುವಂತೆ ಮಾಡಿದ ಯುಗಾದಿಯೇ
ನಿನಗೊಂದು ದೊಡ್ಡ ನಮಸ್ಕಾರ!