Friday 11 June 2010

ಕವಿತೆಯಾಗದ ಕೊಲಾಜ್

ಕಿವಿಯೆಲ್ಲ ಗುಂಯ್‌ಗುಟ್ಟಿ ಇನ್ನು ಮಲಗಲು ಸಾಧ್ಯವಿಲ್ಲ ಎಂದು ಕಣ್ಣು ಬಿಟ್ಟಾಗಲೇ ‘your attention please..' ಎಂದ ಪೈಲಟ್ ಬೆಂಗಳೂರಿನಲ್ಲಿ ಇಳಿಯಲು ಇನ್ನು ಹದಿನೈದು ನಿಮಿಷ ಮಾತ್ರ ಇದೆ ಅಂತ ಹೇಳಿದ್ದು ಕಾಕತಾಳೀಯ. ಗೌಜು, ಮಾತು, ಕೇಕೆ, ಕುಶಲೋಪರಿಯ ನಡುವೆ ಅತ್ತೆ ಮಾಡಿದ ಸಾರಿನ ರುಚಿ ನೋಡಿ ಯಾವ ಕಾಲವಾಯ್ತೋ ಅನ್ನಿಸಿದಾಗ ನಿಜವಾಗಲೂ ಹಸಿವಿತ್ತಾ? ರೂಮನ್ನು ನೀಟಾಗಿ ಜೋಡಿಸಿಟ್ಟು ಅಂದೆಂದೋ ಮುರಿದಿದ್ದ ಚಿಲುಕವನ್ನು ಸರಿಮಾಡಿ, ನನ್ನ ಡ್ರೆಸ್ ಹಾಕ್ಕೋ ಎಂದ ಅಕ್ಕ. ಚಿಕ್ಕಿಗೆ ಬರದ ತುಳುವಿನಲ್ಲಿ ಹತ್ತಾರು ಪ್ರಶ್ನೆ ಕೇಳಿ ತಬ್ಬಿಬ್ಬು ಮಾಡಿ - ತಂದ ಉಡುಗೊರೆಯನ್ನು ಜೋಪಾನವಾಗಿ ಎತ್ತಿಟ್ಟುಕೊಂಡ ಮಗಳು. ಕೆನ್ನೆಯ ಮೇಲೆ ಹೂ ಮುತ್ತ ಒತ್ತಿ ಹೆಂಗಿದ್ಯೇ ಕೂಸೆ ಎಂದು ಮುಗಿಬಿದ್ದ ಜೀವದ ಗೆಳತಿ. ಬಸ್ ಟಿಕೆಟ್ ತಂದುಕೊಟ್ಟು, ಊರಿಂದ ಬೇಗ ಬಾ - ನಮ್ಮೊಂದಿಗೂ ಎಂಟು ದಿನ ಇರು ಎಂದ ಮಾವ.

ಎಂಟು ತಾಸು ಬಸ್ಸಿನ ಹಾದಿಯಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಸೆಲ್‌ಫೋನ್‌ನ ಗಡಿಯಾರದತ್ತ ಹಾಯುವ ಕಣ್ಣು. ಪಕ್ಕದಲ್ಲಿ ಕೂತ ಹುಡುಗ ಏರು ದನಿಯಲ್ಲಿ ಗೆಳೆಯನೊಡನೆ ಮಾತನಾಡಿದರೂ ಸಿಡಿಮಿಡಿಗುಟ್ಟದ ಮನಸ್ಸು. ಗೊಬ್ಬರ ಗುಂಡಿ ಅಂಚಿಗೆ ಸಾಲಾಗಿ ಬಂದು ನಿಂತ ಆಯಿ, ಚಿಕ್ಕಮ್ಮ, ಅತ್ತಿಗೆ - ಯಾರನ್ನ ಕಣ್ತುಂಬಿಕೊಳ್ಳಲಿ? ಚೌಕಡಿ ಕಲ್ಲು ಕೂಡ್ರಿಸಿದ ಜಗುಲಿಗೆ ಬಂದ ಕೂಡಲೇ ಉದ್ದ ಕಣ್ರೆಪ್ಪೆಯ ಕುತೂಹಲ ತುಂಬಿದ ಕಣ್ಣನ್ನು ನನ್ನೆಡೆಗೆ ತಿರುಗಿಸಿ ‘ಅತ್ತೇಏಏಏ’ ಎಂದು ಮುಖ ಅರಳಿಸಿದ ಅಳಿಯ. ‘ರಾಶೀ ಸೆಖೆಯಾದ್ರೆ ಹೇಳು - ಮೆತ್ತಿಂದಾ ಫ್ಯಾನ್ ತಗ ಬರ್ತಿ’ ಎಂದ ಅಣ್ಣಯ್ಯನಿಗೆ ವರ್ಷದಂದ ಕೂಡಿಟ್ಟ ಕಾಳಜಿಯನ್ನು ಈ ಒಂದು ತಿಂಗಳಿನಲ್ಲಿ ತಂಗಿಯೆಡೆಗೆ ಹರಿಸಿಬಿಡುವ ತವಕ. ‘ಕಬ್ಬಿನ್‌ಹಾಲು ಕುಡೀದೆ ವರ್ಷದ ಮೇಲಾತು ಅಲ್ದ? ಹೊಟ್ಟೆ ತೊಳದು ಹೋಪಷ್ಟು ಕುಡಿ’ ಎಂದ ಅಪ್ಪಯ್ಯ. ಮೊದಲು ಫೋನಿನಲ್ಲಿ ಕೇಳಿದ್ದೇ ಸುಳ್ಳು ಎಂಬಂತೆ ಊರಿನಲ್ಲಿ ಇಡೀ ವರ್ಷ ನಡೆದ ಘಟನೆಗಳನ್ನು ಸವಿಸ್ತಾರವಾಗಿ ಹೇಳಿದ ಕಾಕ. ಒಲೆ-ಕಟ್ಟೆಯ ಮೇಲೆ ಕೂತು ಆಯಿ, ಅತ್ತಿಗೆಯರ ಕಷ್ಟ ಸುಖ ಕೇಳುವಾಗ ಯೂರೋಪ್ ಸುತ್ತಿ ಬಂದ ಸುದ್ದಿಯನ್ನು ಮತ್ತೆ ಎತ್ತುವುದು ಬೇಡ ಎನ್ನಿಸಿದ್ದು ಯಾಕೆ? ‘ನೀನು ಸಮಾಧಾನಿ ಆಗೋಜೆ ಈಗಿತ್ಲಾಗಿ, ಕೂಗದು - ಕಬ್ಬರಿಯದು ಎಲ್ಲಾ ಮರ್ತೋಜ?’ ಎಂದ ಚಿಕ್ಕಮ್ಮನಿಗೆ ದನಿಗೂಡಿಸಿದ ಅತ್ತಿಗೆ ನನ್ನ ವಯಸ್ಸು ಮರೆತಿರಬೇಕು. ‘ತಂಗೀ ಹೋದ್ಸಲ ಬಂದಾಗ ಬಲಾ ಆಗಿದ್ದೆ ಚೊಲೊವಾ, ಈ ಸಲ ಸಣ್ಣ ಆಗೋಗಿದಿಯೆ. ಸರೀ ತಿನ್ನುದಿಲ್ವೇನ ಅಲಾ?’ ಎಂದ ಲಲಿತಾಗೆ ಸೈಕ್ಲಿಂಗ್, ಸ್ವಿಮ್ಮಿಂಗ್, ಸಾಲಡ್ ಸ್ಯಾಂಡ್‌ವಿಚ್, ಹೆಲ್ದೀ ಡಯಟ್ ಬಗ್ಗೆ ಯಾವ ಉದಾಹರಣೆ ಕೊಟ್ಟು ತಿಳಿ ಹೇಳಲಿ?

ಗೆಳತಿ ಒತ್ತಾಯಿಸಿ ಮೂರು ಬಾರಿ ಬಡಿಸಿದ ರಸಾಯನ, ಮಲಗಿದಾಗ ಮಾತ್ರ ನೋಡಿದ ಇನ್ನೊಬ್ಬ ಗೆಳತಿಯ ಮಗು, ಫೋನ್ ಮಾಡ್ತಾ ಇರೇ - ಎಂಬ ಕಾಳಜಿಯ ಮಾತು.. ಅಲ್ಲೆಲ್ಲೋ ಮದುವೆ ಮನೆಯಲ್ಲಿ ಖಾರದ ಮಾವಿನಕಾಯ್ ಗೊಜ್ಜು, ಬಿಸಿ ಬಿಸಿ ಸಂಡಿಗೆ ತಿನ್ನುವಾಗ ಇವ ಇವತ್ತು ಬೆಳಿಗ್ಗೆಯೂ ಕಾರ್ನ್ ಫ್ಲೇಕ್ಸ್ ತಿಂದಿರಬಹುದು ಎನ್ನಿಸಿ ನಿಟ್ಟುಸಿರು, ನಾಳೆ ಬಂದಿಳೀತಾನಲ್ಲ ಎಂಬ ಸಮಾಧಾನ. ತೆಂಗಿನ ಕಾಯ್ ಎಷ್ಟು ರೂಪಾಯಿ?, ಕರೆಂಟ್ ಒಲೆ ಮೇಲೆ ದ್ವಾಸೆ ಮಾಡದು ತ್ರಾಸೆನ ಅಲ್ದ? ಅಲ್ಲೆಲ್ಲ ಮುದ್ಕೀರೂ ಪ್ಯಾಂಟ್ ಹಾಕ್ಯತ್ವ? ಅಲ್ಲಿಯವ್ವು ಮಾತಾಡಿದ್ದು ಅರ್ಥ ಆಗ್ದೇ ಇದ್ದಾಗ ಮಳ್ ಮಕಾ ಮಾಡಕಾಗ್ತ? ಊರಿಗೆ ದಿನಾ ಫೋನ್ ಮಾಡಿದ್ರೆ ಖರ್ಚು ಜಾಸ್ತಿ ಬರ್ತಿಲ್ಯ? ಇನ್ನೆಲ್ಲಾ ಸಾಕು ಪ್ಲಾನಿಂಗು - ಮುಂದಿಂದೆಂತು ಯೋಚ್ನೆ ಮಾಡಿದ್ರ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟೂ ಕೊಟ್ಟು ಮಾರನೇ ದಿನ ಬೆಳಿಗ್ಗೆ ಧ್ವನಿ ಗೊಗ್ಗರಾಯ್ತಲ್ಲ! ‘ತಂಗೀ ಆನು ನೋಡದೆಲ್ಲ ನೋಡಾತು, ಮಾಡದೆಲ್ಲ ಮಾಡಾತು. ಇನ್ನು ದೇವ್ರು ಕರ್ಕಂಡು ಹೋಗ್ಲಾಗಿತ್ತು’ ಎನ್ನುವ ಅಜ್ಜಿ. ‘ರಾತ್ರೆ ನಾಟ್ಕ ನೋಡಲೆ ಹೋಗ್ತ್ರ? ಹಂಗಾದ್ರೆ ಆನೂ ಬರ್ತಿ’ ಎಂದ ಜೀವನಪ್ರೀತಿಯ ಅಜ್ಜ. ಇವೆರಡರಲ್ಲಿ ಯಾವ ಮಾತನ್ನು ಮರೆಯುವುದುಂಟು?

ಒಂದು ಅಚ್ಚರಿಯ ನೋಟ, ಒಂದು ಅಪ್ಪುಗೆಯ ನಂತರ ನಾ ಹೇಳಿದ್ದು ಗುಡ್ ಟು ಸೀ ಯೂ - ಅಂವ ಹೇಳಿದ್ದೂ ಗುಡ್ ಟು ಸೀ ಯೂ.. ಎರಡೂವರೆ ವರ್ಷದಿಂದ ಮುಖಾಮುಖಿಯಾಗದೇ ಇದ್ದುದ್ದಕ್ಕಿರಬೇಕು, ಮಾತೇ ಹೊರಡುತ್ತಿಲ್ಲ ಇಲ್ಲಿ. ಹುಟ್ಟಿದಾಗಿನಿಂದ ಅವಳಿಯಂತಿದ್ದ ಈ ಅಣ್ಣನನ್ನು ಇಷ್ಟೆಲ್ಲ ದಿನ ನೋಡದೆ ಇದ್ದುದೇ ಇಲ್ಲ! ‘ಇದು ನಾನೇ ಆರ್ಸಿದ್ದು ನಿಂಗೆ ಹೇಳಿ’ ಎನ್ನುತ್ತ ಚೆಂದದ ಟಾಪ್ ತೋರಿಸಿದ ಪುಟಾಣಿ ಗೆಳತಿ ‘ಇಷ್ಟ ಆತ?’ ಎಂದು ಕೇಳಿದಾಗ ಉತ್ತರ ಏನು ಕೊಟ್ಟೆನೋ ನೆನಪಿಲ್ಲ. ಮತ್ತೊಂದು ಬೆಳಗ್ಗೆ ಇನ್ನೂ ನಿದ್ದೆ ಕಳೆಯದ ಕಣ್ಣ ತಿಕ್ಕುತ್ತಿರುವಾಗ ‘ಚಾ ಮಾಡಿ ಕೊಡ್ಲ?’ ಎಂದು ಮಮತೆಯಿಂದ ಕೇಳಿದ ಇದೇ ಪುಟಾಣಿ ಗೆಳತಿಗೆ ನೀ ತುಂಬ ಬೆಳೆದಿದ್ದೀ ಎಂದು ಹೇಳುವುದನ್ನೂ ಮರೆತೆ ಎಂದು ಈಗ ಅನ್ನಿಸುತ್ತಿದೆ.

ನನ್ನ ಪ್ರೀತಿಸುವ ಜನರೇ.., ಬ್ಯಾಗು ಹಿಡಿದು ಹೊರಟ ಆ ಹೊತ್ತಲ್ಲಿ ಶಬ್ದಗಳೆಲ್ಲ ಗಂಟಲಲ್ಲಿ ಅಡ್ಡಡ್ಡ ಸಿಕ್ಕಿದ ಅನುಭವ. ನಿಮ್ಮನ್ನೆಲ್ಲ ವರ್ಷ ಪೂರ್ತಿ ಮಿಸ್ ಮಾಡಿಕೊಳ್ತೇನೆ ಎಂಬ ಮಾತೊಂದು ಬಾಯಿಂದ ಹೊರಬಿದ್ದು ಬಿಟ್ಟಿದ್ದರೆ ಅಲ್ಲೇ ಅರ್ಧ ತಾಸು ಅಳುತ್ತ ಕೂತಿರಬೇಕಿತ್ತು. ಅಂತಲೇ ನಗು ಮುಖದೊಂದಿಗೆ ಇವನ ತೋಳಲ್ಲಿ ತೋಳು ಹಾಕಿ ಹೊರಟು ಬಿಟ್ಟೆ. ಪೂರ್ತಿ ಮೂವತ್ತೊಂದೂವರೆ ದಿನ ನಿಮ್ಮೆಲ್ಲರೊಡನೆ ಖುಷಿಯಿಂದ ಕಳೆದ ನೆನಪು ನನ್ನ ಜೊತೆಗಿತ್ತು. ತುಂಬ ಎಮೋಷನಲ್ ಆದಾಗ ಒರಗಲು ಒಂದು ಹೆಗಲೂ ತ್ತು. ಹಾಗಾಗಿ ನಗು ಮುಖದ ಸೋಗು ಹಾಕುವುದು ಕಷ್ಟವಾಗಲಿಲ್ಲ.

ಇಷ್ಟೆಲ್ಲ ಬರೆಸಿದ್ದು ನೀವೆಲ್ಲ ನನ್ನವರೆಂಬ ಖುಷಿಯೇ ಹೊರತು ಮತ್ತಿನ್ನೇನಲ್ಲ :-)