Sunday 22 March 2009

ಹದಿನೆಂಟರ ಹೆಜ್ಜೆಗುರುತು

ಛೆ..ಛೇ... ದಿನಗಳು ಬಿಡುವಿಲ್ಲದಂತೆ ಓಡುತ್ತಿವೆಯೋ, ಓಡುವ ದಿನಗಳಿಗೆ ತಡೆ ಹಾಕುವವರಿಲ್ಲವೋ ತಿಳಿಯುತ್ತಿಲ್ಲ - ಅಂತೂ ವರ್ಷಗಳು ದಿನಗಳಂತೇ, ದಿನಗಳು ಕ್ಷಣಗಳಂತೆ ಕಣ್ಣೆದುರಿನಲ್ಲೇ ಕೈತಪ್ಪಿ ಹೋಗುತ್ತಿರುವುದಂತೂ ನಿಜ. ಓಡುತ್ತಿರುವ ಈ ದಿನಗಳು ತಮ್ಮೊಟ್ಟಿಗೆ ನಮ್ಮ ವಯಸ್ಸನ್ನೂ - ಆಯಸ್ಸನ್ನೂ ಕೊಂಡೊಯ್ಯುತ್ತಿರುವುದೂ ಅಷ್ಟೇ ನಿಜ.

ಅಣಕಿಸುವ ಹುಡುಗರನ್ನು ಬೆದರುಗಣ್ಣುಗಳಿಂದ ನೋಡಿದ್ದು, ಇತರರ ಹಂಗೇ ಇಲ್ಲದಂತೆ - ಯಾರಿಗೂ ಕೇರ್ ಮಾಡದಂತೆ ಓಡಾಡುವ, ಓಲಾಡುವ ಹಿರಿಯ ಹುಡುಗಿಯರನ್ನು ಕಂಡು ಆಶ್ಚರ್ಯಪಟ್ಟಿದ್ದು, ದೊಡ್ಡ ಕಾಲೇಜಿನಲ್ಲಿ ದಿಕ್ಕು ತಪ್ಪಿದ ಕರುವಿನಂತೆ ಓಡಾಡಿದ್ದು, ದೈತ್ಯಾಕಾರದ ಕ್ಲಾಸಿನಲ್ಲಿ ಒಂಟಿತನ ಅನುಭವಿಸಿದ್ದು- ಹೀಗೆ... ಇವೆಲ್ಲವೂ ನಿನ್ನೆ-ಮೊನ್ನೆಗಳ ಹಸಿಹಸಿ ನೆನಪಿನಂತಿವೆ. ಒಮ್ಮೆಲೇ ಕಾಲೇಜಿನ ಇಂಗ್ಲೀಷಿಗೆ ಹೊಂದಿಕೊಳ್ಳಲಾಗದೇ ಮೊದಲ ‘ಟೆಸ್ಟ್’ನಲ್ಲಿ ಲಾಗ ಹಾಕಿ ಕಣ್ಣಲ್ಲೆಲ್ಲ ನೀರು ತುಂಬಿಕೊಂಡಿದ್ದು, ‘ಕಾಲೇಜಿನ ಉಸಾಬರಿಯೇ ಬೇಡ’ ಎಂದು ಮುನಿಸಿಕೊಂಡದ್ದು - ಆಗ ಮಂಗಲಾ, ರಶ್ಮಿಯರು ಬಂದು ತಮ್ಮದೂ ಅದೇ ಕಥೆಯೆಂದು ಹೇಳಿದಾಗ ತುಸು ಸಮಾಧಾನಗೊಂಡದ್ದು... ಎಲ್ಲ ಇನ್ನೂ ಹಸಿರು.

ದಿನ ಕಳೆದಂತೆ ಈ ಕಾಲೇಜು ಹಳತಾಯ್ತು. ನಮ್ಮಲ್ಲಿ ಹೊಸತನ- ಹುಡುಗಾಟಿಕೆಯೂ ಮೊಳೆಯಿತು. ಛೇಡಿಸುವ ಹುಡುಗರಿಗಾಗಿ ಮಾರುತ್ತರವಲ್ಲದಿದ್ದರೂ ಮರು ಉತ್ತರವಂತೂ ಸಿದ್ಧವಾಯ್ತು. ಮನಸಿನಲ್ಲಿದ್ದ ಹಲವು ಅಳಕುಗಳು ಬಗೆಹರಿದು ದಿಟ್ಟತನ ಮೈಗೂಡಿತು. ‘ಎಲ್ಲರೂ ನಮ್ಮಂತೆಯೇ’ ಎಂಬ ಭರವಸೆ ಹೊಸ ಹುರುಪು ತಂದುಕೊಟ್ಟಿತು.
ಆದರೆ, ಈ ಬೆಳವಣಿಗೆಯ ಹಂತದಲ್ಲಿ ಎರಡ್ಮೂರು ವರ್ಷಗಳು ಸದ್ದಿಲ್ಲದೇ ಉರುಳಿ ಹೋದದ್ದು ಮಾತ್ರ ನಮ್ಮ ಗಮನಕ್ಕೆ ಬರಲೇ ಇಲ್ಲ. ಈಗ ನೋಡಿದರೆ, ಈ ಘಟನೆಗಳೆಲ್ಲಾ ಎರಡ್ಮೂರು ವರ್ಷ ಹಿಂದಿನವು ಎಂದು ಪರಿಗಣಿಸಲು ಮನಸ್ಸು ಸಹಕರಿಸುತ್ತಿಲ್ಲ. ಇದಕ್ಕೇನು ಕಾರಣ? ಅಂಥ ಹುಡುಗಾಟಿಕೆ- ತುಂಟತನಗಳೆಲ್ಲವೂ ಇನ್ನು ನೆನಪು ಮಾತ್ರ!

ಈಗ ನಾವು ‘ಪದವಿ ವಿದ್ಯಾರ್ಥಿಗಳು’. ಈ ಪುಟ್ಟ ಪದಕ್ಕೆ ಎಷ್ಟೊಂದು ವಜ್ಜೆ ಇದೆ ಎನ್ನುವುದನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟವೇ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳೆಂಬ ಬಿರುದು, ಜೊತೆಗೇ ಕಿರಿಯರಿಗೆ ಮಾದರಿ ಎಂಬ ಪಟ್ಟ- ಬಿರುದಾವಳಿಗಳ ಮಧ್ಯೆ ಬೇಡವೆಂದರೂ ‘ಗಂಭೀರತೆ’ ನಮ್ಮನ್ನು ಸುತ್ತಿ ಬಿಡುವುದು ಸಹಜ. ಎಲ್ಲ ಪರಿಚಿತ ಚಹರೆಗಳ ಮಧ್ಯೆ, ನಮ್ಮ ಯಶಸ್ಸಿಗಾಗಿ ಹಾರೈಸುವ ಆತ್ಮೀಯ ಅಧ್ಯಾಪಕರ ಮಧ್ಯೆ ನಾವು ಹಳೆಯ ಹುಡುಗಾಟಿಕೆಯನ್ನು ಪ್ರದರ್ಶಿಸಲಾದೀತೆ? ಖಂಡಿತವಾಗಿಯೂ ಸಾಧ್ಯವಿಲ್ಲ. ಇಲ್ಲಿ ನಾವು ಗಂಭೀರರಾಗಿ ಬಿಡುವುದು ಅನಿವಾರ್ಯವಾಗುತ್ತದೆ. ನಮ್ಮ ಪುಟ್ಟ ತಮ್ಮ- ತಂಗಿಯರಿಗೆ ಮಾರ್ಗದರ್ಶಿಗಳಾಗಿ ನಿಲ್ಲುವುದು ಅವಶ್ಯವಾಗಿ ಬಿಡುತ್ತದೆ. ತಾಯ್ತಂದೆಯರು ತಮ್ಮ ಕನಸುಗಳನ್ನು ನಮ್ಮ ಕಣ್ಣಲ್ಲಿ ಕಾಣತೊಡಗಿದಾಗ ಜವಾಬ್ದಾರಿಯ ತೆಳು ಪರದೆ ನಮ್ಮನ್ನು ಆವರಿಸಿ ಹುಡುಗುತನವನ್ನು ಮಾಯವಾಗಿಸುತ್ತದೆ. ಎಂಥ ವಿಪರ್ಯಾಸವಲ್ಲವೇ?

ಹೀಗೆ ವರ್ಷಗಳು ಸರಿದಂತೆ ನಮ್ಮ ಮೇಲಿನ ‘ವಜ್ಜೆ’ ಹೆಚ್ಚುವುದು ಪ್ರಕೃತಿ ನಿಯಮ ಅಂತಾದರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ನಿಜ. ಆದರೆ ಈ ನಿಯಮದ ತೆಕ್ಕೆಗೆ ಸಿಕ್ಕ ನಮ್ಮ ಪಾಲಿಗೆ ಉಳಿದದ್ದು ಹಳೆಯ ನೆನಪು ಮತ್ತು ವಿಷಾದ ಮಾತ್ರ!

*******************************

ಪತ್ರಿಕೆಯಲ್ಲಿ ಪ್ರಕಟವಾದ ಮೊದಲ ಲೇಖನ ಇದು. ಸುಮಾರು ೧೧-೧೨ ವರ್ಷಗಳ ಹಿಂದೆ ‘ಕನ್ನಡ ಜನಾಂತರಂಗ’ದಲ್ಲಿ ಪ್ರಕಟವಾಗಿತ್ತು. ಲೇಖನವನ್ನು ಕತ್ತರಿಸಿಟ್ಟುಕೊಂಡು (ಪುಣ್ಯ.. ಗ್ಲಾಸು -ಚೌಕಟ್ಟು ಹಾಕಿಸಿರಲಿಲ್ಲ!) , ಮನೆಯವರಿಗೆಲ್ಲ ತೋರಿಸಿ, ಅಣ್ಣನಿಂದ ‘ಶಭಾಸ್’ ಅನ್ನಿಸಿಕೊಂಡು, ಕನ್ನಡವನ್ನು ಅಷ್ಟು ಸರಿಯಾಗಿ ಓದಲು ಬರದ ಇನ್ನೊಬ್ಬ ಅಣ್ಣನಿಗೆ Body Language ಸಹಿತ ಓದಿ ತೋರಿಸಿ... ಆಹ್, ಎಷ್ಟೆಲ್ಲ ಸಂಭ್ರಮಪಟ್ಟಿದ್ದೆ. ಇವತ್ತು ನನ್ನ ವಿದ್ಯಾರ್ಥಿನಿಯೊಬ್ಬಳು ಅವಳ ಮೊದಲ ಲೇಖನದ ಬಗ್ಗೆ ಪ್ರಸ್ತಾಪಿಸಿದ್ದರಿಂದ, ನನ್ನದೂ ಒಂದು ಇದೆ ಅಂತ ನೆನಪಾಯ್ತು ನೋಡಿ. ಕೊನೆಗೂ ಹುಡುಕಿ ತೆಗೆದೆ, ನಿಮಗೆಲ್ಲ ಸ್ವಲ್ಪ ಕಾಟ ಕೊಡೋಣ ಅಂತ. ಬೋರಾದರೆ ಬೈದು ಬಿಡಿ ಪ್ಲೀಸ್!