Showing posts with label ಮುಗುಳು. Show all posts
Showing posts with label ಮುಗುಳು. Show all posts

Monday, 4 April 2011

ಹಬ್ಬವೆಂದರೆ...

ಯುಗಾದಿಯ ಮುಂಜಾವು
ಆಯಿ ಮಾಡಿದ ಅವಲಕ್ಕಿ ಒಗ್ಗರಣೆ
ಪರಿಮಳ ಅಡುಗೆ ಒಳ ದಾಟಿ
ತೋರಣ ಸಿಂಗರಿಸಿದ ಪ್ರಧಾನ ಬಾಗಿಲು ಮೀರಿ
ಆರು ಸಹಸ್ರ ಮೈಲು ಪಯಣಿಸಿ
ಸಪ್ತ ಸಾಗರದಲ್ಲಿ ಮುಳುಗೆದ್ದರೂ
ತನ್ನ ಘಮ ಉಳಿಸಿಕೊಂಡು ಬಂದಾಗ
ಇಲ್ಲಿ, ನನ್ನ ಕೈಲಿದ್ದ ಕಾರ್ನ್‌ಫ್ಲೇಕ್ಸ್ ಬೌಲು ಅರ್ಧ ಖಾಲಿ

ಹತ್ತೂಕಾಲು ಗಂಟೆಗೆ
ಒಂದು ಕಪ್ ಖಡಕ್ ಚಹಾದ ಜತೆಯಾದ
ಮಲ್ಟಿಗ್ರೇನ್ ರೈಸ್‌ಕೇಕ್
ಹೋಳಿಗೆ ಹೂರಣದ ಬಣ್ಣದಲ್ಲೇ ಕಂಡರೆ
ಅದು ನನ್ನ ತಪ್ಪಲ್ಲ - ಯುಗಾದಿಯದು.

ಹನ್ನೊಂದೂವರೆಗೆ ಟೇಬಲ್ ಪಕ್ಕದಲ್ಲಿ
ಪ್ರತ್ಯಕ್ಷನಾದ ಅರವತ್ತರ ಮ್ಯಾನೇಜರ್
ಕಳೆದ ವಾರವಷ್ಟೆ ಬಂದ ಆರ್ಡರ್ ನಾಪತ್ತೆ
ಎಂದು ಸಿಡಿಮಿಡಿಗುಟ್ಟಿದಾಗ,
ದೇವರಿಗೆ ಅಭಿಷೇಕ - ಆರತಿಯ ನಂತರ
’ಹೊಸ ಪಂಚಾಂಗ ತಂದಿಡ್ರೋ’ ಅಂತ
ಮಕ್ಕಳ ಮೇಲೆ ಆವಾಜ್ ಹಾಕುವ
ಅಜ್ಜನಂತೆ ಹೂಬೇ-ಹೂಬ್ ಕಂಡು
ಸಿಟ್ಟಿನ ಜಾಗದಲ್ಲಿ ಪ್ರೀತಿಯುಕ್ಕಿದ್ದೂ
ಯುಗಾದಿಯ ಮಧ್ಯಾನ್ನವೇ..

ಮಧ್ಯಾನ್ಹ ಡಬ್ಬಿಯಲ್ಲಿದ್ದ
ಸಪ್ಪೆ ಮೊಸರನ್ನದ ಪ್ರತಿ ತುತ್ತೂ
ಕೋಸಂಬ್ರಿ, ತುಪ್ಪದನ್ನ, ಅಂಬೊಡೆ
ಅಪ್ಪೆಹುಳಿಯನ್ನು ನೆನಪು ಮಾಡಿದಾಗ
ಹಬ್ಬದ ಸಂಜೆ
ಹೋಳಿಗೆಯಲ್ಲದಿದ್ದರೆ ಅದರ ತಮ್ಮ
ಹಯಗ್ರೀವವನ್ನಾದರೂ ಮಾಡಿಯೇ ಸಿದ್ಧ..
ನನ್ನಂಥ ’ಅಡುಗೆ ಕಳ್ಳಿ’ಯೂ
ಹಟ ಹೊರುವಂತೆ ಮಾಡಿದ ಯುಗಾದಿಯೇ
ನಿನಗೊಂದು ದೊಡ್ಡ ನಮಸ್ಕಾರ!

Tuesday, 31 August 2010

ಸಂಧಾನ ಪರ್ವ

ಬೆಳಗ್ಗೆ ಕೇಳಿದ ನನ್ನದಲ್ಲದ ಪ್ರಶ್ನೆ
ಪ್ರಶ್ನೆಯಾಗಷ್ಟೇ ಉಳಿದಿದ್ದರೆ
ಮೂರ್ತಾಸಿನ ಮೌನ ಮಾತಾಗುತ್ತಿತ್ತೇನೋ!
ಉಬ್ಬಿದ ಗಲ್ಲ, ಗಂಟಿಕ್ಕಿದ ಹುಬ್ಬು
ಅರೆಬರೆ ಕವಿತೆಯಾಗುವುದು ತಪ್ಪುತ್ತಿತ್ತೇನೋ!
ದಿಂಬಿನ ಮೇಲೆ ಮುಖ ಒತ್ತಿ
ಬಾರದ ಕಣ್ಣೀರನ್ನು ಕರೆದೂ ಕರೆದು
ನಿತ್ರಾಣವಾದಾಗಲೇ ಆಚೆಮೊನ್ನೆ ಕಳುಹಿಸಿದ ಮೆಸೇಜ್
ಕಣ್ಣಿಗೆ ಬೀಳುವುದೆಂದರೆ ತಮಾಷೆಯ?

ನೀ ಸಮಾಧಾನಿಸಲೆಂದು ನಾನು,
ನಾನೇ ಬಗ್ಗಿ ಬರಲೆಂದು ನೀನು-
ಕಾದು ಕಾದು ಮಧ್ಯಾನ್ಹವಾದಾಗಲೇ
ಸ್ವಪ್ನಸ್ಖಲನ ಬರೀ ಹುಡುಗರಿಗೆ ಮಾತ್ರವೆಂದು
ಅವನೆಂದುಕೊಂಡರೆ ಅದೇ ನಿಜವಲ್ಲ
ಎಂಬ ಹಳೇ ಜೋಕೊಂದು ನೆನಪಾಗಿ,
ಪಕ್ಕದ ಫ್ಲ್ಯಾಟಿನಿಂದ ಹೊಮ್ಮಿದ
ಬಾಸ್ಮತಿ ಪರಿಮಳ
ನಮ್ಮಿಬ್ಬರ ಸಂಧಾನಕ್ಕೆ ಕಾರಣವಾಗಿ
ಸಿಟ್ಟೆಲ್ಲ ಹಾರಿ ಹೋಗಿ
ಒಂದೇ ಉಸಿರಲ್ಲಿ ಮೂರು ಮೆಟ್ಟಿಲು ಜಿಗಿದು
ಬಂದಾಗ ಕಾಲೂ ಉಳುಕಿತು,
ನಗಲು ನೆಪವೂ ಸಿಕ್ಕಿತು
ಎಂದರೆ ನಿನಗೆ ಅಚ್ಚರಿಯ?

Sunday, 6 September 2009

ನೀ..


ನೀನೆಂದರೆ-
ಹತ್ತರ ಹೊತ್ತಿನ ಖಡಕ್ ಚಾಯ್
ಇಲ್ಲದಿದ್ದರೆ ಕಿರಿಕಿರಿ
ಇದ್ದರೆ ತಣ್ಣಗಾಗುವ ಮುನ್ನ
ಎಲ್ಲ ಹೀರುವ ಬಯಕೆ


ನೀನೆಂದರೆ-
ಮಧ್ಯಾನ್ಹದ ಸುಖ ನಿದ್ದೆ
ಕಮ್ಮಿಯಾದರೆ ಕಾಡುವ ಕೊರತೆ
ಹೆಚ್ಚಾದರೆ ಮೀಟುವ ತಲೆನೋವು


ನೀನೆಂದರೆ-
ಮುಸ್ಸಂಜೆಯ ಸಿಡುಕು, ಮೌನ
ಮಾತಾದರೆ ಮುದ್ದು - ಇಲ್ಲದಿರೆ ಕಾವ್ಯ.


ಸೂಚನೆ: ಚಿತ್ರಗಳಲ್ಲಿ ಇದ್ದಿದ್ದು ನಮ್ಮನೆ ಟೇಬಲ್ಲನ್ನು ಹೊಸತಾಗಿ ಅಲಂಕರಿಸಿದ `Salt & Pepper Container'ಗಳು. ಬರೀ ಚಿತ್ರಗಳನ್ನು ಹಾಕುವುದೆಂತು? ಹಾಗಾಗಿ ಕೆಲ ಸಾಲುಗಳನ್ನೂ ಗೀಚಿದೆ :-)