Monday, 26 October 2009

ಬ್ರಿಟ್ ಬಿಟ್ಸ್ - ೨

ಪ್ಯಾಟ್ ಬೆಳಿಗ್ಗೆಯೆಲ್ಲ ಮೂಡ್ ಆಫ್ ಆಗಿದ್ದ. ಇಂಗ್ಲಿಷ್ ಹ್ಯೂಮರ್ ಕೆಲವೊಮ್ಮೆ ನನಗೆ ಅರ್ಥವಾಗದಿದ್ದಾಗ ಬಿಡಿ-ಬಿಡಿಸಿ ಹೇಳುವ ಪ್ಯಾಟ್, ತನ್ನ ‘ಕ್ವಿಕ್ ವಿಟ್’ಗಳಿಂದ, ಪಂಚ್‌ಲೈನ್‌ಗಳಿಂದ ಸದಾ ನಮ್ಮ ನಗಿಸುತ್ತಿದ್ದ ಪ್ಯಾಟ್ ಹೀಗೆ ಮೂಡ್ ಆಫ್ ಮಾಡಿಕೊಂಡು ಕುಳಿತಿದ್ದನ್ನು ನೋಡಲಾಗಲಿಲ್ಲ. ‘ವಾಟ್ ಹ್ಯಾಪನ್ಡ್ ಪ್ಯಾಟ್’ ಎಂದೆ.. ಊಹುಂ - ಮಾತಾಡುತ್ತಿಲ್ಲ. ಒಂದರ್ಧ ಗಂಟೆ ಬಿಟ್ಟು ಹೇಳತೊಡಗಿದ...
ಅಂದು ಬೆಳಿಗ್ಗೆ ಕಿಚನ್ ಕಟ್ಟೆಯ (ವರ್ಕ್ ಟಾಪ್) ಮೇಲೆ ಒಂದು ಲೆಟರ್ ಇತ್ತಂತೆ. ಅದು ಅವನ ಮನೆಯ ಹತ್ತಿರದ ಆಸ್ಪತ್ರೆಯಿಂದ ಅವನ ಮಗಳಿಗೆ ಬಂದ ಪತ್ರ. ನಿನ್ನೆ ರಾತ್ರಿ ಆ ಪತ್ರ ಓದಿದ ಮಗಳು ಅಲ್ಲೇ ಮರೆತಿದ್ದಾಳೆ. ‘ಅದನ್ನು ನಾನು ಓದಿದೆ’ ಎಂದ ಪ್ಯಾಟ್ ಸುಮ್ಮನಾದ. ನಾನು ‘ವೆಲ್- ಅಂಥದ್ದೇನಿತ್ತು ಆ ಲೆಟರ್ನಲ್ಲಿ..?’ ಎಂದೆ. ಗರ್ಭನಿರೋಧಕ ಮಾತ್ರೆಯ ಬಗ್ಗೆ ವಿವರವಾದ ಪತ್ರವಂತೆ ಅದು. ಪತ್ರದ ಬಗ್ಗೆ ಮಗಳನ್ನು ಕೇಳಿದ್ದಾನೆ ಪ್ಯಾಟ್. ಆಗಷ್ಟೇ ಹದಿನಾರು ತುಂಬಿದ್ದ ಮಗಳು ‘ಡ್ಯಾಡ್, ವಿ ಮೆಟ್ ದಿ ಡಾಕ್ಟರ್ ಲಾಸ್ಟ್ ವೀಕ್. ಐ ಸಾ ದಿಸ್ ಲೆಟರ್ ಲಾಸ್ಟ್ ನೈಟ್. ಸಮ್‌ಹೌ ಐ ಫರ್‌‌ಗಾಟ್ ಇಟ್ ಹಿಯರ್’ ಎಂದು ಕೂಲಾಗಿ ಹೇಳಿದಳಂತೆ. ಸ್ವಲ್ಪ ಎಮೊಶನಲ್ ಆದ ಅಪ್ಪ ‘ಮಗಳೇ, ನಮಗೊಂದು ಮಾತು ಹೇಳಬಾರದಿತ್ತ? ನಾವೇ ನಿನ್ನ ಡಾಕ್ಟರ್ ಬಳಿ ಕರೆದುಕೊಂಡು ಹೋಗುತ್ತಿದ್ದೆವು’ ಎಂದು ತೊದಲಿದನಂತೆ. ‘ಡ್ಯಾಡ್- ವೈ ಶುಡ್ ಐ ಡಿಸ್‌ಕಸ್ ಆಲ್ ದೀಸ್ ವಿತ್ ಯೂ’ ಎಂದವಳು ಸಿಡುಕಿದಳಂತೆ. ಈ ಅಪ್ಪನಿಗೆ ತಲೆ ಬಿಸಿಯಾಗಿದೆ. ‘ಪೂನಿ (ಪೂರ್ಣಿ ಅಂತ ಓದಿಕೊಳ್ಳಿ) - ಶೀ ಇಸ್ ಸ್ಟಿಲ್ ಎ ಬೇಬಿ. ಆ ಡಾಕ್ಟರ್‌ಗಳಿಗಿಂತ ಚೆನ್ನಾಗಿ ನಾವೇ ವಿವರಿಸುತ್ತಿದ್ದೆವಲ್ಲ... ಬಟ್ ವಾಟ್ ಟು ಡೂ - ಅವಳು ನನ್ ಜೊತೆ ಮಾತನಾಡಲು ರೆಡಿ ಇಲ್ಲವೇ ಇಲ್ಲ’ ಎಂದು ಅಲವತ್ತುಕೊಂಡ.

* * * * * * *
ನಾನು ಸೆಕೆಂಡ್ ಪಿಯೂಸಿಯಲ್ಲಿ ಓದುತ್ತಿದ್ದೆ ಎಂದು ನೆನಪು. ಅಕ್ಟೋಬರ್ ತಿಂಗಳಿನ ಒಂದು ಮಧ್ಯಾನ್ಹದ ಪೋಸ್ಟಿಗೆ ಆ ಗ್ರೀಟಿಂಗ್ ಕಾರ್ಡ್ ಬಂದಿತ್ತು. ಬಿಳಿಯ ದಾನಿಯಲ್ಲಿ ಒಂದು ಕೆಂಗುಲಾಬಿಯ ಹೂವಿದ್ದ ಗ್ರೀಟಿಂಗ್ ಕಾರ್ಡ್. ಒಳಗಡೆ ಗೀಚಿದಂತಿದ್ದ ‘I Love You' ಎಂಬ ಬರಹ (ಬಹುಶ ಎಡಗೈಲಿ ಬರೆದಿರಬೇಕು). ಅನಾಮಧೇಯ. ಆ ಲಕೋಟೆ ಒಡೆಯಬೇಕಾದರೆ- ಓದಬೇಕಾದರೆ ನನ್ನ ಪಕ್ಕದಲ್ಲೇ ಇದ್ದ ಆಯಿ ಒಂದೂ ಮಾತನಾಡಿರಲ್ಲ. ನನ್ನ ಪೆಚ್ಚಾದ ಮುಖದಲ್ಲಿ, ಗಾಬರಿಯಾದ ಕಣ್ಣುಗಳಲ್ಲಿ ಏನನ್ನೋ ಹುಡುಕಿದಂತಿತ್ತು. ಮರುಕ್ಷಣವೆ, ಹುಟ್ಟಿದ ಲಾಗಾಯ್ತೂ ನೋಡುತ್ತ ಬಂದ ಗಾಂಭೀರ್ಯ ಚಹರೆಯಲ್ಲಿ ಕಂಡಿತ್ತು. ನಾನೂ ಮಾತಾಡಲಿಲ್ಲ. ಅಲ್ಲೇ ಮೇಜಿನ ಮೇಲೆ ಕಾರ್ಡ್ ಎಸೆದು ಪುಸ್ತಕ ಓದುತ್ತ ಕುಳಿತೆ. ಮಧ್ಯಾನ್ಹ ಮುಸ್ಸಂಜೆಯಾಯಿತು. ಮುಸ್ಸಂಜೆ ರಾತ್ರಿಯಾಗಿ ಬೆಳೆಯಿತು. ಆಯಿಯ ಮಾತಿಲ್ಲ - ಕಥೆಯಿಲ್ಲ. ಅಡುಗೆಗೆ ಸಹಾಯ ಮಾಡಲೂ ಬುಲಾವ್ ಬರಲಿಲ್ಲ. ರಾತ್ರಿಯ ಊಟದ ಸಮಯದಲ್ಲೂ ಬೇಕು - ಬೇಡ ಅಷ್ಟೇ ಮಾತುಕತೆ. ಹಾಸಿಗೆಯ ಮೇಲೆ ಉರುಳಿದ ನನಗೆ ಮನಸ್ಸು ತಡೆಯಲಿಲ್ಲ. ಆಯಿ ಸಮಾಧಾನವಾಗಿ ನಿದ್ದೆ ಮಾಡಲಿ ಎಂದುಕೊಂಡು ಜಗಲಿಗೆ ಹೋದೆ. ಪುಸ್ತಕದ ಮೇಲೆ ಕಣ್ಣಾಡಿಸುತ್ತಿದ್ದರೂ ದುಗುಡ ಮುಖದ ಮೇಲೆ ಕಾಣುತ್ತಿತ್ತು. ‘ಆಯೀ, ಅದು ಯಾರು ಕಳ್ಸಿದ್ ಕಾರ್ಡು ನಂಗೆ ಗೊತ್ತಿಲ್ಲೆ. ಇದ್ರಲ್ಲಿ ನಂದು ತಪ್ಪು ಏನೂ ಇಲ್ಲೆ. ನನ್ ಮೇಲೆ ಯಾಕೆ ಬೇಜಾರು?‘ ಅಂದೆ. ‘ನೀನಿನ್ನೂ ಚಿಕ್ಕವ್ಳು. ಅದ್ಕೇ ಕಾಳಜಿ ಜಾಸ್ತಿ‘ ಅಂದು ಮತ್ತೆ ಸುಮ್ಮನಾದರು ಆಯಿ. ನಂಗೂ ಮುಂದೆ ಏನು ಹೇಳಬೇಕೋ ಗೊತ್ತಾಗಲಿಲ್ಲ.

* * * * * * *
ಪ್ಯಾಟ್‌ನಲ್ಲಿ ಇಂದು ಕಂಡ ದುಗುಡವೂ ಆಯಿಯಲ್ಲಿ ಅಂದು ಕಂಡ ದುಗುಡವೂ ಒಂದೇ ಅನ್ನಿಸಿತು ನನಗೆ. ಸಂದರ್ಭ, ವಿಷಯದ ತೀವ್ರತೆ, ಕಾಲ - ದೇಶ ಮಾತ್ರ ಬೇರೆಯದು ಅಷ್ಟೆ.

ಮುಂದೆ...?