Sunday, 13 April 2008

ಕನಸ ಕುದುರಿಸಿದವರು

ಆಗೆಲ್ಲ ನನ್ನ ಕಣ್ಣಲ್ಲೇ
ಕನಸುಗಳು ಗೂಡುಕಟ್ಟುತ್ತವೆ ಎಂದು
ಬೀಗುತ್ತಿದ್ದ ಕಾಲ
ವಯಸ್ಸು ಹದಿನೈದೋ ಹದಿನಾರೋ...
ಚಾದರದ ಒಳಗೊಳಗೇ ಮುದುರಿ,
ಮಗ್ಗುಲು ಬದಲಾಯಿಸದೆ
ಬೆಳಗು ಹಾಯಿಸಿದ ರಾತ್ರಿಗಳು
ಇಂದು ಯೋಚಿಸಿದರೆ
ತೀರ ಸಿಲ್ಲಿ ಸಿಲ್ಲಿ!

ಜಡೆ ಹೆಣೆಯುವಾಗ
ಕನ್ನಡಿಯ ಆ ತುದಿಯಲ್ಲಿ
ಯಾರೋ ಕಣ್ಣು ಮಿಟುಕಿಸಿದಂತೆ ಎನಿಸಿ
ಬೈತಲೆಗೆ ತುಟಿ ತಾಕಿಸಿದಂತೆ ಭ್ರಮಿಸಿ
ಸರಸರನೆ ಹೆಜ್ಜೆ ಹಾಕಿ
ಕಿಟಕಿಯ ಬದಿಯ ಜಾಗವನ್ನೇ ಆಯ್ದು
ರಸ್ತೆಯತ್ತ ನೋಟ ನೆಟ್ಟಾಗ
ಕಣ್ಣಲ್ಲಿ ಹಸಿ-ಹಸಿ ವಿರಹ...

ದೇಹ ಚಿಗಿತುಕೊಳ್ಳುವ ಹೊತ್ತಲ್ಲಿ
ಪ್ರತಿ ಎಲೆಯ ವಾಸನೆಯನ್ನೂ
ಗ್ರಹಿಸುವ ಉಮೇದಿನಲ್ಲಿ
ಕಣ್ಣಲ್ಲಿ ಗೂಡು ಕಟ್ಟಿದ್ದ ಕನಸು
ಒಬ್ಬರಿಂದೊಬ್ಬರಿಗೆ ವರ್ಗ
ವಾಗುತ್ತ - ಬಣ್ಣಬಣ್ಣದ
ಮೊಟ್ಟೆಗಳನ್ನು ಇಡುತ್ತ ಹೋದದ್ದು
ತಿಳಿಯಲೇ ಇಲ್ಲ
ಪುಟಾಣಿ ಅಲೆಗಳನ್ನು
ಗ್ರಹಿಸುವ ವಯಸ್ಸೂ ಅದಲ್ಲ

ದಿನ ಕಳೆದಂತೆ
ಕನಸು ಮೊಟ್ಟೆಗಳಲ್ಲಿ ಯಾವವೂ
ಮರಿಯಾಗದೆ ಜಳ್ಳಾಗಿ
ಬಿಟ್ಟವು ಬರಿದೇ ತಮ್ಮ
ಚಿಪ್ಪುಗಳನ್ನು ಉಳಿಸಿ...
ಆದರೂ
ನಿಮಗೆಲ್ಲ ಋಣಿ ನಾನು
ಅಂಗಾಂಗ ಚಿಗುರಿಸಿದ್ದಕ್ಕೆ
ಕನಸ ಕುದುರಿಸಿದ್ದಕ್ಕೆ.

Wednesday, 5 March 2008

ಎಂದೋ ಕೇಳಿದ್ದು, ಕಂಡಿದ್ದು

ದಡದಡನೆ ಮೆಟ್ಟಿಲುಗಳನ್ನು ಇಳಿದ ಶಬ್ದ ಕೇಳಿ ‘ಕಸ್ತೂರಿ’ಯಲ್ಲಿ ಹುಗಿದುಹೋಗಿದ್ದ ನಾನು ತಲೆ ಎತ್ತಿ ನೋಡಿದೆ. ಸುಜಾತ್ ಚಿಕ್ಕಿ ತುಂಬ ಗಾಬರಿಯಾಗಿದ್ದಂತೆ ಕಂಡಳು. ‘ಚಿಕ್ಕಿ, ಎಂತಾ ಆತೆ...?’ ನನ್ನ ಪ್ರಶ್ನೆ. ‘ತಂಗೀ, ನೀ ಇಲ್ಲೇ ಇದ್ದಿದ್ಯ... ಎಂತೂ ಆಜಿಲ್ಯೆ ಮಗಾ...’ ಬಿಕ್ಕಳಿಕೆಯಲ್ಲಿ ಮುಗಿದ ಮಾತು. ಸರ ಸರನೆ ಒಳನಡೆದ ಚಿಕ್ಕಿ. ನನ್ನ ಮನಸ್ಸಿನಲ್ಲಿ ದೈತ್ಯಾಕಾರದ ಪ್ರಶ್ನಾರ್ಥಕ. ಹತ್ತು ನಿಮಿಷ ಬಿಟ್ಟು ಅಡುಗೆ ಮನೆಯತ್ತ ನಡೆಯುವಾಗ ಹಿಂದೆ, ಕಟ್ಟಿಗೆ ಸರಿಯುವ ಜಾಗದಲ್ಲಿ ದೊಡ್ಡಮ್ಮ - ಸುಜಾತ್ ಚಿಕ್ಕಿಯ ಪಿಸು ಪಿಸು ಕೇಳುತ್ತಿತ್ತು. ಚಿಕ್ಕಿಯ ದನಿ... ‘ ಯನ್ ಮಗಳು - ಮಗ ಇಬ್ರೂ ದೊಡ್ದಾಗ್ತಾ ಇದ್ದ, ಈ ಮನಶಾ ಹೀಂಗೆ ಮಾತಾಡ್ತಾ. ಅಕ್ಕಾ, ಇವತ್ ಹೇಳ್ಲೇ ಬೇಕು ಅಂದ್ಕಂಜಿ ಇವರತ್ರ. ಶಾರದತ್ಗೆ ಮುಖಾ ನೆನಪಾದ್ರೆ ಬೇಜಾರಾಗ್ತು...’ ಇದನ್ನ ಹಿಂಬಾಲಿಸಿದ್ದು ಬಿಕ್ಕಳಿಕೆ. ನನಗೆ ತಲೆ- ಬುಡ ಅರ್ಥ ಆಗಲಿಲ್ಲ. ಆಗ ನಾನು ಬಹುಶಃ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನಂತರ ಸುಮಾರು ವರ್ಷ ಶಾರದೆ ಅತ್ತೆ - ಅವಳ ಗಂಡ ಸುಜಾತ್ ಚಿಕ್ಕಿಯ ಮನೆಗೆ ಬರುತ್ತಿರಲಿಲ್ಲ, ತುಂಬ ಹತ್ತಿರದ ಸಂಬಂಧವಾದರೂ. ಶಾರದೆ ಅತ್ತೆಯ ಮಕ್ಕಳು ಮಾತ್ರ ಆಗಾಗ ಬರುತ್ತಿದ್ದರು.
____
ಇಷ್ಟೆಲ್ಲ ಆಗಿ ಏಳೆಂಟು ವರ್ಷದ ಮೇಲೆ ಮಾತಿನ ಮಧ್ಯೆ ದೊಡ್ಡಮ್ಮ ಹೇಳುತ್ತಿದ್ದರು... ‘ಸುಜಾತ್ ಚಿಕ್ಕಿ ಅನುಭವಿಸಿದ್ದು ಕಡಿಮೆ ಏನಲ್ಲ. ದಿನಾ ಹೋಗಿ - ಬಂದು ಮಾಡ್ತಾ ಇದ್ದ ಶಾರದೆ ಗಂಡ, ಸುಜಾತ್ ಚಿಕ್ಕಿ ಹತ್ರ ಹಲ್ ಕಿರೀತಿದ್ದಾ. ಕಡೀಗೆ ಒಂದಿನಾ ಅದು ತೀರಾ ಅತೀನೂ ಆತು. ಕಾಕಾನ್ ಸಿಟ್ಟಿಗೆ ಹೆದ್ರಿ ಸುಮ್ಮನಿದ್ದ ಸುಜಾತ್ ಚಿಕ್ಕಿ ಇವಂದು ಅತಿ ಆದಾಗಾ ಬಾಯಿ ಬಿಡ್ಲೇ ಬೇಕಾತು. ಮುಂದೆ ಏನಾತು ಹೇಳದು ಗೊತ್ತಿಲ್ಲೆ. ಅಂತೂ ಈಗೀಗ ಶಾರದೆ ಅತ್ತೆ - ಅದ್ರ ಗಂಡ ಮತ್ತೆ ಚಿಕ್ಕಿ ಮನೀಗೆ ಬರ್ತಾ ಇದ್ದ...’
ಆಗಲೇ ನನಗೆ ‘ತೀರಾ ಅತಿಯಾದ ದಿನ’ ಯಾವುದು ಅಂತ ಗೊತ್ತಾಗಿದ್ದು. ಚಿಕ್ಕಿಯ ಅಂದಿನ ಬಿಕ್ಕಳಿಕೆಯ ಅರ್ಥ ತಿಳಿದಿದ್ದು.
ದೊಡ್ಡಮ್ಮ ಹೇಳಿದ್ದು ದಿನವೆಲ್ಲ ಕೊರೆಯುತ್ತಿತ್ತು. ಚಿಕ್ಕಿ ಆ ಭಂಡನ ಕೆನ್ನೆಗೆ ಯಾಕೆ ಬಾರಿಸಲಿಲ್ಲ.. ಎಂದು ಪದೇ ಪದೇ ಅನ್ನಿಸುತ್ತಿತ್ತು. ಅಂಥ ಭಂಡನೊಡನೆ ಹತ್ತಿಪ್ಪತ್ತು ವರ್ಷ ಸಂಸಾರ ಮಾಡಿದ ಪಾಪದ ಶಾರದೆ ಅತ್ತೆ ಮುಂದಿನ ಸಲ ಸಿಕ್ಕಾಗ ಒಂದ್ನಾಲ್ಕು ಮಾತು ಹೆಚ್ಚಿಗೆಯೇ ಆಡಬೇಕು ಅಂದುಕೊಂಡ ಮೇಲೆ ಮನ ತುಸು ನಿರಾಳ.

Wednesday, 20 February 2008

ಸಖ ಗೀತ

ಇವನ ಬಗ್ಗೆ ಬರೆಯಬೇಕಂತೆ-
ಬರವಣಿಗೆ ಎಂದರೇನು ಅಮಟೆಕಾಯಿಯಾ
ಕಲ್ಲು ಹೊಡೆದ ಮರುಕ್ಷಣ ಮಡಿಲಲ್ಲಿ ಬೀಳಲು
ಎಂದರೆ,
ತಲೆ ಮೇಲೆ ನಕ್ಷತ್ರವನ್ನೇ ಉದುರಿಸುವಷ್ಟು
ರೊಮ್ಯಾಂಟಿಕ್ ಆಗಿ ಕಣ್ ಹೊಡೆಯುವ
ಇವನ ಬಗ್ಗೆ ಬರೆಯಬೇಕಂತೆ!

ಇವನಿಗಾಗಿ ಹಾಡಬೇಕಂತೆ-
ಹಾಡುವಾಗ ಸಾಲು ಮರೆತರೆ
ನೀ ಸಾಥ್ ಕೊಡುವೆಯಾ
ಎಂದರೆ,
ಕಣ್ಮಿಟುಕಿಸಿ, ಗಂಟಲು ಸರಿಮಾಡಿ
‘ಲವ್ಯೂ...’ ಎಂದೊದರುವ
ಇವನಿಗಾಗಿ ಹಾಡಬೇಕಂತೆ !

ಇವನಿಗಾಗಿ ಬದುಕಬೇಕಂತೆ-
ನನ್ಬದುಕೆಲ್ಲ ನೀನೇ ಅಲ್ಲವೇನೋ...
ಎಂದರೆ,
ಪುಟಾಣಿ ಮಡಿಲಲ್ಲಿ ಅಡಗುವ
ಮಾತೇ ಬರದಷ್ಟು ಭಾವುಕನಾಗುವ
ಇವನಿಲ್ಲದೇ
ಬದುಕು ಖುಷಿಯಾಗಿರುವುದಾದರೂ ಹೇಗೆ..?

Sunday, 17 February 2008

ದಕ್ಕಿದ್ದು

ತಣ್ಣಗಿನ ಗಾಳಿಯಲ್ಲಿ - ಮೋಡಗಳ ಮಡಿಲಲ್ಲಿ
ಇವರೆಲ್ಲರೊಡನೆ ಸಂಭ್ರಮಿಸುವಾಗ
ಥಟ್ಟನೆ ಒತ್ತರಿಸುವ ನೆನಪು-
ಗದರಿಸಿ ಓಡಿಸಿದರೂ
ಬೆದರಿಸಿ ಕಳಿಸಿದರೂ
ಮತ್ತಷ್ಟು ಸನಿಹ

ಕಡಲ ತಡಿಯಲ್ಲಿ
ತೀರದುದ್ದಕ್ಕೂ ಅಲೆಯುತ್ತಿರುವಾಗ
ಪ್ರತಿ ಅಲೆಯೂ ಹೊತ್ತು ತರುವ
ಹೊಸ ಹಂಬಲಗಳು-
ಈ ಹಂಬಲಗಳು ಮುಗಿಯುವುದೆಂದೋ,
ಆ ಅಲೆಗಳು ನಿಲ್ಲುವುದೆಂದೋ
ಮತ್ತದೇ ಅಸ್ಪಷ್ಟ ಅಂತರಂಗ...

ಹೂಗಿಡಗಳಿಗೆ ನೀರು ನೆಪಮಾತ್ರ
ದೃಷ್ಟಿ ಪೂರ್ತಿ ರಸ್ತೆಯತ್ತ
ಕಾಲ್ಬುಡದ ಮುಳ್ಳೂ ಲೆಕ್ಕಕ್ಕಿಲ್ಲ
ಮನದ ತುಂಬ
ಬಗೆಹರಿಯದ ಕಾತರಿಕೆ ಮಾತ್ರ...

ವರ್ಷಾಂತ್ಯದಲ್ಲಿ ಲೆಕ್ಕಾಚಾರಕ್ಕೆ ಕೂತರೆ
ನನ್ನಲ್ಲಿ ಉಳಿದಿದ್ದಿಷ್ಟೇ
ಅದೇ ಹಳೆಯ ಪರಿಭ್ರಮಣೆ,
ಮತ್ತದೇ ಹಳಸಲು ಸಂಕಲನ - ವ್ಯವಕಲನ.

Sunday, 10 February 2008

ಅಜ್ಜೀ ನೀ ಇರಬೇಕಾಗಿತ್ತೇ...

ಇಂದು ನೀನಿಲ್ಲ,
ನಿನ್ನ ಕೆಂಪು ಮಡಿಯುಂಟು
ನಿನ್ನ ಬೋಳುತಲೆಯ ನೆನಪು ನನಗುಂಟು
ವರ್ಷಕ್ಕೊಮ್ಮೆ ನಿನ್ನ ಫೋಟೊ
ನನ್ನಿಂದ ಸಿಂಗರಿಸಿಕೊಳ್ಳುವುದೂ ಉಂಟು

ಈಗ ನೀನಿರುತ್ತಿದ್ದರೆ
ನಮ್ಮನೆ ಹೀಗಿರುತ್ತಿರಲಿಲ್ಲ
ಆಯಿಯ ಕಣ್ತಪ್ಪಿಸಿ ಮೂರೂ ದಿನ
ಒಳಗಿರುತ್ತಿರಲಿಲ್ಲ ನಾನು
ಅಪ್ಪಯ್ಯನ ಮಾತನ್ನು ಉಫ್ ಎನ್ನಿಸಿ
ಸ್ನಾನ ಸಂಧ್ಯಾವಂದನೆಗಳನ್ನು
ದೇವರಿಗೇ ಬಿಡುತ್ತಿರಲಿಲ್ಲ ಅಣ್ಣ
ನಿನ್ನ ಒಂದು ನಜರು ಆಯಿಯ ಮೇಲಿದ್ದರೆ
ಹಬ್ಬದಲ್ಲಿ ಹೋಳಿಗೆ ಊಟ ತಪ್ಪುತ್ತಿರಲಿಲ್ಲ
ಸಾಲ ಮಿತಿ ಮೀರುತ್ತಿರಲಿಲ್ಲ

‘ಕೂಸು ಹುಟ್ಟಿದಳು - ಕುನ್ನಾಶಿ ಹುಟ್ಟಿದಳು
ಬೆಳಗಿದ್ದ ಮನೆಯನ್ನು ತೊಳೆಯಲ್ಹುಟ್ಟಿದಳು,
ಮಾಣಿ ಹುಟ್ಟಿದನು - ಮಾರಾಜ ಹುಟ್ಟಿದನು
ಭತ್ತದ ಕಣಜವ ಕಟ್ಟಲ್ಹುಟ್ಟಿದನು’
ಇದು ನಿನ್ನ ಫೆವರಿಟ್ ಗಾದೆ, ನನ್ನ ಕೆಣಕಲು
ಆಗೆಲ್ಲ ನಾನು ಅಬ್ಬರಿಸುತ್ತಿದ್ದೆ
ನೀ ನನ್ನ ಸೆರಗೊಳಕ್ಕೆ
ಎಳಕೊಂಡು ಸಮಾಧಾನಿಸುತ್ತಿದ್ದೆ

ಈಗ ನೀನಿಲ್ಲ
ನಿನ್ನ ಬೆಚ್ಚನೆಯ ಮಡಿಲಿಲ್ಲ
ಕಾಗಕ್ಕ- ಗುಬ್ಬಕ್ಕನ ಕತೆ
ನನಗೆ ಕೇಳುತ್ತಿಲ್ಲ
ದಿನವೆಲ್ಲ ಅಪ್ಪಯ್ಯನ ತತ್ತ್ವಜ್ಞಾನದ ಕೊರೆತ
ಆಯಿಯ ಹಿತವಚನದೊಂದಿಗೆ ರಾತ್ರಿ
ಅಣ್ಣನೊಡನೆ ಕಿತ್ತಾಟದೊಂದಿಗೆ ಬೆಳಗು.