ಈಗೊಂದು ವಾರದ ಹಿಂದೆ ನಮ್ಮಾಫೀಸಿನಲ್ಲಿ ನಡೆದ ಘಟನೆ ಇದು. ಅದೇ ತಾನೇ ಆಫೀಸ್ ಒಳ ಹೊಕ್ಕು ಎಲ್ಲರೊಂದಿಗೆ ‘ಗುಡ್ ಮಾರ್ನಿಂಗ್’ ವಿನಿಮಯದಲ್ಲಿದ್ದೆ. ಹಿಂದಿನಿಂದ ಬಂದು ನಿಂತ ಎಲಿಯಟ್ - ನನ್ನ ಮ್ಯಾನೇಜರ್ - `ಕ್ಯಾನ್ ವಿ ಹ್ಯಾವ್ ಅ ಕ್ವಿಕ್ ಚ್ಯಾಟ್ ಪೂನಿ’ ಅಂತ ಕಿವಿಯಲ್ಲಿ ಉಸುರಿದ. ‘ಕೆಲಸ ಹೋಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಕೊಡ್ತಾ ಇಲ್ಲ ತಾನೇ’ ಎಂದು ಜೋಕ್ ಮಾಡಿ ಮೀಟಿಂಗ್ ರೂಮ್ ತಲುಪಿದಾಗ ಸ್ವಲ್ಪ ದಿಗಿಲಾಗಿದ್ದೆ. ನನ್ನ ಗಾಬರಿಬಿದ್ದ ಮುಖ ನೋಡಿದ ಎಲಿಯಟ್ ‘ನಥಿಂಗ್ ಸೀರಿಯಸ್’ ಎಂದ. ಸ್ಪಲ್ಪ ಅನುಮಾನದೊಂದಿಗೇ ಮಾತು ಶುರು ಮಾಡಿದವ ನಿನ್ನ ಕೆಲವು ಫೋಟೋಗಳು ಬೇಕಿತ್ತಲ್ಲ.. ಅಂದ. ನಾನು ಪೂರ್ತಿ ಗೊಂದಲದಲ್ಲಿ ಬಿದ್ದೆ. `ನನ್ನ ಫೋಟೋ ನಿನಗ್ಯಾಕೆ' ಅಂತ ತಕ್ಷಣ ಕೇಳಿದೆ. ‘ಐದಾರು ಫೋಟೋಗಳು ಸಾಕು. ನೀನು ಚಿಕ್ಕವಳಾಗಿದ್ದಾಗಿನ ಫೋಟೋ, ಎಜುಕೇಷನ್ ಟೈಮಿನದ್ದು, ನಿಮ್ಮ ಮದುವೆಯದು, ಯಾವುದಾದರೂ ಪಾರ್ಟಿಯಲ್ಲಿ ನೀನು ಇದ್ದದ್ದು...’ ಹೀಗೆ ವಿವರಿಸುತ್ತಲೇ ಹೋದ ಹೊರತಾಗಿ, ಗುಟ್ಟು ಬಿಟ್ಟು ಕೊಡಲಿಲ್ಲ.
ಒಂದಿಬ್ಬರು ನಿವೃತ್ತಿಯಾಗುವ ಮೊದಲು ಅವರ ಥರಾವರಿ ಫೋಟೋಗಳನ್ನು ಆಫೀಸಿನ ನೋಟೀಸ್ ಬೋರ್ಡ್, ಬಾಗಿಲುಗಳ ಮೇಲೆ ನೋಡಿದ ನೆನಪಿತ್ತು. ಇನ್ನೊಬ್ಬ ಕಲೀಗ್ ನ ಅರವತ್ತನೆಯ ಹುಟ್ಟು ಹಬ್ಬದ ಸಮಯದಲ್ಲೂ ಇದೇ ರೀತಿ ‘ಫೋಟೋ ಶೃಂಗಾರ’ ಮಾಡಿದ್ದರು. ನಾನಂತೂ ಸದ್ಯ ಕೆಲಸ ಬಿಡುತ್ತೇನೆ ಎಂದ ನೆನಪಿಲ್ಲ. ನನಗೆ ಅರವತ್ತಾಗಲು ಇನ್ನೂ ಸುಮಾರು ದಶಕಗಳು ಕಳೆಯಬೇಕು. ಶಾಲು ಹೊದೆಸಿ- ಸನ್ಮಾನಿಸುವಂತ ಘನಂದಾರಿ ಕೆಲಸವನ್ನು ಮಾಡಿದ ನೆನಪೂ ಆಗುತ್ತಿಲ್ಲ.. ಇನ್ಯಾಕೆ ಇವ ನನ್ನ ಫೋಟೋ ಕೇಳುತ್ತಿದ್ದಾನೆ? ಊಹುಂ.. ಬಗೆಹರಿಯುತ್ತಿಲ್ಲ.
ನಿಧಾನಕ್ಕೆ - ‘ಫೋಟೋಗಳನ್ನು ತರಬಲ್ಲೆ. ಆದರೆ ಯಾಕೆ ಬೇಕು ಅಂತ ಕೇಳಬಹುದಾ?’ ಅಂತ ಕೇಳಿದೆ. ಅವ ಕಣ್ಣು ಪಿಳಿಪಿಳಿಸಿ, ಕತ್ತು ಹಿಲಾಯಿಸಿ ‘ಈ ವರ್ಷ ನಿನ್ನ ಮೂವತ್ತನೆಯ ಬರ್ಥ್ ಡೇ ಇದೆಯಲ್ಲ. ಈ ದೇಶದಲ್ಲಿ - ಮೂವತ್ತು, ಐವತ್ತು ಮತ್ತು ಅರವತ್ತನೆಯ ಹುಟ್ಟುಹಬ್ಬಗಳು ಮಹತ್ವದ್ದು. ನಿನ್ನ ಮೂವತ್ತನೆಯ ಹುಟ್ಟುಹಬ್ಬದ ದಿನ ನಮಗೆಲ್ಲ ‘ಪಾರ್ಟಿ’ ಬೇಕೆ ಬೇಕು. ಅಂದು ಆಫೀಸ್ ತುಂಬೆಲ್ಲ ನಿನ್ನ ಥರಾವರಿ ಫೋಟೋಗಳು. ಪ್ರಿಪರೇಶನ್ ಶುರು ಮಾಡಬೇಕಲ್ಲ.. ಹಾಗಾಗಿ ಫೋಟೋಗಳನ್ನು ಕೇಳಿದೆ’ ಎಂದ.
ನನಗಾಗ ನಗುವೂ- ಅಳುವೂ ಒಟ್ಟಿಗೆ ಬಂದಂತೆ ಆಯಿತು. ‘ನೋ.. ಐಮ್ ಓನ್ಲಿ 27. ಇನ್ನೂ ಮೂವತ್ತಾಗಿಲ್ಲ ನನಗೆ..’ ಎನ್ನುತ್ತಿದ್ದಂತೆ ಅವ ಪಕ್ಕಕ್ಕಿದ್ದ ಫೈಲ್ ತೆಗೆದ. ಮೊದಲು ಕಂಡಿದ್ದೇ ನನ್ನ ಅಪ್ಲಿಕೇಶನ್ ಫಾರ್ಮ್. ಕಂಪನಿಯಲ್ಲಿ ಕೆಲಸ ಬಯಸಿ ಕಳುಹಿಸಿದ್ದು. ಹೆಸರು, ವಿಳಾಸದ ಕೆಳಗೆ ರಾರಾಜಿಸುತ್ತ ಇದೆಯಲ್ಲ ನಾ ಹುಟ್ಟಿದ ದಿನಾಂಕ! `23 ಜುಲೈ 1979' ಎಂದು ನನ್ನ ಕೈಯ್ಯಾರೆ ಬರೆದದ್ದನ್ನ - ನನ್ನ ಬಾಯಾರೆ ‘ಇದು ಸುಳ್ಳು’ ಎಂದು ಹೇಗೆ ಹೇಳಲಿ? ಮತ್ತೆ ದ್ವಂದ್ವ. ಆದರೆ ಅವನಿಗೆ ನಿಜ ಏನು ಅಂತ ವಿವರಿಸದೇ ಬೇರೆ ವಿಧಿ ಇರಲಿಲ್ಲ. ನನ್ನನ್ನು ಬೇಗ ಶಾಲೆಗೆ ಅಟ್ಟಿದ ಅಪ್ಪಯ್ಯನನ್ನೂ, ಶಾಲೆಯ ದಾಖಲಾತಿ ಸಮಯದಲ್ಲಿ - ಹುಟ್ಟಿದ ತಾರೀಕೇ ಬದಲು ಮಾಡಿದ ಮಾಲತಿ ಅಕ್ಕೋರನ್ನೂ ಮನಸ್ಸಿನಲ್ಲೇ ಬೈದುಕೊಳ್ಳುತ್ತ ಎಲಿಯಟ್ ಗೆ ವಿವರಿಸತೊಡಗಿದೆ...
ನಾಲ್ಕು ವರ್ಷಕ್ಕೇ ಎಂಟು ವರ್ಷದವರಾಡುವಂತೆ ಮಾತಾಡುತ್ತಿದ್ದ ನಾನು, ಆಗಲೇ ಸರಾಸರಿ ಬರೆಯಲು- ಓದಲು ಕಲಿಸಿದ ಆಯಿ, ತರಗತಿಯಲ್ಲಿ ಅಗತ್ಯಕ್ಕಿಂತಲೂ ಕಮ್ಮಿ ಇದ್ದ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಹೆಣಗಾಡುತ್ತಿರುವ ಹೆಡ್ ಟೀಚರ್ರು... ಎಲ್ಲದರ ಪರಿಣಾಮವಾಗಿ ನಾಲ್ಕು ವರ್ಷಕ್ಕೇ ಒಂದನೆ ತರಗತಿ ಸೇರಿದ್ದು; ‘ಐದು ವರ್ಷದ ಮೇಲೆ ಹತ್ತು ತಿಂಗಳು = ಒಂದನೇ ತರಗತಿ’ ಎಂಬ ಕಾನೂನಿನ ಕಟ್ಟಳೆ ಮೀರಲಾಗದ ಮಾಲತಿ ಟೀಚರ್ರು ನನ್ನನ್ನು ಅನಾಮತ್ತು ಎರಡು ವರ್ಷ ಹಿರಿಯವಳನ್ನಾಗಿ ಮಾಡಿ ಜನ್ಮ ದಿನಾಂಕವನ್ನೇ ತಿದ್ದಿದ್ದು; ನನಗೆ ಬುದ್ಧಿ ತಿಳಿದ ನಂತರ ಈ ಗೋಟಾವಳಿಗಳನ್ನು ಸರಿಪಡಿಸಲು ಒದ್ದಾಡಿದ್ದು; ಲಾಯರ್ರು, ಅಫಿಡವಿಟ್ಟು, ಕೋರ್ಟು ಅಂತೆಲ್ಲ ತಿರುಗಾಡಿದರೂ ಅದು ಸರಿಯಾಗದೇ ಇರುವ ಸಂಭವವೇ ಹೆಚ್ಚು ಎಂದು ಗೊತ್ತಾಗಿದ್ದು; ಅಷ್ಟರಲ್ಲಾಗಲೇ ಪಾಸ್ಪೋರ್ಟು, ಮ್ಯಾರೇಜ್ ಸರ್ಟಿಫಿಕೇಟ್ ಇತ್ಯಾದಿ ಕಾಗದ ಪತ್ರಗಳೂ ಅದೇ ಜನ್ಮ ದಿನಾಂಕದೊಂದಿಗೆ ರೆಡಿಯಾದದ್ದರಿಂದ ಮತ್ತೆ ಎಲ್ಲವನ್ನೂ ಹೊಸತಾಗಿ ಮಾಡಿಸುವ ಉಮೇದು ನನಗೆ ಇಲ್ಲವಾಗಿದ್ದು... ಉಫ್ - ಇದೆಲ್ಲ ಎಲಿಯಟ್ ಗೆ ವಿವರಿಸಿದಾಗ ಅವ ನನ್ನನ್ನ ಬೇರೆ ಗ್ರಹದಿಂದ ಬಂದ ಪ್ರಾಣಿಯ ಥರ ನೋಡುತ್ತಿದ್ದ! ಕಥೆಯೆಲ್ಲ ಮುಗಿದ ಮೇಲೆ ಸ್ವಲ್ಪ ಸುಧಾರಿಸಿಕೊಂಡವ ‘ಸೋ.. ನಿನ್ನ ಪ್ರಕಾರ ಮೂವತ್ತಾಗಲು ಇನ್ನೂ ಕೆಲವು ವರ್ಷ ಬಾಕಿ ಇದೆ. ಈ ವರ್ಷ ಮೂವತ್ತನೆಯ ಬರ್ಥ್ ಡೇ ಪಾರ್ಟಿ ಭಾಗ್ಯ ನಮಗಿಲ್ಲ..’ ಅಂದ. ನನ್ನಿಂದಲೂ ಒಂದು ಭಾರವಾದ ‘ಹ್ಮ್..’ ಹೊರಬಿತ್ತು. ‘ಥರ್ಟಿಯತ್ ಬರ್ಥ್ ಡೇ ಪ್ರಿಪರೇಶನ್ ಮೀಟಿಂಗ್’ಗೆ ತೆರೆಯೂ ಬಿತ್ತು.
ಎರಡು ತಾಸಿನ ನಂತರ ಇನ್ನೊಬ್ಬ ಕಲೀಗ್ ಅಲೆನ್ ‘ಪೂನಿ, ಮೊನ್ನೆ ಕಂಪನಿ ಬೋನಸ್ ಕೊಟ್ಟಿತಲ್ಲ, ಹೇಗೆ ಖರ್ಚು ಮಾಡುವವಳಿದ್ದಿ ಆ ಹಣವನ್ನು?’ ಅಂತ ಕೇಳಿದ. ‘ಪ್ರೋಬ್ಯಾಬ್ಲಿ.. ನನ್ನ ಮೂವತ್ತನೆಯ ಹುಟ್ಟುಹಬ್ಬದ ದಿನ ನಿಮಗೆಲ್ಲ ಪಾರ್ಟಿ ಕೊಟ್ಟು ಎಲ್ಲಾ ದುಡ್ದು ಖಾಲಿ ಮಾಡ್ತೇನೆ .. ವಾಟ್ ಡೂ ಯು ಸೇ ಎಲಿಯಟ್?’ ಎಂದು ಎಲಿಯಟ್ ಕಡೆ ತಿರುಗಿ ಕಣ್ಣು ಮಿಟುಕಿಸಿದೆ.
Thanks to thatskannada.com
6 comments:
ಪೂರ್ಣಿಮಾ ಮೇಡಂ,
ನಮ್ಮಲ್ಲಿ ಹೆಚ್ಚಿನವರ ಹುಟ್ಟಿದ ದಿನಾಂಕ ಬದಲಾಗಿದೆ. ಹೀಗಾಗಿ ಕೆಲವರಿಗೆ ವರ್ಷಕ್ಕೆ ಎರಡು ಹುಟ್ಟು ಹಬ್ಬಗಳಾದರೆ, ಇನ್ನೂ ಕೆಲವರಿಗೆ ನಿಮ್ಮಂತೆ ಮುಂಗಡ ಹುಟ್ಟು ಹಬ್ಬಗಳು. ಬರಹ ಚೆನ್ನಾಗಿದೆ. ಏನಾದರು ಆಗಲಿ ನನ್ನ ಕಡೆಯಿಂದಲೂ ನಿಮಗೆ ಮುಂಗಡ ಮೂವತ್ತನೇ ವರ್ಷದ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು :) .
ನನ್ನೂ 4ನೇ ವರ್ಷಕ್ಕೇ ಶಾಲೆಗೆ ಸೇರ್ಸಿದ್ದು! ಅಷ್ಟ್ ಶಣ್ಣಕಿರಕ್ಕರೇ ನಂಗೆ ಇಂಗ್ಲಿಷಲ್ಲೆಲ್ಲಾ ಎಲ್ಲರ ಹೆಸರು ಬರಿಯಕ್ಕೆ ಬರ್ತಿತ್ತು. ಮೇಷ್ಟ್ರು ನನ್ನ ಪಾಂಡಿತ್ಯ ನೋಡಿ ಬೆರಗಾಗಿ (!), ನಾಕ್ನೇ ವಯಸ್ಸಿಗೇ ಶಾಲೆಗೆ ಸೇರಿಸ್ಕ್ಯಂಡ (ತಮಗೆ ಹೆಲ್ಪ್ ಆಗ್ತು ಅಂತ್ಲೋ ಏನೋ!). ಆದ್ರೆ ಡೇಟಾಫ್ ಬರ್ತ್ ಒರಿಜಿನಲ್ಲೇ ಮೆನ್ಷನ್ ಮಾಡಿದ, ಅದು ಹೆಂಗೆ ಮ್ಯಾನೇಜ್ ಮಾಡಿದ್ವೇನ.
ಪೂರ್ಣಿಮಾ....
ನನ್ನಜ್ಜನ ಬಳಿ ಮಗ್ಗಿ ಪಾಠಕಲಿತದ್ದಕ್ಕೆ..
ಬುದ್ಧಿವಂತನಾಗಿ ಬಿಟ್ಟಿದ್ದೆ..
ಎರಡು ವರ್ಷ ಮೊದಲೇ ಸೇರಿಸಿ ಬಿಟ್ಟಿದ್ದರು...
ಆದರೆ ಇದರ ತೊಡಕು ನನಗೆ ಆಗಲಿಲ್ಲ...
ಸರ್ಕಾರಿ ಕೆಲಸದಲ್ಲಿ ಆಗುತ್ತಿತ್ತೇನೋ...
ಚಂದವಾದ.., ಸರಳ ಶೈಲಿ..
ತೆಳುವಾದ ಹಾಸ್ಯ..
ಖುಷಿಯಾಗುತ್ತದೆ...
ಹಾಯ್ ಪೂರ್ಣಿಮಾ
ಬರಹ ಚೆನ್ನಾಗಿದೆ. ಮೂವತ್ತನೆಯ ಹುಟ್ಟುಹಬ್ಬದ ಶುಭಾಶಯಗಳು (ಕಾನೂನು ಪ್ರಕಾರ)
ಏನೇ ಇರಲಿ ನಿಮಗೆ ಆಗಿರುವದು ೨೭ ಆಲ್ವಾ
ನಿಮ್ಮ ಕಚೇರಿ ಪ್ರಸಂಗ ಖುಷಿ ಕೊಟ್ತು
ಲಕ್ಶ್ಮಣ
ಪೂರ್ಣಿಮಾರವರೆ,
ತುಂಬಾ ಸೊಗಸಾದ ಬರಹ,
@ ರಾಜೇಶ್ ಮಂಜುನಾಥ್, ನೀವು ಹೇಳಿದ್ದು ನಿಜ. ಶುಭಾಶಯಕ್ಕೆ ವಂದನೆ :-)
@ ಸುಶ್, ನೀನೇ ಲಕಿ! ಬಂದಿದ್ದಕ್ಕೆ ಥ್ಯಾಂಕ್ಸ್!
@ ಪ್ರಕಾಶಣ್ಣ, ಅಲ್ಲಿದ್ದಾಗ ಇದು ಇಷ್ಟು ಸೀರಿಯಸ್ ಇಶ್ಯೂ ಹೇಳದು ಗೊತ್ತೇ ಇತ್ತಿಲ್ಲೆ ನೋಡು!
@ ಲಕ್ಷ್ಮಣ್, ಸಾಗರದಾಚೆಯ ಇಂಚರ - ನಿಮ್ ಖುಷಿನೇ ನನ್ ಖುಷಿ :-)
@ ವೈಶಾಲಿ, :-D :-D
Post a Comment