Showing posts with label ಕಥೆಯಲ್ಲದ್ದು. Show all posts
Showing posts with label ಕಥೆಯಲ್ಲದ್ದು. Show all posts

Thursday, 16 December 2010

ನಿನ್ನ ಕೊಂದು ನಾನೇನು ಪಡೆಯಲಿ?

ಸಂಜೆ ಆರರ ಹೊತ್ತಲ್ಲಿ ಮಾಡಲೇನೂ ಜಾಸ್ತಿ ಕೆಲಸವಿಲ್ಲದೇ ಜಗುಲಿಯ ಕಟ್ಟೆಯ ಮೇಲೆ ಕುಳಿತ ನರ್ಮದಾ ರಸ್ತೆಯಲ್ಲಿ ಮೆರವಣಿಗೆ ಹೊರಟಂತಿದ್ದ ದನದ ಹಿಂಡನ್ನು ನೋಡುತ್ತಿದ್ದಳು. ಇಂ ಗೋಧೂಳಿ ಮುಹೂರ್ತದಲ್ಲೇ ಅಲ್ಲವೇ ತಾನು ತಾಳಿ ಕಟ್ಟಿಸಿಕೊಂಡಿದ್ದು ಎಂಬ ಆಲೋಚನೆ ಸರಿದು ಹೋಯಿತು ನರ್ಮದೆಯ ಮನದಲ್ಲಿ. ಜೊತೆಗೊಂದು ಹೂನಗೆಯೂ. ಭಾದ್ರಪದದ ಮೋಡ ಆಕಾಶದಿಂದ ಪೂರ್ತಿ ಸರಿದಿರಲಿಲ್ಲ. ಮರುದಿನ ಇಲಿ ಪಂಚಮಿಯ ಗಣಹೋಮಕ್ಕೆ ಬೇಕಾದ್ದನ್ನೆಲ್ಲ ತಯಾರು ಮಾಡಿಟ್ಟು, ಸಂಜೆಯ ಗಣಪತಿ ಪೂಜೆಗೆ ಬೇಕಾದ ಆರತಿ ತಟ್ಟೆಗಳನ್ನೆಲ್ಲ ದೇವರೆದುರು ಜೋಡಿಸಿಟ್ಟ ನಂತರವೇ ನರ್ಮದೆಗೂ ತುಸು ಹೊತ್ತು ತಣ್ಣಗೆ ಕೂರೋಣ ಎನ್ನಿಸಿದ್ದು. ಬೆಳಗ್ಗೆಯಿಂದ ಒಬ್ಬರಲ್ಲ ಒಬ್ಬರು ಭಟ್ಟರ ಮನೆಯಲ್ಲಿ ಕೂಡ್ರಿಸಿದ ಗಣಪತಿಯನ್ನು ನೋಡಲು ಬರುತ್ತಿದ್ದರಿಂದ ನರ್ಮದೆಗೆ ಬಿಡುವು ಸಿಕ್ಕಿರಲಿಲ್ಲ.

ಕೊಟ್ಟಿಗೆಯಲ್ಲಿ ಆಗ ತಾನೇ ಮೇವು ಮುಗಿಸಿ ಬಂದ ದನ ಕರುಗಳನ್ನು ಕಟ್ಟುತ್ತಿದ್ದ ರಾಧಕ್ಕ ಒಂದೊಂದೇ ಹಸುಗಳ ಹೆಸರಿಡಿದು ಅವುಗಳ ಕಷ್ಟ ಸುಖ ವಿಚಾರಿಸುತ್ತಿದ್ದರು. ‘ಬೆಳ್ಳೀ ಹೊಟ್ಟೆ ತುಂಬ್ತ?, ಗೌರೀ ಕುಂಟ್ತಾ ಇದ್ಯಲಿ - ಕಾಲಿಗೆಂತಾ ಆತು?, ಗೌತಮಿ ಸೊಕ್ಕು ಮಾಡಡಾ, ಈ ಹೋರಿ ಬುಡ್ಡನ್ನ್ ಹಿಡಿಯದೇ ಕಷ್ಟ..’ ಎಂದೆಲ್ಲ ದೊಡ್ಡ ದನಿಯಲ್ಲಿ ಹಸುಗಳೊಟ್ಟಿಗೆ ಮಾತಾಡುತ್ತಾ ಇದ್ದ ಅತ್ತೆವ್ವ ‘ನರ್ಮದಾ - ಮಾಣಿ ಅಳ್ತಾ ಇದ್ದ’ ಎಂದಾಗಲೇ ನರ್ಮದೆಗೆ ಒಳ ಜಗುಲಿಗೆ ಮಲಗಿಸಿದ್ದ ಮಗನ ನೆನಪಾದದ್ದು.

*******
ಮೂರು ತಿಂಗಳಿಗೆಲ್ಲ ಅಮ್ಮನ ಮನೆಯಲ್ಲಿ ಬಾಣಂತನ ಮುಗಿಸಿ ಗುಂಡಿಗದ್ದೆಗೆ ನರ್ಮದೆ ಬಂದಿದ್ದೇ ಗಣೇಶ ಚೌತಿ ಹತ್ತಿರ ಬಂತೆಂಬ ಕಾರಣದಿಂದ. ಗುಂಡಿಗದ್ದೆಯಲ್ಲಿ ಅದ್ದೂರಿಯ ಚೌತಿ. ಆಳೆತ್ತರದ ಗಣಪತಿ ಕೂಡ್ರಿಸಿ, ಇಲಿ ಪಂಚಮಿಯಂದು ಗಣಹೋಮ ಮಾಡಿ ಹತ್ತಿರ ಹತ್ತಿರ ನೂರರಷ್ಟು ಜನರಿಗೆ ಊಟ ಹಾಕಿ, ಸಂಜೆ ಪಟಾಕಿ ಸುಟ್ಟು ಸಂಜೆ ಏಳರ ಸುಮಾರಿಗೆ ಊರಿನ ಕೆರೆಯಲ್ಲಿ ಗಣೇಶನನ್ನು ಮುಳುಗಿಸಿ ಬರುವುದು ಗಣಪತಿ ಭಟ್ಟರು ಸಣ್ಣವರಿದ್ದಾಗಿನಿಂದ ನಡೆದುಕೊಂಡ ಬಂದ ಪದ್ಧತಿ. ಗಣಪತಿ ಭಟ್ಟರ ಹೆಂಡತಿ ರಾಧಕ್ಕ ಮೊದಲೆಲ್ಲ ಒಬ್ಬರೇ - ಇಬ್ಬರ ಕೆಲಸವನ್ನು ಹೊತ್ತು ಕೊಂಡು ಮಾಡುತ್ತಿದ್ದರೂ ಈಗೀಗ ಸ್ವಲ್ಪ ಸುಸ್ತು ಎನ್ನುತ್ತಾರೆ. ಅದಕ್ಕಾಗಿಯೇ ಸೊಸೆ ನರ್ಮದೆಯನ್ನು ಒಂದು ಎಂಟು ದಿನ ಮೊದಲೇ ಕಳಿಸಿಕೊಡಿ ಎಂದು ಬೀಗರಲ್ಲಿ ಕೇಳಿಕೊಂಡಿದ್ದು. ನರ್ಮದೆಗೆ ಗುಂಡಿಗದ್ದೆಯಲ್ಲಿ ಇದು ಮೊದಲ ಚೌತಿ. ಕಳೆದ ವರ್ಷವೇ ಮದುವೆಯಾದರೂ ಹೊಸ ಹಬ್ಬದ ನೆವದಲ್ಲಿ ಹೋದ ಚೌತಿಯನ್ನು ತವರಲ್ಲೇ ಕಳೆದಿದ್ದಳು ನರ್ಮದೆ.

ಗಣಪತಿ ಭಟ್ಟರ ಮನೆಗೆ ಬಂದು ಹೋಗುವವರು ಜಾಸ್ತಿ. ಭಟ್ಟರು ತಮಗೆ ಕೊರತೆಯಾದರೂ ಬಂದವರು ಸುಖವಾಗಿ ಉಂಡುಟ್ಟು ಹೋಗಬೇಕೆಂಬ ಅಭಿಪ್ರಾಯದವರು. ನಾಲ್ಕೆಕರೆ ಅಡಿಕೆ ತೋಟ, ಹತ್ತೆಕರೆ ಭತ್ತದ ಗದ್ದೆ ಬೇರೆ ಇರುವುದರಿಂದ ಸದಾ ಕೆಲಸಕ್ಕೆ ಬರುವವರು ಬೇರೆ. ರಾಧಕ್ಕನಿಗೆ ಐವತ್ತು ವರ್ಷವಾಗುವವರೆಗೂ ಇದ್ದ ಉತ್ಸಾಹ ನಿಧಾನಕ್ಕೆ ಬತ್ತತೊಡಗಿದ್ದೇ ಮಗ ಅನಂತ ಭಟ್ಟನಿಗೆ ಜಾತಕ ನೋಡಿ ನರ್ಮದೆಯನ್ನು ಮನೆ ತುಂಬಿಸಿಕೊಂಡರು. ನರ್ಮದೆಯೂ ಮನೆ ಸೇರಿದ ಒಂದು ತಿಂಗಳಿನಲ್ಲೇ ಅತ್ತೆ ಮಾವನಿಂದ ಸೈ ಎನ್ನಿಸಿಕೊಂಡಿದ್ದಳು.

ಅನಂತ ಭಟ್ಟರನ್ನು ಮದುವೆಯಾಗಿ ಗುಂಡಿಗದ್ದೆಗೆ ಬಂದ ಮರು ವರ್ಷ ಬಸಿರ ಹೊತ್ತ ನರ್ಮದಾ ತವರಿಗೆ ಹೋಗಿದ್ದಳು. ಮೃದು ಸ್ವಭಾವದ, ತಣ್ಣಗೆ - ನರ್ಮದಾ ನದಿಯಂತೆಯೇ ಇದ್ದ, ಯಾರಿಗೂ ಎದುರಾಡದ, ಗಂಡನಿಗೂ ಅಕ್ಕರೆ ಉಕ್ಕಿ ಬರುವಂತ ಗುಣ ಹೊತ್ತ ನರ್ಮದೆ ಗುಂಡಿಗದ್ದೆ ಭಟ್ಟರ ಸಂಸಾರಕ್ಕೆ ಮೆಚ್ಚಾಗಿದ್ದಳು. ರಾಧಕ್ಕ ಕೆಲಸದಲ್ಲಿ ಅಚ್ಚುಕಟ್ಟು. ಎಲ್ಲೆಲ್ಲಿಯೂ ಕೊಂಕು ತೆಗೆಯಲಾಗದಂತೆ ಕೆಲಸ ಮಾಡಿ ಮುಗಿಸುತ್ತಿದ್ದ ಅತ್ತೆವ್ವ ಸೊಸೆಗೆ ಮನೆಗೆಲಸದ ತಂತ್ರವನ್ನು ಸಾಕಷ್ಟು ಹೇಳಿ ಕೊಟ್ಟಿದ್ದರು. ಸೊಸೆಯಾದರೂ ಹಾಳು- ಧೂಳು ಮಾಡದೇ ಅತ್ತೆವ್ವನನ್ನು ಅನುಸರಿಸಿಕೊಂಡು ಹೋಗುತ್ತಿದ್ದುದು.

ಇದ್ದೊಬ್ಬ ಮಗಳನ್ನು ಇಪ್ಪತ್ತು ತುಂಬುವ ಮೊದಲೇ ಮೆಣ್ಸೆ ಸೀಮೆಯ ದೊಡ್ಡ ಮನೆತನಕ್ಕೆ ಮದುವೆ ಮಾಡಿಕೊಟ್ಟದ್ದರು ಗಣಪತಿ ಭಟ್ಟರು. ಎರಡನೇ ಮಗ ದೂರದ ಸೂರತ್‌ನಲ್ಲಿ ನೌಕರಿಯಲ್ಲಿದ್ದ. ದೊಡ್ಡ ಜಮೀನು, ವ್ಯವಹಾರ ನೋಡಿಕೊಂಡು ಹೋಗಲು ಇರಲೇ ಬೇಕಾದ ಗತ್ತು, ಗೈರತ್ತು ಗಣಪತಿ ಭಟ್ಟರಿಗಿದ್ದರೂ ಸೊಸೆಯ ಮೇಲೆ ವಾತ್ಸಲ್ಯವೇ. ಮಗ ಅನಂತನಿಗೆ ಅಪ್ಪನ ಸಿಟ್ಟು - ಹಠ ರಕ್ತಗತವಾಗಿ ಬಂದಿತ್ತು. ಇಬ್ಬರ ಕೋಪ- ತಾಪ, ಹಠದ ಸ್ವಭಾವದ ನಡುವೆಯೂ ಎಲ್ಲ ಮೆಚ್ಚುವಂತೆ ಸಂಸಾರ ತೂಗಿಸಿಕೊಂಡು ಹೋಗುವ ಜಾಣ್ಮೆಯ ಪಾಠ ಕೂಡ ಅತ್ತೆವ್ವನಿಂದ ಸೊಸೆಗೆ ನಡೆಯುತ್ತಿತ್ತು. ಜೊತೆಗೆ ಹಿತ ಮಿತ ಮಾತಿನ ಸೊಸೆ ಸಿಕ್ಕಿದ್ದು ಮಗನ ಪುಣ್ಯ ಎಂಬ ಸಮಾಧಾನ ಬೇರೆ.
ಅನಂತನ ಕೋಪ, ಹಠ ಗುಂಡಿಗದ್ದೆಯಲ್ಲಿ ಮನೆ ಮಾತಾದ ಘಟನೆಯ ಬಗ್ಗೆ ರಾಧಕ್ಕ ನರ್ಮದೆಯ ಹತ್ತಿರ ಏನಿಲ್ಲವೆಂದರೂ ಐದಾರು ಬಾರಿ ಹೇಳಿದ್ದರು. ಆ ಘಟನೆ ನಡೆದಾಗ ಅನಂತ ಭಟ್ಟನಿಗೆ ಇನ್ನೂ ಇಪ್ಪತೈದು ತುಂಬಿರಲಿಲ್ಲ. ಅದು ಆಲೆಮನೆಯ ಸಮಯ. ಅಪ್ಪ ಮಗ ಇಬ್ಬರೂ ವಾರಗಟ್ಟಲೇ ಆಲೆಮನೆಗೆ ಬೇಕಾದ ತಯಾರಿ ನಡೆಸುತ್ತಿದ್ದರು. ಆಲೇ ಒಲೆಗೆ ಬೇಕಾದ ಒಣಗಿದ ಮರದ ಕುಂಟೆ ಕಡಿಯುವ ಕೆಲಸ, ಕಬ್ಬಿನ ಹಾಲು ಹಿಡಿಯಲು ಬೇಕಾದ ದೊಡ್ಡ ದಳ್ಳೆ, ಬೆಲ್ಲ ಕಾಯಿಸಲು ಬೇಕಾದ ಕೊಪ್ಪರಿಗೆ ಆದಿಯಾಗಿ ತಯಾರು ಮಾಡಿಡುವ ಕೆಲಸ, ಕಬ್ಬನ್ನು ಹಿಂಡಿ ರಸ ತೆಗೆಯುವ ಕಬ್ಬಿನ ಕಣೆಯ ರಿಪೇರಿ - ಎಂಟು ದಿನದ ಆಲೆಮನೆಗೆ ಎಷ್ಟೆಲ್ಲ ತಯಾರಿ!
ಇನ್ನೇನು ಆಲೆಮನೆಗೆ ಎರಡು ದಿನ ಇದೆ ಎನ್ನಬೇಕಾದರೆ ರಾತ್ರಿ ಊಟವಾಗಿ ಎಲೆ ಅಡಿಕೆ ಹಾಕಿ ಕೂತ ಗಣಪತಿ ಭಟ್ಟರು ನಾಳೆ ಆಲೆ ಒಲೆಗೆ ಬೇಕಾದ ಮರದ ಕುಂಟೆಗಳನ್ನು ತಯಾರು ಮಾಡಲೇ ಬೇಕು. ನಾಡಿದ್ದು ಬೆಳಗಾದರೆ ಕಬ್ಬು ಕಡಿಯಲು ಬರುತ್ತಾರೆ. ಇನ್ನೂ ಬೆಲ್ಲ ಕಾಯಿಸಲು ಕುಂಟೆ ತಯಾರಾಗಿಲ್ಲ ಅಂದರೆ ಹೇಗೆ - ನಾಳೆ ಬೆಳಗ್ಗೆ ಮೊದಲನೇ ಕೆಲಸವೆ ಅದು ಎಂದು ಮಗ ಅನಂತನಿಗೆ ಸೂಚನೆ ಕೊಟ್ಟರು. ಜಗುಲಿಯ ಇನ್ನೊಂದು ಮೂಲೆಯಲ್ಲಿ ಸೈಕಲ್ ಒರೆಸುತ್ತ ಕೂತ ಮಗ ‘ಹ್ಮ್’ ಎಂದು ತಲೆ ಆಡಿಸಿದ. ಅಷ್ಟಕ್ಕೇ ಸುಮ್ಮನಾಗದ ಭಟ್ಟರು ‘ಮೂರು ದಿನದಿಂದ ಹೇಳ್ತಾನೇ ಇದ್ದಿ - ಹೂಂ, ಆತು ಮಾಡನ ಹೇಳ್ತೆ. ಇನ್ನೂ ಕುಂಟೆ ಮಾತ್ರ ತಯಾರಾಜಿಲ್ಲೆ. ಚೂರೂ ಜವಾಬ್ದಾರಿ ಇಲ್ಲೆ. ಕೆಲಸ ಯಾವಾಗ ಕಲಿಯದು ನೀನು?’ ಎಂದು ಕಣ್ಣು ಕೆಂಪು ಮಾಡಿದರು. ಅನಂತ ಭಟ್ಟ ಕೈಯಲ್ಲಿನ ಸೈಕಲ್ ಒರೆಸುವ ಬಟ್ಟೆಯನ್ನು ನೆಲಕ್ಕೆ ಅಪ್ಪಳಿಸಿದವನೇ ಪಕ್ಕದ ಕೊಟ್ಟಿಗೆ ಕಡೆ ಹೊರಟ. ಗಣಪತಿ ಭಟ್ಟರು ‘ಮೂಗಿನ್ ತುದಿಯ ಸಿಟ್ಟಿಗೇನೂ ಕಮ್ಮಿ ಇಲ್ಲೆ - ನಾಳೆ ಬೆಳಗಾಗೆದ್ದು ಮೂರು ದೋಸೆ ತಿಂದ್ರೆ ಸಿಟ್ಟು ಇಳೀತು’ ಎಂದು ಗೊಣಗುತ್ತಾ ಒಳ ಜಗುಲಿಗೆ ಬಂದು ಮಂಚದ ಮೇಲೆ ಅಡ್ಡಾದರು. ಇಡೀ ದಿನ ಮನೆಗೆಲಸ ಮಾಡಿ ದಣಿದಿದ್ದ ರಾಧಕ್ಕನಿಗೆ ಆಗಲೇ ಅಪರಾತ್ರಿ.

ಇತ್ತ ಅನಂತ ಕೊಟ್ಟಿಗೆ ಅಟ್ಟದಿಂದ ದೊಡ್ಡದೊಂದು ಕೊಡಲಿ ಎಳೆದುಕೊಂಡ ಕೂಡುದಾರಿಯ ಅಪ್ಪೆ ಮರ ಹಾದು ಕೆಳಗಿನ ಗದ್ದೆಯ ದಾರಿ ಹಿಡಿದ. ಅಪ್ಪಯ್ಯ ಹೇಳಿದ ‘ಚೂರೂ ಜವಾಬ್ದಾರಿ ಇಲ್ಲೆ’ ಮಾತೇ ಕಿವಿಯಲ್ಲಿ ಗುಂಯ್‌ಗುಡುತ್ತಿತ್ತು. ಕಬ್ಬಿನ ಗದ್ದೆ ಹಾಳಿಯನ್ನು ದಾಟಿ, ಹೊಸತೋಟದ ತಲೆ ಏರಿಯ ಮೇಲಿದ್ದ ಬೆಟ್ಟಕ್ಕೆ ಬಂದ. ಎರಡು ದಿನ ಮೊದಲೇ ನೋಡಿಟ್ಟಿದ್ದ ಒಣಗಿ ಬಿದ್ದ ಮರದ ಮೇಲೆ ಒಂದೆರಡು ನಿಮಿಷ ಕೂತ. ಲುಂಗಿಯನ್ನು ಎತ್ತಿ ಕಟ್ಟಿದವನೇ ಕುಂಟೆ ಒಡೆಯತೊಡಗಿದ. ಭೂತ ಮೈಹೊಕ್ಕಂತೆ ಉಸಿರು ಕೂಡಾ ತಿರುಗಿಸಿಕೊಳ್ಳದೆ ಸತತ ನಾಲ್ಕೈದು ತಾಸು ಕೊಡಲಿ ಎತ್ತಿ ಎತ್ತಿ ಹೊಡೆದ. ಒಣಗಿದ ಮರದಿಂದ ಮರಕ್ಕೆ ಸಾಗುತ್ತ ಕೈ ರಟ್ಟೆಯನ್ನು ದುಡಿಸಿದ. ಈಗ ಸಿಟ್ಟಿನ ಜಾಗದಲ್ಲಿ ಅಪ್ಪಯ್ಯನಿಂದ ಸೈ ಎನ್ನಿಸಿಕೊಳ್ಳಬೇಕೆಂಬ ಛಲ ಬಂದಿತ್ತು. ಬೆಳಗಿನ ಜಾವ ಮೂರರ ಹೊತ್ತಲ್ಲಿ ಮನೆಯ ಪಕ್ಕದ ಕೊಟ್ಟಿಗೆಯಲ್ಲಿನ ಎತ್ತುಗಳನ್ನು ಚಕ್ಕಡಿಗೆ ಹೂಡಿ ಸಾಗಿದ್ದು ಹೊಸತೋಟದ ತಲೆಯಂಚಿನ ಬೆಟ್ಟಕ್ಕೇ. ಒಡೆದು ಬೇರೆ ಮಾಡಿಟ್ಟ ಮರದ ಕುಂಟೆ, ಚಕ್ಕೆ, ಹೊಳಬುಗಳನ್ನೆಲ್ಲ ಗಾಡಿಗೆ ತುಂಬಿ, ಆಲೆ ಮನೆಗೆಂದು ಮಾಡಿದ ಚಪ್ಪರದ ಪಕ್ಕ ತಂದು ಎತ್ತುಗಳ ನೊಗ ಇಳಿಸಿದ. ಚಕ್ಕಡಿಯಲ್ಲಿದ್ದ ಮರದ ಕುಂಟೆಗಳನ್ನು ಸಾಲಾಗಿ ಜೋಡಿಸಿಟ್ಟ. ಗಾಡಿಯನ್ನು ಅಲ್ಲೇ ಬಿಟ್ಟು ಎತ್ತುಗಳನ್ನು ಕೊಟ್ಟಿಗೆಗೆ ತಂದು ಕಟ್ಟಿ ಅವುಗಳ ಮುಂದಷ್ಟು ಹುಲ್ಲು ಹರಡಿ, ನಂತರ ಭರ್ತಿ ಎರಡು ಲೋಟ ನೀರು ಕುಡಿದು ಮೆತ್ತಿ ಹತ್ತಿ ಮಲಗಿದ್ದೊಂದೇ ಗೊತ್ತು.

ಮಾರನೆಯ ಬೆಳಗ್ಗೆ ಎದ್ದ ಗಣಪತಿ ಭಟ್ಟರು ದೇವರ ಪೂಜೆ ಮುಗಿಸಿ ತಿಂಡಿ ತಿಂದರೂ ಅನಂತ ಎದ್ದು ಬರಲಿಲ್ಲ. ರಾಧಕ್ಕ ಎರಡು ಬಾರಿ ‘ಮಾಣೀ, ಮಾಣೀ’ ಎಂದು ಕೂಗಿ ಸುಮ್ಮನಾಗಿದ್ದರು. ದೋಸೆ ತಿಂದಾದ ಗಣಪತಿ ಭಟ್ಟರು ‘ಮಾಣಿಗೆ ರಾತ್ರಿಯ ಸಿಟ್ಟು ಇಳದ್ದಿಲ್ಲೆ, ಅದ್ಕೇ ಮುಸ್ಕು ಹೊದ್ದು ಮಲಗಿಕ್ಕು’ ಎಂದು ಗೊಣಗಿದವರೇ ಹೆಗಲೆ ಮೇಲೊಂದು ಟುವಾಲು ಹಾಕಿ ಗದ್ದೆಯ ಕಡೆ ಹೊರಟರು. ಪಂಪಿನ ಮನೆಗೆ ತಾಗಿಕೊಂಡಂತೇ ತಯಾರು ಮಾಡಿದ ಆಲೆಮನೆ ಚಪ್ಪರದ ಕಡೆಯೇ ಭಟ್ಟರ ಕಣ್ಣು ಹೋದದ್ದು. ಸಾಲಾಗಿ ಪೇರಿಸಿಟ್ಟ ಮರದ ಕುಂಟೆ, ಚಕ್ಕೆಗಳನ್ನು ನೋಡಿದ ಭಟ್ಟರಿಗೆ ಒಂದು ಕ್ಷಣ ಏನೂ ಬಗೆಹರಿದಂತಾಗಲಿಲ್ಲ. ಹತ್ತಿರ ಹೋಗಿ ನೋಡಿದಾಗಲೇ ಗೊತ್ತಾಗಿದ್ದು ಇದು ಮಗನ ಕಿತಾಪತಿ ಎಂದು. ‘ಎಲಾ ಇವನ’ ಎಂದವರೇ ತೋಟ - ಗದ್ದೆಯನ್ನು ಒಂದು ಸುತ್ತು ಹಾಕಿ ಹತ್ತರ ಹೊತ್ತಿಗೆ ಮನೆ ಕಡೆ ನಡೆದರು. ಅನಂತ ಆಗಷ್ಟೇ ತಿಂಡಿ ತಿಂದು ಮುಗಿಸಿ ಜಗುಲಿಯಲ್ಲಿ ರೇಡಿಯೋ ಕೇಳುತ್ತ ಕೂತಿದ್ದ. ಧಡಧಡನೇ ಒಳ ನಡೆದ ಗಣಪತಿ ಭಟ್ಟರು ‘ರಾಧೇ’ ಎಂದು ಕರೆದು ಮುಗಿಸುವ ಮೊದಲೇ ಮಗ ತಿಂಡಿ ತಿನ್ನುತ್ತ ಹೇಳಿದ್ದನ್ನೆಲ್ಲ ಸವಿಸ್ತಾರವಾಗಿ ಭಟ್ಟರಿಗೆ ವರದಿ ಒಪ್ಪಿಸಿದರು ರಾಧಕ್ಕ. ಜತೆಗೇ ‘ಮಾಣಿ ಹುಂಬ ಹೇಳಿ ಗೊತ್ತಿದ್ದೂ ನೀವು ಅವಂಗೆ ಎಂತಾರೂ ಹೇಳಿದ್ದು ಸಾಕು’ ಎನ್ನುತ್ತ ಮಗನ ಪರ ವಾದವನ್ನು ಮಂಡಿಸಿದ್ದೂ ಅಲ್ಲದೇ ಗಣಪತಿ ಭಟ್ಟರ ಪಾರ್ಟಿಗೆ ತಾವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು. ಭಟ್ಟರಿಗೆ ರಾತ್ರಿಯಿಡೀ ಕೆಲಸ ಮಾಡಿ ದಣಿದ ಮಗನನ್ನು ಕಂಡು ವಾತ್ಸಲ್ಯ ಉಕ್ಕಿದ್ದರೂ ಮಗನೆದುರು ತೋರಿಸಿಕೊಳ್ಳಲಿಲ್ಲ. ಆದರೆ ಮುಂದಿನ ಎಂಟು ದಿನ ನಡೆದ ಆಲೆ ಮನೆಗೆ ಬಂದವರ ಎದುರು ‘ಯಮ್ಮನೆ ಅನಂತ ಯನ್ ಹತ್ರ ಜಿದ್ದಿಗೆ ಬಿದ್ದು ರಾತ್ರಿ ಬೆಳಗಾಗದ್ರೊಳಗೆ ಒಬ್ಬನೇ ಅಷ್ಟೂ ಕುಂಟೆ ಮಾಡಿದ್ದ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಮಾತ್ರ ಮರೆಯಲಿಲ್ಲ.
***
ಗಣೇಶ ಚೌತಿಯ ರಾತ್ರಿ ಇದ್ದ ಕೆಲವೇ ಕೆಲವು ನೆಂಟರಿಗೆ ಬಡಿಸಿ, ತಾವೂ ಉಂಡು ಮಲಗಿದ ರಾಧಕ್ಕನಿಗೆ ಮರುದಿನದ ಗಣಹೋಮದ ಹಾಗೂ ಸಂಜೆ ಗಣಪತಿಯನ್ನು ವಿಸರ್ಜಿಸಿ ಬಂದ ಮೇಲೆ ಮಾಡಬೇಕಾದ ಸಂತರ್ಪಣೆಯ ಬಗ್ಗೆಯೇ ಚಿಂತೆ. ಮರುದಿನ ಮಧ್ಯಾನ್ನಕ್ಕೆ ಒಂದು ಐವತ್ತು ಜನ, ಸಂಜೆ ಗಣಪತಿ ಮೂರ್ತಿಯನ್ನು ಹತ್ತಿರದ ಕೆರೆಗೆ ಮುಳುಗಿಸಿ ಬಂದಮೇಲೆ ಊಟಕ್ಕೆ ಒಂದು ಐವತ್ತು - ಅರವತ್ತು ಜನ ಎಂದು ಲೆಕ್ಕ ಹಾಕುತ್ತಿತ್ತು ರಾಧಕ್ಕನ ಒಳ ಮನಸ್ಸು. ಮಧ್ಯಾನ್ನಕ್ಕಂತೂ ತೊಂದರೆ ಇಲ್ಲ. ಬೆಂಡೆಗದ್ದೆ ಖಾನಾವಳಿಯ ಅಡುಗೆ ಭಟ್ಟರು ಬರುತ್ತಿದ್ದಾರೆ. ಸಂಜೆಗೆ ಮಾತ್ರ ತಾವೇ ಅತ್ತೆ - ಸೊಸೆ ಎಲ್ಲ ಮಾಡಿಕೊಳ್ಳಬೇಕು. ನರ್ಮದೆ ಪಾಯಸ, ಚಿತ್ರಾನ್ನ ಮಾಡಿದರೆ ತಾನು ಉಳಿದೆಲ್ಲ ಮಾಡಿಯೇನು ಎಂದು ಗುಣಾಕಾರ - ಭಾಗಾಕಾರ ಹಾಕಿದ ಮೇಲೆಯೇ ರಾಧಕ್ಕ ಸಮಾಧಾನದಿಂದ ಮಲಗಿದ್ದು.

***

ಮರು ಮಧ್ಯಾನ್ನ ಗಣಹೋಮ, ಅನ್ನ ಸಂತರ್ಪಣೆ ಎಲ್ಲ ಸಾಂಗವಾಗಿ ನಡೆಯಿತು. ಕತ್ತಲಾಗುವ ಮುಂಚೆ ಗಣಪತಿ ಮೂರ್ತಿಯನ್ನು ಊರೊಟ್ಟಿನ ಕೆರೆಯಲ್ಲಿ ಮುಳುಗಿಸಿ ಬಿಡೋಣ ಎಂದ ಗಣಪತಿ ಭಟ್ಟರ ಮಾತಿಗೆ ಅನಂತನೂ ತಲೆಯಾಡಿಸಿದ. ಆ ಬಾರಿ ಭಟ್ಟರ ಮನೆಯ ಗಣಪತಿ ವಿಸರ್ಜನೆಗೆ ಬಂದ ಜನ ತುಸು ಜಾಸ್ತಿಯೇ. ಗುಂಡಿಗದ್ದೆ ಊರಿನ ಗಂಡಸರು, ರಾಧಕ್ಕ - ಗಣಪತಿ ಭಟ್ಟರ ಸಂಬಂಧಿಕರು ಎಲ್ಲರನ್ನೂ ಸೇರಿಸಿ ಹತ್ತಿರ ಹತ್ತಿರ ಎಪ್ಪತ್ತಕ್ಕೂ ಜಾಸ್ತಿ ಜನರಿದ್ದರು. ನರ್ಮದೆಯ ತವರಿಂದ ಅಪ್ಪ - ಅಮ್ಮ, ತಮ್ಮ ಎಲ್ಲ ಬಂದಿದ್ದರು.

ಹೊರಗೆ ಅಂಗಳದಲ್ಲಿ ವಿಸರ್ಜನಾ ಪೀಠದ ಮೇಲೆ ಅಲಂಕೃತ ಗಣಪ ಹಸನ್ಮುಖನಾಗಿ ಕಾಣುತ್ತಿದ್ದ. ಬೆಳಗಿನಿಂದ ಜಿರಿಜಿರಿ ಸುರಿಯುತ್ತಿದ್ದ ಭಾದ್ರಪದದ ಮಳೆ ಗಣೇಶ ವಿಸರ್ಜನೆಗಾಗಿಯೇ ಬಿಡುವು ನೀಡಿದಂತಿತ್ತು. ಅನಂತ ಒಳಗಿನಿಂದ ಗರಿಗರಿಯಾಗಿ ಒಣಗಿಸಿಟ್ಟ ಪಟಾಕಿಯನ್ನು ಹೊರತಂದ. ಮಕ್ಕಳನ್ನಂತೂ ಹಿಡಿಯುವವರೇ ಇಲ್ಲ. ಮದ್ದಿನ ಪಟಾಕಿ ಸದ್ದಿಗೆ ಕಿಟಾರನೆ ಕಿರುಚಿಕೊಂಡ ಮೂರು ತಿಂಗಳ ಶಿಶುವನ್ನು ಸಮಾಧಾನಿಸುತ್ತಲೇ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಳು ನರ್ಮದ. ಪಟಾಕಿಯೆಲ್ಲ ಮುಗಿದ ಮೇಲೆ ‘ಗಣಪತಿ ಬಪ್ಪ ಮೋರಯಾ’ ಎಂದು ಮೊರೆಯುತ್ತ ಗಂಡಸರ ಗುಂಪು ಗಣೇಶ ವಿಗ್ರಹವನ್ನು ಊರ ಕೆರೆಯತ್ತ ಸಾಗಿತು. ಪುಟಾಣಿ ಮಗುವನ್ನು ಜೋಪಾನವಾಗಿ ಎತ್ತಿಕೊಂಡ ನರ್ಮದೆಯೂ ಅತ್ತೆವ್ವನೊಂದಿಗೆ ಹೆಜ್ಜೆ ಹಾಕಿದಳು. ಕೆರೆಯ ದಡದಲ್ಲಿ ಗಣಪತಿ ಮೂರ್ತಿಯನ್ನು ಕೂಡ್ರಿಸಿ, ವೀಳ್ಯದೆಲೆಯ ಆರತಿ ಎತ್ತಿ ಊರಿನವರ ಸಹಾಯದಿಂದ ಅನಂತ ಭಟ್ಟ ಗಣಪತಿಯನ್ನು ವಿಸರ್ಜಿಸಿದ.

ಗಣಪಗೆ ಇನ್ನೊಂದಷ್ಟು ಜಯಕಾರ ಹಾಕಿದ ಎಲ್ಲರೂ ಭಟ್ಟರ ಮನೆಯತ್ತ ಹೆಜ್ಜೆ ಹಾಕಿದರು. ಎಲ್ಲರಿಗಿಂತ ತುಸು ಮುಂದೆ ಬಂದ ನರ್ಮದೆ, ರಾಧಕ್ಕ ಸಂಜೆಯ ಊಟದ ಸಂತರ್ಪಣೆಯ ತಯಾರಿಯಲ್ಲಿ ತೊಡಗಿದರು. ಕೈಕೂಸನ್ನು ತಾಯಿಗೆ ವರ್ಗಾಯಿಸಿ ನರ್ಮದೆ ನೂರ್ಮಡಿ ಉತ್ಸಾಹದಿಂದ ವಿಶಾಲ ಜಗುಲಿಯ ಮೇಲೆ ಐವತ್ತು ಬಾಳೆ ಎಲೆಗಳನ್ನು ಅಣಿಮಾಡಿದಳು. ಮೊದಲೇ ಅಡುಗೆಯೆಲ್ಲ ತಯಾರಾದ್ದರಿಂದ ರಾಧಕ್ಕ ಎಲ್ಲರನ್ನೂ ಊಟಕ್ಕೇಳಿಸಿದರು. ಸೊಸೆ ಮಾಡಿದ ಪಾಯಸ ಇಷ್ಟೊಂದು ಜನರಿಗೆ ಬಡಿಸಲು ತುಸು ಕಮ್ಮಿಯಾಗಬಹುದು ಎಂದು ಎಣಿಸಿದ ರಾಧಕ್ಕ ‘ಇನ್ನೊಂದಷ್ಟು ಹಾಲು, ಸಕ್ಕರೆ ಹಾಕಿ ಪಾಯಸವನ್ನು ಒದಗಾಗಿ ಮಾಡ್‌ಬಿಡು’ ಎಂದು ನರ್ಮದೆಗೆ ಸೂಚನೆ ಕೊಡಲು ಮರೆಯಲಿಲ್ಲ.

ಪಂಕ್ತಿಯಲ್ಲಿ ಕೂತ ಸಂಬಂಧಿಕರು, ಗುಂಡಿಗದ್ದೆ ಊರವರು ಲೋಕಾಭಿರಾಮವಾಗಿ ಹರಟುತ್ತ ರುಚಿ ರುಚಿ ಅಡುಗೆಯನ್ನು ಹೊಗಳುತ್ತ ಊಟ ಮಾಡುತ್ತಿದ್ದರಿಂದ ಸಂತರ್ಪಣೆ ರಂಗೇರಿತ್ತು. ರಾಧಕ್ಕ ಪಾಯಸದ ಪಾತ್ರೆ ಹಿಡಿದು ಬಡಿಸಲು ಬಂದವರು ಗುಂಡಿಗದ್ದೆಯವರೇ ಆದ ಪರಮಯ್ಯನ ಎದುರು ನಿಂತು ‘ಪರಮಯ್ಯ ದಾಕ್ಷಿಣ್ಯ ಬೇಡ. ಇನ್ನೊಂದು ಸ್ವಲ್ಪ ಪಾಯಸ ಹಾಕ್ತಿ. ಯಮ್ಮನೆ ನರ್ಮದಾನೇ ಮಾಡಿದ್ದು ಪಾಯಸಾನ ಇವತ್ತು’ ಎಂದು ಒತ್ತಾಯಿಸ ತೊಡಗಿದರು. ತಕ್ಷಣ ಪರಮಯ್ಯ ‘ಎಂತಾ ಅಂದೇ? ನರ್ಮದಾ ಮಾಡಿದ್ದ ಪಾಯಸವ? ಈಗಿಂದೀಗ್ಲೇ ಎದ್ದಿ ಆನು ಪಂಕ್ತಿ ಬಿಟ್ಟು’ ಎಂದವರೇ ಆಪೋಷಣ ತೆಗೆದುಕೊಂಡು ಎದ್ದೇಬಿಟ್ಟರು ಪಂಕ್ತಿಯಿಂದ. ರಾಧಕ್ಕನ ಹಿಂದೆ ತುಪ್ಪ ಬಡಿಸಿಕೊಂಡು ಬರುತ್ತಿದ್ದ ನರ್ಮದೆ ಒಮ್ಮೆಲೇ ಬಿಳಿಚಿಕೊಂಡಳು. ತಕ್ಷಣ ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಪ್ರಯತ್ನಿಸಿದ ರಾಧಕ್ಕ ಪಂಕ್ತಿಯ ಮಧ್ಯೆ ನಿಂತ ಪರಮಯ್ಯನನ್ನು ನೋಡಿ ‘ಅರೇ, ಎಂತಾ ಆಗೋತ ನಿಂಗೆ? ನರ್ಮದಾ ಮಾಡಿದ್ದು ಪಾಯಸ ಅಂದಿ - ಅದ್ರಲ್ಲಿ ಎಂತಾ ತಪ್ಪು? ಇದೆಂತಾ ಮಳ್ಳು ವೇಶ ನಿಂದು? ಎಂತಕ್ಕೆ ಎದ್ದುಬಿಟ್ಟೆ?’ ಎಂದರು. ಕೋಪದಲ್ಲೋ, ಭಯದಲ್ಲೋ ಗಡಗಡನೆ ನಡುಗುತ್ತ ನಿಂತ ಪರಮಯ್ಯ ನಡುಗುವ ದನಿಯಲ್ಲೇ ‘ರಾಧಕ್ಕ, ನಿನ್ನ ಸೊಸೆ ಯಾವ್ ಮನೆತನದಿಂದ ಬಂದಿದ್ದು ಹೇಳಿ ಎಲ್ಲರಿಗೂ ಗೊತ್ತಿದ್ದು. ನಿನ್ನ ಸೊಸೆ ಅಪ್ಪನ ಮನೆಯವ್ವು ವಿಷ ಹಾಕ ಮನೆತನ ಹೇಳೇ ಹೆಸರು ಮಾಡಿದ್ದ. ನರ್ಮದಾ ಮಾಡಿದ್ ಪಾಯಸ ಹೇಳ್ತೆ. ಅದು ಪಾಯಸಕ್ಕೆ ಮದ್ದು ಹಾಕಿದ್ದಿಲ್ಲೆ ಹೇಳಿ ಯಾವ ಗ್ಯಾರೆಂಟಿ? ಯಂಗೆ ಮದ್ದು ತಾಗಿ ಆರೋಗ್ಯ ಹೆಚ್ಚು ಕಮ್ಮಿ ಆದ್ರೆ ಎಲ್ಲಿ ಸಾಯ್ಲಿ?’ ಎಂದು ತಡೆ ತಡೆದು ಹೇಳಿದ.

ಮದ್ದಿನ ವಿಷಯ ಕೇಳಿದ್ದೇ ಒಂದೆರಡು ಘಳಿಗೆ ಇಡೀ ಪಂಕ್ತಿ ಸ್ತಬ್ಢ. ತುಪ್ಪದ ಪಾತ್ರೆ ಹಿಡಿದ ನರ್ಮದೆಯ ಮುಖ ಪೂರ್ತಿ ಕೆಂಪಗಾದದ್ದಲ್ಲದೇ ಸಿಟ್ಟಿನಿಂದ ಥರಗುಟ್ಟತೊಡಗಿದಳು. ಇನ್ನೇನು ಮೈ ಪೂರ್ತಿ ಕಣ್ಣೀರಾಗಿ ಒಳಗೆ ಓಡುವಂತೆ ಇದ್ದ ನರ್ಮದೆ ಉಸಿರು ತಿರುಗಿಸಿಕೊಂಡು ಶುರುಮಾಡೇ ಬಿಟ್ಟಳು. ‘ಪರಮಯ್ಯ, ಎನ್ನ ಮನೆತನದ ಬಗ್ಗೆ ನಿನಗೆಂತಾ ಗೊತ್ತಿದ್ದು? ಬೇರೆಯವರ ಬಗ್ಗೆ ಮಾತಾಡ ಮೊದ್ಲು ಸ್ವಲ್ಪ ನಾಲ್ಗೆ ಬಿಗಿ ಹಿಡಿ. ಮದ್ದು ಹಾಕಿದ್ದು, ವಿಷ ಬೆರೆಸಿದ್ದು ಯಾರು? ಯನ್ನ ಅಮ್ಮನ? ಯನ್ನ ಅಜ್ಜಿಯ? ನಿನಗೆ ಗೊತ್ತಿದ್ದ? ಮನಸಿದ್ರೆ ಊಟ ಮಾಡು - ಇಲ್ದೇ ಇದ್ರೆ ಎದ್ದು ಹೋಗು. ಇನ್ನೊಮ್ಮೆ ಯನ್ನ ಅಪ್ಪನ ಮನೆ ಬಗ್ಗೆ ತುಟಿ ಪಿಟಕ್ ಅಂದ್ರೆ ಹುಶಾರ್!’ ಗುಡುಗಿದ ನರ್ಮದೆ ಥೇಟ್ ರಣಚಂಡಿಯಾಗಿದ್ದಳು. ‘ಬಾಳೆ ಎಲೆಗೆ ಬಡಿಸಿದ್ ಊಟದ ಮೇಲೆ ಆಣೆ. ಯನ್ನ ಅಪ್ಪನಮನೆ ಮನ್‌ತನ, ಮದ್ದು ಹಾಕ ಮನ್‌ತನವೇ ಸತ್ಯ ಆದ್ರೆ ಯನ್ನ ಹೊಟ್ಟೆಲ್ಲಿ ಹುಟ್ಟಿದ ಮಗ ಶಿಖಂಡಿಯಾಗಿ ಹೋಗ್ಲಿ’ ಎಂದು ಅಬ್ಬರಿಸಿ ಪಕ್ಕದ ಎಲೆಯ ಹತ್ತಿರವಿದ್ದ ನೀರಿನ ಚೊಂಬನ್ನು ಎತ್ತಿ ಗಟಗಟನೆ ಕುಡಿದ ನರ್ಮದೆ ಒಂದು ಕ್ಷಣವೂ ಅಲ್ಲಿ ನಿಲ್ಲಲಿಲ್ಲ.

ಒಂದರೆಕ್ಷಣ ಮೌನವೇ ಪಂಕ್ತಿಯನ್ನಾಳಿದ ನಂತರ ಗಣಪತಿ ಭಟ್ಟರು ಮೊದಲು ಸಾವರಿಸಿಕೊಂಡವರು. ‘ಎಲ್ಲಾ ಸಾವಕಾಶ ಊಟ ಮಾಡಿ’ ಎಂದು ಯಜಮಾನರು ಹೇಳಿಕೆ ಮಾಡಿದರೂ ಪಂಕ್ತಿಯಲ್ಲಿ ಜಾಸ್ತಿ ಹೊತ್ತು ಯಾರೂ ಕೂಡ್ರಲಿಲ್ಲ. ಪರಮಯ್ಯ ಆಗಲೇ ಭಟ್ಟರ ಮನೆಯಿಂದ ಹೊರ ನಡೆದಾಗಿತ್ತು.

***

ಇಷ್ಟೆಲ್ಲ ನಡೆದ ನಂತರ ಮಾಳಿಗೆ ಮೆತ್ತಿಯ ಕೋಣೆಯಲ್ಲಿ ಬಾಗಿಲು ಹಾಕಿ ಮಲಗಿದ ನರ್ಮದೆ ಮಗುವಿಗೆ ಹಾಲೂಡಿಸುವುದನ್ನೂ ಮರೆತಂತಿದ್ದಳು. ಅನಂತ, ರಾಧಕ್ಕ ಪಾಳಿಯ ಮೇಲೆ ಹೋಗಿ ಕರೆದದ್ದೂ ಪ್ರಯೋಜನವಾಗಲಿಲ್ಲ. ಮಗುವಿನ ಅಳು ಕೂಡ ನರ್ಮದೆಯ ಕೋಣೆಯ ಬಾಗಿಲು ತೆರೆಸಲಿಲ್ಲ.

ಮಾರನೆಯ ಬೆಳಗ್ಗೆ ಉಳಿದವರಿಗೆಲ್ಲ ಬೆಳಗಾಗುವ ಮೊದಲೇ ನರ್ಮದೆ, ಅಭ್ಯಂಗ ಸ್ನಾನ ಮುಗಿಸಿ ಗರಿ ಗರಿ ಸೀರೆಯುಟ್ಟು ಅಡುಗೆಮನೆಯ ಕೆಲಸಕ್ಕೆ ತೊಡಗಿದ್ದಳು. ಆಗ ತಾನೇ ಎದ್ದ ಮಗುವನ್ನು ಮುದ್ದುಗರೆಯುತ್ತ ‘ಅತ್ತೆವ್ವ, ದೋಸೆಗೆ ಚಟ್ನಿ ಮಾಡಿ ಬಿಡಲ’ ಎಂದು ಹಗೂರಕ್ಕೆ ಮಾತನಾಡಿದ ನರ್ಮದೆಗೆ ನಿನ್ನೆ ರಾತ್ರಿ ನಡೆದ ಘಟನೆ ನೆನಪೇ ಇಲ್ಲವೇನೋ ಅಂದು ಕೊಂಡರು ರಾಧಕ್ಕ. ಮಗುವನ್ನು ಅತ್ತೆಯ ಕೈಗೆ ವರ್ಗಾಯಿಸಿ ಎಂದಿನ ಮೃದು ದನಿಯಲ್ಲಿ ‘ನಿಮ್ಗೆ ಕಾಫೀ ಮಾಡಲಾ’ ಎಂದು ನಿಧಾನಕ್ಕೆ ಅನಂತನತ್ತ ನರ್ಮದೆ ತಿರುಗಿದಳು. ಹಿಂದಿನ ರಾತ್ರಿ ಮಾತ್ರ, ಅಷ್ಟೆಲ್ಲ ಜನರೆದುರು ದುರ್ಗೆಯ ಅವತಾರ ತಾಳಿದ್ದ ಹೆಂಡತಿ ಇವಳೇನಾ ಅಂದುಕೊಂಡ ಅನಂತ ಭಟ್ಟ ಆಲೋಚನೆಗೆ ಬಿದ್ದ.

------------------------------ X ------------------------------------

‘ನಿನ್ನ ಕೊಂದು ನಾನೇನು ಪಡೆಯಲಿ’ ಈ ಕಥೆಯನ್ನ ನಾನು 2010ರ ಅಕ್ಕ ಕಥಾ ಸ್ಪರ್ಧೆಗೆ ಕಳುಹಿಸಿದ್ದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗಿ `ದೀಪ ತೋರಿದೆಡೆಗೆ’ ಪುಸ್ತಕದಲ್ಲಿ ಸೇರ್ಪಡೆಯಾದ ಇಪ್ಪತ್ತು ಕಥೆಗಳಲ್ಲಿ ನನ್ನದೂ ಒಂದು ಎಂದು ಹೇಳಿಕೊಳ್ಳಲು ನಂಗೆ ಖುಷಿ! ಸಮ್ಮೇಳನ ಮುಗಿದು, ಪುಸ್ತಕ ಬಿಡುಗಡೆಯಾಗಿ ತಿಂಗಳುಗಳು ಕಳೆದಿದ್ದರೂ, ನಾ ಮಾತ್ರ ಒಮ್ಮೆ ಕಥಾ ಸಂಕಲನವನ್ನ ಕಣ್ಣಿಗೆ ಹಾಕಿಕೊಂಡೇ ಬ್ಲಾಗ್‌ನಲ್ಲಿ ನನ್ನ ಕಥೆಯನ್ನ ಪಬ್ಲಿಶ್ ಮಾಡಿಕೊಳ್ತೇನೆ ಎಂದು ಕೂತಿದ್ದೆ. ತಿಂಗಳಾನುಗಟ್ಟಲೆ ಕಾದೂ ಕಾದು, ವಿಕಾಸನಿಂದ ಸಾಕಷ್ಟು ಕಿಚಾಯಿಸಿಕೊಂಡ ಮೇಲೆ ಮೊನ್ನೆ ಸಂಜೆ ಒಂದಿನ ಕೊನೆಗೂ ಪುಸ್ತಕ ಬಂದೇ ಬಿಟ್ಟಿತು! ಹಾಗಾಗೇ ಈಗ ನಿಮ್ಮೆದುರಿಗೆ ನನ್ನ ಕಥೆ, sorry - ನಾ ಬರೆದ ಕಥೆ :-)

Tuesday, 24 November 2009

ತಲೆದಿಂಬಿನಡಿಯ ಅಸ್ಪಷ್ಟ ಪತ್ರ

ಷ್ಟೆಲ್ಲ ಅತಿರೇಕಕ್ಕೆ ಹೋಗುತ್ತದೆ ಎಂದು ನನಗೆ ಎಲ್ಲಿ ಗೊತ್ತಿತ್ತು? ಹದಿನೈದು ವರ್ಷಗಳಿಂದ ಅದೇ ಮುಖ, ಅದೇ ಸ್ವಭಾವ, ಅದೇ ನಗು, ಅದೇ ಮೈ - ಕೊನೆಗೆ ಮೈಥುನವೂ ಅದೇ... ನನಗೆ ಬೇಜಾರಾದದ್ದು ತಪ್ಪೇ? ನನ್ನ ಸ್ವಭಾವವೇ ಅಂಥದ್ದು. ಕೆಲಸ ಬದಲಿಸುತ್ತ ಬಂದೆ. ಮನೆ ಐದು ವರ್ಷಕ್ಕೆ ಬೇಜಾರಾಯ್ತು. ಮಕ್ಕಳೂ ಬೋರಾಗಬಹುದೆಂದು ಆ ಗೋಜಿಗೆ ಹೋಗಲಿಲ್ಲ. ಇನ್ನು ಸಂಬಂಧ - ಅದು ಹಳಸಲು ಕಾರಣಗಳು ಬೇಕಿರಲಿಲ್ಲ - ಏನಂತಿ? ಹಾಗೆ ನೋಡಿದರೆ ಹದಿನೈದು ವರ್ಷ ನನ್ನ ಮಟ್ಟಿಗೆ ಸುಲಭದ್ದೇನೂ ಆಗಿರಲಿಲ್ಲ.

ಮೊದಲೆರಡು ವರ್ಷದ ಸಂಭ್ರಮದಲ್ಲಿ ಎಲ್ಲವೂ ಚೆಂದವಿತ್ತು. ಬೆಚ್ಚಗಿನ ಮುತ್ತು ಕೆನ್ನೆಯ ಮೇಲೆ ಬಿದ್ದಾಗ ಚಳಿ ಚಳಿಯ ಮುಂಜಾವು ಅಸಹನೀಯ ಅನ್ನಿಸಲೇ ಇಲ್ಲ. ಶೌಚದ ಸಮಯದಲ್ಲಿ ತೆರೆದಿಟ್ಟ ಬಾಗಿಲೂ ನಮ್ಮಿಬ್ಬರ ಜಗಳಕ್ಕೆ ಕಾರಣವಾಗಬಹುದು ಎಂದುಕೊಂಡಿರಲಿಲ್ಲ. ಹಾಸಿಗೆಯ ಹೊದಿಕೆಯನ್ನು ಪ್ರತಿದಿನ ಸರಿಮಾಡುವುದು ಜಗತ್ತಿನ ಅತೀ ಕಷ್ಟದ ಕೆಲಸ ಎನ್ನಿಸಿದ್ದು ಯಾವಾಗ? ಡಿನ್ನರಿನ ಸಮಯದಲ್ಲಿ ಅಗಿಯುವಾಗ ಶಬ್ದಮಾಡಬೇಡ ಎಂದಿದ್ದಕ್ಕಾಗಿ ರಾತ್ರಿಯಿಡೀ ಮಾತನಾಡದೇ ಇರುವ ದುರ್ಬುದ್ಧಿ ನನಗೇಕೆ ಬಂತು? ತುಂಬ ತಲೆ ನೋವೆಂದು ಮಲಗಿದ ನನಗೆ ಮಾತ್ರೆ ನುಂಗಿಸಿ, ಹಣೆ ನೇವರಿಸಿ ಹೋದರೂ - ಹೊದಿಕೆ ಹೊಚ್ಚದೆ ಹಾಗೇ ಹೋದೆ ಎಂದು ಜಗಳ ತೆಗೆದಿದ್ದು ಯಾಕೆ?

ಎರಡು ವರ್ಷದ ಹಿಂದಿನ ಮಾತೇನೋ. ಅದೊಂದು ಚಳಿಗಾಲದ ಮುಂಜಾವು. ಸ್ನಾನ ಮಾಡುವ ಮುನ್ನ ಸುಮ್ಮನೇ ಬಂದ ಮಾತದು. ತಲೆ ಕೂದಲೆಲ್ಲಾ ಬೆಳ್ಳಗಾಗಿದೆ, ಕಲರಿಂಗ್ ಮಾಡಿದರೆ ಇನ್ನಷ್ಟು ಸೆಕ್ಸಿಯಾಗಿ ಕಾಣ್ತೀ ಎಂದು ನೀ ಹೇಳಿದ್ದಲ್ಲವೇ? ನನ್ನ ಸಿಟ್ಟು ನೆತ್ತಿಗೇರಿತ್ತು. ಸೆಕ್ಸಿಯಾಗಿ ಕಾಣುವ ಸೂಳೆಯರಿಗೇನು ಕಮ್ಮಿ ಈ ಊರಲ್ಲಿ? ಅವರನ್ನು ಒಂದು ಕೈ ನೋಡು ಎಂದು ಕಿರುಚಿದ್ದೆ ನಾನು ಅಲ್ಲವೇ? ಮೊದಲೇ ಜಾಸ್ತಿ ಮಾತಾಡದ ನೀನು ಪೂರ್ತಿ ಮಾತು ಬತ್ತಿದವನಂತೆ ಕಾಣುತ್ತಿದ್ದೆ. ಸಂಜೆ ಊರಲ್ಲಿನ ಅಂಗಡಿಗಳನ್ನೆಲ್ಲ ತಡಕಾಡಿ ಮನೆಗೆ ಬಂದಾಗ ರಾತ್ರಿ. ನನ್ನ ಎದುರ್ಗೊಂಡಿದ್ದೇ ಡೈನಿಂಗ್ ಟೇಬಲ್ ಮೇಲಿನ ಮೂರು ಖಾಲಿ ವೈನ್ ಬಾಟಲ್‌ಗಳು. ಜಾಸ್ತಿ ಮಾತು ಬೇಕಿರಲಿಲ್ಲ. ನಂತರ ಮೂರು ದಿನದ ಮೌನ. ನನ್ನ ಪಾಡಿನ ಊಟ, ನಿದ್ದೆ ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತಲ್ಲ - ಘಟನೆಯನ್ನು ಪೂರ್ತಿ ಮರೆತಂತೆ ಇದ್ದೆ. ನಿನ್ನೊಂದಿಗಿನ ಸಖ್ಯ, ಮಾತು ಬೇಕೆನಿಸಲೇ ಇಲ್ಲ. ನೀ ಮಾತ್ರ ಊಟ, ನಿದ್ದೆ ಎಲ್ಲ ಮರೆತಿದ್ದೆ. ನಿನ್ನ ಬಡಕಲು ಶರೀರ ತೀರ ಗಾಳಿಯಲ್ಲಿ ಓಲಾಡುವಂತಿತ್ತು. ಆರನೇ ದಿನಕ್ಕೆ ಬೊಕೆಯೊಂದಿಗೆ ಬಂದ ನೀನು- ಇಷ್ಟು ದಿನ ಸರಿಯಾಗಿ ಮಾತಾಡದೇ ಇದ್ದಿದ್ದಕ್ಕೆ ಕ್ಷಮಿಸು ಎಂದೆ. ಹದಿನೈದು ವರ್ಷದ ನಮ್ಮ ಸಖ್ಯದಲ್ಲಿ ಇಷ್ಟುದ್ದದ ಜಗಳ ಯಾವುದೂ ಇದ್ದಿರಲಿಕ್ಕಿಲ್ಲ. ಯಾಕಾದರೂ ರಾಜಿ ಮಾಡಿಕೊಂಡೆನೋ ಎಂದು ನಂಗನ್ನಿಸಿತ್ತು ಎಂದರೆ ನಂಬ್ತೀಯಾ?

ಈ ಆರು ದಿನಗಳಲ್ಲಿ ಆಫೀಸಿನ ಯಂಗ್ ಕಲೀಗ್‌ಗಳೊಂದಿಗೆ ಫ್ಲರ್ಟ್ ಮಾಡಲು ಮುಜುಗರವಾಗ್ತಾ ಇರಲಿಲ್ಲ. ಟ್ರಾಫಿಕ್ ಸಿಗ್ನಲ್ಲಿನಲ್ಲಿ ಕಾರ್ ನಿಲ್ಲಿಸಿದಾಗ ಪಕ್ಕದ ಬಿಎಂಡಬ್ಲ್ಯೂ ಕಾರಿನಲ್ಲಿ ಕೂತ ಎಳೆಯ ಸಿಂಗಲ್ ಇರಬಹುದೇ ಎನ್ನಿಸುತ್ತಿತ್ತು. ಮೀಟಿಂಗ್‌ನಲ್ಲಿ ಲಾಭಾಂಶದ ಬಗ್ಗೆ ಮಾತಾಡುತ್ತಿದ್ದ ಕಂಪನಿ ಸೆಕ್ರೇಟರಿಯ ಸೊಂಟದ ಕೆಳಗೆ ಹರಿದ ಕಣ್ಣು ಅಲ್ಲೇ ನಿಂತುಹೋಯ್ತು ಗೊತ್ತಾ? ರಾಜಿಯಾದ ಮಾರನೆಯ ದಿನದಿಂದ ಇದೆಲ್ಲ ಪ್ರಯತ್ನಪಟ್ಟು ನಿಲ್ಲಿಸಿದೆ. ನೀ - ನನ್ನ ಮೊದಲಿಗಿಂತ ಹೆಚ್ಚು ಪ್ರೀತಿಸುತ್ತಿದ್ದಿ ಎನ್ನಿಸತೊಡಗಿ ಸ್ವಲ್ಪ ಭಯ, ಕಿರಿಕಿರಿ ಎಲ್ಲ ಆಯ್ತು. ಅದಕ್ಕೇ ಮನೆಗೆ ಬರುವಾಗ ಬೇಕೆಂತಲೇ ತಡ ಮಾಡಲು ಶುರು ಮಾಡಿದೆ. ಸಿಂಕಿನಲ್ಲಿ ನೀ ಎಸೆದ ಪುಟಾಣಿ ಸ್ಪೂನ್ ನೆವ ಮಾಡಿಕೊಂಡು ಕಿತ್ತಾಡಿದೆ. ಎಂದೋ ಮುಗಿದ ಅಧ್ಯಾಯದ ಪಾತ್ರಧಾರಿಯೊಬ್ಬನ ಮಾತು ಬೇಕೆಂತಲೇ ತೆಗೆದೆ. ಟೀ ಟೇಬಲ್ ಮೇಲೆ ಕಾಲಿಡುವುದು ನಿಷಿದ್ಧ ಎಂಬ ಸಿಲ್ಲಿ ರೂಲ್ ಮಾಡಿದೆ. ಈ ಸಂಬಂಧ ಹಳಸುತ್ತಿದೆ ಎಂದು ಮನಸ್ಸಿನಲ್ಲೇ ಖಾತ್ರಿ ಮಾಡಿಕೊಳ್ಳತೊಡಗಿದೆ. ಇದೆಲ್ಲ ಯಾಕೆ?

ನಲವತ್ತರ ನಂತರ ಹೊಸ ಹರೆಯವಂತೆ. ಸ್ವಲ್ಪ ತಡವಾಗಿ ಹರೆಯ ಬಂದಂತಿದೆ. ನಲ್ವತೈದು ನನಗೀಗ. ಆದರೆ ನಿಲ್ಲದ ಬಯಕೆ. ಕಾಡುವ ಬಯಕೆ. ಕಾಡು ಬಯಕೆ. ಬಯಲಾಗುವ ಬಯಕೆ. ಬತ್ತದ ಬಯಕೆ. ಜಿಮ್ಮಿನಲ್ಲಿ - ಈಜಿನಲ್ಲಿ ದುಡಿಸಿದ, ಮಾಟವಾಗಿಸಿದ ಈ ಮೈಯನ್ನ ಹದ ಮಾಡಲು ಎಳೆಯನೊಬ್ಬನ ಬಯಕೆ ಶುರುವಾದದ್ದು ಯಾವಾಗ? ನೀನು ತೀರ ಪೀಚು ಅನ್ನಿಸತೊಡಗಿದ್ದು ಎಂದಿನಿಂದ? ಬೆಳಗ್ಗೆ - ಡ್ರೈವ್ ವೇಯಿಂದ ಕಾರು ಹೊರಗೆಳೆದು ಕ್ರಾಸ್ ರೋಡಿನಲ್ಲಿ ನಿಂತಾಗ ಹಿಂದೆ ಬಂದ ಕಾರು ಆಫೀಸಿನ ತಿರುವಿನವರೆಗೂ ಸಾಥ್ ಕೊಟ್ಟಾಗ ಮಿರರ್ರ್‌ನಲ್ಲಿ ಹಿಂದಿರುವ ಹುಡುಗನ ಮುಖವನ್ನು ಮತ್ತೆ ಮತ್ತೆ ನೋಡುವಂಥದ್ದೇನಿತ್ತು? ಅದಕ್ಕೇ ನಿನ್ನ ಕೇಳಿದ್ದು - ಹದಿನೈದು ವರ್ಷಗಳಿಂದ ಅದೇ ಮುಖ, ಅದೇ ಸ್ವಭಾವ, ಅದೇ ನಗು, ಅದೇ ಮೈ - ಕೊನೆಗೆ ಮೈಥುನವೂ ಅದೇ... ನನಗೆ ಬೇಜಾರಾದದ್ದು ತಪ್ಪೇ?

ಗಾರ್ಡನ್ನಿನಲ್ಲಿ ಕೂತು ಅರ್ಧ ಗಂಟೆ ನಿನ್ನ ಹಳೆಯ ಕಲೀಗ್ ಒಬ್ಬಳೊಡನೆ ಮಾತಾಡಿದೆ ಎನ್ನುವ ನೆವಕ್ಕಾಗಿ ನಿನ್ನೊಂದಿಗೆ ಕಿತ್ತಾಡಿ ಈ ಹೊಟೇಲಿನಲ್ಲಿ ಬಂದುಳಿದು ಈಗಾಗಲೇ ಮೂರು ವಾರ. ಇನ್ನೂ ಎಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಮೊದಲ ವಾರದಲ್ಲಿ ಮೂರು ಸಲ ರಾಜಿಗಾಗಿ ಬಂದ ನಿನ್ನ ಮುಖಕ್ಕೇ ಬಾಗಿಲು ಬಡಿದ ಮೇಲೆ ನೀನೂ ತಟಸ್ಥನಾಗಿದ್ದಿ. ಈಗೊಂದು ವಾರದಿಂದ ಹರೆಯವೆಲ್ಲ ಹರಿದುಹೋದಂತಿದೆ. ಎಳೆಯರನ್ನು ಆಸೆಗಣ್ಣಲ್ಲಿ ನೋಡಲು ನಾನೇನು ಹದಿನೆಂಟರ ವಯಸ್ಸಿನವಳಾ ಎನ್ನಿಸತೊಡಗಿದೆ. ನಿನಗಾದರೂ ನನ್ನ ಬಿಟ್ಟರೆ ಇನ್ಯಾರು ಎಂದು ನನ್ನಷ್ಟಕ್ಕೇ ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಮೈಮೇಲೆ ಎಸೆದು ಮಲಗುವ ಕಾಲುಗಳೀಗ ಮೊಂಡಾಟ ಹೂಡಿ ತಣ್ಣಗಾಗಿಬಿಟ್ಟಿವೆ - ಯಾವ ಬೆಂಕಿಯೂ ನಮ್ಮನ್ನು ಬಿಸಿ ಮಾಡಲು ಸಾಧ್ಯವಿಲ್ಲ ಎಂಬ ಹಠ ಬೇರೆ. ನಾ ನಿನಗಿಟ್ಟ ಹೆಸರುಗಳನ್ನೆಲ್ಲ ಒಂದೊಂದಾಗಿ ಕರೆಯಬೇಕೆನಿಸಿದೆ. ಈ ಒಂಟಿ ಅಲೆತ ಅಂದುಕೊಂಡಿದ್ದಕ್ಕಿಂತಲೂ ಬೇಗ ಬೋರಾಗುತ್ತಿದೆ. ನಾನಾಗಿ ನಿನ್ನ ಬಳಿ ಬರಲು ಅವಮಾನವೋ, ಅನುಮಾನವೋ, ಅಭಿಮಾನವೋ ಏನೋ ಒಂದು. ಹದಿನೈದು ವರ್ಷಗಳ ನಮ್ಮ ಸಖ್ಯ -ನನ್ನಲ್ಲಿದ್ದ ಶರಣಾಗತ ಗುಣವನ್ನೇ ನುಂಗಿಬಿಟ್ಟಿದೆ ನೋಡು. ನೀ ಬರುವವರೆಗೆ ಕಾಯುತ್ತೇನೆ - ವಾರ, ತಿಂಗಳು, ವರ್ಷ ಹೀಗೆ... ಈ ಬಾರಿ ಮಾತ್ರ ಪ್ರಶ್ನೆಯೂ ನೀನೆ, ಉತ್ತರವೂ ನೀನೆ!