ಥ್ಯಾಂಕ್ಯೂ ಕೆಂಡಸಂಪಿಗೆ!
ಮೌನ - ಮುಗುಳು - ಮಾತು
Tuesday, 17 September 2024
Monday, 4 April 2011
ಹಬ್ಬವೆಂದರೆ...
ಯುಗಾದಿಯ ಮುಂಜಾವು
ಆಯಿ ಮಾಡಿದ ಅವಲಕ್ಕಿ ಒಗ್ಗರಣೆ
ಪರಿಮಳ ಅಡುಗೆ ಒಳ ದಾಟಿ
ತೋರಣ ಸಿಂಗರಿಸಿದ ಪ್ರಧಾನ ಬಾಗಿಲು ಮೀರಿ
ಆರು ಸಹಸ್ರ ಮೈಲು ಪಯಣಿಸಿ
ಸಪ್ತ ಸಾಗರದಲ್ಲಿ ಮುಳುಗೆದ್ದರೂ
ತನ್ನ ಘಮ ಉಳಿಸಿಕೊಂಡು ಬಂದಾಗ
ಇಲ್ಲಿ, ನನ್ನ ಕೈಲಿದ್ದ ಕಾರ್ನ್‌ಫ್ಲೇಕ್ಸ್ ಬೌಲು ಅರ್ಧ ಖಾಲಿ
ಹತ್ತೂಕಾಲು ಗಂಟೆಗೆ
ಒಂದು ಕಪ್ ಖಡಕ್ ಚಹಾದ ಜತೆಯಾದ
ಮಲ್ಟಿಗ್ರೇನ್ ರೈಸ್‌ಕೇಕ್
ಹೋಳಿಗೆ ಹೂರಣದ ಬಣ್ಣದಲ್ಲೇ ಕಂಡರೆ
ಅದು ನನ್ನ ತಪ್ಪಲ್ಲ - ಯುಗಾದಿಯದು.
ಹನ್ನೊಂದೂವರೆಗೆ ಟೇಬಲ್ ಪಕ್ಕದಲ್ಲಿ
ಪ್ರತ್ಯಕ್ಷನಾದ ಅರವತ್ತರ ಮ್ಯಾನೇಜರ್
ಕಳೆದ ವಾರವಷ್ಟೆ ಬಂದ ಆರ್ಡರ್ ನಾಪತ್ತೆ
ಎಂದು ಸಿಡಿಮಿಡಿಗುಟ್ಟಿದಾಗ,
ದೇವರಿಗೆ ಅಭಿಷೇಕ - ಆರತಿಯ ನಂತರ
’ಹೊಸ ಪಂಚಾಂಗ ತಂದಿಡ್ರೋ’ ಅಂತ
ಮಕ್ಕಳ ಮೇಲೆ ಆವಾಜ್ ಹಾಕುವ
ಅಜ್ಜನಂತೆ ಹೂಬೇ-ಹೂಬ್ ಕಂಡು
ಸಿಟ್ಟಿನ ಜಾಗದಲ್ಲಿ ಪ್ರೀತಿಯುಕ್ಕಿದ್ದೂ
ಯುಗಾದಿಯ ಮಧ್ಯಾನ್ನವೇ..
ಮಧ್ಯಾನ್ಹ ಡಬ್ಬಿಯಲ್ಲಿದ್ದ
ಸಪ್ಪೆ ಮೊಸರನ್ನದ ಪ್ರತಿ ತುತ್ತೂ
ಕೋಸಂಬ್ರಿ, ತುಪ್ಪದನ್ನ, ಅಂಬೊಡೆ
ಅಪ್ಪೆಹುಳಿಯನ್ನು ನೆನಪು ಮಾಡಿದಾಗ
ಹಬ್ಬದ ಸಂಜೆ
ಹೋಳಿಗೆಯಲ್ಲದಿದ್ದರೆ ಅದರ ತಮ್ಮಹಯಗ್ರೀವವನ್ನಾದರೂ ಮಾಡಿಯೇ ಸಿದ್ಧ..
ನನ್ನಂಥ ’ಅಡುಗೆ ಕಳ್ಳಿ’ಯೂ
ಹಟ ಹೊರುವಂತೆ ಮಾಡಿದ ಯುಗಾದಿಯೇ
ನಿನಗೊಂದು ದೊಡ್ಡ ನಮಸ್ಕಾರ!
Tuesday, 11 January 2011
ಅಜ್ಜ!
ಸರ್ವರಿಗೂ ನಮಸ್ಕಾರ. ವಿಧಿವಶರಾಗಿ ಅಲ್ಲೆಲ್ಲೋ ದೂರದಲ್ಲಿದ್ದೇ ಇಲ್ಲಿ ನಡೆಯುತ್ತಿರುವ ಕಾರ್ಯಗಳತ್ತ ಕಣ್ಣಿಟ್ಟಿರುವ ಅಜ್ಜ ಗಣಪತಿ ಭಟ್ಟರಿಗೆ ಇಲ್ಲಿಂದಲೇ ಉದ್ದಂಡ ಪ್ರಣಾಮ.
ಈಗೊಂದು ತಿಂಗಳಿನಿಂದ ಪ್ರತಿ ಬಾರಿ ಫೋನ್ ಮಾಡಿದಾಗ ಅಜ್ಜನ ಅನಾರೋಗ್ಯ ತಿಳಿಯುತ್ತಲೇ ಇತ್ತು. ಅಜ್ಜ ತುಂಬ ಕೃಶನಾಗಿದ್ದಾನೆ; ತನ್ನಷ್ಟಕ್ಕೆ ತಾನೇ ಓಡಾಡಲಾರ; ಮೊನ್ನೆಅಂಗಳದಲ್ಲಿ ಆಯತಪ್ಪಿ ಬಿದ್ದ; ಅಜ್ಜ ಈಗ ಆಸ್ಪತ್ರೆಯಲ್ಲಿ ಇದ್ದಾನೆ - ಇಂಥ ವರದಿಯೆಲ್ಲ ಪ್ರತಿವಾರ ತಿಳಿಯುತ್ತಿದ್ದರೂ ಅಜ್ಜನನ್ನ ಆ ರೀತಿ ನೆನೆಸಿಕೊಳ್ಳಲು ನಮಗೆ ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಸದಾ ಚಟುವಟಿಕೆಯ, ದೊಡ್ಡ ದನಿಯಲ್ಲಿ ಮಾತನಾಡುವ- ನಗುವ, ಇದ್ದಕ್ಕಿಂದಂತೇ ಕಣ್ಣು ಕೆಂಪಾಗಿಸಿ ಹತ್ತಿರದವರನ್ನೂ ಹೆದರಿಸುವ, ಮೊಮ್ಮಕ್ಕಳನ್ನು ಸದಾ ಕೊಂಡಾಡುವ ಅಜ್ಜನನ್ನೇ ಕಂಡಿದ್ದ ನಾವು- ಮರಣಶಯ್ಯೆಯಲ್ಲಿ ಮಲಗಿದ್ದ ಅಜ್ಜನನ್ನು ಹೇಗೆ ನೆನೆಸಿಕೊಂಡೇವು?
ಅಜ್ಜನ ವೀರಗಾಥೆಗಳನ್ನ ಕಥೆಯಾಗಿ ಕೇಳಿಸಿಕೊಳ್ಳುತ್ತ ದೊಡ್ಡವರಾದವರು ನಾವು. ಅಜ್ಜ ಹುಲಿಯನ್ನು ಬೇಟೆಯಾಡಿ ಅದರ ಪಕ್ಕ ಕೂತ ಫೋಟೋವನ್ನು ಗೆಳೆಯ-ಗೆಳತಿಯರಿಗೆ ತೋರಿಸುತ್ತ ಹೆಮ್ಮೆ ಪಟ್ಟವರು ನಾವು. ಹಣ್ಣು ಹಣ್ಣು ಮುದುಕರಾದರೂ ಒಂದಿಲ್ಲೊಂದು ಸಾಹಸ ಮಾಡುತ್ತಲೇ ಎಲ್ಲರನ್ನು ಅಚ್ಚರಿಪಡಿಸತ್ತಿದ್ದ ಅಜ್ಜನನ್ನು ಅರಳುಗಣ್ಣಿನಲ್ಲಿ ನೋಡಿದ ಮೊಮ್ಮಕ್ಕಳು ನಾವು. ಕಳೆದ ಏಪ್ರಿಲಿನಲ್ಲಿ ನಾವು ಊರಿಗೆ ಬಂದಾಗಿನ ಒಂದು ಸಂದರ್ಭ. ನಾವು ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರೆಲ್ಲ ಅಪರಾತ್ರಿಯಲ್ಲಿ ನಾಟಕಕ್ಕೆ ಹೊರಟಾಗ ಎಂಭತ್ತೈದು ದಾಟಿದ ಅಜ್ಜ ‘ನಾನೂ ನಾಟಕಕ್ಕೆ ಬರುತ್ತೇನೆ’ ಎಂದರು. ಆಗ ಅವರ ಕಣ್ಣಲ್ಲಿ ಕಂಡದ್ದು ಆಹಾ... ಅದೆಂಥ ಜೀವನ ಪ್ರೀತಿ!
ಕೈ ಹಾಕಿದ ಕೆಲಸವನ್ನು ಮಾಡಿ ಮುಗಿಸುವ ಹಠ, ಧೈರ್ಯ, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ, ಸಾಹಸೀ ಮನೋಭಾವ ನಮ್ಮ ರಕ್ತದಲ್ಲಿ ಸ್ವಲ್ಪವಾದರೂ ಬಂದಿದ್ದರೆ ಅದಕ್ಕೆ ಕಾರಣ ಅಜ್ಜ- ಗಣಪತಿ ಭಟ್ಟರೇ.
ದೂರದ ದೇಶದಲ್ಲಿ ಇದ್ದಿದ್ದರಿಂದ ಸಣ್ಣಕೇರಿಯಲ್ಲಿ ನಡೆಯುತ್ತಿರುವ ಕಾರ್ಯಗಳಲ್ಲಿ ಪಾಲ್ಗೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಮೊಮ್ಮಗಳಾದ ನನಗೆ, ಹಾಗೂ ಅಜ್ಜನ ಇನ್ನೊಬ್ಬ ಮೊಮ್ಮಗ ವಿನಾಯಕನಿಗೆ ಬೇಸರವಿದೆ. ಆದರೆ, ಹತ್ತಿರದಲ್ಲೇ ಇದ್ದು- ಎಲ್ಲ ಕಾರ್ಯಕ್ರಮವನ್ನೂ ನಡೆಸಿಕೊಟ್ಟ ಮಕ್ಕಳು, ಮೊಮ್ಮಕ್ಕಳು, ಮಿಮ್ಮೊಕ್ಕಳನ್ನ ದೂರದಿಂದಲೇ ನೋಡಿ ಅಜ್ಜನ ಆತ್ಮ ತೃಪ್ತಿಪಟ್ಟಿರಬಹುದು ಎಂಬ ಭರವಸೆಯೂ ಇದೆ.
ನಮ್ಮ ಮುಂದಿನ ಪೀಳಿಗೆಗೆ ವಿವರಿಸಿ ಹೇಳಲು ಹತ್ತಾರು ಸಾಹಸದ ಕಥೆಗಳನ್ನು ಬಿಟ್ಟುಹೋದ ಅಜ್ಜ ಗಣಪತಿ ಭಟ್ಟರಿಗೆ ಮತ್ತೊಮ್ಮೆ ಸಾಷ್ಟಾಂಗ ಪ್ರಣಾಮ ಮಾಡುತ್ತ, ಅವರ ಜೀವನ ಪ್ರೀತಿಯನ್ನ ಹೆಜ್ಜೆ ಹೆಜ್ಜೆಗೂ ನೆನೆಯುತ್ತ ಈ ವಿಷಾದ ಸಂದೇಶವನ್ನು ಕಳುಹಿಸುತ್ತಿದ್ದೇನೆ.
ಇತಿ,
ಪೂರ್ಣಿಮಾ
(ನನ್ನ ಅಜ್ಜ ದೈವಾಧೀನರಾಗಿ ಇವತ್ತಿಗೆ ೧೪ ದಿನಗಳಾಯ್ತು. ಈ ಮೇಲಿನದ್ದು ನಾನು ಇಲ್ಲಿಂದ ಅಜ್ಜನ ಕ್ರಿಯಾದಿ ಕಾರ್ಯಕ್ರಮಕ್ಕಾಗಿ ಕಳುಹಿಸಿದ ವಿಷಾದ ಸಂದೇಶ. ಅಷ್ಟು ಹಳೆ ತರುವಾಯದವರಾದರೂ ತಮ್ಮ ದೇಹವನ್ನು ಧಾರವಾಡದ ಎಸ್.ಡಿ.ಎಂ ಕಾಲೇಜಿಗೂ, ಕಣ್ಣನ್ನು ರೋಟರಿ ಸಂಸ್ಥೆಗೂ ದಾನ ಮಾಡಿದ ಅಜ್ಜ ನಮ್ಮ ಮುಂದಿನ ತಲೆಮಾರುಗಳಿಗೆ ನಿಜಕ್ಕೂ ಆದರ್ಶ. ಇದು ತುಂಬ ಖಾಸಗಿ ವಿಷಯ - ಗೊತ್ತು! ಆದರೆ ಈ ಬ್ಲಾಗ್ ಕೂಡ ಖಾಸಗಿಯೇ ಅಲ್ವೇ?)
Thursday, 16 December 2010
ನಿನ್ನ ಕೊಂದು ನಾನೇನು ಪಡೆಯಲಿ?
ಸಂಜೆ ಆರರ ಹೊತ್ತಲ್ಲಿ ಮಾಡಲೇನೂ ಜಾಸ್ತಿ ಕೆಲಸವಿಲ್ಲದೇ ಜಗುಲಿಯ ಕಟ್ಟೆಯ ಮೇಲೆ ಕುಳಿತ ನರ್ಮದಾ ರಸ್ತೆಯಲ್ಲಿ ಮೆರವಣಿಗೆ ಹೊರಟಂತಿದ್ದ ದನದ ಹಿಂಡನ್ನು ನೋಡುತ್ತಿದ್ದಳು. ಇಂಥ ಗೋಧೂಳಿ ಮುಹೂರ್ತದಲ್ಲೇ ಅಲ್ಲವೇ ತಾನು ತಾಳಿ ಕಟ್ಟಿಸಿಕೊಂಡಿದ್ದು ಎಂಬ ಆಲೋಚನೆ ಸರಿದು ಹೋಯಿತು ನರ್ಮದೆಯ ಮನದಲ್ಲಿ. ಜೊತೆಗೊಂದು ಹೂನಗೆಯೂ. ಭಾದ್ರಪದದ ಮೋಡ ಆಕಾಶದಿಂದ ಪೂರ್ತಿ ಸರಿದಿರಲಿಲ್ಲ. ಮರುದಿನ ಇಲಿ ಪಂಚಮಿಯ ಗಣಹೋಮಕ್ಕೆ ಬೇಕಾದ್ದನ್ನೆಲ್ಲ ತಯಾರು ಮಾಡಿಟ್ಟು, ಸಂಜೆಯ ಗಣಪತಿ ಪೂಜೆಗೆ ಬೇಕಾದ ಆರತಿ ತಟ್ಟೆಗಳನ್ನೆಲ್ಲ ದೇವರೆದುರು ಜೋಡಿಸಿಟ್ಟ ನಂತರವೇ ನರ್ಮದೆಗೂ ತುಸು ಹೊತ್ತು ತಣ್ಣಗೆ ಕೂರೋಣ ಎನ್ನಿಸಿದ್ದು. ಬೆಳಗ್ಗೆಯಿಂದ ಒಬ್ಬರಲ್ಲ ಒಬ್ಬರು ಭಟ್ಟರ ಮನೆಯಲ್ಲಿ ಕೂಡ್ರಿಸಿದ ಗಣಪತಿಯನ್ನು ನೋಡಲು ಬರುತ್ತಿದ್ದರಿಂದ ನರ್ಮದೆಗೆ ಬಿಡುವು ಸಿಕ್ಕಿರಲಿಲ್ಲ.
ಕೊಟ್ಟಿಗೆಯಲ್ಲಿ ಆಗ ತಾನೇ ಮೇವು ಮುಗಿಸಿ ಬಂದ ದನ ಕರುಗಳನ್ನು ಕಟ್ಟುತ್ತಿದ್ದ ರಾಧಕ್ಕ ಒಂದೊಂದೇ ಹಸುಗಳ ಹೆಸರಿಡಿದು ಅವುಗಳ ಕಷ್ಟ ಸುಖ ವಿಚಾರಿಸುತ್ತಿದ್ದರು. ‘ಬೆಳ್ಳೀ ಹೊಟ್ಟೆ ತುಂಬ್ತ?, ಗೌರೀ ಕುಂಟ್ತಾ ಇದ್ಯಲಿ - ಕಾಲಿಗೆಂತಾ ಆತು?, ಗೌತಮಿ ಸೊಕ್ಕು ಮಾಡಡಾ, ಈ ಹೋರಿ ಬುಡ್ಡನ್ನ್ ಹಿಡಿಯದೇ ಕಷ್ಟ..’ ಎಂದೆಲ್ಲ ದೊಡ್ಡ ದನಿಯಲ್ಲಿ ಹಸುಗಳೊಟ್ಟಿಗೆ ಮಾತಾಡುತ್ತಾ ಇದ್ದ ಅತ್ತೆವ್ವ ‘ನರ್ಮದಾ - ಮಾಣಿ ಅಳ್ತಾ ಇದ್ದ’ ಎಂದಾಗಲೇ ನರ್ಮದೆಗೆ ಒಳ ಜಗುಲಿಗೆ ಮಲಗಿಸಿದ್ದ ಮಗನ ನೆನಪಾದದ್ದು.
*******
ಮೂರು ತಿಂಗಳಿಗೆಲ್ಲ ಅಮ್ಮನ ಮನೆಯಲ್ಲಿ ಬಾಣಂತನ ಮುಗಿಸಿ ಗುಂಡಿಗದ್ದೆಗೆ ನರ್ಮದೆ ಬಂದಿದ್ದೇ ಗಣೇಶ ಚೌತಿ ಹತ್ತಿರ ಬಂತೆಂಬ ಕಾರಣದಿಂದ. ಗುಂಡಿಗದ್ದೆಯಲ್ಲಿ ಅದ್ದೂರಿಯ ಚೌತಿ. ಆಳೆತ್ತರದ ಗಣಪತಿ ಕೂಡ್ರಿಸಿ, ಇಲಿ ಪಂಚಮಿಯಂದು ಗಣಹೋಮ ಮಾಡಿ ಹತ್ತಿರ ಹತ್ತಿರ ನೂರರಷ್ಟು ಜನರಿಗೆ ಊಟ ಹಾಕಿ, ಸಂಜೆ ಪಟಾಕಿ ಸುಟ್ಟು ಸಂಜೆ ಏಳರ ಸುಮಾರಿಗೆ ಊರಿನ ಕೆರೆಯಲ್ಲಿ ಗಣೇಶನನ್ನು ಮುಳುಗಿಸಿ ಬರುವುದು ಗಣಪತಿ ಭಟ್ಟರು ಸಣ್ಣವರಿದ್ದಾಗಿನಿಂದ ನಡೆದುಕೊಂಡ ಬಂದ ಪದ್ಧತಿ. ಗಣಪತಿ ಭಟ್ಟರ ಹೆಂಡತಿ ರಾಧಕ್ಕ ಮೊದಲೆಲ್ಲ ಒಬ್ಬರೇ - ಇಬ್ಬರ ಕೆಲಸವನ್ನು ಹೊತ್ತು ಕೊಂಡು ಮಾಡುತ್ತಿದ್ದರೂ ಈಗೀಗ ಸ್ವಲ್ಪ ಸುಸ್ತು ಎನ್ನುತ್ತಾರೆ. ಅದಕ್ಕಾಗಿಯೇ ಸೊಸೆ ನರ್ಮದೆಯನ್ನು ಒಂದು ಎಂಟು ದಿನ ಮೊದಲೇ ಕಳಿಸಿಕೊಡಿ ಎಂದು ಬೀಗರಲ್ಲಿ ಕೇಳಿಕೊಂಡಿದ್ದು. ನರ್ಮದೆಗೆ ಗುಂಡಿಗದ್ದೆಯಲ್ಲಿ ಇದು ಮೊದಲ ಚೌತಿ. ಕಳೆದ ವರ್ಷವೇ ಮದುವೆಯಾದರೂ ಹೊಸ ಹಬ್ಬದ ನೆವದಲ್ಲಿ ಹೋದ ಚೌತಿಯನ್ನು ತವರಲ್ಲೇ ಕಳೆದಿದ್ದಳು ನರ್ಮದೆ.
ಗಣಪತಿ ಭಟ್ಟರ ಮನೆಗೆ ಬಂದು ಹೋಗುವವರು ಜಾಸ್ತಿ. ಭಟ್ಟರು ತಮಗೆ ಕೊರತೆಯಾದರೂ ಬಂದವರು ಸುಖವಾಗಿ ಉಂಡುಟ್ಟು ಹೋಗಬೇಕೆಂಬ ಅಭಿಪ್ರಾಯದವರು. ನಾಲ್ಕೆಕರೆ ಅಡಿಕೆ ತೋಟ, ಹತ್ತೆಕರೆ ಭತ್ತದ ಗದ್ದೆ ಬೇರೆ ಇರುವುದರಿಂದ ಸದಾ ಕೆಲಸಕ್ಕೆ ಬರುವವರು ಬೇರೆ. ರಾಧಕ್ಕನಿಗೆ ಐವತ್ತು ವರ್ಷವಾಗುವವರೆಗೂ ಇದ್ದ ಉತ್ಸಾಹ ನಿಧಾನಕ್ಕೆ ಬತ್ತತೊಡಗಿದ್ದೇ ಮಗ ಅನಂತ ಭಟ್ಟನಿಗೆ ಜಾತಕ ನೋಡಿ ನರ್ಮದೆಯನ್ನು ಮನೆ ತುಂಬಿಸಿಕೊಂಡರು. ನರ್ಮದೆಯೂ ಮನೆ ಸೇರಿದ ಒಂದು ತಿಂಗಳಿನಲ್ಲೇ ಅತ್ತೆ ಮಾವನಿಂದ ಸೈ ಎನ್ನಿಸಿಕೊಂಡಿದ್ದಳು.
ಅನಂತ ಭಟ್ಟರನ್ನು ಮದುವೆಯಾಗಿ ಗುಂಡಿಗದ್ದೆಗೆ ಬಂದ ಮರು ವರ್ಷ ಬಸಿರ ಹೊತ್ತ ನರ್ಮದಾ ತವರಿಗೆ ಹೋಗಿದ್ದಳು. ಮೃದು ಸ್ವಭಾವದ, ತಣ್ಣಗೆ - ನರ್ಮದಾ ನದಿಯಂತೆಯೇ ಇದ್ದ, ಯಾರಿಗೂ ಎದುರಾಡದ, ಗಂಡನಿಗೂ ಅಕ್ಕರೆ ಉಕ್ಕಿ ಬರುವಂತ ಗುಣ ಹೊತ್ತ ನರ್ಮದೆ ಗುಂಡಿಗದ್ದೆ ಭಟ್ಟರ ಸಂಸಾರಕ್ಕೆ ಮೆಚ್ಚಾಗಿದ್ದಳು. ರಾಧಕ್ಕ ಕೆಲಸದಲ್ಲಿ ಅಚ್ಚುಕಟ್ಟು. ಎಲ್ಲೆಲ್ಲಿಯೂ ಕೊಂಕು ತೆಗೆಯಲಾಗದಂತೆ ಕೆಲಸ ಮಾಡಿ ಮುಗಿಸುತ್ತಿದ್ದ ಅತ್ತೆವ್ವ ಸೊಸೆಗೆ ಮನೆಗೆಲಸದ ತಂತ್ರವನ್ನು ಸಾಕಷ್ಟು ಹೇಳಿ ಕೊಟ್ಟಿದ್ದರು. ಸೊಸೆಯಾದರೂ ಹಾಳು- ಧೂಳು ಮಾಡದೇ ಅತ್ತೆವ್ವನನ್ನು ಅನುಸರಿಸಿಕೊಂಡು ಹೋಗುತ್ತಿದ್ದುದು.
ಇದ್ದೊಬ್ಬ ಮಗಳನ್ನು ಇಪ್ಪತ್ತು ತುಂಬುವ ಮೊದಲೇ ಮೆಣ್ಸೆ ಸೀಮೆಯ ದೊಡ್ಡ ಮನೆತನಕ್ಕೆ ಮದುವೆ ಮಾಡಿಕೊಟ್ಟದ್ದರು ಗಣಪತಿ ಭಟ್ಟರು. ಎರಡನೇ ಮಗ ದೂರದ ಸೂರತ್‌ನಲ್ಲಿ ನೌಕರಿಯಲ್ಲಿದ್ದ. ದೊಡ್ಡ ಜಮೀನು, ವ್ಯವಹಾರ ನೋಡಿಕೊಂಡು ಹೋಗಲು ಇರಲೇ ಬೇಕಾದ ಗತ್ತು, ಗೈರತ್ತು ಗಣಪತಿ ಭಟ್ಟರಿಗಿದ್ದರೂ ಸೊಸೆಯ ಮೇಲೆ ವಾತ್ಸಲ್ಯವೇ. ಮಗ ಅನಂತನಿಗೆ ಅಪ್ಪನ ಸಿಟ್ಟು - ಹಠ ರಕ್ತಗತವಾಗಿ ಬಂದಿತ್ತು. ಇಬ್ಬರ ಕೋಪ- ತಾಪ, ಹಠದ ಸ್ವಭಾವದ ನಡುವೆಯೂ ಎಲ್ಲ ಮೆಚ್ಚುವಂತೆ ಸಂಸಾರ ತೂಗಿಸಿಕೊಂಡು ಹೋಗುವ ಜಾಣ್ಮೆಯ ಪಾಠ ಕೂಡ ಅತ್ತೆವ್ವನಿಂದ ಸೊಸೆಗೆ ನಡೆಯುತ್ತಿತ್ತು. ಜೊತೆಗೆ ಹಿತ ಮಿತ ಮಾತಿನ ಸೊಸೆ ಸಿಕ್ಕಿದ್ದು ಮಗನ ಪುಣ್ಯ ಎಂಬ ಸಮಾಧಾನ ಬೇರೆ.
ಅನಂತನ ಕೋಪ, ಹಠ ಗುಂಡಿಗದ್ದೆಯಲ್ಲಿ ಮನೆ ಮಾತಾದ ಘಟನೆಯ ಬಗ್ಗೆ ರಾಧಕ್ಕ ನರ್ಮದೆಯ ಹತ್ತಿರ ಏನಿಲ್ಲವೆಂದರೂ ಐದಾರು ಬಾರಿ ಹೇಳಿದ್ದರು. ಆ ಘಟನೆ ನಡೆದಾಗ ಅನಂತ ಭಟ್ಟನಿಗೆ ಇನ್ನೂ ಇಪ್ಪತೈದು ತುಂಬಿರಲಿಲ್ಲ. ಅದು ಆಲೆಮನೆಯ ಸಮಯ. ಅಪ್ಪ ಮಗ ಇಬ್ಬರೂ ವಾರಗಟ್ಟಲೇ ಆಲೆಮನೆಗೆ ಬೇಕಾದ ತಯಾರಿ ನಡೆಸುತ್ತಿದ್ದರು. ಆಲೇ ಒಲೆಗೆ ಬೇಕಾದ ಒಣಗಿದ ಮರದ ಕುಂಟೆ ಕಡಿಯುವ ಕೆಲಸ, ಕಬ್ಬಿನ ಹಾಲು ಹಿಡಿಯಲು ಬೇಕಾದ ದೊಡ್ಡ ದಳ್ಳೆ, ಬೆಲ್ಲ ಕಾಯಿಸಲು ಬೇಕಾದ ಕೊಪ್ಪರಿಗೆ ಆದಿಯಾಗಿ ತಯಾರು ಮಾಡಿಡುವ ಕೆಲಸ, ಕಬ್ಬನ್ನು ಹಿಂಡಿ ರಸ ತೆಗೆಯುವ ಕಬ್ಬಿನ ಕಣೆಯ ರಿಪೇರಿ - ಎಂಟು ದಿನದ ಆಲೆಮನೆಗೆ ಎಷ್ಟೆಲ್ಲ ತಯಾರಿ!
ಇನ್ನೇನು ಆಲೆಮನೆಗೆ ಎರಡು ದಿನ ಇದೆ ಎನ್ನಬೇಕಾದರೆ ರಾತ್ರಿ ಊಟವಾಗಿ ಎಲೆ ಅಡಿಕೆ ಹಾಕಿ ಕೂತ ಗಣಪತಿ ಭಟ್ಟರು ನಾಳೆ ಆಲೆ ಒಲೆಗೆ ಬೇಕಾದ ಮರದ ಕುಂಟೆಗಳನ್ನು ತಯಾರು ಮಾಡಲೇ ಬೇಕು. ನಾಡಿದ್ದು ಬೆಳಗಾದರೆ ಕಬ್ಬು ಕಡಿಯಲು ಬರುತ್ತಾರೆ. ಇನ್ನೂ ಬೆಲ್ಲ ಕಾಯಿಸಲು ಕುಂಟೆ ತಯಾರಾಗಿಲ್ಲ ಅಂದರೆ ಹೇಗೆ - ನಾಳೆ ಬೆಳಗ್ಗೆ ಮೊದಲನೇ ಕೆಲಸವೆ ಅದು ಎಂದು ಮಗ ಅನಂತನಿಗೆ ಸೂಚನೆ ಕೊಟ್ಟರು. ಜಗುಲಿಯ ಇನ್ನೊಂದು ಮೂಲೆಯಲ್ಲಿ ಸೈಕಲ್ ಒರೆಸುತ್ತ ಕೂತ ಮಗ ‘ಹ್ಮ್’ ಎಂದು ತಲೆ ಆಡಿಸಿದ. ಅಷ್ಟಕ್ಕೇ ಸುಮ್ಮನಾಗದ ಭಟ್ಟರು ‘ಮೂರು ದಿನದಿಂದ ಹೇಳ್ತಾನೇ ಇದ್ದಿ - ಹೂಂ, ಆತು ಮಾಡನ ಹೇಳ್ತೆ. ಇನ್ನೂ ಕುಂಟೆ ಮಾತ್ರ ತಯಾರಾಜಿಲ್ಲೆ. ಚೂರೂ ಜವಾಬ್ದಾರಿ ಇಲ್ಲೆ. ಕೆಲಸ ಯಾವಾಗ ಕಲಿಯದು ನೀನು?’ ಎಂದು ಕಣ್ಣು ಕೆಂಪು ಮಾಡಿದರು. ಅನಂತ ಭಟ್ಟ ಕೈಯಲ್ಲಿನ ಸೈಕಲ್ ಒರೆಸುವ ಬಟ್ಟೆಯನ್ನು ನೆಲಕ್ಕೆ ಅಪ್ಪಳಿಸಿದವನೇ ಪಕ್ಕದ ಕೊಟ್ಟಿಗೆ ಕಡೆ ಹೊರಟ. ಗಣಪತಿ ಭಟ್ಟರು ‘ಮೂಗಿನ್ ತುದಿಯ ಸಿಟ್ಟಿಗೇನೂ ಕಮ್ಮಿ ಇಲ್ಲೆ - ನಾಳೆ ಬೆಳಗಾಗೆದ್ದು ಮೂರು ದೋಸೆ ತಿಂದ್ರೆ ಸಿಟ್ಟು ಇಳೀತು’ ಎಂದು ಗೊಣಗುತ್ತಾ ಒಳ ಜಗುಲಿಗೆ ಬಂದು ಮಂಚದ ಮೇಲೆ ಅಡ್ಡಾದರು. ಇಡೀ ದಿನ ಮನೆಗೆಲಸ ಮಾಡಿ ದಣಿದಿದ್ದ ರಾಧಕ್ಕನಿಗೆ ಆಗಲೇ ಅಪರಾತ್ರಿ.
ಇತ್ತ ಅನಂತ ಕೊಟ್ಟಿಗೆ ಅಟ್ಟದಿಂದ ದೊಡ್ಡದೊಂದು ಕೊಡಲಿ ಎಳೆದುಕೊಂಡ ಕೂಡುದಾರಿಯ ಅಪ್ಪೆ ಮರ ಹಾದು ಕೆಳಗಿನ ಗದ್ದೆಯ ದಾರಿ ಹಿಡಿದ. ಅಪ್ಪಯ್ಯ ಹೇಳಿದ ‘ಚೂರೂ ಜವಾಬ್ದಾರಿ ಇಲ್ಲೆ’ ಮಾತೇ ಕಿವಿಯಲ್ಲಿ ಗುಂಯ್‌ಗುಡುತ್ತಿತ್ತು. ಕಬ್ಬಿನ ಗದ್ದೆ ಹಾಳಿಯನ್ನು ದಾಟಿ, ಹೊಸತೋಟದ ತಲೆ ಏರಿಯ ಮೇಲಿದ್ದ ಬೆಟ್ಟಕ್ಕೆ ಬಂದ. ಎರಡು ದಿನ ಮೊದಲೇ ನೋಡಿಟ್ಟಿದ್ದ ಒಣಗಿ ಬಿದ್ದ ಮರದ ಮೇಲೆ ಒಂದೆರಡು ನಿಮಿಷ ಕೂತ. ಲುಂಗಿಯನ್ನು ಎತ್ತಿ ಕಟ್ಟಿದವನೇ ಕುಂಟೆ ಒಡೆಯತೊಡಗಿದ. ಭೂತ ಮೈಹೊಕ್ಕಂತೆ ಉಸಿರು ಕೂಡಾ ತಿರುಗಿಸಿಕೊಳ್ಳದೆ ಸತತ ನಾಲ್ಕೈದು ತಾಸು ಕೊಡಲಿ ಎತ್ತಿ ಎತ್ತಿ ಹೊಡೆದ. ಒಣಗಿದ ಮರದಿಂದ ಮರಕ್ಕೆ ಸಾಗುತ್ತ ಕೈ ರಟ್ಟೆಯನ್ನು ದುಡಿಸಿದ. ಈಗ ಸಿಟ್ಟಿನ ಜಾಗದಲ್ಲಿ ಅಪ್ಪಯ್ಯನಿಂದ ಸೈ ಎನ್ನಿಸಿಕೊಳ್ಳಬೇಕೆಂಬ ಛಲ ಬಂದಿತ್ತು. ಬೆಳಗಿನ ಜಾವ ಮೂರರ ಹೊತ್ತಲ್ಲಿ ಮನೆಯ ಪಕ್ಕದ ಕೊಟ್ಟಿಗೆಯಲ್ಲಿನ ಎತ್ತುಗಳನ್ನು ಚಕ್ಕಡಿಗೆ ಹೂಡಿ ಸಾಗಿದ್ದು ಹೊಸತೋಟದ ತಲೆಯಂಚಿನ ಬೆಟ್ಟಕ್ಕೇ. ಒಡೆದು ಬೇರೆ ಮಾಡಿಟ್ಟ ಮರದ ಕುಂಟೆ, ಚಕ್ಕೆ, ಹೊಳಬುಗಳನ್ನೆಲ್ಲ ಗಾಡಿಗೆ ತುಂಬಿ, ಆಲೆ ಮನೆಗೆಂದು ಮಾಡಿದ ಚಪ್ಪರದ ಪಕ್ಕ ತಂದು ಎತ್ತುಗಳ ನೊಗ ಇಳಿಸಿದ. ಚಕ್ಕಡಿಯಲ್ಲಿದ್ದ ಮರದ ಕುಂಟೆಗಳನ್ನು ಸಾಲಾಗಿ ಜೋಡಿಸಿಟ್ಟ. ಗಾಡಿಯನ್ನು ಅಲ್ಲೇ ಬಿಟ್ಟು ಎತ್ತುಗಳನ್ನು ಕೊಟ್ಟಿಗೆಗೆ ತಂದು ಕಟ್ಟಿ ಅವುಗಳ ಮುಂದಷ್ಟು ಹುಲ್ಲು ಹರಡಿ, ನಂತರ ಭರ್ತಿ ಎರಡು ಲೋಟ ನೀರು ಕುಡಿದು ಮೆತ್ತಿ ಹತ್ತಿ ಮಲಗಿದ್ದೊಂದೇ ಗೊತ್ತು.
ಮಾರನೆಯ ಬೆಳಗ್ಗೆ ಎದ್ದ ಗಣಪತಿ ಭಟ್ಟರು ದೇವರ ಪೂಜೆ ಮುಗಿಸಿ ತಿಂಡಿ ತಿಂದರೂ ಅನಂತ ಎದ್ದು ಬರಲಿಲ್ಲ. ರಾಧಕ್ಕ ಎರಡು ಬಾರಿ ‘ಮಾಣೀ, ಮಾಣೀ’ ಎಂದು ಕೂಗಿ ಸುಮ್ಮನಾಗಿದ್ದರು. ದೋಸೆ ತಿಂದಾದ ಗಣಪತಿ ಭಟ್ಟರು ‘ಮಾಣಿಗೆ ರಾತ್ರಿಯ ಸಿಟ್ಟು ಇಳದ್ದಿಲ್ಲೆ, ಅದ್ಕೇ ಮುಸ್ಕು ಹೊದ್ದು ಮಲಗಿಕ್ಕು’ ಎಂದು ಗೊಣಗಿದವರೇ ಹೆಗಲೆ ಮೇಲೊಂದು ಟುವಾಲು ಹಾಕಿ ಗದ್ದೆಯ ಕಡೆ ಹೊರಟರು. ಪಂಪಿನ ಮನೆಗೆ ತಾಗಿಕೊಂಡಂತೇ ತಯಾರು ಮಾಡಿದ ಆಲೆಮನೆ ಚಪ್ಪರದ ಕಡೆಯೇ ಭಟ್ಟರ ಕಣ್ಣು ಹೋದದ್ದು. ಸಾಲಾಗಿ ಪೇರಿಸಿಟ್ಟ ಮರದ ಕುಂಟೆ, ಚಕ್ಕೆಗಳನ್ನು ನೋಡಿದ ಭಟ್ಟರಿಗೆ ಒಂದು ಕ್ಷಣ ಏನೂ ಬಗೆಹರಿದಂತಾಗಲಿಲ್ಲ. ಹತ್ತಿರ ಹೋಗಿ ನೋಡಿದಾಗಲೇ ಗೊತ್ತಾಗಿದ್ದು ಇದು ಮಗನ ಕಿತಾಪತಿ ಎಂದು. ‘ಎಲಾ ಇವನ’ ಎಂದವರೇ ತೋಟ - ಗದ್ದೆಯನ್ನು ಒಂದು ಸುತ್ತು ಹಾಕಿ ಹತ್ತರ ಹೊತ್ತಿಗೆ ಮನೆ ಕಡೆ ನಡೆದರು. ಅನಂತ ಆಗಷ್ಟೇ ತಿಂಡಿ ತಿಂದು ಮುಗಿಸಿ ಜಗುಲಿಯಲ್ಲಿ ರೇಡಿಯೋ ಕೇಳುತ್ತ ಕೂತಿದ್ದ. ಧಡಧಡನೇ ಒಳ ನಡೆದ ಗಣಪತಿ ಭಟ್ಟರು ‘ರಾಧೇ’ ಎಂದು ಕರೆದು ಮುಗಿಸುವ ಮೊದಲೇ ಮಗ ತಿಂಡಿ ತಿನ್ನುತ್ತ ಹೇಳಿದ್ದನ್ನೆಲ್ಲ ಸವಿಸ್ತಾರವಾಗಿ ಭಟ್ಟರಿಗೆ ವರದಿ ಒಪ್ಪಿಸಿದರು ರಾಧಕ್ಕ. ಜತೆಗೇ ‘ಮಾಣಿ ಹುಂಬ ಹೇಳಿ ಗೊತ್ತಿದ್ದೂ ನೀವು ಅವಂಗೆ ಎಂತಾರೂ ಹೇಳಿದ್ದು ಸಾಕು’ ಎನ್ನುತ್ತ ಮಗನ ಪರ ವಾದವನ್ನು ಮಂಡಿಸಿದ್ದೂ ಅಲ್ಲದೇ ಗಣಪತಿ ಭಟ್ಟರ ಪಾರ್ಟಿಗೆ ತಾವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು. ಭಟ್ಟರಿಗೆ ರಾತ್ರಿಯಿಡೀ ಕೆಲಸ ಮಾಡಿ ದಣಿದ ಮಗನನ್ನು ಕಂಡು ವಾತ್ಸಲ್ಯ ಉಕ್ಕಿದ್ದರೂ ಮಗನೆದುರು ತೋರಿಸಿಕೊಳ್ಳಲಿಲ್ಲ. ಆದರೆ ಮುಂದಿನ ಎಂಟು ದಿನ ನಡೆದ ಆಲೆ ಮನೆಗೆ ಬಂದವರ ಎದುರು ‘ಯಮ್ಮನೆ ಅನಂತ ಯನ್ ಹತ್ರ ಜಿದ್ದಿಗೆ ಬಿದ್ದು ರಾತ್ರಿ ಬೆಳಗಾಗದ್ರೊಳಗೆ ಒಬ್ಬನೇ ಅಷ್ಟೂ ಕುಂಟೆ ಮಾಡಿದ್ದ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಮಾತ್ರ ಮರೆಯಲಿಲ್ಲ.
***
ಗಣೇಶ ಚೌತಿಯ ರಾತ್ರಿ ಇದ್ದ ಕೆಲವೇ ಕೆಲವು ನೆಂಟರಿಗೆ ಬಡಿಸಿ, ತಾವೂ ಉಂಡು ಮಲಗಿದ ರಾಧಕ್ಕನಿಗೆ ಮರುದಿನದ ಗಣಹೋಮದ ಹಾಗೂ ಸಂಜೆ ಗಣಪತಿಯನ್ನು ವಿಸರ್ಜಿಸಿ ಬಂದ ಮೇಲೆ ಮಾಡಬೇಕಾದ ಸಂತರ್ಪಣೆಯ ಬಗ್ಗೆಯೇ ಚಿಂತೆ. ಮರುದಿನ ಮಧ್ಯಾನ್ನಕ್ಕೆ ಒಂದು ಐವತ್ತು ಜನ, ಸಂಜೆ ಗಣಪತಿ ಮೂರ್ತಿಯನ್ನು ಹತ್ತಿರದ ಕೆರೆಗೆ ಮುಳುಗಿಸಿ ಬಂದಮೇಲೆ ಊಟಕ್ಕೆ ಒಂದು ಐವತ್ತು - ಅರವತ್ತು ಜನ ಎಂದು ಲೆಕ್ಕ ಹಾಕುತ್ತಿತ್ತು ರಾಧಕ್ಕನ ಒಳ ಮನಸ್ಸು. ಮಧ್ಯಾನ್ನಕ್ಕಂತೂ ತೊಂದರೆ ಇಲ್ಲ. ಬೆಂಡೆಗದ್ದೆ ಖಾನಾವಳಿಯ ಅಡುಗೆ ಭಟ್ಟರು ಬರುತ್ತಿದ್ದಾರೆ. ಸಂಜೆಗೆ ಮಾತ್ರ ತಾವೇ ಅತ್ತೆ - ಸೊಸೆ ಎಲ್ಲ ಮಾಡಿಕೊಳ್ಳಬೇಕು. ನರ್ಮದೆ ಪಾಯಸ, ಚಿತ್ರಾನ್ನ ಮಾಡಿದರೆ ತಾನು ಉಳಿದೆಲ್ಲ ಮಾಡಿಯೇನು ಎಂದು ಗುಣಾಕಾರ - ಭಾಗಾಕಾರ ಹಾಕಿದ ಮೇಲೆಯೇ ರಾಧಕ್ಕ ಸಮಾಧಾನದಿಂದ ಮಲಗಿದ್ದು.
***
ಮರು ಮಧ್ಯಾನ್ನ ಗಣಹೋಮ, ಅನ್ನ ಸಂತರ್ಪಣೆ ಎಲ್ಲ ಸಾಂಗವಾಗಿ ನಡೆಯಿತು. ಕತ್ತಲಾಗುವ ಮುಂಚೆ ಗಣಪತಿ ಮೂರ್ತಿಯನ್ನು ಊರೊಟ್ಟಿನ ಕೆರೆಯಲ್ಲಿ ಮುಳುಗಿಸಿ ಬಿಡೋಣ ಎಂದ ಗಣಪತಿ ಭಟ್ಟರ ಮಾತಿಗೆ ಅನಂತನೂ ತಲೆಯಾಡಿಸಿದ. ಆ ಬಾರಿ ಭಟ್ಟರ ಮನೆಯ ಗಣಪತಿ ವಿಸರ್ಜನೆಗೆ ಬಂದ ಜನ ತುಸು ಜಾಸ್ತಿಯೇ. ಗುಂಡಿಗದ್ದೆ ಊರಿನ ಗಂಡಸರು, ರಾಧಕ್ಕ - ಗಣಪತಿ ಭಟ್ಟರ ಸಂಬಂಧಿಕರು ಎಲ್ಲರನ್ನೂ ಸೇರಿಸಿ ಹತ್ತಿರ ಹತ್ತಿರ ಎಪ್ಪತ್ತಕ್ಕೂ ಜಾಸ್ತಿ ಜನರಿದ್ದರು. ನರ್ಮದೆಯ ತವರಿಂದ ಅಪ್ಪ - ಅಮ್ಮ, ತಮ್ಮ ಎಲ್ಲ ಬಂದಿದ್ದರು.
ಹೊರಗೆ ಅಂಗಳದಲ್ಲಿ ವಿಸರ್ಜನಾ ಪೀಠದ ಮೇಲೆ ಅಲಂಕೃತ ಗಣಪ ಹಸನ್ಮುಖನಾಗಿ ಕಾಣುತ್ತಿದ್ದ. ಬೆಳಗಿನಿಂದ ಜಿರಿಜಿರಿ ಸುರಿಯುತ್ತಿದ್ದ ಭಾದ್ರಪದದ ಮಳೆ ಗಣೇಶನ ವಿಸರ್ಜನೆಗಾಗಿಯೇ ಬಿಡುವು ನೀಡಿದಂತಿತ್ತು. ಅನಂತ ಒಳಗಿನಿಂದ ಗರಿಗರಿಯಾಗಿ ಒಣಗಿಸಿಟ್ಟ ಪಟಾಕಿಯನ್ನು ಹೊರತಂದ. ಮಕ್ಕಳನ್ನಂತೂ ಹಿಡಿಯುವವರೇ ಇಲ್ಲ. ಮದ್ದಿನ ಪಟಾಕಿ ಸದ್ದಿಗೆ ಕಿಟಾರನೆ ಕಿರುಚಿಕೊಂಡ ಮೂರು ತಿಂಗಳ ಶಿಶುವನ್ನು ಸಮಾಧಾನಿಸುತ್ತಲೇ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಳು ನರ್ಮದ. ಪಟಾಕಿಯೆಲ್ಲ ಮುಗಿದ ಮೇಲೆ ‘ಗಣಪತಿ ಬಪ್ಪ ಮೋರಯಾ’ ಎಂದು ಮೊರೆಯುತ್ತ ಗಂಡಸರ ಗುಂಪು ಗಣೇಶ ವಿಗ್ರಹವನ್ನು ಊರ ಕೆರೆಯತ್ತ ಸಾಗಿತು. ಪುಟಾಣಿ ಮಗುವನ್ನು ಜೋಪಾನವಾಗಿ ಎತ್ತಿಕೊಂಡ ನರ್ಮದೆಯೂ ಅತ್ತೆವ್ವನೊಂದಿಗೆ ಹೆಜ್ಜೆ ಹಾಕಿದಳು. ಕೆರೆಯ ದಡದಲ್ಲಿ ಗಣಪತಿ ಮೂರ್ತಿಯನ್ನು ಕೂಡ್ರಿಸಿ, ವೀಳ್ಯದೆಲೆಯ ಆರತಿ ಎತ್ತಿ ಊರಿನವರ ಸಹಾಯದಿಂದ ಅನಂತ ಭಟ್ಟ ಗಣಪತಿಯನ್ನು ವಿಸರ್ಜಿಸಿದ.
ಗಣಪಗೆ ಇನ್ನೊಂದಷ್ಟು ಜಯಕಾರ ಹಾಕಿದ ಎಲ್ಲರೂ ಭಟ್ಟರ ಮನೆಯತ್ತ ಹೆಜ್ಜೆ ಹಾಕಿದರು. ಎಲ್ಲರಿಗಿಂತ ತುಸು ಮುಂದೆ ಬಂದ ನರ್ಮದೆ, ರಾಧಕ್ಕ ಸಂಜೆಯ ಊಟದ ಸಂತರ್ಪಣೆಯ ತಯಾರಿಯಲ್ಲಿ ತೊಡಗಿದರು. ಕೈಕೂಸನ್ನು ತಾಯಿಗೆ ವರ್ಗಾಯಿಸಿ ನರ್ಮದೆ ನೂರ್ಮಡಿ ಉತ್ಸಾಹದಿಂದ ವಿಶಾಲ ಜಗುಲಿಯ ಮೇಲೆ ಐವತ್ತು ಬಾಳೆ ಎಲೆಗಳನ್ನು ಅಣಿಮಾಡಿದಳು. ಮೊದಲೇ ಅಡುಗೆಯೆಲ್ಲ ತಯಾರಾದ್ದರಿಂದ ರಾಧಕ್ಕ ಎಲ್ಲರನ್ನೂ ಊಟಕ್ಕೇಳಿಸಿದರು. ಸೊಸೆ ಮಾಡಿದ ಪಾಯಸ ಇಷ್ಟೊಂದು ಜನರಿಗೆ ಬಡಿಸಲು ತುಸು ಕಮ್ಮಿಯಾಗಬಹುದು ಎಂದು ಎಣಿಸಿದ ರಾಧಕ್ಕ ‘ಇನ್ನೊಂದಷ್ಟು ಹಾಲು, ಸಕ್ಕರೆ ಹಾಕಿ ಪಾಯಸವನ್ನು ಒದಗಾಗಿ ಮಾಡ್‌ಬಿಡು’ ಎಂದು ನರ್ಮದೆಗೆ ಸೂಚನೆ ಕೊಡಲು ಮರೆಯಲಿಲ್ಲ.
ಪಂಕ್ತಿಯಲ್ಲಿ ಕೂತ ಸಂಬಂಧಿಕರು, ಗುಂಡಿಗದ್ದೆ ಊರವರು ಲೋಕಾಭಿರಾಮವಾಗಿ ಹರಟುತ್ತ ರುಚಿ ರುಚಿ ಅಡುಗೆಯನ್ನು ಹೊಗಳುತ್ತ ಊಟ ಮಾಡುತ್ತಿದ್ದರಿಂದ ಸಂತರ್ಪಣೆ ರಂಗೇರಿತ್ತು. ರಾಧಕ್ಕ ಪಾಯಸದ ಪಾತ್ರೆ ಹಿಡಿದು ಬಡಿಸಲು ಬಂದವರು ಗುಂಡಿಗದ್ದೆಯವರೇ ಆದ ಪರಮಯ್ಯನ ಎದುರು ನಿಂತು ‘ಪರಮಯ್ಯ ದಾಕ್ಷಿಣ್ಯ ಬೇಡ. ಇನ್ನೊಂದು ಸ್ವಲ್ಪ ಪಾಯಸ ಹಾಕ್ತಿ. ಯಮ್ಮನೆ ನರ್ಮದಾನೇ ಮಾಡಿದ್ದು ಪಾಯಸಾನ ಇವತ್ತು’ ಎಂದು ಒತ್ತಾಯಿಸ ತೊಡಗಿದರು. ತಕ್ಷಣ ಪರಮಯ್ಯ ‘ಎಂತಾ ಅಂದೇ? ನರ್ಮದಾ ಮಾಡಿದ್ದ ಪಾಯಸವ? ಈಗಿಂದೀಗ್ಲೇ ಎದ್ದಿ ಆನು ಪಂಕ್ತಿ ಬಿಟ್ಟು’ ಎಂದವರೇ ಆಪೋಷಣ ತೆಗೆದುಕೊಂಡು ಎದ್ದೇಬಿಟ್ಟರು ಪಂಕ್ತಿಯಿಂದ. ರಾಧಕ್ಕನ ಹಿಂದೆ ತುಪ್ಪ ಬಡಿಸಿಕೊಂಡು ಬರುತ್ತಿದ್ದ ನರ್ಮದೆ ಒಮ್ಮೆಲೇ ಬಿಳಿಚಿಕೊಂಡಳು. ತಕ್ಷಣ ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಪ್ರಯತ್ನಿಸಿದ ರಾಧಕ್ಕ ಪಂಕ್ತಿಯ ಮಧ್ಯೆ ನಿಂತ ಪರಮಯ್ಯನನ್ನು ನೋಡಿ ‘ಅರೇ, ಎಂತಾ ಆಗೋತ ನಿಂಗೆ? ನರ್ಮದಾ ಮಾಡಿದ್ದು ಪಾಯಸ ಅಂದಿ - ಅದ್ರಲ್ಲಿ ಎಂತಾ ತಪ್ಪು? ಇದೆಂತಾ ಮಳ್ಳು ವೇಶ ನಿಂದು? ಎಂತಕ್ಕೆ ಎದ್ದುಬಿಟ್ಟೆ?’ ಎಂದರು. ಕೋಪದಲ್ಲೋ, ಭಯದಲ್ಲೋ ಗಡಗಡನೆ ನಡುಗುತ್ತ ನಿಂತ ಪರಮಯ್ಯ ನಡುಗುವ ದನಿಯಲ್ಲೇ ‘ರಾಧಕ್ಕ, ನಿನ್ನ ಸೊಸೆ ಯಾವ್ ಮನೆತನದಿಂದ ಬಂದಿದ್ದು ಹೇಳಿ ಎಲ್ಲರಿಗೂ ಗೊತ್ತಿದ್ದು. ನಿನ್ನ ಸೊಸೆ ಅಪ್ಪನ ಮನೆಯವ್ವು ವಿಷ ಹಾಕ ಮನೆತನ ಹೇಳೇ ಹೆಸರು ಮಾಡಿದ್ದ. ನರ್ಮದಾ ಮಾಡಿದ್ ಪಾಯಸ ಹೇಳ್ತೆ. ಅದು ಪಾಯಸಕ್ಕೆ ಮದ್ದು ಹಾಕಿದ್ದಿಲ್ಲೆ ಹೇಳಿ ಯಾವ ಗ್ಯಾರೆಂಟಿ? ಯಂಗೆ ಮದ್ದು ತಾಗಿ ಆರೋಗ್ಯ ಹೆಚ್ಚು ಕಮ್ಮಿ ಆದ್ರೆ ಎಲ್ಲಿ ಸಾಯ್ಲಿ?’ ಎಂದು ತಡೆ ತಡೆದು ಹೇಳಿದ.
ಮದ್ದಿನ ವಿಷಯ ಕೇಳಿದ್ದೇ ಒಂದೆರಡು ಘಳಿಗೆ ಇಡೀ ಪಂಕ್ತಿ ಸ್ತಬ್ಢ. ತುಪ್ಪದ ಪಾತ್ರೆ ಹಿಡಿದ ನರ್ಮದೆಯ ಮುಖ ಪೂರ್ತಿ ಕೆಂಪಗಾದದ್ದಲ್ಲದೇ ಸಿಟ್ಟಿನಿಂದ ಥರಗುಟ್ಟತೊಡಗಿದಳು. ಇನ್ನೇನು ಮೈ ಪೂರ್ತಿ ಕಣ್ಣೀರಾಗಿ ಒಳಗೆ ಓಡುವಂತೆ ಇದ್ದ ನರ್ಮದೆ ಉಸಿರು ತಿರುಗಿಸಿಕೊಂಡು ಶುರುಮಾಡೇ ಬಿಟ್ಟಳು. ‘ಪರಮಯ್ಯ, ಎನ್ನ ಮನೆತನದ ಬಗ್ಗೆ ನಿನಗೆಂತಾ ಗೊತ್ತಿದ್ದು? ಬೇರೆಯವರ ಬಗ್ಗೆ ಮಾತಾಡ ಮೊದ್ಲು ಸ್ವಲ್ಪ ನಾಲ್ಗೆ ಬಿಗಿ ಹಿಡಿ. ಮದ್ದು ಹಾಕಿದ್ದು, ವಿಷ ಬೆರೆಸಿದ್ದು ಯಾರು? ಯನ್ನ ಅಮ್ಮನ? ಯನ್ನ ಅಜ್ಜಿಯ? ನಿನಗೆ ಗೊತ್ತಿದ್ದ? ಮನಸಿದ್ರೆ ಊಟ ಮಾಡು - ಇಲ್ದೇ ಇದ್ರೆ ಎದ್ದು ಹೋಗು. ಇನ್ನೊಮ್ಮೆ ಯನ್ನ ಅಪ್ಪನ ಮನೆ ಬಗ್ಗೆ ತುಟಿ ಪಿಟಕ್ ಅಂದ್ರೆ ಹುಶಾರ್!’ ಗುಡುಗಿದ ನರ್ಮದೆ ಥೇಟ್ ರಣಚಂಡಿಯಾಗಿದ್ದಳು. ‘ಬಾಳೆ ಎಲೆಗೆ ಬಡಿಸಿದ್ ಊಟದ ಮೇಲೆ ಆಣೆ. ಯನ್ನ ಅಪ್ಪನಮನೆ ಮನ್‌ತನ, ಮದ್ದು ಹಾಕ ಮನ್‌ತನವೇ ಸತ್ಯ ಆದ್ರೆ ಯನ್ನ ಹೊಟ್ಟೆಲ್ಲಿ ಹುಟ್ಟಿದ ಮಗ ಶಿಖಂಡಿಯಾಗಿ ಹೋಗ್ಲಿ’ ಎಂದು ಅಬ್ಬರಿಸಿ ಪಕ್ಕದ ಎಲೆಯ ಹತ್ತಿರವಿದ್ದ ನೀರಿನ ಚೊಂಬನ್ನು ಎತ್ತಿ ಗಟಗಟನೆ ಕುಡಿದ ನರ್ಮದೆ ಒಂದು ಕ್ಷಣವೂ ಅಲ್ಲಿ ನಿಲ್ಲಲಿಲ್ಲ.
ಒಂದರೆಕ್ಷಣ ಮೌನವೇ ಪಂಕ್ತಿಯನ್ನಾಳಿದ ನಂತರ ಗಣಪತಿ ಭಟ್ಟರು ಮೊದಲು ಸಾವರಿಸಿಕೊಂಡವರು. ‘ಎಲ್ಲಾ ಸಾವಕಾಶ ಊಟ ಮಾಡಿ’ ಎಂದು ಯಜಮಾನರು ಹೇಳಿಕೆ ಮಾಡಿದರೂ ಪಂಕ್ತಿಯಲ್ಲಿ ಜಾಸ್ತಿ ಹೊತ್ತು ಯಾರೂ ಕೂಡ್ರಲಿಲ್ಲ. ಪರಮಯ್ಯ ಆಗಲೇ ಭಟ್ಟರ ಮನೆಯಿಂದ ಹೊರ ನಡೆದಾಗಿತ್ತು.
***
ಇಷ್ಟೆಲ್ಲ ನಡೆದ ನಂತರ ಮಾಳಿಗೆ ಮೆತ್ತಿಯ ಕೋಣೆಯಲ್ಲಿ ಬಾಗಿಲು ಹಾಕಿ ಮಲಗಿದ ನರ್ಮದೆ ಮಗುವಿಗೆ ಹಾಲೂಡಿಸುವುದನ್ನೂ ಮರೆತಂತಿದ್ದಳು. ಅನಂತ, ರಾಧಕ್ಕ ಪಾಳಿಯ ಮೇಲೆ ಹೋಗಿ ಕರೆದದ್ದೂ ಪ್ರಯೋಜನವಾಗಲಿಲ್ಲ. ಮಗುವಿನ ಅಳು ಕೂಡ ನರ್ಮದೆಯ ಕೋಣೆಯ ಬಾಗಿಲು ತೆರೆಸಲಿಲ್ಲ.
ಮಾರನೆಯ ಬೆಳಗ್ಗೆ ಉಳಿದವರಿಗೆಲ್ಲ ಬೆಳಗಾಗುವ ಮೊದಲೇ ನರ್ಮದೆ, ಅಭ್ಯಂಗ ಸ್ನಾನ ಮುಗಿಸಿ ಗರಿ ಗರಿ ಸೀರೆಯುಟ್ಟು ಅಡುಗೆಮನೆಯ ಕೆಲಸಕ್ಕೆ ತೊಡಗಿದ್ದಳು. ಆಗ ತಾನೇ ಎದ್ದ ಮಗುವನ್ನು ಮುದ್ದುಗರೆಯುತ್ತ ‘ಅತ್ತೆವ್ವ, ದೋಸೆಗೆ ಚಟ್ನಿ ಮಾಡಿ ಬಿಡಲ’ ಎಂದು ಹಗೂರಕ್ಕೆ ಮಾತನಾಡಿದ ನರ್ಮದೆಗೆ ನಿನ್ನೆ ರಾತ್ರಿ ನಡೆದ ಘಟನೆ ನೆನಪೇ ಇಲ್ಲವೇನೋ ಅಂದು ಕೊಂಡರು ರಾಧಕ್ಕ. ಮಗುವನ್ನು ಅತ್ತೆಯ ಕೈಗೆ ವರ್ಗಾಯಿಸಿ ಎಂದಿನ ಮೃದು ದನಿಯಲ್ಲಿ ‘ನಿಮ್ಗೆ ಕಾಫೀ ಮಾಡಲಾ’ ಎಂದು ನಿಧಾನಕ್ಕೆ ಅನಂತನತ್ತ ನರ್ಮದೆ ತಿರುಗಿದಳು. ಹಿಂದಿನ ರಾತ್ರಿ ಮಾತ್ರ, ಅಷ್ಟೆಲ್ಲ ಜನರೆದುರು ದುರ್ಗೆಯ ಅವತಾರ ತಾಳಿದ್ದ ಹೆಂಡತಿ ಇವಳೇನಾ ಅಂದುಕೊಂಡ ಅನಂತ ಭಟ್ಟ ಆಲೋಚನೆಗೆ ಬಿದ್ದ.
------------------------------ X ------------------------------------
‘ನಿನ್ನ ಕೊಂದು ನಾನೇನು ಪಡೆಯಲಿ’ ಈ ಕಥೆಯನ್ನ ನಾನು 2010ರ ಅಕ್ಕ ಕಥಾ ಸ್ಪರ್ಧೆಗೆ ಕಳುಹಿಸಿದ್ದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗಿ `ದೀಪ ತೋರಿದೆಡೆಗೆ’ ಪುಸ್ತಕದಲ್ಲಿ ಸೇರ್ಪಡೆಯಾದ ಇಪ್ಪತ್ತು ಕಥೆಗಳಲ್ಲಿ ನನ್ನದೂ ಒಂದು ಎಂದು ಹೇಳಿಕೊಳ್ಳಲು ನಂಗೆ ಖುಷಿ! ಸಮ್ಮೇಳನ ಮುಗಿದು, ಪುಸ್ತಕ ಬಿಡುಗಡೆಯಾಗಿ ತಿಂಗಳುಗಳು ಕಳೆದಿದ್ದರೂ, ನಾ ಮಾತ್ರ ಒಮ್ಮೆ ಕಥಾ ಸಂಕಲನವನ್ನ ಕಣ್ಣಿಗೆ ಹಾಕಿಕೊಂಡೇ ಬ್ಲಾಗ್‌ನಲ್ಲಿ ನನ್ನ ಕಥೆಯನ್ನ ಪಬ್ಲಿಶ್ ಮಾಡಿಕೊಳ್ತೇನೆ ಎಂದು ಕೂತಿದ್ದೆ. ತಿಂಗಳಾನುಗಟ್ಟಲೆ ಕಾದೂ ಕಾದು, ವಿಕಾಸನಿಂದ ಸಾಕಷ್ಟು ಕಿಚಾಯಿಸಿಕೊಂಡ ಮೇಲೆ ಮೊನ್ನೆ ಸಂಜೆ ಒಂದಿನ ಕೊನೆಗೂ ಪುಸ್ತಕ ಬಂದೇ ಬಿಟ್ಟಿತು! ಹಾಗಾಗೇ ಈಗ ನಿಮ್ಮೆದುರಿಗೆ ನನ್ನ ಕಥೆ, sorry - ನಾ ಬರೆದ ಕಥೆ :-)
Wednesday, 6 October 2010
ಬ್ರಿಟ್ ಬಿಟ್ಸ್ ೪ - ತೆಂಗಿನಕಾಯ್ ಪುರಾಣ
ಇವತ್ತು ಆಫೀಸಿಗೆ ನಾನೊಬ್ಳೇ ಬಂದಿರಲಿಲ್ಲ. ನನ್ ಜೊತೆ ಒಂದು ತೆಂಗಿನಕಾಯಿ, ಒಂದು ಲಟ್ಟಣಿಗೆ, ಮತ್ತೊಂದು ಕಾಯಿ ತುರಿಯುವ ಮಶೀನ್ ಥರದ್ದು ಕೂಡಾ ಆಫೀಸ್‌ಗೆ ಬಂದಿದ್ವು!
ಆಫೀಸಿನಲ್ಲಿ ಸತ್ಯನಾರಾಯಣ ಪೂಜೆ ಇರ್ಲಿಲ್ಲಾರೀ.. ಇಂಡಿಯನ್ ಮೀಲ್ ಕೂಡಾ ಇರ್ಲಿಲ್ಲ. ನಮ್ಮಾಫೀಸಿನಲ್ಲಿ ಎಷ್ಟೊಂದು ಜನ ಒಡೆದ ತೆಂಗಿನ ಕಾಯಿಯನ್ನ ಜೀವನದಲ್ಲೇ ನೋಡದವರಿದ್ರು.. ಅವರೆದುರು ತೆಂಗಿನಕಾಯ್ ಒಡೆದು ತೋರಿಸುವುದಿತ್ತು, ಜೊತೆಗೆ ಅದರ ರುಚಿ ತೋರಿಸಿ ಮರುಳು ಮಾಡುವುದಿತ್ತು.
ಹಿನ್ನೆಲೆ: ’ವಾಟ್ ಹ್ಯಾವ್ ಯೂ ಗಾಟ್ ಫಾರ್ ದ ಲಂಚ್ ಟುಡೇ’ ಇದು ಪ್ರತಿದಿನ ಹನ್ನೆರಡೂಮುಕ್ಕಾಲಿಗೆ ನಾನು ಲಂಚ್‌ಬಾಕ್ಸ್ ಓಪನ್ ಮಾಡಿದೊಡನೆ ಕೇಳಿಬರುವ ಪ್ರಶ್ನೆ. ನಾನು ಬೇಕಂತಲೇ ’ಪು.ಳಿ.ಯೋ.ಗ.ರೆ’ ಅಂತ್ಲೋ, ’ಚಿ.ತ್ರಾ.ನ್ನ’ ಅಂತ್ಲೋ ಅಂದು ಈ ಹೈಕಳನ್ನ ಗೋಳಾಡಿಸ್ತೇನೆ. ಹತ್ತು ಸಲ ನಾ ಹೇಳಿದ್ದನ್ನ ರಿಪೀಟ್ ಮಾಡಲು ಟ್ರೈ ಮಾಡಿ, ಹತ್ತೂ ಸಲ ತಪ್ಪಿದ ಮೇಲೆ ’ಹೌ ಡಿಡ್ ಯೂ ಕುಕ್ ಇಟ್’ ಎಂಬ ಪ್ರಶ್ನೆ ಬಂತಂತಲೇ ಲೆಕ್ಕ. ಇನ್‌ಗ್ರೀಡಿಯಂಟ್ ಪಟ್ಟಿಯಲ್ಲಿ ಅಪರೂಪಕ್ಕೊಮ್ಮೆ ಫ್ರೆಶ್ ಕೊಕೊನಟ್ ಫ್ಲೇಕ್ಸ್ ಅಂತ ಬಂದ್ರೆ - ಕೊಕೊನಟ್ ಹೆಂಗೆ ಒಡೆದೆ? ಅದ್ರಿಂದ ಫ್ಲೇಕ್ಸ್ ಹೆಂಗೆ ತೆಗೆದೆ ಅನ್ನೋ ಪ್ರಶ್ನೆಗಳು. ಇದೇ ಕಾರಣದಿಂದ ಸೂಪರ್‌ಮಾರ್ಕೆಟ್‌ನಿಂದ ತಂದ ತೆಂಗಿನಕಾಯಿ, ಲಟ್ಟಣಿಗೆ (ತೆಂಗಿನ ಕಾಯಿ ಒಡೆಯುವುದಕ್ಕಂತ್ಲೇ ಎತ್ತಿ ಇಟ್ಟಿರೋದು), ಕಾಯಿ ತುರಿಯುವ ಮಶೀನ್ ನನ್ನ ಜೊತೆಯಲ್ಲಿ ಆಫೀಸಿಗೆ ಪಾದ ಬೆಳೆಸಿದ್ದು.
ಬೆಳಗ್ಗೆ ಆಫೀಸ್‌ಗೆ ಬಂದ ತಕ್ಷಣ ಅನೌನ್ಸ್ ಮಾಡಿ ಬಿಟ್ಟಿದ್ದೆ. ಹತ್ತೂವರೆಯ ಟೀ ಬ್ರೇಕ್‌ನಲ್ಲಿ ತೆಂಗಿನ ಕಾಯಿ ಒಡೆಯುವ/ತುರಿಯುವ ಕಾರ್ಯಕ್ರಮಕ್ಕೆ ಮುಹೂರ್ತ ಇದೆ ಎಂದು. ಅಲೆನ್, ಫಿಲ್ ಈ ಮಧ್ಯೆ ಅದೆಷ್ಟು ಸಾರಿ ಗಡಿಯಾರ ನೋಡಿದ್ರೋ ಗೊತ್ತಿಲ್ಲ. ಅಂತೂ ಸರಿಯಾಗಿ ಹತ್ತೂವರೆಗೆ ಒಂದು ಖಾಲಿ ಟೇಬಲ್ ಮೇಲೆ ಬೇಕಾದ ಸಲಕರಣೆ ಎಲ್ಲ ಇಟ್ಕೊಂಡು ಯುದ್ಧ ಸನ್ನದ್ಧಳಾದೆ. ನನ್ನ ಸುತ್ತ ಎಲ್ಲರೂ ತಲೆಗೊಂದು ಡೈಲಾಗ್ ಹೊಡೆಯುತ್ತ ನಿಂತಿದ್ದರು. ನನಗೆ ಅದ್ಯಾವುದರ ಮೇಲೂ ಲಕ್ಷ್ಯ ಇಲ್ಲ. ದೇವ್ರೇ ಒಂದೇ ಹೊಡೆತಕ್ಕೆ ಕಾಯಿ ಒಡೆದರೆ ಸಾಕಪ್ಪಾ, ಇಲ್ಲಾಂದ್ರೆ ಇವ್ರು ನನ್ನ ಹುರಿದು ಮುಕ್ಕಿಬಿಡ್ತಾರೆ ಅಂತ ಅಂದುಕೊಂಡೇ ಲಟ್ಟಣಿಗೆಯಿಂದ ತೆಂಗಿನಕಾಯಿಯ ಮೇಲೆ ಜಪ್ಪ ತೊಡಗಿದೆ. ದೊಡ್ಡಬ್ಬದಲ್ಲಿ (ದೀಪಾವಳಿ) ದನಬೈಲು ಕಟ್ಟೆಯ ಹತ್ತಿರ ನೂರರ ಲೆಕ್ಕದಲ್ಲಿ ತೆಂಗಿನಕಾಯಿ ಒಡೆಯುವ ಅಣ್ಣಂದಿರು ನೆನಪಾದರು. ಒಂದು.. ಎರಡು.. ಮೂರು.. ನಾಲ್ಕು.. ಊಹೂಂ.. ಸುತ್ತ ನಿಂತವರ ನಗು ಕಿವಿಗೆ ಅಪ್ಪಳಿಸ್ತಾ ಇತ್ತು. ’ದೇವ್ರೇ ಮರ್ಯಾದೆ ಪೂರ್ತಿ ತೆಗಿಬೇಡ್ವೋ’ ಅಂದುಕೊಳ್ಳುತ್ತಲೇ ಇನ್ನೊಂದು ಬಾರಿ ಜಪ್ಪಿದೆ ನೋಡಿ, ಲಟ್ಟಣಿಗೆ ಎರಡು ಹೋಳು! ಈಗ ನನಗೆ ನಗು ತಡೆಯಲಾಗಲಿಲ್ಲ. ನಗು ಜಾಸ್ತಿಯಾಗಿ ಕಣ್ಣಲ್ಲಿ ನೀರುಕ್ಕುತ್ತಿರುವುದು ಅಂದ್ರೆ ನಮ್ಮ ಆಫೀಸಿನವರು ಯಾರೂ ನಂಬಲಿಲ್ಲ. ಪುಣ್ಯಕ್ಕೆ ನಾನು ಕೆಲಸ ಮಾಡುತ್ತಿರುದು ಮ್ಯಾನುಫಾಕ್ಚರಿಂಗ್ ಕಂಪನಿಯಲ್ಲಿ. ಅದೆಲ್ಲಿಂದಲೋ ಒಂದು ಸುತ್ತಿಗೆ ಪ್ರತ್ಯಕ್ಷವಾಯ್ತು! ಸರಿ - ಸುತ್ತಿಗೆಯಲ್ಲಿ ಜಪ್ಪತೊಡಗಿದೆ. ಎರಡನೇ ಹೊಡೆತಕ್ಕೆ ಸಣ್ಣ ಬಿರುಕು ಬಿಟ್ಟ ತೆಂಗಿನಕಾಯಿಯ ನೀರನ್ನ ಕಪ್‌ನಲ್ಲಿ ಸಂಗ್ರಹ ಮಾಡಿ ಮೂರನೇ ಬಾರಿ ಜಪ್ಪಿದಾಗ ಅಂತೂ ಎರಡು ಭಾಗವಾಗಿ ತೆರಕೊಂಡ್ತು. ’ಒಹ್ ವಾ..ವ್’, ’ಲುಕ್ ಎಟ್ ದ ಕಲರ್’, ’ಇಟ್ ಮಸ್ಟ್ ಬಿ ಡ್ಯಾಮ್ ಟೇಸ್ಟಿ’ ಹೀಗೆ ಹೊರಡುತ್ತಿದ್ದ ಉದ್ಗಾರಗಳಿಗೇನೂ ಅಲ್ಲಿ ಬರ ಇರ್ಲಿಲ್ಲ.
ಮುಂದಿನ ಕಾರ್ಯಕ್ರಮ ಕಾಯಿ ತುರಿಯುವುದು. ಪುಟಾಣಿ ಮಶಿನನ್ನ ಟೇಬಲ್ ಟಾಪ್ ಮೇಲೆ ಪ್ರತಿಷ್ಠಾಪಿಸಿ* ನಿಧಾನಕ್ಕೆ ತುರಿಯತೊಡಗಿದೆ. ಇಲ್ಲಿ ನಾನು ಫೇಲ್ ಆಗ್ಲೇ ಇಲ್ಲ. ಐದೇ ನಿಮಿಷಕ್ಕೆ ಒಂದು ಕಾಯ್ಕಡಿ ಪೂರ್ತಿ ತುರಿದ ಜಾಣೆ ನಾನು! ಸರಿ - ಎಲ್ಲರೂ ಒಂದೊಂದು ಸ್ಪೂನ್ ಹಿಡಿದು ಬಿಜಿಯಾಗೇಬಿಟ್ರು. ಒಬ್ಬ ’ಡೆಲೀಶಿಯಸ್’ ಅಂದ, ಇನ್ನೊಬ್ಬ ’ರಿಯಲಿ ಯಮ್ಮೀ’ ಅಂದ, ಮೂಲೆಯಲ್ಲಿ ಇದ್ದ ಬಿಂಕದ ಸಿಂಗಾರಿ ಇನ್ನೊಬ್ಳು ’ನಾಟ್ ಬ್ಯಾಡ್’ ಅಂದ್ಲು. ಇವರೆಲ್ಲ ಹೀಗೆ ಗುಲ್ಲೆಬ್ಬಿಸ್ತಿರೋವಾಗ ನಾನು ಫುಲ್ ಫ್ಲಾಶ್‌ಬ್ಯಾಕ್‌ಗೆ ಹೋಗಿಯಾಗಿತ್ತು. ನಾವು ಚಿಕ್ಕವರಿರೋವಾಗ ತುರಿಯೋ ಮಣೆಯ ಎದುರು ಕೂತು, ಕಾಯಿ ತುರಿ ಗುಡ್ಡೆ ಆಗೋದನ್ನೇ ಕಾಯ್ತಾ, ಸಣ್ಣ ಗುಡ್ಡೆಯಾದ ಕೂಡ್ಲೇ ಅದ್ಕೆ ಕೈಹಾಕ್ತಾ ಇರೋ ಸೀನು, ಅಮ್ಮ ’ಕೊಳಕು ಕೈ ಆದ್ರೆ ತೊಳ್ಕಂಡು ಬಾ’ ಅಂತ ವಾರ್ನಿಂಗ್ ಕೊಡೋ ಸೀನು ಒಂದರ ಹಿಂದೊಂದು ನೆನಪಾಗ್ತ ಇತ್ತು.
* * * * * *
*ಪ್ರತಿಷ್ಠಾಪಿಸಿ - ಸರಿಯೋ?
ಪ್ರತಿಷ್ಟಾಪಿಸಿ - ಸರಿಯೋ?
Tuesday, 31 August 2010
ಸಂಧಾನ ಪರ್ವ
ಬೆಳಗ್ಗೆ ಕೇಳಿದ ನನ್ನದಲ್ಲದ ಪ್ರಶ್ನೆ
ಪ್ರಶ್ನೆಯಾಗಷ್ಟೇ ಉಳಿದಿದ್ದರೆ
ಮೂರ್ತಾಸಿನ ಮೌನ ಮಾತಾಗುತ್ತಿತ್ತೇನೋ!
ಉಬ್ಬಿದ ಗಲ್ಲ, ಗಂಟಿಕ್ಕಿದ ಹುಬ್ಬು
ಅರೆಬರೆ ಕವಿತೆಯಾಗುವುದು ತಪ್ಪುತ್ತಿತ್ತೇನೋ!
ದಿಂಬಿನ ಮೇಲೆ ಮುಖ ಒತ್ತಿ
ಬಾರದ ಕಣ್ಣೀರನ್ನು ಕರೆದೂ ಕರೆದು
ನಿತ್ರಾಣವಾದಾಗಲೇ ಆಚೆಮೊನ್ನೆ ಕಳುಹಿಸಿದ ಮೆಸೇಜ್
ಕಣ್ಣಿಗೆ ಬೀಳುವುದೆಂದರೆ ತಮಾಷೆಯ?
ನೀ ಸಮಾಧಾನಿಸಲೆಂದು ನಾನು,
ನಾನೇ ಬಗ್ಗಿ ಬರಲೆಂದು ನೀನು-
ಕಾದು ಕಾದು ಮಧ್ಯಾನ್ಹವಾದಾಗಲೇ
ಸ್ವಪ್ನಸ್ಖಲನ ಬರೀ ಹುಡುಗರಿಗೆ ಮಾತ್ರವೆಂದು
ಅವನೆಂದುಕೊಂಡರೆ ಅದೇ ನಿಜವಲ್ಲ
ಎಂಬ ಹಳೇ ಜೋಕೊಂದು ನೆನಪಾಗಿ,
ಪಕ್ಕದ ಫ್ಲ್ಯಾಟಿನಿಂದ ಹೊಮ್ಮಿದ
ಬಾಸ್ಮತಿ ಪರಿಮಳ
ನಮ್ಮಿಬ್ಬರ ಸಂಧಾನಕ್ಕೆ ಕಾರಣವಾಗಿ
ಸಿಟ್ಟೆಲ್ಲ ಹಾರಿ ಹೋಗಿ
ಒಂದೇ ಉಸಿರಲ್ಲಿ ಮೂರು ಮೆಟ್ಟಿಲು ಜಿಗಿದು
ಬಂದಾಗ ಕಾಲೂ ಉಳುಕಿತು,
ನಗಲು ನೆಪವೂ ಸಿಕ್ಕಿತು
ಎಂದರೆ ನಿನಗೆ ಅಚ್ಚರಿಯ?
Labels:
ಕವಿತೆಯಲ್ಲದ್ದು,
ನೀನು,
ಮುಗುಳು,
ಹಾಳ್ಹರಟೆ
Friday, 11 June 2010
ಕವಿತೆಯಾಗದ ಕೊಲಾಜ್
ಕಿವಿಯೆಲ್ಲ ಗುಂಯ್‌ಗುಟ್ಟಿ ಇನ್ನು ಮಲಗಲು ಸಾಧ್ಯವಿಲ್ಲ ಎಂದು ಕಣ್ಣು ಬಿಟ್ಟಾಗಲೇ ‘your attention please..' ಎಂದ ಪೈಲಟ್ ಬೆಂಗಳೂರಿನಲ್ಲಿ ಇಳಿಯಲು ಇನ್ನು ಹದಿನೈದು ನಿಮಿಷ ಮಾತ್ರ ಇದೆ ಅಂತ ಹೇಳಿದ್ದು ಕಾಕತಾಳೀಯ. ಗೌಜು, ಮಾತು, ಕೇಕೆ, ಕುಶಲೋಪರಿಯ ನಡುವೆ ಅತ್ತೆ ಮಾಡಿದ ಸಾರಿನ ರುಚಿ ನೋಡಿ ಯಾವ ಕಾಲವಾಯ್ತೋ ಅನ್ನಿಸಿದಾಗ ನಿಜವಾಗಲೂ ಹಸಿವಿತ್ತಾ? ರೂಮನ್ನು ನೀಟಾಗಿ ಜೋಡಿಸಿಟ್ಟು ಅಂದೆಂದೋ ಮುರಿದಿದ್ದ ಚಿಲುಕವನ್ನು ಸರಿಮಾಡಿ, ನನ್ನ ಡ್ರೆಸ್ ಹಾಕ್ಕೋ ಎಂದ ಅಕ್ಕ. ಚಿಕ್ಕಿಗೆ ಬರದ ತುಳುವಿನಲ್ಲಿ ಹತ್ತಾರು ಪ್ರಶ್ನೆ ಕೇಳಿ ತಬ್ಬಿಬ್ಬು ಮಾಡಿ - ತಂದ ಉಡುಗೊರೆಯನ್ನು ಜೋಪಾನವಾಗಿ ಎತ್ತಿಟ್ಟುಕೊಂಡ ಮಗಳು. ಕೆನ್ನೆಯ ಮೇಲೆ ಹೂ ಮುತ್ತ ಒತ್ತಿ ಹೆಂಗಿದ್ಯೇ ಕೂಸೆ ಎಂದು ಮುಗಿಬಿದ್ದ ಜೀವದ ಗೆಳತಿ. ಬಸ್ ಟಿಕೆಟ್ ತಂದುಕೊಟ್ಟು, ಊರಿಂದ ಬೇಗ ಬಾ - ನಮ್ಮೊಂದಿಗೂ ಎಂಟು ದಿನ ಇರು ಎಂದ ಮಾವ.
ಎಂಟು ತಾಸು ಬಸ್ಸಿನ ಹಾದಿಯಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಸೆಲ್‌ಫೋನ್‌ನ ಗಡಿಯಾರದತ್ತ ಹಾಯುವ ಕಣ್ಣು. ಪಕ್ಕದಲ್ಲಿ ಕೂತ ಹುಡುಗ ಏರು ದನಿಯಲ್ಲಿ ಗೆಳೆಯನೊಡನೆ ಮಾತನಾಡಿದರೂ ಸಿಡಿಮಿಡಿಗುಟ್ಟದ ಮನಸ್ಸು. ಗೊಬ್ಬರ ಗುಂಡಿ ಅಂಚಿಗೆ ಸಾಲಾಗಿ ಬಂದು ನಿಂತ ಆಯಿ, ಚಿಕ್ಕಮ್ಮ, ಅತ್ತಿಗೆ - ಯಾರನ್ನ ಕಣ್ತುಂಬಿಕೊಳ್ಳಲಿ? ಚೌಕಡಿ ಕಲ್ಲು ಕೂಡ್ರಿಸಿದ ಜಗುಲಿಗೆ ಬಂದ ಕೂಡಲೇ ಉದ್ದ ಕಣ್ರೆಪ್ಪೆಯ ಕುತೂಹಲ ತುಂಬಿದ ಕಣ್ಣನ್ನು ನನ್ನೆಡೆಗೆ ತಿರುಗಿಸಿ ‘ಅತ್ತೇಏಏಏ’ ಎಂದು ಮುಖ ಅರಳಿಸಿದ ಅಳಿಯ. ‘ರಾಶೀ ಸೆಖೆಯಾದ್ರೆ ಹೇಳು - ಮೆತ್ತಿಂದಾ ಫ್ಯಾನ್ ತಗ ಬರ್ತಿ’ ಎಂದ ಅಣ್ಣಯ್ಯನಿಗೆ ವರ್ಷದಂದ ಕೂಡಿಟ್ಟ ಕಾಳಜಿಯನ್ನು ಈ ಒಂದು ತಿಂಗಳಿನಲ್ಲಿ ತಂಗಿಯೆಡೆಗೆ ಹರಿಸಿಬಿಡುವ ತವಕ. ‘ಕಬ್ಬಿನ್‌ಹಾಲು ಕುಡೀದೆ ವರ್ಷದ ಮೇಲಾತು ಅಲ್ದ? ಹೊಟ್ಟೆ ತೊಳದು ಹೋಪಷ್ಟು ಕುಡಿ’ ಎಂದ ಅಪ್ಪಯ್ಯ. ಮೊದಲು ಫೋನಿನಲ್ಲಿ ಕೇಳಿದ್ದೇ ಸುಳ್ಳು ಎಂಬಂತೆ ಊರಿನಲ್ಲಿ ಇಡೀ ವರ್ಷ ನಡೆದ ಘಟನೆಗಳನ್ನು ಸವಿಸ್ತಾರವಾಗಿ ಹೇಳಿದ ಕಾಕ. ಒಲೆ-ಕಟ್ಟೆಯ ಮೇಲೆ ಕೂತು ಆಯಿ, ಅತ್ತಿಗೆಯರ ಕಷ್ಟ ಸುಖ ಕೇಳುವಾಗ ಯೂರೋಪ್ ಸುತ್ತಿ ಬಂದ ಸುದ್ದಿಯನ್ನು ಮತ್ತೆ ಎತ್ತುವುದು ಬೇಡ ಎನ್ನಿಸಿದ್ದು ಯಾಕೆ? ‘ನೀನು ಸಮಾಧಾನಿ ಆಗೋಜೆ ಈಗಿತ್ಲಾಗಿ, ಕೂಗದು - ಕಬ್ಬರಿಯದು ಎಲ್ಲಾ ಮರ್ತೋಜ?’ ಎಂದ ಚಿಕ್ಕಮ್ಮನಿಗೆ ದನಿಗೂಡಿಸಿದ ಅತ್ತಿಗೆ ನನ್ನ ವಯಸ್ಸು ಮರೆತಿರಬೇಕು. ‘ತಂಗೀ ಹೋದ್ಸಲ ಬಂದಾಗ ಬಲಾ ಆಗಿದ್ದೆ ಚೊಲೊವಾ, ಈ ಸಲ ಸಣ್ಣ ಆಗೋಗಿದಿಯೆ. ಸರೀ ತಿನ್ನುದಿಲ್ವೇನ ಅಲಾ?’ ಎಂದ ಲಲಿತಾಗೆ ಸೈಕ್ಲಿಂಗ್, ಸ್ವಿಮ್ಮಿಂಗ್, ಸಾಲಡ್ ಸ್ಯಾಂಡ್‌ವಿಚ್, ಹೆಲ್ದೀ ಡಯಟ್ ಬಗ್ಗೆ ಯಾವ ಉದಾಹರಣೆ ಕೊಟ್ಟು ತಿಳಿ ಹೇಳಲಿ?
ಗೆಳತಿ ಒತ್ತಾಯಿಸಿ ಮೂರು ಬಾರಿ ಬಡಿಸಿದ ರಸಾಯನ, ಮಲಗಿದಾಗ ಮಾತ್ರ ನೋಡಿದ ಇನ್ನೊಬ್ಬ ಗೆಳತಿಯ ಮಗು, ಫೋನ್ ಮಾಡ್ತಾ ಇರೇ - ಎಂಬ ಕಾಳಜಿಯ ಮಾತು.. ಅಲ್ಲೆಲ್ಲೋ ಮದುವೆ ಮನೆಯಲ್ಲಿ ಖಾರದ ಮಾವಿನಕಾಯ್ ಗೊಜ್ಜು, ಬಿಸಿ ಬಿಸಿ ಸಂಡಿಗೆ ತಿನ್ನುವಾಗ ಇವ ಇವತ್ತು ಬೆಳಿಗ್ಗೆಯೂ ಕಾರ್ನ್ ಫ್ಲೇಕ್ಸ್ ತಿಂದಿರಬಹುದು ಎನ್ನಿಸಿ ನಿಟ್ಟುಸಿರು, ನಾಳೆ ಬಂದಿಳೀತಾನಲ್ಲ ಎಂಬ ಸಮಾಧಾನ. ತೆಂಗಿನ ಕಾಯ್ ಎಷ್ಟು ರೂಪಾಯಿ?, ಕರೆಂಟ್ ಒಲೆ ಮೇಲೆ ದ್ವಾಸೆ ಮಾಡದು ತ್ರಾಸೆನ ಅಲ್ದ? ಅಲ್ಲೆಲ್ಲ ಮುದ್ಕೀರೂ ಪ್ಯಾಂಟ್ ಹಾಕ್ಯತ್ವ? ಅಲ್ಲಿಯವ್ವು ಮಾತಾಡಿದ್ದು ಅರ್ಥ ಆಗ್ದೇ ಇದ್ದಾಗ ಮಳ್ ಮಕಾ ಮಾಡಕಾಗ್ತ? ಊರಿಗೆ ದಿನಾ ಫೋನ್ ಮಾಡಿದ್ರೆ ಖರ್ಚು ಜಾಸ್ತಿ ಬರ್ತಿಲ್ಯ? ಇನ್ನೆಲ್ಲಾ ಸಾಕು ಪ್ಲಾನಿಂಗು - ಮುಂದಿಂದೆಂತು ಯೋಚ್ನೆ ಮಾಡಿದ್ರ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟೂ ಕೊಟ್ಟು ಮಾರನೇ ದಿನ ಬೆಳಿಗ್ಗೆ ಧ್ವನಿ ಗೊಗ್ಗರಾಯ್ತಲ್ಲ! ‘ತಂಗೀ ಆನು ನೋಡದೆಲ್ಲ ನೋಡಾತು, ಮಾಡದೆಲ್ಲ ಮಾಡಾತು. ಇನ್ನು ದೇವ್ರು ಕರ್ಕಂಡು ಹೋಗ್ಲಾಗಿತ್ತು’ ಎನ್ನುವ ಅಜ್ಜಿ. ‘ರಾತ್ರೆ ನಾಟ್ಕ ನೋಡಲೆ ಹೋಗ್ತ್ರ? ಹಂಗಾದ್ರೆ ಆನೂ ಬರ್ತಿ’ ಎಂದ ಜೀವನಪ್ರೀತಿಯ ಅಜ್ಜ. ಇವೆರಡರಲ್ಲಿ ಯಾವ ಮಾತನ್ನು ಮರೆಯುವುದುಂಟು?
ಒಂದು ಅಚ್ಚರಿಯ ನೋಟ, ಒಂದು ಅಪ್ಪುಗೆಯ ನಂತರ ನಾ ಹೇಳಿದ್ದು ಗುಡ್ ಟು ಸೀ ಯೂ - ಅಂವ ಹೇಳಿದ್ದೂ ಗುಡ್ ಟು ಸೀ ಯೂ.. ಎರಡೂವರೆ ವರ್ಷದಿಂದ ಮುಖಾಮುಖಿಯಾಗದೇ ಇದ್ದುದ್ದಕ್ಕಿರಬೇಕು, ಮಾತೇ ಹೊರಡುತ್ತಿಲ್ಲ ಇಲ್ಲಿ. ಹುಟ್ಟಿದಾಗಿನಿಂದ ಅವಳಿಯಂತಿದ್ದ ಈ ಅಣ್ಣನನ್ನು ಇಷ್ಟೆಲ್ಲ ದಿನ ನೋಡದೆ ಇದ್ದುದೇ ಇಲ್ಲ! ‘ಇದು ನಾನೇ ಆರ್ಸಿದ್ದು ನಿಂಗೆ ಹೇಳಿ’ ಎನ್ನುತ್ತ ಚೆಂದದ ಟಾಪ್ ತೋರಿಸಿದ ಪುಟಾಣಿ ಗೆಳತಿ ‘ಇಷ್ಟ ಆತ?’ ಎಂದು ಕೇಳಿದಾಗ ಉತ್ತರ ಏನು ಕೊಟ್ಟೆನೋ ನೆನಪಿಲ್ಲ. ಮತ್ತೊಂದು ಬೆಳಗ್ಗೆ ಇನ್ನೂ ನಿದ್ದೆ ಕಳೆಯದ ಕಣ್ಣ ತಿಕ್ಕುತ್ತಿರುವಾಗ ‘ಚಾ ಮಾಡಿ ಕೊಡ್ಲ?’ ಎಂದು ಮಮತೆಯಿಂದ ಕೇಳಿದ ಇದೇ ಪುಟಾಣಿ ಗೆಳತಿಗೆ ನೀ ತುಂಬ ಬೆಳೆದಿದ್ದೀ ಎಂದು ಹೇಳುವುದನ್ನೂ ಮರೆತೆ ಎಂದು ಈಗ ಅನ್ನಿಸುತ್ತಿದೆ.
ನನ್ನ ಪ್ರೀತಿಸುವ ಜನರೇ.., ಬ್ಯಾಗು ಹಿಡಿದು ಹೊರಟ ಆ ಹೊತ್ತಲ್ಲಿ ಶಬ್ದಗಳೆಲ್ಲ ಗಂಟಲಲ್ಲಿ ಅಡ್ಡಡ್ಡ ಸಿಕ್ಕಿದ ಅನುಭವ. ನಿಮ್ಮನ್ನೆಲ್ಲ ವರ್ಷ ಪೂರ್ತಿ ಮಿಸ್ ಮಾಡಿಕೊಳ್ತೇನೆ ಎಂಬ ಮಾತೊಂದು ಬಾಯಿಂದ ಹೊರಬಿದ್ದು ಬಿಟ್ಟಿದ್ದರೆ ಅಲ್ಲೇ ಅರ್ಧ ತಾಸು ಅಳುತ್ತ ಕೂತಿರಬೇಕಿತ್ತು. ಅಂತಲೇ ನಗು ಮುಖದೊಂದಿಗೆ ಇವನ ತೋಳಲ್ಲಿ ತೋಳು ಹಾಕಿ ಹೊರಟು ಬಿಟ್ಟೆ. ಪೂರ್ತಿ ಮೂವತ್ತೊಂದೂವರೆ ದಿನ ನಿಮ್ಮೆಲ್ಲರೊಡನೆ ಖುಷಿಯಿಂದ ಕಳೆದ ನೆನಪು ನನ್ನ ಜೊತೆಗಿತ್ತು. ತುಂಬ ಎಮೋಷನಲ್ ಆದಾಗ ಒರಗಲು ಒಂದು ಹೆಗಲೂ ಇತ್ತು. ಹಾಗಾಗಿ ನಗು ಮುಖದ ಸೋಗು ಹಾಕುವುದು ಕಷ್ಟವಾಗಲಿಲ್ಲ.
ಇಷ್ಟೆಲ್ಲ ಬರೆಸಿದ್ದು ನೀವೆಲ್ಲ ನನ್ನವರೆಂಬ ಖುಷಿಯೇ ಹೊರತು ಮತ್ತಿನ್ನೇನಲ್ಲ :-)
Subscribe to:
Posts (Atom)