Sunday 10 February 2008

ಅಜ್ಜೀ ನೀ ಇರಬೇಕಾಗಿತ್ತೇ...

ಇಂದು ನೀನಿಲ್ಲ,
ನಿನ್ನ ಕೆಂಪು ಮಡಿಯುಂಟು
ನಿನ್ನ ಬೋಳುತಲೆಯ ನೆನಪು ನನಗುಂಟು
ವರ್ಷಕ್ಕೊಮ್ಮೆ ನಿನ್ನ ಫೋಟೊ
ನನ್ನಿಂದ ಸಿಂಗರಿಸಿಕೊಳ್ಳುವುದೂ ಉಂಟು

ಈಗ ನೀನಿರುತ್ತಿದ್ದರೆ
ನಮ್ಮನೆ ಹೀಗಿರುತ್ತಿರಲಿಲ್ಲ
ಆಯಿಯ ಕಣ್ತಪ್ಪಿಸಿ ಮೂರೂ ದಿನ
ಒಳಗಿರುತ್ತಿರಲಿಲ್ಲ ನಾನು
ಅಪ್ಪಯ್ಯನ ಮಾತನ್ನು ಉಫ್ ಎನ್ನಿಸಿ
ಸ್ನಾನ ಸಂಧ್ಯಾವಂದನೆಗಳನ್ನು
ದೇವರಿಗೇ ಬಿಡುತ್ತಿರಲಿಲ್ಲ ಅಣ್ಣ
ನಿನ್ನ ಒಂದು ನಜರು ಆಯಿಯ ಮೇಲಿದ್ದರೆ
ಹಬ್ಬದಲ್ಲಿ ಹೋಳಿಗೆ ಊಟ ತಪ್ಪುತ್ತಿರಲಿಲ್ಲ
ಸಾಲ ಮಿತಿ ಮೀರುತ್ತಿರಲಿಲ್ಲ

‘ಕೂಸು ಹುಟ್ಟಿದಳು - ಕುನ್ನಾಶಿ ಹುಟ್ಟಿದಳು
ಬೆಳಗಿದ್ದ ಮನೆಯನ್ನು ತೊಳೆಯಲ್ಹುಟ್ಟಿದಳು,
ಮಾಣಿ ಹುಟ್ಟಿದನು - ಮಾರಾಜ ಹುಟ್ಟಿದನು
ಭತ್ತದ ಕಣಜವ ಕಟ್ಟಲ್ಹುಟ್ಟಿದನು’
ಇದು ನಿನ್ನ ಫೆವರಿಟ್ ಗಾದೆ, ನನ್ನ ಕೆಣಕಲು
ಆಗೆಲ್ಲ ನಾನು ಅಬ್ಬರಿಸುತ್ತಿದ್ದೆ
ನೀ ನನ್ನ ಸೆರಗೊಳಕ್ಕೆ
ಎಳಕೊಂಡು ಸಮಾಧಾನಿಸುತ್ತಿದ್ದೆ

ಈಗ ನೀನಿಲ್ಲ
ನಿನ್ನ ಬೆಚ್ಚನೆಯ ಮಡಿಲಿಲ್ಲ
ಕಾಗಕ್ಕ- ಗುಬ್ಬಕ್ಕನ ಕತೆ
ನನಗೆ ಕೇಳುತ್ತಿಲ್ಲ
ದಿನವೆಲ್ಲ ಅಪ್ಪಯ್ಯನ ತತ್ತ್ವಜ್ಞಾನದ ಕೊರೆತ
ಆಯಿಯ ಹಿತವಚನದೊಂದಿಗೆ ರಾತ್ರಿ
ಅಣ್ಣನೊಡನೆ ಕಿತ್ತಾಟದೊಂದಿಗೆ ಬೆಳಗು.

6 comments:

ಶಾಂತಲಾ ಭಂಡಿ (ಸನ್ನಿಧಿ) said...

ದೋಸ್ತಾ...
ಬ್ಲಾಗ್ ಪ್ರಪಂಚಕ್ಕೆ ಸ್ವಾಗತ. ಸೂಪರ್ ಕವಿತೆ ಇದು ಮಾತ್ರ, ಯಾವತ್ತೂ ನೀ ಬರೆದಂಗೆ.....
ಬರಿ, ಬರೀತಾ ಇರು.

ತೇಜಸ್ವಿನಿ ಹೆಗಡೆ said...

ನಂಗೂ ಎಷ್ಟೋ ಸಲ ಅನಸ್ತಾ ಇರ್ತು.. ನನ್ನಜ್ಜಿನೂ ಬದ್ಕಿದ್ದಿದ್ರೆ ಹೇಳಿ! ಒಳ್ಳೆಯ ಕವನ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ದೋಸ್ತಾ,
ಆಹಾ.. ಎಂಥಾ ವಾರ್ಮ್ ವೆಲ್ಕಮ್!

ತೇಜಸ್ವಿನಿ,
ಕವಿತೆಯೆಡೆಗೆ ಕಣ್ಣು ಹಾಯಿಸಿದ್ದಕ್ಕೆ ಥಾಂಕ್ಸ್!

ಮನಸ್ವಿ said...

ತುಂಬಾ ಚನ್ನಾಗಿ ಬರೆದಿದ್ದೀರಿ..
ನನ್ನಜ್ಜಿಯು ೯೮ ವರ್ಷ ಆರೋಗ್ಯವಾಗಿ ಬದುಕಿದ್ದಳು..
( ಕೆಂಪಿ ಸೀರೆ ಅಮುಮ್ಮ ಅಂತಾನೆ ನಂಗ ಕರಿತಿದ್ಯ ಅವಳನ್ನ)
ಪತ್ಯ ಮಾಡುವುದನ್ನ ಅವಳಿಂದ ಕಲಿಯಬೇಕಿತ್ತು
ಬದುಕಿರುವ ಕೊನೆಯ ಕ್ಷಣದವರೆಗೂ ತನ್ನ ಕೆಲಸ ತಾನೆ ಮಾಡಿಕೊಂಡು ಆರೋಗ್ಯವಗಿದ್ದವಳು
ಅಗಲಿ ಹೋಗಿಬಿಟ್ಟಳು ಹೇಳದೆ ಕೇಳದೆ..........
ಅವಳ ನೆನಪು ಆಗ್ತಿದ್ದು..
ಮತ್ತೊಮ್ಮೆ ದನ್ಯವಾದಗಳು...

Anonymous said...

ಪೂರ್ಣಿಮಾ,
ಈ ಕವಿತೆ ಓದುತ್ತಿದ್ದರೆ ನನಗೆ ನಾನು ಕಳೆದ ಬಾಲ್ಯದ ನೆನಪುಗಳು ತೋರಣಗಳಾಗಿ ಪೋಣಿಸಿ ಬಂದುವು. ನಾನು ಅತೀ ಹೆಚ್ಚು ಪ್ರೀತಿಸುತ್ತಿದ್ದ ಅಜ್ಜಿಯ ಕೊನೆಯ ದಿನಗಳಲ್ಲಿ, ಅದರಲ್ಲೂ ಆಕೆ ಈಗಲೋ.. ಆಗಲೋ ಎಂಬ ಸನ್ನಿವೇಶದಲ್ಲಿ ಅಕೆಯಿಂದ ಕಾರ್ಯ ನಿಮಿತ್ತ ದೂರವಾದೆ. ನಾನು ಹೋಗುತ್ತಿರುವುದು ಆಕೆಗೆ ಗೊತ್ತಿತ್ತು, ಆಕೆಯ ಕೊನೆಯ ದರ್ಶನ ಭಾಗ್ಯ ನನಗೆ ಸಿಗಲ್ಲ ಅಂತ ನನಗೂ ಗೊತ್ತಿತ್ತು. ಮಲಗಿದ್ದಲ್ಲಿಂದಲೇ ಆಶೀರ್ವಾದ ಮಾಡಿ ಹಣೆಗೆ ಮುತ್ತಿಟ್ಟು ಕಳುಹಿಸಿ ಕೊಟ್ಟ ಅಜ್ಜಿಯ ನೆನಪಾಯಿತು. ಬೆಳಿಗ್ಗಿನ ಹೊತ್ತು ಅಜ್ಜಿಯ ಸೆರಗೊಳಗೆ ಹೊದ್ದು, ಆಕೆ ಹಾಡುತ್ತಿದ್ದ ' ರಂಗಾ ನಾಯಕ.. ರಾಜೀವ ಲೋಚನ ರಮಣ ನೀ ಬೆಳಗಲು... ಉದಯಕಾಳದೊಲ್ ನೀ ಎದ್ದು.... ಎಂತಹ ಹ್ರುದ್ಯ ಭಾವನೆಗಳು. ಅಜ್ಜಿಯ ಸಂಗಡ ನಾ ಕಳೆದ ಬಾಲ್ಯ,ಯೌವ್ವನ ಗಳನ್ನು ನೆನಪಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.

Ranjita said...

ಚೊಲೋ ಇದ್ದು ಕವನ ...
ನಂಗು ಅಜ್ಜಿ ನೆನಪಾಗಿ .. ಬೇಜಾರ್ ಆಗ್ತಾ ಇದ್ದು :(