Sunday 17 February 2008

ದಕ್ಕಿದ್ದು

ತಣ್ಣಗಿನ ಗಾಳಿಯಲ್ಲಿ - ಮೋಡಗಳ ಮಡಿಲಲ್ಲಿ
ಇವರೆಲ್ಲರೊಡನೆ ಸಂಭ್ರಮಿಸುವಾಗ
ಥಟ್ಟನೆ ಒತ್ತರಿಸುವ ನೆನಪು-
ಗದರಿಸಿ ಓಡಿಸಿದರೂ
ಬೆದರಿಸಿ ಕಳಿಸಿದರೂ
ಮತ್ತಷ್ಟು ಸನಿಹ

ಕಡಲ ತಡಿಯಲ್ಲಿ
ತೀರದುದ್ದಕ್ಕೂ ಅಲೆಯುತ್ತಿರುವಾಗ
ಪ್ರತಿ ಅಲೆಯೂ ಹೊತ್ತು ತರುವ
ಹೊಸ ಹಂಬಲಗಳು-
ಈ ಹಂಬಲಗಳು ಮುಗಿಯುವುದೆಂದೋ,
ಆ ಅಲೆಗಳು ನಿಲ್ಲುವುದೆಂದೋ
ಮತ್ತದೇ ಅಸ್ಪಷ್ಟ ಅಂತರಂಗ...

ಹೂಗಿಡಗಳಿಗೆ ನೀರು ನೆಪಮಾತ್ರ
ದೃಷ್ಟಿ ಪೂರ್ತಿ ರಸ್ತೆಯತ್ತ
ಕಾಲ್ಬುಡದ ಮುಳ್ಳೂ ಲೆಕ್ಕಕ್ಕಿಲ್ಲ
ಮನದ ತುಂಬ
ಬಗೆಹರಿಯದ ಕಾತರಿಕೆ ಮಾತ್ರ...

ವರ್ಷಾಂತ್ಯದಲ್ಲಿ ಲೆಕ್ಕಾಚಾರಕ್ಕೆ ಕೂತರೆ
ನನ್ನಲ್ಲಿ ಉಳಿದಿದ್ದಿಷ್ಟೇ
ಅದೇ ಹಳೆಯ ಪರಿಭ್ರಮಣೆ,
ಮತ್ತದೇ ಹಳಸಲು ಸಂಕಲನ - ವ್ಯವಕಲನ.

4 comments:

sunaath said...

ನಿಮ್ಮ ಕವನ ಓದಿ ಬೇಂದ್ರೆಯವರ ’ಸಖೀಗೀತ’ದ ಕೆಲವು ಸಾಲುಗಳು ನೆನಪಾದವು:
"ಇರುಳು ತಾರೆಗಳಂತೆ ಬೆಳಕೊಂದು ಹೊಳೆಯುವದು,
ಕಳೆದ ದುಃಖಗಳಲ್ಲಿ ನೆನೆದಂತೆಯೆ".

ತೇಜಸ್ವಿನಿ ಹೆಗಡೆ said...

ಸುಂದರ ಕವನ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಸುನಾಥ್,
ತುಂಬ ದೊಡ್ ಮಾತು...
ಒಳ್ಳೆಯ ಸಾಲುಗಳನ್ನು ನೆನಪಿಸಿ ಕೊಟ್ರಿ :)

ತೇಜಸ್ವಿನಿ,
ಥಾಂಕ್ಯೂ...

shivu.k said...

ಪೂರ್ಣಿಮಾ ಮೇಡಮ್,

ನಿಮ್ಮ ಕವನದಲ್ಲಿ ಒಳ-ಹೊರ ಲೆಕ್ಕಾಚಾರದ ಕಲ್ಪನೆ ತುಂಬಾ ಚೆನ್ನಾಗಿದೆ....ವಾಸ್ತವಕ್ಕೂ ಕಲ್ಪನೆಗೂ ಒಳ್ಳೆಯ ಲಿಂಕು ಇದೆ....
ವರ್ಷಾಂತ್ಯದಲ್ಲಿ ಲೆಕ್ಕಾಚಾರಕ್ಕೆ ಕೂತರೆ
ನನ್ನಲ್ಲಿ ಉಳಿದಿದ್ದಿಷ್ಟೇ
ಅದೇ ಹಳೆಯ ಪರಿಭ್ರಮಣೆ,
ಮತ್ತದೇ ಹಳಸಲು ಸಂಕಲನ - ವ್ಯವಕಲನ.

ಕೊನೆಯ ಸಾಲುಗಳು ವಾಸ್ತವದ ಚಿತ್ರಕ್ಕೆ ಕನ್ನಡಿ ಹಿಡಿದಿವೆ...

ಮತ್ತೆ ನನ್ನ ಬ್ಲಾಗಿನಲ್ಲಿ ಪುಟ್ಟ ಸಂತೋಷಗಳನ್ನು ಅನುಭವಿಸಲು ಬಂದಿದ್ದಕ್ಕೆ ಥ್ಯಾಂಕ್ಸ್...

ಮತ್ಮರ್ಡು ಊರು...ಅಲ್ಲಿನ ಕೆಲವು ಸನ್ನಿವೇಶಗಳು...ಪುಟಾಣಿಗಳು...ಬಟಾಣಿಗಳು...ಮತ್ತೆ ಕೆಲವು ಅದ್ಬುತ ಘಟನೆಗಳ ಬಗ್ಗೆ ಮುಂದೆ ಬರೆಯುವುದಿದೆ..ಆಗ ಖಂಡಿತ ಬನ್ನಿ...ಕಾಯುತ್ತಿರುತ್ತೇನೆ...

ನಿಮ್ಮ e mail id ಕೊಟ್ಟರೆ ನಾನು ಹೊಸದಾಗಿ ಬರೆದಿದ್ದನ್ನು ಎಲ್ಲರಿಗೂ ಮೇಲ್ ಮಾಡಿ ತಿಳಿಸುವಂತೆ ನಿಮಗೂ ತಿಳಿಸಬಹುದು...ಮೇಲ್ ಐಡಿ ಕೇಳುತ್ತಿದ್ದೇನೆಂದು ಏನು ಅಂದುಕೊಬೇಡಿ ಮೇಡಮ್....ಥ್ಯಾಂಕ್ಸ್...