Sunday, 22 March 2009

ಹದಿನೆಂಟರ ಹೆಜ್ಜೆಗುರುತು

ಛೆ..ಛೇ... ದಿನಗಳು ಬಿಡುವಿಲ್ಲದಂತೆ ಓಡುತ್ತಿವೆಯೋ, ಓಡುವ ದಿನಗಳಿಗೆ ತಡೆ ಹಾಕುವವರಿಲ್ಲವೋ ತಿಳಿಯುತ್ತಿಲ್ಲ - ಅಂತೂ ವರ್ಷಗಳು ದಿನಗಳಂತೇ, ದಿನಗಳು ಕ್ಷಣಗಳಂತೆ ಕಣ್ಣೆದುರಿನಲ್ಲೇ ಕೈತಪ್ಪಿ ಹೋಗುತ್ತಿರುವುದಂತೂ ನಿಜ. ಓಡುತ್ತಿರುವ ಈ ದಿನಗಳು ತಮ್ಮೊಟ್ಟಿಗೆ ನಮ್ಮ ವಯಸ್ಸನ್ನೂ - ಆಯಸ್ಸನ್ನೂ ಕೊಂಡೊಯ್ಯುತ್ತಿರುವುದೂ ಅಷ್ಟೇ ನಿಜ.

ಅಣಕಿಸುವ ಹುಡುಗರನ್ನು ಬೆದರುಗಣ್ಣುಗಳಿಂದ ನೋಡಿದ್ದು, ಇತರರ ಹಂಗೇ ಇಲ್ಲದಂತೆ - ಯಾರಿಗೂ ಕೇರ್ ಮಾಡದಂತೆ ಓಡಾಡುವ, ಓಲಾಡುವ ಹಿರಿಯ ಹುಡುಗಿಯರನ್ನು ಕಂಡು ಆಶ್ಚರ್ಯಪಟ್ಟಿದ್ದು, ದೊಡ್ಡ ಕಾಲೇಜಿನಲ್ಲಿ ದಿಕ್ಕು ತಪ್ಪಿದ ಕರುವಿನಂತೆ ಓಡಾಡಿದ್ದು, ದೈತ್ಯಾಕಾರದ ಕ್ಲಾಸಿನಲ್ಲಿ ಒಂಟಿತನ ಅನುಭವಿಸಿದ್ದು- ಹೀಗೆ... ಇವೆಲ್ಲವೂ ನಿನ್ನೆ-ಮೊನ್ನೆಗಳ ಹಸಿಹಸಿ ನೆನಪಿನಂತಿವೆ. ಒಮ್ಮೆಲೇ ಕಾಲೇಜಿನ ಇಂಗ್ಲೀಷಿಗೆ ಹೊಂದಿಕೊಳ್ಳಲಾಗದೇ ಮೊದಲ ‘ಟೆಸ್ಟ್’ನಲ್ಲಿ ಲಾಗ ಹಾಕಿ ಕಣ್ಣಲ್ಲೆಲ್ಲ ನೀರು ತುಂಬಿಕೊಂಡಿದ್ದು, ‘ಕಾಲೇಜಿನ ಉಸಾಬರಿಯೇ ಬೇಡ’ ಎಂದು ಮುನಿಸಿಕೊಂಡದ್ದು - ಆಗ ಮಂಗಲಾ, ರಶ್ಮಿಯರು ಬಂದು ತಮ್ಮದೂ ಅದೇ ಕಥೆಯೆಂದು ಹೇಳಿದಾಗ ತುಸು ಸಮಾಧಾನಗೊಂಡದ್ದು... ಎಲ್ಲ ಇನ್ನೂ ಹಸಿರು.

ದಿನ ಕಳೆದಂತೆ ಈ ಕಾಲೇಜು ಹಳತಾಯ್ತು. ನಮ್ಮಲ್ಲಿ ಹೊಸತನ- ಹುಡುಗಾಟಿಕೆಯೂ ಮೊಳೆಯಿತು. ಛೇಡಿಸುವ ಹುಡುಗರಿಗಾಗಿ ಮಾರುತ್ತರವಲ್ಲದಿದ್ದರೂ ಮರು ಉತ್ತರವಂತೂ ಸಿದ್ಧವಾಯ್ತು. ಮನಸಿನಲ್ಲಿದ್ದ ಹಲವು ಅಳಕುಗಳು ಬಗೆಹರಿದು ದಿಟ್ಟತನ ಮೈಗೂಡಿತು. ‘ಎಲ್ಲರೂ ನಮ್ಮಂತೆಯೇ’ ಎಂಬ ಭರವಸೆ ಹೊಸ ಹುರುಪು ತಂದುಕೊಟ್ಟಿತು.
ಆದರೆ, ಈ ಬೆಳವಣಿಗೆಯ ಹಂತದಲ್ಲಿ ಎರಡ್ಮೂರು ವರ್ಷಗಳು ಸದ್ದಿಲ್ಲದೇ ಉರುಳಿ ಹೋದದ್ದು ಮಾತ್ರ ನಮ್ಮ ಗಮನಕ್ಕೆ ಬರಲೇ ಇಲ್ಲ. ಈಗ ನೋಡಿದರೆ, ಈ ಘಟನೆಗಳೆಲ್ಲಾ ಎರಡ್ಮೂರು ವರ್ಷ ಹಿಂದಿನವು ಎಂದು ಪರಿಗಣಿಸಲು ಮನಸ್ಸು ಸಹಕರಿಸುತ್ತಿಲ್ಲ. ಇದಕ್ಕೇನು ಕಾರಣ? ಅಂಥ ಹುಡುಗಾಟಿಕೆ- ತುಂಟತನಗಳೆಲ್ಲವೂ ಇನ್ನು ನೆನಪು ಮಾತ್ರ!

ಈಗ ನಾವು ‘ಪದವಿ ವಿದ್ಯಾರ್ಥಿಗಳು’. ಈ ಪುಟ್ಟ ಪದಕ್ಕೆ ಎಷ್ಟೊಂದು ವಜ್ಜೆ ಇದೆ ಎನ್ನುವುದನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟವೇ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳೆಂಬ ಬಿರುದು, ಜೊತೆಗೇ ಕಿರಿಯರಿಗೆ ಮಾದರಿ ಎಂಬ ಪಟ್ಟ- ಬಿರುದಾವಳಿಗಳ ಮಧ್ಯೆ ಬೇಡವೆಂದರೂ ‘ಗಂಭೀರತೆ’ ನಮ್ಮನ್ನು ಸುತ್ತಿ ಬಿಡುವುದು ಸಹಜ. ಎಲ್ಲ ಪರಿಚಿತ ಚಹರೆಗಳ ಮಧ್ಯೆ, ನಮ್ಮ ಯಶಸ್ಸಿಗಾಗಿ ಹಾರೈಸುವ ಆತ್ಮೀಯ ಅಧ್ಯಾಪಕರ ಮಧ್ಯೆ ನಾವು ಹಳೆಯ ಹುಡುಗಾಟಿಕೆಯನ್ನು ಪ್ರದರ್ಶಿಸಲಾದೀತೆ? ಖಂಡಿತವಾಗಿಯೂ ಸಾಧ್ಯವಿಲ್ಲ. ಇಲ್ಲಿ ನಾವು ಗಂಭೀರರಾಗಿ ಬಿಡುವುದು ಅನಿವಾರ್ಯವಾಗುತ್ತದೆ. ನಮ್ಮ ಪುಟ್ಟ ತಮ್ಮ- ತಂಗಿಯರಿಗೆ ಮಾರ್ಗದರ್ಶಿಗಳಾಗಿ ನಿಲ್ಲುವುದು ಅವಶ್ಯವಾಗಿ ಬಿಡುತ್ತದೆ. ತಾಯ್ತಂದೆಯರು ತಮ್ಮ ಕನಸುಗಳನ್ನು ನಮ್ಮ ಕಣ್ಣಲ್ಲಿ ಕಾಣತೊಡಗಿದಾಗ ಜವಾಬ್ದಾರಿಯ ತೆಳು ಪರದೆ ನಮ್ಮನ್ನು ಆವರಿಸಿ ಹುಡುಗುತನವನ್ನು ಮಾಯವಾಗಿಸುತ್ತದೆ. ಎಂಥ ವಿಪರ್ಯಾಸವಲ್ಲವೇ?

ಹೀಗೆ ವರ್ಷಗಳು ಸರಿದಂತೆ ನಮ್ಮ ಮೇಲಿನ ‘ವಜ್ಜೆ’ ಹೆಚ್ಚುವುದು ಪ್ರಕೃತಿ ನಿಯಮ ಅಂತಾದರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ನಿಜ. ಆದರೆ ಈ ನಿಯಮದ ತೆಕ್ಕೆಗೆ ಸಿಕ್ಕ ನಮ್ಮ ಪಾಲಿಗೆ ಉಳಿದದ್ದು ಹಳೆಯ ನೆನಪು ಮತ್ತು ವಿಷಾದ ಮಾತ್ರ!

*******************************

ಪತ್ರಿಕೆಯಲ್ಲಿ ಪ್ರಕಟವಾದ ಮೊದಲ ಲೇಖನ ಇದು. ಸುಮಾರು ೧೧-೧೨ ವರ್ಷಗಳ ಹಿಂದೆ ‘ಕನ್ನಡ ಜನಾಂತರಂಗ’ದಲ್ಲಿ ಪ್ರಕಟವಾಗಿತ್ತು. ಲೇಖನವನ್ನು ಕತ್ತರಿಸಿಟ್ಟುಕೊಂಡು (ಪುಣ್ಯ.. ಗ್ಲಾಸು -ಚೌಕಟ್ಟು ಹಾಕಿಸಿರಲಿಲ್ಲ!) , ಮನೆಯವರಿಗೆಲ್ಲ ತೋರಿಸಿ, ಅಣ್ಣನಿಂದ ‘ಶಭಾಸ್’ ಅನ್ನಿಸಿಕೊಂಡು, ಕನ್ನಡವನ್ನು ಅಷ್ಟು ಸರಿಯಾಗಿ ಓದಲು ಬರದ ಇನ್ನೊಬ್ಬ ಅಣ್ಣನಿಗೆ Body Language ಸಹಿತ ಓದಿ ತೋರಿಸಿ... ಆಹ್, ಎಷ್ಟೆಲ್ಲ ಸಂಭ್ರಮಪಟ್ಟಿದ್ದೆ. ಇವತ್ತು ನನ್ನ ವಿದ್ಯಾರ್ಥಿನಿಯೊಬ್ಬಳು ಅವಳ ಮೊದಲ ಲೇಖನದ ಬಗ್ಗೆ ಪ್ರಸ್ತಾಪಿಸಿದ್ದರಿಂದ, ನನ್ನದೂ ಒಂದು ಇದೆ ಅಂತ ನೆನಪಾಯ್ತು ನೋಡಿ. ಕೊನೆಗೂ ಹುಡುಕಿ ತೆಗೆದೆ, ನಿಮಗೆಲ್ಲ ಸ್ವಲ್ಪ ಕಾಟ ಕೊಡೋಣ ಅಂತ. ಬೋರಾದರೆ ಬೈದು ಬಿಡಿ ಪ್ಲೀಸ್!

9 comments:

Keshav.Kulkarni said...

ಮೊದಲ ಪ್ರಕಟಿತ ಬರಹ ಬೇರೆಯವರಿಗೆ ಚೆನ್ನಾಗಿರಲಿ ಬಿಡಲಿ, ಬರೆದುವರಿಗೆ ಮಾತ್ರ ಅದೊಂದು ತರಹ ಪ್ರಥಮ ಚುಂಬನದಂತೆ. ಜೋಪಾನವಾಗಿರುತ್ತವೆ!

- ಕೇಶವ (www.kannada-nudi.blogspot.com)

Laxman (ಲಕ್ಷ್ಮಣ ಬಿರಾದಾರ) said...

ಹಾಯ್ ಪೂರ್ಣಿಮಾ,
ಇದು ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ.
ನಿಮ್ಮ ಅನುಭವಗಳ ಘಟನೆಗಳ ಬರಹಗಳು ತುಂಬಾ ಚೆನ್ನಾಗಿವೆ.
ಅದ್ರಲ್ಲೂ ನಿಮ್ಮ ಹೆಸರಿನ ಬಗ್ಗೆ ಆಗುತ್ತಿರುವ ಗೊಂದಲ ಬಗ್ಗೆ ,

ನಿಮ್ಮ ಮೋದಲ ಲೇಖನ ಚೆನ್ನಾಗಿದೆ.
ನಮ್ಮ ಜೀವನದಲ್ಲಿ ನಡೆಯವ ಅನೇಕ ಪ್ರಥಮಗಳಿಗೆ ಆಗುವ
ಸಂತಸ, ಅನುಭವಗಳು ತುಂಬಾ ಪ್ರಾಮುಖ್ಯ ಪಡೆಯುತ್ತವೆ.
ಅದರ ನೆನಪುಗಳು ಇನ್ನೂ ಮಧೂರ .

ಪ್ರಥಮ ದಿನದ ಶಾಲೆ,ಕಾಲೆಜು,ನೌಕರಿ
ಪ್ರಥಮ ಸಂಬಳ,ವಿದೇಶ ಪ್ರಯಾಣ, ಕವನ,ಪತ್ರ,……….
………………………………………………………………..

ಎಲ್ಲವು ಎಲ್ಲರ ಜೀವನದಲ್ಲಿ ಘಟಿಸುವದಿಲ್ಲ ,
ನಮ್ಮ ಜೊತೆಗೆ ಅದರ ಅನುಭವ ಹಂಚಿಕೊಂಡಿದ್ದಕ್ಕೆ
ಧನ್ಯವಾದಗಳು.

ಬರೆಯುತ್ತಾಇರಿ
ಲಕ್ಷ್ಮಣ

Ittigecement said...

ಪೂರ್ಣಿಮಾ...

ಇಷ್ಟು ಚೆನ್ನಾಗಿ ಬರೆಯುವ ನೀವು ..
ಬರೆಯದೇ ಸುಮ್ಮನಿದ್ದುಬಿಡುವ ಮನಸು ಹೇಗೆ ಬರುತ್ತದೆ..?

ಕಾಲೇಜು ದಿನಗಳ ಹುಡುಗಾಟಿಕೆ..
ನಂತರ ಪ್ರಬುದ್ಧರಾಗಿ, ಗಂಭೀರರಾಗಿಬಿಡಬೇಕೆಂದೇನೂ ಇಲ್ಲ...

ಎಲ್ಲಾ ಅವರವರ ಭಾವ.., ಸ್ವಭಾವ...!

ಕೆಲವರು ಹಾಗೆಯೇ..
ಯಾವಾಗಲೂ ನಗುತ್ತ , ಹಾಸ್ಯಮಾಡುತ್ತ ಇದ್ದು ಬಿಡುತ್ತಾರೆ..
ಯಾರು ಏನೇ ಅಂದು ಕೊಂಡರೂ ಅವರ ವರ್ತನೆ ಮಾತ್ರ ಬದಲಾಗುವದಿಲ್ಲ...

ಹಾಗಿರಬೇಕು ಅಲ್ಲವಾ...?

ಚಂದದ ಲೇಖನ

ಅಭಿನಂದನೆಗಳು

ಶಾಂತಲಾ ಭಂಡಿ (ಸನ್ನಿಧಿ) said...

ಪೂಣಿ...

ಯಾವತ್ತೂ ನೀ ಬರೆದಂಗೆ ಚೆಂದದ ಬರಹ. ಹೌದಲ್ದ, ಎಷ್ಟು ಬೇಗ ಆ ದಿನಗಳೆಲ್ಲ ಮುಗಿದೇ ಹೋದವು. ಆ ಸವಿ ಸವಿ ನೆನಪುಗಳು ಮಾತ್ರ ಮಧುರವಾಗಿ ಮರುಕಳಿಸುತ್ತ ಎಂತದೋ ಖುಷಿಕೊಡುವ ಜೊತೆ ಏನನ್ನೋ ಕಳಕೊಂಡ ಭಾವ ತಂದಿತ್ತುಬಿಡುತ್ತವೆ.

ನಿನಗಿಂತ ಒಂದುವರ್ಷ ಮೊದಲು ನಾ ಕಾಲೇಜು ಬಿಟ್ಟು ಬರುವಾಗ ನೀನು, ರಶ್ಮಿ ಮತ್ತಿತರ ಕಾಲೇಜಿನ ಗೆಳಯ/ಗೆಳತಿಯರೆಲ್ಲಯರೆಲ್ಲ ಬರೆದಿರುವ ಆಟೋಗ್ರಾಫ್ ಬುಕ್ ಊರಿಗೆ ಹೋದಾಗೆಲ್ಲ ನನ್ನನ್ನು ಒಂದಿಡೀ ದಿನ ಒಬ್ಬಳೇ ಮೆತ್ತಿಯಲ್ಲಿ ಕಳೆಯಲು ಸಾಥ್ ಕೊಡುತ್ತವೆ.
ಎಂಥ ಚೆಂದದ ದಿನಗಳು. ಮತ್ತೆ ಅಂಥದಿನಗಳ ನೆನಪಿಸಿದ್ದಕ್ಕೆ ಥ್ಯಾಂಕ್ಸೇ...

shivu.k said...

ಪೂರ್ಣಿಮಾ ಮೇಡಮ್,

ನಿಮ್ಮ ಮೊದಲ ಪ್ರಕಟಿತ ಬರಹ ತುಂಬಾ ಚೆನ್ನಾಗಿದೆ...ನನಗೆ ಇತ್ತೀಚಿನ ಮೊಗ್ಗಿನ ಮನಸ್ಸು, ಜಾಲಿಡೇಶ್ ಸಿನಿಮಾಗಳ ಕೆಲವು ತುಣುಕುಗಳು ನೆನಪಾದವು...

ವಿನಾಯಕ ಭಟ್ಟ said...

ಮೊದಲ ಲೇಖನ ಪ್ರಕಟವಾಗಿದ್ದು ಶಿರಸಿ ಕಾಲೇಜಲ್ಲಿ ಇದ್ದಾಗಲೋ?
ಮೊದಲ ಲೇಖನ ಪ್ರಕಟವಾದಾಗ ೆಷ್ಟು ಸಂತೋಷವಾಗಿತ್ತೊ ಅದಕ್ಕಿಂತ ಹೆಚ್ಚಿನ ದುಃಖ ನನಗೆ ಮೊದಲ ಲೇಖನ ಪ್ರಕಟವಾಗದೆ ಮರಳಿ ಬಂದಾಗ ಆಗಿತ್ತು. ಇಷ್ಟು ಲೇಖನಗಳನ್ನು ಬರೆಯುತ್ತಲೇ ಇದ್ದರೂ ಅದೊಂದು ಲೇಖನ ಪ್ರಕಟವಾಗದ ನನ್ನ ಬೇಸರ ಯಾಕೋ ಕಡಿಮೆಯಾಗೇ ಇಲ್ಲ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...
This comment has been removed by the author.
Ultrafast laser said...

Hi Poornima,
Interesting blog. By the way, are you in UK?. I moved to UK recently, here in Durham.
Please reply to my email (dmsagarphys"at"gmail.com)-Thanks and Regards-Dr.D.M.Sagar

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

@ ಕೇಶವ ಕುಲಕರ್ಣಿ, ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ.
@ ಲಕ್ಷ್ಮಣ, ಥಾಂಕ್ಯೂ ಸರ್! ಹಿಗೇ ಬರುತ್ತಿರಿ.
@ ಪ್ರಕಾಶಣ್ಣ, ಸ್ವಲ್ಪ (ಜಾಸ್ತಿಯೇ..) ಸೋಮಾರಿತನ ಅಷ್ಟೇ.. ಮತ್ತೇನಿಲ್ಲ... ನಿಮಗೆ ಧನ್ಯವಾದಗಳು.
@ ಶಾಂತಲಾ, ಹೌದು- ಆ ದಿನಗಳ ನೆನಪು ನಿಜಕ್ಕೂ ಮಧುರ. ಇಲ್ಲಿ ಬಂದು ಬೆನ್ತಟ್ಟಿದ್ದಕ್ಕೆ ನಿನಗೆ thanksss... :)
@ ಶಿವೂ, ಥಾಂಕ್ಸ್ ಕಣ್ರೀ... ನಿಮಗಿಷ್ಟವಾದ್ರೆ, ನಂಗೆ ಖುಷಿ.
@ ವಿನಾಯಕ, ಹ್ಮ್, ಹೌದ್ ನೋಡು.. ಶಿರಸಿ ಕಾಲೇಜಿನ ಕಿತಾಪತಿ ಇದು :). ನಿನ್ನ ನೋವು ನನಗೆ ಅರ್ಥ ಆಗ್ತು.
@ Dr. D.M. Sagar, Thanks for stopping by. yea - I am in UK.. I will e-mail you some time.