Monday, 4 April 2011

ಹಬ್ಬವೆಂದರೆ...

ಯುಗಾದಿಯ ಮುಂಜಾವು
ಆಯಿ ಮಾಡಿದ ಅವಲಕ್ಕಿ ಒಗ್ಗರಣೆ
ಪರಿಮಳ ಅಡುಗೆ ಒಳ ದಾಟಿ
ತೋರಣ ಸಿಂಗರಿಸಿದ ಪ್ರಧಾನ ಬಾಗಿಲು ಮೀರಿ
ಆರು ಸಹಸ್ರ ಮೈಲು ಪಯಣಿಸಿ
ಸಪ್ತ ಸಾಗರದಲ್ಲಿ ಮುಳುಗೆದ್ದರೂ
ತನ್ನ ಘಮ ಉಳಿಸಿಕೊಂಡು ಬಂದಾಗ
ಇಲ್ಲಿ, ನನ್ನ ಕೈಲಿದ್ದ ಕಾರ್ನ್‌ಫ್ಲೇಕ್ಸ್ ಬೌಲು ಅರ್ಧ ಖಾಲಿ

ಹತ್ತೂಕಾಲು ಗಂಟೆಗೆ
ಒಂದು ಕಪ್ ಖಡಕ್ ಚಹಾದ ಜತೆಯಾದ
ಮಲ್ಟಿಗ್ರೇನ್ ರೈಸ್‌ಕೇಕ್
ಹೋಳಿಗೆ ಹೂರಣದ ಬಣ್ಣದಲ್ಲೇ ಕಂಡರೆ
ಅದು ನನ್ನ ತಪ್ಪಲ್ಲ - ಯುಗಾದಿಯದು.

ಹನ್ನೊಂದೂವರೆಗೆ ಟೇಬಲ್ ಪಕ್ಕದಲ್ಲಿ
ಪ್ರತ್ಯಕ್ಷನಾದ ಅರವತ್ತರ ಮ್ಯಾನೇಜರ್
ಕಳೆದ ವಾರವಷ್ಟೆ ಬಂದ ಆರ್ಡರ್ ನಾಪತ್ತೆ
ಎಂದು ಸಿಡಿಮಿಡಿಗುಟ್ಟಿದಾಗ,
ದೇವರಿಗೆ ಅಭಿಷೇಕ - ಆರತಿಯ ನಂತರ
’ಹೊಸ ಪಂಚಾಂಗ ತಂದಿಡ್ರೋ’ ಅಂತ
ಮಕ್ಕಳ ಮೇಲೆ ಆವಾಜ್ ಹಾಕುವ
ಅಜ್ಜನಂತೆ ಹೂಬೇ-ಹೂಬ್ ಕಂಡು
ಸಿಟ್ಟಿನ ಜಾಗದಲ್ಲಿ ಪ್ರೀತಿಯುಕ್ಕಿದ್ದೂ
ಯುಗಾದಿಯ ಮಧ್ಯಾನ್ನವೇ..

ಮಧ್ಯಾನ್ಹ ಡಬ್ಬಿಯಲ್ಲಿದ್ದ
ಸಪ್ಪೆ ಮೊಸರನ್ನದ ಪ್ರತಿ ತುತ್ತೂ
ಕೋಸಂಬ್ರಿ, ತುಪ್ಪದನ್ನ, ಅಂಬೊಡೆ
ಅಪ್ಪೆಹುಳಿಯನ್ನು ನೆನಪು ಮಾಡಿದಾಗ
ಹಬ್ಬದ ಸಂಜೆ
ಹೋಳಿಗೆಯಲ್ಲದಿದ್ದರೆ ಅದರ ತಮ್ಮ
ಹಯಗ್ರೀವವನ್ನಾದರೂ ಮಾಡಿಯೇ ಸಿದ್ಧ..
ನನ್ನಂಥ ’ಅಡುಗೆ ಕಳ್ಳಿ’ಯೂ
ಹಟ ಹೊರುವಂತೆ ಮಾಡಿದ ಯುಗಾದಿಯೇ
ನಿನಗೊಂದು ದೊಡ್ಡ ನಮಸ್ಕಾರ!

9 comments:

ಸಾಗರದಾಚೆಯ ಇಂಚರ said...

Poornima,
Happy Ugadi
olle kavana

ಸೀತಾರಾಮ. ಕೆ. / SITARAM.K said...

chendada kavana. halliyalli sambramada habbadaacharaneyalli beledu nagarada pizzagalalli mulugeddeluva manada vyaakula chennaagi mudide. habbada shubhaashayagalu. ratri holige saviyiri.

Ittigecement said...

ಪೂರ್ಣಿಮಾ...

ಊರು ಬಿಟ್ಟು ಲಂಡನ್ ಹೋದರೂ...
ಮರೆಯುವುದೆ... ಹಳೆಯ ನೆನಪು...?
ಆ.. ಸಂಪ್ರದಾಯ... ಆಚರಣೆಗಳು...?
ಸವಿ ಸವಿ ಹೋಳಿಗೆ ಸಕ್ಕರೆ ತುಪ್ಪ....?

ನಮ್ಮೆಲ್ಲರ ಮನಸ್ಥಿತಿ ಇದು...

ಅಭಿನಂದನೆಗಳು... ಜೈ ಹೋ !

ಡಾ. ಚಂದ್ರಿಕಾ ಹೆಗಡೆ said...

naanu hatavaadiya haage baalehannina muluka tinde sidhaa vendu .....horate...

ಶಾಂತಲಾ ಭಂಡಿ (ಸನ್ನಿಧಿ) said...

ಪೂಣಿ...
ಸೂಪರ್.

"ಹನ್ನೊಂದೂವರೆಗೆ ಟೇಬಲ್ ಪಕ್ಕದಲ್ಲಿ
ಪ್ರತ್ಯಕ್ಷನಾದ ಅರವತ್ತರ ಮ್ಯಾನೇಜರ್
ಕಳೆದ ವಾರವಷ್ಟೆ ಬಂದ ಆರ್ಡರ್ ನಾಪತ್ತೆ
ಎಂದು ಸಿಡಿಮಿಡಿಗುಟ್ಟಿದಾಗ,
ದೇವರಿಗೆ ಅಭಿಷೇಕ - ಆರತಿಯ ನಂತರ
’ಹೊಸ ಪಂಚಾಂಗ ತಂದಿಡ್ರೋ’ ಅಂತ
ಮಕ್ಕಳ ಮೇಲೆ ಆವಾಜ್ ಹಾಕುವ
ಅಜ್ಜನಂತೆ ಹೂಬೇ-ಹೂಬ್ ಕಂಡು
ಸಿಟ್ಟಿನ ಜಾಗದಲ್ಲಿ ಪ್ರೀತಿಯುಕ್ಕಿದ್ದೂ
ಯುಗಾದಿಯ ಮಧ್ಯಾನ್ನವೇ.."

ಸಕತ್ ಇಷ್ಟ ಆತು. ಬರೀತಿರು.

ಪ್ರೀತಿಯಿಂದ,
-ಶಾಂತಲಾ ಭಂಡಿ

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿದೆ.... ಯುಗಾದಿಯೊ೦ದಿಗೆ ಸು೦ದರ ನೆನಪುಗಳ ಮೂಟೆಯೇ ಇದೆ ಈ ಕವನದಲ್ಲಿ :)

ಚಿತ್ರಾ said...

ಪೂರ್ಣಿಮಾ,
ಸಪ್ತ ಸಾಗರದಾಚೆ ಊರ ಯುಗಾದಿಯನ್ನು ನೆನೆಸಿಕೊಂಡ ಬಗೆ ಇಷ್ಟವಾಯ್ತು . ಆತ್ಮೀಯ ಎನಿಸುವ ಸಾಲುಗಳು .
ತಡವಾದರೂ .. " ಯುಗಾದಿಯ ಶುಭಾಶಯಗಳು " ಬೇವು ಕಮ್ಮಿ , ಬೆಲ್ಲ ಜಾಸ್ತಿ ತುಂಬಿಕೊಂಡ ವರುಷ, ಹರುಷ ನಿಮ್ಮದಾಗಲಿ !

Girish Rao H said...

ಮಧ್ಯಾನ್ಹ ಡಬ್ಬಿಯಲ್ಲಿದ್ದ
ಸಪ್ಪೆ ಮೊಸರನ್ನದ ಪ್ರತಿ ತುತ್ತೂ
ಕೋಸಂಬ್ರಿ, ತುಪ್ಪದನ್ನ, ಅಂಬೊಡೆ
ಅಪ್ಪೆಹುಳಿಯನ್ನು ನೆನಪು ಮಾಡಿದಾಗ
ಹಬ್ಬದ ಸಂಜೆ
ಹೋಳಿಗೆಯಲ್ಲದಿದ್ದರೆ ಅದರ ತಮ್ಮ
ಹಯಗ್ರೀವವನ್ನಾದರೂ ಮಾಡಿಯೇ ಸಿದ್ಧ..

ಏನ್ ಹೊಟ್ಟೆ ಉರುಸ್ತೀರ್ರೀ, ಯಪ್ಪಾ... ಸತ್ತೆ..

prashasti said...

ಭಯಂಕರ ತಡವಾದ ಶುಭಾಶಯ ನಂದು :-) ಕವನ ಚೆನ್ನಾಗಿದ್ದು :-)