Wednesday, 22 July 2009

‘ಯೂ ಹ್ಯಾವ್ ಪಾಸ್ಡ್’ ಅನ್ನೋ ಒಂದು ಸಾಲಿಗಾಗಿ...

`ಉಫ್..‘ ಅಂತ ನಿಟ್ಟುಸಿರುಬಿಟ್ಟಿದ್ದೆ. ಅಷ್ಟು ಸಶಬ್ದವಾಗಿ ಉಸಿರು ಹೊರ ಹಾಕಿದ್ದಕ್ಕೋ ಏನೋ - ಎಕ್ಸಾಮಿನರ್ `ಏನಾಯ್ತು ಇವಳಿಗೆ‘ ಅನ್ನೋ ರೀತಿಯಲ್ಲಿ ಕಣ್ಣರಳಿಸಿದ್ದ. ಆ ಕ್ಷಣಕ್ಕೆ- ಕಳೆದ ನಲವತ್ತೈದು ನಿಮಿಷ ತಾಳ್ಮೆ ವಹಿಸಿ ನನ್ನ ಪರೀಕ್ಷೆ ತೆಗೆದುಕೊಂಡಿದ್ದ ಎಕ್ಸಾಮಿನರ್ ಕೈ ಕುಲುಕುವುದನ್ನೂ ಮರೆತಿದ್ದೆ. ‘ನೀನು ರಸ್ತೆಯ ಮೇಲೆ ಸೇಫ್ ಅನ್ನಿಸುತ್ತೀಯಾ ಈಗ. ಫ್ರಂ ನೌ ಆನ್ ಯೂ ಆರ್ ಎ ಫುಲ್ಲೀ ಲೈಸೆನ್ಸ್ಡ್ ಡ್ರೈವರ್‘ ಅಂದಾಗ ಇಡೀ ಮೈ ನಿರಾಳ, ಹಗುರ. ಎಕ್ಸಾಮಿನರ್ ‘ಗುಡ್ ಲಕ್‘ ಅಂದು ಕಾರಿಳಿದು ಹೋದ ಮೇಲೆ ಏನಿಲ್ಲವೆಂದರೂ ಐದು ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲು.

ಇದೆಲ್ಲ ಶುರುವಾಗಿ ಹತ್ತಾರು ತಿಂಗಳೇ ಆಯಿತು. ಮೊದಲಷ್ಟು ದಿನ ಬಸ್ಸಿನಲ್ಲೇ ಆಫೀಸಿಗೆ ಅಡ್ಡಾಡಿದೆ. ನಂತರ ಮನೆಯಲ್ಲೇ ಯಾಕೆ ಕಾರ್ ನಿಲ್ಲಿಸಬೇಕು, ಅದರಲ್ಲೇ ಆಫೀಸಿಗೆ ಹೋಗಿ ಬರೋಣ ಅಂತ ನಿರ್ಧಾರವಾಯಿತು. ಹೇಗೂ ಬೆಂಗಳೂರಿನಲ್ಲಿ ಹತ್ತು ಡ್ರೈವಿಂಗ್ ಕ್ಲಾಸ್ ಮುಗಿಸಿ ‘ಇಂಡಿಯನ್ ಡ್ರೈವಿಂಗ್ ಲೈಸೆನ್ಸ್’ ಗಿಟ್ಟಿಸಿಕೊಂಡಾಗಿತ್ತು. ಈ ದೇಶದಲ್ಲಿ ಒಂದು ವರ್ಷ ಕಾರ್ ಇನ್ಶೂರೆನ್ಸ್ ಸಿಕ್ಕಲು ‘ಇಂಡಿಯನ್ ಡ್ರೈವಿಂಗ್ ಲೈಸೆನ್ಸ್’ ಸಾಕಲ್ಲ! ಒಂದು ವರ್ಷದ ಒಳಗೆ ಯುನೈಟೆಡ್ ಕಿಂಗ್ಡಮ್ ಲೈಸೆನ್ಸ್ ತೆಗೆದುಕೊಳ್ಳೋದು ಯಾವ ಮಹಾ ವಿಷಯ ಅಂದುಕೊಂಡಿದ್ದೂ ಆಯ್ತು.

ಮೊದಮೊದಲು ಇಲ್ಲಿಯ ಡ್ರೈವಿಂಗ್ ಸ್ಕೂಲಿನಲ್ಲಿ ತೆಗೆದುಕೊಂಡ ಮೂರ್ನಾಲ್ಕು ಕ್ಲಾಸುಗಳು, ಪ್ಯಾಸೆಂಜರ್ ಸೀಟಿನಲ್ಲಿ ಕೂತೇ ಗುರುತಿಸಲು ಕಲಿತ ರೋಡ್ ಸಿಗ್ನಲ್ಗಳು, ಗಂಡನನ್ನು ಜೊತೆಗಿಟ್ಟುಕೊಂಡು ಶಾಂತವಾಗಿದ್ದ ರೋಡಿನಲ್ಲಿ ಕೆಲಬಾರಿ ಮಾಡಿದ ಡ್ರೈವ್, ಇದಲ್ಲಕ್ಕಿಂತ ಹೆಚ್ಚಾಗಿ ಭಂಡ ಧೈರ್ಯ - ಇಷ್ಟು ಕಾರಣಗಳು ಸಾಕಾದವು ನಾನು ಕಾರಿನೊಂದಿಗೆ ರೋಡಿಗಿಳಿಯಲು! ಬರೀ ನಾಲ್ಕು ಮೈಲಿ ದೂರದಲ್ಲಿರುವ ಆಫೀಸ್. ಒಂದೇ ವಾರದಲ್ಲಿ ರಸ್ತೆ ಪರಿಚಿತವಾಗಿಹೋಯ್ತು. ಈ ರಸ್ತೆಯನ್ನು ಬಿಟ್ಟರೆ ಬೇರೆ ರೋಡಿನಲ್ಲಿ ಡ್ರೈವ್ ಮಾಡುವ ಪ್ರಮೇಯವೇ ಬರಲಿಲ್ಲ. ಈ ಸಡಗರದಲ್ಲಿ ತಿಂಗಳುಗಳು ಉರುಳಿದ್ದೂ ಗೊತ್ತಾಗಲಿಲ್ಲ.

ಸರಿ, ಒಂದಲ್ಲ ಒಂದು ದಿನ ಈ ಡ್ರೈವಿಂಗ್ ಟೆಸ್ಟ್ ಅನ್ನೋ ಮಹಾಯುದ್ಧಕ್ಕೆ ಸಿದ್ಧವಾಗಲೇ ಬೇಕಲ್ಲ. ಪ್ರಾಕ್ಟಿಕಲ್ ತೆಗೆದುಕೊಳ್ಳುವ ಮೊದಲು ಥಿಯರಿ! ನೂರಾರು ಪುಟದ ’ದಿ ಹೈ ವೇ ಕೋಡ್’ ಅನ್ನೋ ಪುಸ್ತಕ, ಸಾವಿರಾರು ಪ್ರಶ್ನೋತ್ತರಗಳಿರುವ ’ಪಾಸಿಂಗ್ ದ್ ಥಿಯರಿ ಟೆಸ್ಟ್’ ಸಿ.ಡಿ, ಹತ್ತಾರು ಕ್ವಿಝ್ ಇವುಗಳೊಂದಿಗೆ ವಾರಗಟ್ಟಲೇ ಗುದ್ದಾಡಿದ್ದಾಯ್ತು. ‘ಪಾಪ, ನಮ್ ಹುಡ್ಗಿ- ಪಿಯೂಸಿ ಎಕ್ಸಾಮಿಗೂ ಇಷ್ಟು ಕಷ್ಟಪಟ್ಟು ಓದಿರಲಿಕ್ಕಿಲ್ಲ’ ಅಂದ ಗಂಡನ ಕೀಟಲೆ ಮಾತಿಗೆ ಪೆದ್ದು ಪೆದ್ದಾಗಿ ನಕ್ಕರೂ ಥಿಯರಿ ಟೆಸ್ಟ್ ಪಾಸ್ ಮಾಡಿದೆ. ನಂತರವೇ ಗೊತ್ತಾಗಿದ್ದು - ಮುಂದಿದೆ ಮಾರಿಹಬ್ಬ ಎಂದು!

ಹತ್ತು ಸಲ ತಾರೀಕು ನೋಡಿ, ನನ್ನ ಡ್ರೈವಿಂಗ್ ಅಷ್ಟೇನೂ ಖರಾಬಾಗಿಲ್ಲ ಅಲ್ಲವಾ ಎಂದು ಹೆಜ್ಜೆ ಹೆಜ್ಜೆಗೂ ಕೇಳಿ, ಇನ್ನೇನು - ತಿಂಗಳು ಕಳೆದರೆ ಇನ್ಶೂರೆನ್ಸ್ ಸಿಗದೆ ಪರದಾಡಬೇಕಾಗುತ್ತದೆ ಅಂತಾದ ಮೇಲೆ ಪ್ರಾಕ್ಟಿಕಲ್ ಡ್ರೈವಿಂಗ್ ಟೆಸ್ಟ್ ಬುಕ್ ಮಾಡಿದ್ದೆ. ನಂತರವೂ 'ಮೀಟರ್’ ಸಾಕಾಗದೇ ಒಮ್ಮೆ ಮುಂದೂಡಿದ್ದೆ. ಈ ಬಾರಿ ಮಾತ್ರ, ಆಗಿದ್ದಾಗಲಿ - ಒಂದು ಕೈ ನೋಡೇ ಬಿಡೋಣ ಎಂದೇ ಧೈರ್ಯ ಮಾಡಿದ್ದೆ.

ಬೇರೆ ಬೇರೆ ರೋಡಿನಲ್ಲಿ ಡ್ರೈವ್ ಮಾಡಲು ಶುರುವಿಟ್ಟಿದ್ದೇ ಪ್ರಾಕ್ಟಿಕಲ್ ಟೆಸ್ಟಿನ ಭಯಂಕರ ರೂಪ ಬಿಚ್ಚಿಕೊಳ್ಳತೊಡಗಿತು. ಬರೋಬ್ಬರಿ ೪೫ ನಿಮಿಷಗಳ ಟೆಸ್ಟ್. ಡ್ರೈವ್ ಮಾಡುವ ವ್ಯಕ್ತಿಗೆ ಕಣ್ಣು ಸರಿಯಾಗಿ ಕಾಣುತ್ತದೆಯಾ ಎಂಬಲ್ಲಿಂದ ಶುರುವಾಗುತ್ತದೆ ಈ ಪರೀಕ್ಷೆ. ಬಾನೆಟ್ ತೆಗೆದು ಇಂಜಿನ್ ಆಯಿಲ್, ಬ್ರೇಕ್ ಆಯಿಲ್, ಕೂಲಂಟ್ ದ್ರವ ಸುಡುಗಾಡು - ಸುಂಟಿಗಳೆಲ್ಲ ಎಲ್ಲೆಲ್ಲಿ ಎಷ್ಟೆಷ್ಟು ಇರಬೇಕು ಗೊತ್ತಿದೆಯಾ.. ಕಾರಿನ ಒಳಗೆ ಇರುವ ಎಲ್ಲಾ ಅದುಮುಗುಂಡಿಗಳ ಕಾರ್ಯಾಚರಣೆಯ ಪರಿಚಯ ಇದೆಯಾ.. ಬ್ರೇಕ್ ಲೈಟ್, ಇಂಡಿಕೇಟರ್, ಫಾಗ್ ಲೈಟ್ ಎಲ್ಲವನ್ನೂ ಆಪರೇಟ್ ಮಾಡುವುದು ಗೊತ್ತಾ..? ಇದು ಎರಡನೇ ಹಂತ.

ನಂತರ ನಲವತ್ತು ನಿಮಿಷಗಳ ಡ್ರೈವಿಂಗ್ ಸಮಯದಲ್ಲಿ ಪ್ರತಿ ಬಾರಿಯೂ ೩೬೦ ಕೋನದಲ್ಲಿ ತಲೆ - ಕಣ್ಣು ತಿರುಗಿಸಿ ಸೇಫ್ ಆಗಿ ಡ್ರೈವ್ ಮಾಡುತ್ತಿದ್ದೀನಾ ಎಂದು ಪರೀಕ್ಷೆ ಮಾಡು, ಪಕ್ಕದಲ್ಲೇ ಕೂತು ಸೂಚನೆ ಕೊಡುತ್ತಿರುವ ಎಕ್ಸಾಮಿನರ್ ಹೇಳಿದ್ದೆಲ್ಲವನ್ನೂ ಮಾಡು, ಕನಿಷ್ಟ ಐದು ಬಾರಿ ರೋಡಿನ ಎಡ ಭಾಗದಲ್ಲಿ ಫುಟ್ ಪಾತಿಗೆ ಸಮಾನಾಂತರದಲ್ಲಿ ಕಾರ್ ನಿಲ್ಲಿಸು, ನಿಲ್ಲಿಸುವಾಗ ಇಂಡಿಕೇಟರ್ ಹಾಕು, ಮತ್ತೆ ಹೊರಡುವಾಗ ಪಾದಚಾರಿಗಳ ಕಡೆ ಲಕ್ಷ್ಯವಿಡು, ವೇಗದ ಮಿತಿ ಇರುವ ರಸ್ತೆಯಲ್ಲಿ ಅಷ್ಟೇ ವೇಗವನ್ನು ಕಾಯ್ದುಕೋ, ಬೇರೆ ವಾಹನಗಳು ಕಂಡಾಗ/ಬಂದಾಗ ಸಜ್ಜನನಂತೆ ವರ್ತಿಸು, ಪ್ರತೀ ಎರಡು ನಿಮಿಷಕ್ಕೊಮ್ಮೆ ಕಾರಿನ ಕನ್ನಡಿಯನ್ನು ಗಮನಿಸುತ್ತಿರು... ಈ ನಿಯಮಗಳ ಪಟ್ಟಿ ಅನಂತ, ಅಗಾಧ! ಎಲ್ಲಕ್ಕಿಂತ ಕಠಿಣವಾದದ್ದು- ೫೦ ಅಥವಾ ೬೦ ಮೈಲಿ ವೇಗದ ಮಿತಿಯ ರೋಡಿನಲ್ಲಿ ೪೦ ಮೈಲಿ ವೇಗದಲ್ಲಿ ಹೋದರೆ - ಅದು ಆತ್ಮ ವಿಶ್ವಾಸದ ಕೊರತೆ! ಯಾವುದೇ ಒಂದು ನಿಯಮವನ್ನು ಪಾಲಿಸದಿದ್ದರೆ ಅದು ‘ಮೈನರ್ ಮಿಸ್ಟೇಕ್’ ಅಥವಾ ಗಂಭೀರವಲ್ಲದ ತಪ್ಪು. ಬೇರೆ ವಾಹನ ಚಾಲಕರನ್ನು, ಪಾದಚಾರಿಗಳನ್ನು, ಸೈಕಲ್ ಸವಾರರನ್ನು ಕಡೆಗಣಿಸಿದರೆ ಅಥವಾ ಸಿಟ್ಟಿಗೇಳಿಸಿದರೆ ಅದು ‘ಸೀರಿಯಸ್ ಮಿಸ್ಟೇಕ್’ ಅಥವಾ ಗಂಭೀರ ತಪ್ಪು. ಇಂತಹ ಒಂದು ತಪ್ಪು ಸಾಕು - ಡ್ರೈವಿಂಗ್ ಟೆಸ್ಟ್ ತಲೆ ಕೆಳಗಾಗಲು!

ನನಗಿಂತ ಮೊದಲೇ ಟೆಸ್ಟ್ ಪಾಸಾದ ಗಂಡ, ಸಾಕಷ್ಟು ಬೆವರು ಸುರಿಸಿದ ನನ್ನಿಂದ ಪದೇ ಪದೇ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಲು. ಪ್ರತಿ ಬಾರಿ ಡ್ರೈವಿಂಗ್ ಪ್ರಾಕ್ಟೀಸ್ ಮಾಡಲು ಹೊರಟಾಗಲೂ ಖುಷಿ ಖುಷಿಯಾಗಿ ಹೊರಡುವ ನಾವು ಹತ್ತೇ ನಿಮಿಷದಲ್ಲಿ ಗಲಾಟೆ ಶುರುಮಾಡಿಕೊಳ್ಳುತ್ತಿದ್ದೆವು.

‘ಬೇರೆಲ್ಲಾ ನೀಟಾಗಿ ಮಾಡ್ತೀಯಾ - ಇಷ್ಟೆಲ್ಲ ಪಟಾಕಿ ಹೊಡೀತೀಯಾ, ಮ್ಯಾಥ್ಸು - ಡ್ರೈವಿಂಗ್ ಎರಡು ಮಾತ್ರ ಯಾಕೆ ಇಷ್ಟೆಲ್ಲ ಕಷ್ಟ ನಿಂಗೆ..?’ ಗಂಡನ ತಮಾಶೆ. ‘ಜಗತ್ತಿನ ಎಲ್ಲ ಗಂಡಸರೂ ತಮ್ಮಷ್ಟು ಶ್ರೇಷ್ಠ ಡ್ರೈವರ್ಸ್ ಯಾರೂ ಇಲ್ಲ ಅಂದುಕೋತಾರೆ. ಅವರಲ್ಲಿ ನೀನೂ ಒಬ್ಬ’ ನನ್ನ ಬಿಗುಮಾನ. ನಾನು ಇನ್ನೊಬ್ಬ ಡ್ರೈವಿಂಗ್ ಟೀಚರ್ರಿಗೆ ಶರಣಾದದ್ದು, ಪ್ರತಿ ಬಾರಿಯೂ ನಾ ಮಾಡುವ ಹೊಸ ಹೊಸ ತಪ್ಪುಗಳಿಗೆ ಅವರೂ ಬೆರಗಾದದ್ದು ಬೇರೆಯದೇ ವಿಷಯ ಬಿಡಿ.

ಇಷ್ಟೆಲ್ಲ ಥರಾವರಿ ‘ಡ್ರೈವಿಂಗ್ ಹಿಸ್ಟರಿ’ಯನ್ನು ಕಂಕುಳಿನಲ್ಲಿ ಇಟ್ಟುಕೊಂಡೇ ರಸ್ತೆಗಿಳಿದಿದ್ದೆ ನಾನು ಎಕ್ಸಾಮಿನರ್ ಜೊತೆಗೆ. ಹಿಂದಿನ ರಾತ್ರಿ ಸುಮಾರು ಒಂದು ಗಂಟೆಯವರೆಗೂ ನಿದ್ದೆ ಬಂದಿರಲಿಲ್ಲ. ಒಂದು ವಾರದಿಂದಲೂ ಡ್ರೈವಿಂಗ್ ಟೆಸ್ಟ್ ಫೇಲ್ ಆದಂತೆ ಕನಸು ಬೇರೆ! ಪರೀಕ್ಷೆಯ ಸಮಯದಲ್ಲಿ ಅದೆಲ್ಲ ನೆನಪಾಗುತ್ತಿತ್ತು. ಆದರೂ ಸುಮಾರು ಇಪ್ಪತ್ತು ನಿಮಿಷಗಳ ಕಾಲ ವಾಹನ ಚಲಾವಣೆಯನ್ನು ಸರಿಯಾಗಿಯೇ ಮಾಡಿದೆ. ಒಂದು ಹಂತದಲ್ಲಿ ಎಕ್ಸಾಮಿನರ್ ‘ಟೇಕ್ ಲೆಫ್ಟ್’ ಅಂದಾಗ ಬಲ ಯಾವುದು ಎಡ ಯಾವುದು ಎಂದು ದಿಗಿಲಾದರೂ ಹೇಗೋ ಮ್ಯಾನೇಜ್ ಮಾಡಿದ್ದೆ.

ಇನ್ನೇನು - ಹತ್ತು ನಿಮಿಷದಲ್ಲಿ ಟೆಸ್ಟ್ ಮುಗಿಯುತ್ತಿದೆ ಅನ್ನುವಾಗ ಅದೆಲ್ಲಿಂದಲೋ ಒಂದು ಕಾರು ಅಡ್ಡ ಬಂದದ್ದರಿಂದ ಬಲವಾಗಿ ಬ್ರೇಕ್ ಒತ್ತಲೇ ಬೇಕಾಯ್ತು. ಎಕ್ಸಾಮಿನರ್ ಮೆಟ್ಟಿ ಬಿದ್ದಿದ್ದ! ಅಲ್ಲಿಗೆ - ನನ್ನ ಹಣೆಯ ಬರಹ ಊಹಿಸಿಬಿಟ್ಟಿದ್ದೆ. ಆಮೇಲೆ ‘ಫೇಲ್ ಆಗಿಯಾಯ್ತು - ಇನ್ನೇನು’ ಎಂಬ ನಿರಾಳತೆಯಿಂದ ಕಾರು ಓಡಿಸಿದ್ದೆ. ಆಗಲೇ ಈ ಪವಾಡ ಸಂಭವಿಸಿದ್ದು! ಎಕ್ಸಾಮಿನರ್ ‘ಯೂ ಹ್ಯಾವ್ ಪಾಸ್ಡ್ ಯುವರ್ ಡ್ರೈವಿಂಗ್ ಟೆಸ್ಟ್’ ಅಂದು ಬಿಟ್ಟ! ಆಗಲೇ ನಾನು ನಿಟ್ಟುಸಿರಿಟ್ಟಿದ್ದು, ಎಕ್ಸಾಮಿನರ್ ಕೈ ಕುಲುಕುವುದನ್ನೂ ಮರೆತದ್ದು!

ನಂತರ ಆಫೀಸಿನಿಲ್ಲಿ ನನ್ನ ವೀರಗಾಥೆ ಕೇಳಿ ಸನ್ಮಾನಿಸುವುದು ಒಂದೇ ಬಾಕಿ. ಕಿರಿಯ ಸಹೋದ್ಯೋಗಿಯೊಬ್ಬ ತನ್ನ ಡ್ರೈವಿಂಗ್ ಟೆಸ್ಟ್ ಮುಂದಿನ ತಿಂಗಳಿದೆ - ಏನಾಗಲಿದೆಯೋ ಗೊತ್ತಿಲ್ಲ ಎಂದು ಮುಖ ಚಿಕ್ಕದು ಮಾಡಿದಾಗ ‘ನಾಟ್ ಟು ವರಿ ಮೇಟ್. ಈಸಿಯಾಗಿ ಪಾಸ್ ಆಗ್ತೀಯಾ’ ಅಂತ ಹೇಳುವಷ್ಟು ಆತ್ಮ ವಿಶ್ವಾಸ ನನಗೆ ಎಲ್ಲಿಂದ ಬಂತು ಅನ್ನುವುದಕ್ಕೆ ಇನ್ನೂ ಉತ್ತರ ಹುಡುಕಲು ಸಾಧ್ಯವಾಗಿಲ್ಲ.

Hearty Thanks to thatskannada.com :-)

Thursday, 4 June 2009

ಒಳಗೋ? ಹೊರಗೊ..?

ಹೊರ ಬಿದ್ದಾಗ ತಿಳಿದಿದ್ದಿಷ್ಟು-

ಬೆಳಕೂ ಆರದ, ಕತ್ತಲೆಯೂ ಆಗದ
ಹಿರಣ್ಯಕಶಿಪುವಿನ ಮುಸ್ಸಂಜೆ
ಕುಣಿತ ಮುಗಿಸಿದ ಸೂರ್ಯ
ರಂಗಸ್ಥಳಕ್ಕಿಳಿಯದ ಚಂದ್ರ
ಕಣ್ಣಂಚಿನಲ್ಲಿ ದಿನವೊಂದು ಮುಳುಗಿ ಹೋಗುವ ಭಯ
ಮಹಡಿ ಮನೆಯಲ್ಲಿ ಮುಗಿಯದ ಮಾತು
ಅವಳದ್ದೇ ಮೇಲುಗೈ - ಎಂದಿನಂತೆ.
ಹೆಜ್ಜೆಗಳ ನಂಬಿಯೇ ಹೊರಟಿದ್ದು
ಅವೂ ದಾರಿತಪ್ಪಿದರೆ ತಲುಪುವುದೆಲ್ಲಿಗೆ?

ಒಳ ಹೊಕ್ಕಾಗ ಅರಿತಿದ್ದಿಷ್ಟು-

ಗೋಡೆಯ ಮೇಲಿನ ಚಿತ್ರದಲ್ಲಿ
ಅವಿತಂತಿದ್ದ ಪ್ರಲ್ಹಾದ ಛಾಯೆ
ಕಣ್ಮುಂದಿನ ಹೂಗಳೆಲ್ಲ ತಾರೆಯಾಗಿ
ಬದಲಾದದ್ದು ಎಂಥ ಮಾಯೆ?
ಹೊಸ ಹಗಲಿಗೆ ಹೆಗಲು ಕೊಡಲು
ಸುತ್ತುವರಿದವರ ಕಣ್ಣಲ್ಲಿ ಕಾತರತೆ
ದೂರದಲ್ಲಿ ಮಾತುಗಳೆಲ್ಲ ಮುಗಿದು
ಮೌನದ್ದೇ ದರ್ಬಾರು
ಪ್ರೀತಿಯೋ - ಭೀತಿಯೋ ಅಂತೂ ಬಗೆಹರಿದಂತೆ
ಹೆಜ್ಜೆಗಳೂ ಪಯಣ ಮುಗಿಸಿದ್ದು ನಡುಮನೆಯಲ್ಲಿಯೇ

ಪ್ರಶ್ನೆ ಬೃಹದಾಕಾರ
ಒಳಗೋ? ಹೊರಗೋ..?

Thursday, 16 April 2009

ಇಪ್ಪತ್ಯೋಳಕ್ಕೇ ಮೂವತ್ತಾಯ್ತಂದ್ರೆ ಎಂಗೆ ಸಿವಾ?

ಈಗೊಂದು ವಾರದ ಹಿಂದೆ ನಮ್ಮಾಫೀಸಿನಲ್ಲಿ ನಡೆದ ಘಟನೆ ಇದು. ಅದೇ ತಾನೇ ಆಫೀಸ್ ಒಳ ಹೊಕ್ಕು ಎಲ್ಲರೊಂದಿಗೆ ‘ಗುಡ್ ಮಾರ್ನಿಂಗ್’ ವಿನಿಮಯದಲ್ಲಿದ್ದೆ. ಹಿಂದಿನಿಂದ ಬಂದು ನಿಂತ ಎಲಿಯಟ್ - ನನ್ನ ಮ್ಯಾನೇಜರ್ - `ಕ್ಯಾನ್ ವಿ ಹ್ಯಾವ್ ಅ ಕ್ವಿಕ್ ಚ್ಯಾಟ್ ಪೂನಿ’ ಅಂತ ಕಿವಿಯಲ್ಲಿ ಉಸುರಿದ. ‘ಕೆಲಸ ಹೋಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಕೊಡ್ತಾ ಇಲ್ಲ ತಾನೇ’ ಎಂದು ಜೋಕ್ ಮಾಡಿ ಮೀಟಿಂಗ್ ರೂಮ್ ತಲುಪಿದಾಗ ಸ್ವಲ್ಪ ದಿಗಿಲಾಗಿದ್ದೆ. ನನ್ನ ಗಾಬರಿಬಿದ್ದ ಮುಖ ನೋಡಿದ ಎಲಿಯಟ್ ‘ನಥಿಂಗ್ ಸೀರಿಯಸ್’ ಎಂದ. ಸ್ಪಲ್ಪ ಅನುಮಾನದೊಂದಿಗೇ ಮಾತು ಶುರು ಮಾಡಿದವ ನಿನ್ನ ಕೆಲವು ಫೋಟೋಗಳು ಬೇಕಿತ್ತಲ್ಲ.. ಅಂದ. ನಾನು ಪೂರ್ತಿ ಗೊಂದಲದಲ್ಲಿ ಬಿದ್ದೆ. `ನನ್ನ ಫೋಟೋ ನಿನಗ್ಯಾಕೆ' ಅಂತ ತಕ್ಷಣ ಕೇಳಿದೆ. ‘ಐದಾರು ಫೋಟೋಗಳು ಸಾಕು. ನೀನು ಚಿಕ್ಕವಳಾಗಿದ್ದಾಗಿನ ಫೋಟೋ, ಎಜುಕೇಷನ್ ಟೈಮಿನದ್ದು, ನಿಮ್ಮ ಮದುವೆಯದು, ಯಾವುದಾದರೂ ಪಾರ್ಟಿಯಲ್ಲಿ ನೀನು ಇದ್ದದ್ದು...’ ಹೀಗೆ ವಿವರಿಸುತ್ತಲೇ ಹೋದ ಹೊರತಾಗಿ, ಗುಟ್ಟು ಬಿಟ್ಟು ಕೊಡಲಿಲ್ಲ.

ಒಂದಿಬ್ಬರು ನಿವೃತ್ತಿಯಾಗುವ ಮೊದಲು ಅವರ ಥರಾವರಿ ಫೋಟೋಗಳನ್ನು ಆಫೀಸಿನ ನೋಟೀಸ್ ಬೋರ್ಡ್, ಬಾಗಿಲುಗಳ ಮೇಲೆ ನೋಡಿದ ನೆನಪಿತ್ತು. ಇನ್ನೊಬ್ಬ ಕಲೀಗ್ ನ ಅರವತ್ತನೆಯ ಹುಟ್ಟು ಹಬ್ಬದ ಸಮಯದಲ್ಲೂ ಇದೇ ರೀತಿ ‘ಫೋಟೋ ಶೃಂಗಾರ’ ಮಾಡಿದ್ದರು. ನಾನಂತೂ ಸದ್ಯ ಕೆಲಸ ಬಿಡುತ್ತೇನೆ ಎಂದ ನೆನಪಿಲ್ಲ. ನನಗೆ ಅರವತ್ತಾಗಲು ಇನ್ನೂ ಸುಮಾರು ದಶಕಗಳು ಕಳೆಯಬೇಕು. ಶಾಲು ಹೊದೆಸಿ- ಸನ್ಮಾನಿಸುವಂತ ಘನಂದಾರಿ ಕೆಲಸವನ್ನು ಮಾಡಿದ ನೆನಪೂ ಆಗುತ್ತಿಲ್ಲ.. ಇನ್ಯಾಕೆ ಇವ ನನ್ನ ಫೋಟೋ ಕೇಳುತ್ತಿದ್ದಾನೆ? ಊಹುಂ.. ಬಗೆಹರಿಯುತ್ತಿಲ್ಲ.

ನಿಧಾನಕ್ಕೆ - ‘ಫೋಟೋಗಳನ್ನು ತರಬಲ್ಲೆ. ಆದರೆ ಯಾಕೆ ಬೇಕು ಅಂತ ಕೇಳಬಹುದಾ?’ ಅಂತ ಕೇಳಿದೆ. ಅವ ಕಣ್ಣು ಪಿಳಿಪಿಳಿಸಿ, ಕತ್ತು ಹಿಲಾಯಿಸಿ ‘ಈ ವರ್ಷ ನಿನ್ನ ಮೂವತ್ತನೆಯ ಬರ್ಥ್ ಡೇ ಇದೆಯಲ್ಲ. ಈ ದೇಶದಲ್ಲಿ - ಮೂವತ್ತು, ಐವತ್ತು ಮತ್ತು ಅರವತ್ತನೆಯ ಹುಟ್ಟುಹಬ್ಬಗಳು ಮಹತ್ವದ್ದು. ನಿನ್ನ ಮೂವತ್ತನೆಯ ಹುಟ್ಟುಹಬ್ಬದ ದಿನ ನಮಗೆಲ್ಲ ‘ಪಾರ್ಟಿ’ ಬೇಕೆ ಬೇಕು. ಅಂದು ಆಫೀಸ್ ತುಂಬೆಲ್ಲ ನಿನ್ನ ಥರಾವರಿ ಫೋಟೋಗಳು. ಪ್ರಿಪರೇಶನ್ ಶುರು ಮಾಡಬೇಕಲ್ಲ.. ಹಾಗಾಗಿ ಫೋಟೋಗಳನ್ನು ಕೇಳಿದೆ’ ಎಂದ.

ನನಗಾಗ ನಗುವೂ- ಅಳುವೂ ಒಟ್ಟಿಗೆ ಬಂದಂತೆ ಆಯಿತು. ‘ನೋ.. ಐಮ್ ಓನ್ಲಿ 27. ಇನ್ನೂ ಮೂವತ್ತಾಗಿಲ್ಲ ನನಗೆ..’ ಎನ್ನುತ್ತಿದ್ದಂತೆ ಅವ ಪಕ್ಕಕ್ಕಿದ್ದ ಫೈಲ್ ತೆಗೆದ. ಮೊದಲು ಕಂಡಿದ್ದೇ ನನ್ನ ಅಪ್ಲಿಕೇಶನ್ ಫಾರ್ಮ್. ಕಂಪನಿಯಲ್ಲಿ ಕೆಲಸ ಬಯಸಿ ಕಳುಹಿಸಿದ್ದು. ಹೆಸರು, ವಿಳಾಸದ ಕೆಳಗೆ ರಾರಾಜಿಸುತ್ತ ಇದೆಯಲ್ಲ ನಾ ಹುಟ್ಟಿದ ದಿನಾಂಕ! `23 ಜುಲೈ 1979' ಎಂದು ನನ್ನ ಕೈಯ್ಯಾರೆ ಬರೆದದ್ದನ್ನ - ನನ್ನ ಬಾಯಾರೆ ‘ಇದು ಸುಳ್ಳು’ ಎಂದು ಹೇಗೆ ಹೇಳಲಿ? ಮತ್ತೆ ದ್ವಂದ್ವ. ಆದರೆ ಅವನಿಗೆ ನಿಜ ಏನು ಅಂತ ವಿವರಿಸದೇ ಬೇರೆ ವಿಧಿ ಇರಲಿಲ್ಲ. ನನ್ನನ್ನು ಬೇಗ ಶಾಲೆಗೆ ಅಟ್ಟಿದ ಅಪ್ಪಯ್ಯನನ್ನೂ, ಶಾಲೆಯ ದಾಖಲಾತಿ ಸಮಯದಲ್ಲಿ - ಹುಟ್ಟಿದ ತಾರೀಕೇ ಬದಲು ಮಾಡಿದ ಮಾಲತಿ ಅಕ್ಕೋರನ್ನೂ ಮನಸ್ಸಿನಲ್ಲೇ ಬೈದುಕೊಳ್ಳುತ್ತ ಎಲಿಯಟ್ ಗೆ ವಿವರಿಸತೊಡಗಿದೆ...

ನಾಲ್ಕು ವರ್ಷಕ್ಕೇ ಎಂಟು ವರ್ಷದವರಾಡುವಂತೆ ಮಾತಾಡುತ್ತಿದ್ದ ನಾನು, ಆಗಲೇ ಸರಾಸರಿ ಬರೆಯಲು- ಓದಲು ಕಲಿಸಿದ ಆಯಿ, ತರಗತಿಯಲ್ಲಿ ಅಗತ್ಯಕ್ಕಿಂತಲೂ ಕಮ್ಮಿ ಇದ್ದ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಹೆಣಗಾಡುತ್ತಿರುವ ಹೆಡ್ ಟೀಚರ್ರು... ಎಲ್ಲದರ ಪರಿಣಾಮವಾಗಿ ನಾಲ್ಕು ವರ್ಷಕ್ಕೇ ಒಂದನೆ ತರಗತಿ ಸೇರಿದ್ದು; ‘ಐದು ವರ್ಷದ ಮೇಲೆ ಹತ್ತು ತಿಂಗಳು = ಒಂದನೇ ತರಗತಿ’ ಎಂಬ ಕಾನೂನಿನ ಕಟ್ಟಳೆ ಮೀರಲಾಗದ ಮಾಲತಿ ಟೀಚರ್ರು ನನ್ನನ್ನು ಅನಾಮತ್ತು ಎರಡು ವರ್ಷ ಹಿರಿಯವಳನ್ನಾಗಿ ಮಾಡಿ ಜನ್ಮ ದಿನಾಂಕವನ್ನೇ ತಿದ್ದಿದ್ದು; ನನಗೆ ಬುದ್ಧಿ ತಿಳಿದ ನಂತರ ಈ ಗೋಟಾವಳಿಗಳನ್ನು ಸರಿಪಡಿಸಲು ಒದ್ದಾಡಿದ್ದು; ಲಾಯರ್ರು, ಅಫಿಡವಿಟ್ಟು, ಕೋರ್ಟು ಅಂತೆಲ್ಲ ತಿರುಗಾಡಿದರೂ ಅದು ಸರಿಯಾಗದೇ ಇರುವ ಸಂಭವವೇ ಹೆಚ್ಚು ಎಂದು ಗೊತ್ತಾಗಿದ್ದು; ಅಷ್ಟರಲ್ಲಾಗಲೇ ಪಾಸ್ಪೋರ್ಟು, ಮ್ಯಾರೇಜ್ ಸರ್ಟಿಫಿಕೇಟ್ ಇತ್ಯಾದಿ ಕಾಗದ ಪತ್ರಗಳೂ ಅದೇ ಜನ್ಮ ದಿನಾಂಕದೊಂದಿಗೆ ರೆಡಿಯಾದದ್ದರಿಂದ ಮತ್ತೆ ಎಲ್ಲವನ್ನೂ ಹೊಸತಾಗಿ ಮಾಡಿಸುವ ಉಮೇದು ನನಗೆ ಇಲ್ಲವಾಗಿದ್ದು... ಉಫ್ - ಇದೆಲ್ಲ ಎಲಿಯಟ್ ಗೆ ವಿವರಿಸಿದಾಗ ಅವ ನನ್ನನ್ನ ಬೇರೆ ಗ್ರಹದಿಂದ ಬಂದ ಪ್ರಾಣಿಯ ಥರ ನೋಡುತ್ತಿದ್ದ! ಕಥೆಯೆಲ್ಲ ಮುಗಿದ ಮೇಲೆ ಸ್ವಲ್ಪ ಸುಧಾರಿಸಿಕೊಂಡವ ‘ಸೋ.. ನಿನ್ನ ಪ್ರಕಾರ ಮೂವತ್ತಾಗಲು ಇನ್ನೂ ಕೆಲವು ವರ್ಷ ಬಾಕಿ ಇದೆ. ಈ ವರ್ಷ ಮೂವತ್ತನೆಯ ಬರ್ಥ್ ಡೇ ಪಾರ್ಟಿ ಭಾಗ್ಯ ನಮಗಿಲ್ಲ..’ ಅಂದ. ನನ್ನಿಂದಲೂ ಒಂದು ಭಾರವಾದ ‘ಹ್ಮ್..’ ಹೊರಬಿತ್ತು. ‘ಥರ್ಟಿಯತ್ ಬರ್ಥ್ ಡೇ ಪ್ರಿಪರೇಶನ್ ಮೀಟಿಂಗ್’ಗೆ ತೆರೆಯೂ ಬಿತ್ತು.

ಎರಡು ತಾಸಿನ ನಂತರ ಇನ್ನೊಬ್ಬ ಕಲೀಗ್ ಅಲೆನ್ ‘ಪೂನಿ, ಮೊನ್ನೆ ಕಂಪನಿ ಬೋನಸ್ ಕೊಟ್ಟಿತಲ್ಲ, ಹೇಗೆ ಖರ್ಚು ಮಾಡುವವಳಿದ್ದಿ ಆ ಹಣವನ್ನು?’ ಅಂತ ಕೇಳಿದ. ‘ಪ್ರೋಬ್ಯಾಬ್ಲಿ.. ನನ್ನ ಮೂವತ್ತನೆಯ ಹುಟ್ಟುಹಬ್ಬದ ದಿನ ನಿಮಗೆಲ್ಲ ಪಾರ್ಟಿ ಕೊಟ್ಟು ಎಲ್ಲಾ ದುಡ್ದು ಖಾಲಿ ಮಾಡ್ತೇನೆ .. ವಾಟ್ ಡೂ ಯು ಸೇ ಎಲಿಯಟ್?’ ಎಂದು ಎಲಿಯಟ್ ಕಡೆ ತಿರುಗಿ ಕಣ್ಣು ಮಿಟುಕಿಸಿದೆ.

Thanks to thatskannada.com

Sunday, 22 March 2009

ಹದಿನೆಂಟರ ಹೆಜ್ಜೆಗುರುತು

ಛೆ..ಛೇ... ದಿನಗಳು ಬಿಡುವಿಲ್ಲದಂತೆ ಓಡುತ್ತಿವೆಯೋ, ಓಡುವ ದಿನಗಳಿಗೆ ತಡೆ ಹಾಕುವವರಿಲ್ಲವೋ ತಿಳಿಯುತ್ತಿಲ್ಲ - ಅಂತೂ ವರ್ಷಗಳು ದಿನಗಳಂತೇ, ದಿನಗಳು ಕ್ಷಣಗಳಂತೆ ಕಣ್ಣೆದುರಿನಲ್ಲೇ ಕೈತಪ್ಪಿ ಹೋಗುತ್ತಿರುವುದಂತೂ ನಿಜ. ಓಡುತ್ತಿರುವ ಈ ದಿನಗಳು ತಮ್ಮೊಟ್ಟಿಗೆ ನಮ್ಮ ವಯಸ್ಸನ್ನೂ - ಆಯಸ್ಸನ್ನೂ ಕೊಂಡೊಯ್ಯುತ್ತಿರುವುದೂ ಅಷ್ಟೇ ನಿಜ.

ಅಣಕಿಸುವ ಹುಡುಗರನ್ನು ಬೆದರುಗಣ್ಣುಗಳಿಂದ ನೋಡಿದ್ದು, ಇತರರ ಹಂಗೇ ಇಲ್ಲದಂತೆ - ಯಾರಿಗೂ ಕೇರ್ ಮಾಡದಂತೆ ಓಡಾಡುವ, ಓಲಾಡುವ ಹಿರಿಯ ಹುಡುಗಿಯರನ್ನು ಕಂಡು ಆಶ್ಚರ್ಯಪಟ್ಟಿದ್ದು, ದೊಡ್ಡ ಕಾಲೇಜಿನಲ್ಲಿ ದಿಕ್ಕು ತಪ್ಪಿದ ಕರುವಿನಂತೆ ಓಡಾಡಿದ್ದು, ದೈತ್ಯಾಕಾರದ ಕ್ಲಾಸಿನಲ್ಲಿ ಒಂಟಿತನ ಅನುಭವಿಸಿದ್ದು- ಹೀಗೆ... ಇವೆಲ್ಲವೂ ನಿನ್ನೆ-ಮೊನ್ನೆಗಳ ಹಸಿಹಸಿ ನೆನಪಿನಂತಿವೆ. ಒಮ್ಮೆಲೇ ಕಾಲೇಜಿನ ಇಂಗ್ಲೀಷಿಗೆ ಹೊಂದಿಕೊಳ್ಳಲಾಗದೇ ಮೊದಲ ‘ಟೆಸ್ಟ್’ನಲ್ಲಿ ಲಾಗ ಹಾಕಿ ಕಣ್ಣಲ್ಲೆಲ್ಲ ನೀರು ತುಂಬಿಕೊಂಡಿದ್ದು, ‘ಕಾಲೇಜಿನ ಉಸಾಬರಿಯೇ ಬೇಡ’ ಎಂದು ಮುನಿಸಿಕೊಂಡದ್ದು - ಆಗ ಮಂಗಲಾ, ರಶ್ಮಿಯರು ಬಂದು ತಮ್ಮದೂ ಅದೇ ಕಥೆಯೆಂದು ಹೇಳಿದಾಗ ತುಸು ಸಮಾಧಾನಗೊಂಡದ್ದು... ಎಲ್ಲ ಇನ್ನೂ ಹಸಿರು.

ದಿನ ಕಳೆದಂತೆ ಈ ಕಾಲೇಜು ಹಳತಾಯ್ತು. ನಮ್ಮಲ್ಲಿ ಹೊಸತನ- ಹುಡುಗಾಟಿಕೆಯೂ ಮೊಳೆಯಿತು. ಛೇಡಿಸುವ ಹುಡುಗರಿಗಾಗಿ ಮಾರುತ್ತರವಲ್ಲದಿದ್ದರೂ ಮರು ಉತ್ತರವಂತೂ ಸಿದ್ಧವಾಯ್ತು. ಮನಸಿನಲ್ಲಿದ್ದ ಹಲವು ಅಳಕುಗಳು ಬಗೆಹರಿದು ದಿಟ್ಟತನ ಮೈಗೂಡಿತು. ‘ಎಲ್ಲರೂ ನಮ್ಮಂತೆಯೇ’ ಎಂಬ ಭರವಸೆ ಹೊಸ ಹುರುಪು ತಂದುಕೊಟ್ಟಿತು.
ಆದರೆ, ಈ ಬೆಳವಣಿಗೆಯ ಹಂತದಲ್ಲಿ ಎರಡ್ಮೂರು ವರ್ಷಗಳು ಸದ್ದಿಲ್ಲದೇ ಉರುಳಿ ಹೋದದ್ದು ಮಾತ್ರ ನಮ್ಮ ಗಮನಕ್ಕೆ ಬರಲೇ ಇಲ್ಲ. ಈಗ ನೋಡಿದರೆ, ಈ ಘಟನೆಗಳೆಲ್ಲಾ ಎರಡ್ಮೂರು ವರ್ಷ ಹಿಂದಿನವು ಎಂದು ಪರಿಗಣಿಸಲು ಮನಸ್ಸು ಸಹಕರಿಸುತ್ತಿಲ್ಲ. ಇದಕ್ಕೇನು ಕಾರಣ? ಅಂಥ ಹುಡುಗಾಟಿಕೆ- ತುಂಟತನಗಳೆಲ್ಲವೂ ಇನ್ನು ನೆನಪು ಮಾತ್ರ!

ಈಗ ನಾವು ‘ಪದವಿ ವಿದ್ಯಾರ್ಥಿಗಳು’. ಈ ಪುಟ್ಟ ಪದಕ್ಕೆ ಎಷ್ಟೊಂದು ವಜ್ಜೆ ಇದೆ ಎನ್ನುವುದನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟವೇ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳೆಂಬ ಬಿರುದು, ಜೊತೆಗೇ ಕಿರಿಯರಿಗೆ ಮಾದರಿ ಎಂಬ ಪಟ್ಟ- ಬಿರುದಾವಳಿಗಳ ಮಧ್ಯೆ ಬೇಡವೆಂದರೂ ‘ಗಂಭೀರತೆ’ ನಮ್ಮನ್ನು ಸುತ್ತಿ ಬಿಡುವುದು ಸಹಜ. ಎಲ್ಲ ಪರಿಚಿತ ಚಹರೆಗಳ ಮಧ್ಯೆ, ನಮ್ಮ ಯಶಸ್ಸಿಗಾಗಿ ಹಾರೈಸುವ ಆತ್ಮೀಯ ಅಧ್ಯಾಪಕರ ಮಧ್ಯೆ ನಾವು ಹಳೆಯ ಹುಡುಗಾಟಿಕೆಯನ್ನು ಪ್ರದರ್ಶಿಸಲಾದೀತೆ? ಖಂಡಿತವಾಗಿಯೂ ಸಾಧ್ಯವಿಲ್ಲ. ಇಲ್ಲಿ ನಾವು ಗಂಭೀರರಾಗಿ ಬಿಡುವುದು ಅನಿವಾರ್ಯವಾಗುತ್ತದೆ. ನಮ್ಮ ಪುಟ್ಟ ತಮ್ಮ- ತಂಗಿಯರಿಗೆ ಮಾರ್ಗದರ್ಶಿಗಳಾಗಿ ನಿಲ್ಲುವುದು ಅವಶ್ಯವಾಗಿ ಬಿಡುತ್ತದೆ. ತಾಯ್ತಂದೆಯರು ತಮ್ಮ ಕನಸುಗಳನ್ನು ನಮ್ಮ ಕಣ್ಣಲ್ಲಿ ಕಾಣತೊಡಗಿದಾಗ ಜವಾಬ್ದಾರಿಯ ತೆಳು ಪರದೆ ನಮ್ಮನ್ನು ಆವರಿಸಿ ಹುಡುಗುತನವನ್ನು ಮಾಯವಾಗಿಸುತ್ತದೆ. ಎಂಥ ವಿಪರ್ಯಾಸವಲ್ಲವೇ?

ಹೀಗೆ ವರ್ಷಗಳು ಸರಿದಂತೆ ನಮ್ಮ ಮೇಲಿನ ‘ವಜ್ಜೆ’ ಹೆಚ್ಚುವುದು ಪ್ರಕೃತಿ ನಿಯಮ ಅಂತಾದರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ನಿಜ. ಆದರೆ ಈ ನಿಯಮದ ತೆಕ್ಕೆಗೆ ಸಿಕ್ಕ ನಮ್ಮ ಪಾಲಿಗೆ ಉಳಿದದ್ದು ಹಳೆಯ ನೆನಪು ಮತ್ತು ವಿಷಾದ ಮಾತ್ರ!

*******************************

ಪತ್ರಿಕೆಯಲ್ಲಿ ಪ್ರಕಟವಾದ ಮೊದಲ ಲೇಖನ ಇದು. ಸುಮಾರು ೧೧-೧೨ ವರ್ಷಗಳ ಹಿಂದೆ ‘ಕನ್ನಡ ಜನಾಂತರಂಗ’ದಲ್ಲಿ ಪ್ರಕಟವಾಗಿತ್ತು. ಲೇಖನವನ್ನು ಕತ್ತರಿಸಿಟ್ಟುಕೊಂಡು (ಪುಣ್ಯ.. ಗ್ಲಾಸು -ಚೌಕಟ್ಟು ಹಾಕಿಸಿರಲಿಲ್ಲ!) , ಮನೆಯವರಿಗೆಲ್ಲ ತೋರಿಸಿ, ಅಣ್ಣನಿಂದ ‘ಶಭಾಸ್’ ಅನ್ನಿಸಿಕೊಂಡು, ಕನ್ನಡವನ್ನು ಅಷ್ಟು ಸರಿಯಾಗಿ ಓದಲು ಬರದ ಇನ್ನೊಬ್ಬ ಅಣ್ಣನಿಗೆ Body Language ಸಹಿತ ಓದಿ ತೋರಿಸಿ... ಆಹ್, ಎಷ್ಟೆಲ್ಲ ಸಂಭ್ರಮಪಟ್ಟಿದ್ದೆ. ಇವತ್ತು ನನ್ನ ವಿದ್ಯಾರ್ಥಿನಿಯೊಬ್ಬಳು ಅವಳ ಮೊದಲ ಲೇಖನದ ಬಗ್ಗೆ ಪ್ರಸ್ತಾಪಿಸಿದ್ದರಿಂದ, ನನ್ನದೂ ಒಂದು ಇದೆ ಅಂತ ನೆನಪಾಯ್ತು ನೋಡಿ. ಕೊನೆಗೂ ಹುಡುಕಿ ತೆಗೆದೆ, ನಿಮಗೆಲ್ಲ ಸ್ವಲ್ಪ ಕಾಟ ಕೊಡೋಣ ಅಂತ. ಬೋರಾದರೆ ಬೈದು ಬಿಡಿ ಪ್ಲೀಸ್!

Friday, 16 January 2009

ಸುಪ್ತ

ಬೆರಳ ತುದಿ ಬಿಂದಿಯ ಹಣೆಗೇರಿಸದೆ
ಸುಮ್ಮನೆ ಚಿಮ್ಮಿದಾಗ
ತುಂಬು ನಗೆಯ ಆಯಿ
ಬಾಗಿಲಲ್ಲಿ ನಿಂತಂತೆ ಭಾಸ..

ಪಾರ್ಟಿ ಒಲ್ಲದ ಮಾಂಗಲ್ಯ
ದಿಂಬಿನಡಿ ಸೇರಿದ ದಿನ
ಅತ್ತೆಯ ಮೂರೆಳೆ ಸರ
ಕನಸಿನಲ್ಲಿ ಬಂದ ಹಾಗಿತ್ತಲ್ಲ..

ಮುಟ್ಟಾದ್ದು ನೆನಪಿರದೆ
ಮಂತ್ರ ಹಲುಬಿದ ಮುಂಜಾವು
ಅಷ್ಟಮಂಗಲದ ಬಗ್ಗೆ ಕೇಳಿದ್ದು ಮಾತ್ರ
ಮುರಿಯುವ ಟೊಂಗೆಯ ಮೇಲೆ ಕಾಗೆ ಕೂತಂತೆ..

ಮಗ್ಗುಲಾವರಿಸಿ ತಲೆ ನೇವರಿಸಿದವ
ಬಲಗಿವಿಯಲ್ಲಿ ಪಿಸುಗುಟ್ಟಿದರೆ-
ಮೊದಲ ಬಾರಿ ಬೆತ್ತಲಾದಷ್ಟೇ ಪುಳಕ..

ತಲೆ ಮೇಲಿನ ನೀರು-
ಕೊರಳ ಬಳಿ ಕೆಂಪಚ್ಚು
ಕಿವಿ ಬದಿಯ ಕಪ್ಪಚ್ಚು ಹಾದು
ಕೆಳಗಿಳಿವ ಖುಷಿ
ಕಣ್ಮುಚ್ಚಿ ಅನುಭವಿಸುವಾಗ
ಕನ್ಯಾಸಂಸ್ಕಾರದ ದಿನ
ಅಪ್ಪನ ತೊಡೆಯೇರಿ ಕೂತದ್ದೇ ನೆನಪು.

Thursday, 18 September 2008

ಹುಣ್ಣಿಮೆಯ ಹೆಸರಿಗಿಲ್ಲಿ ಸದಾ ಗ್ರಹಣ!

ಪ್ರಜ್ಞಾ...

ಈ ಹೆಸರನ್ನ ಇಡಲು ಆಯಿಗೆ ತುಂಬ ಇಷ್ಟವಿತ್ತಂತೆ. ಹುಣ್ಣಿಮೆ ದಿನ ಹುಟ್ಟಿದ ಕೂಸಿಗೆ 'ಪೂರ್ಣಿಮಾ'ಗಿಂತ ಒಳ್ಳೆಯ ಹೆಸರು ಇನ್ಯಾವುದು ಎಂದು ಎಲ್ಲರೂ ಕೇಳಿದಾಗ ಆಯಿ ಒಪ್ಪಿದ್ದು ಈಗ ಇಪ್ಪತ್ತೇಳು ವರ್ಷದ ಹಿಂದಿನ ಕಥೆ.

ಮೊನ್ನೆ ಮೊನ್ನೆಯವರೆಗೆ ಎಲ್ಲ ಸರಿಯಾಗಿಯೇ ಇತ್ತು. ಕನ್ನಡ ಶಾಲೆ - ಹೈಸ್ಕೂಲು - ಕಾಲೇಜಿನಲ್ಲಿ ಈ ಹೆಸರು ತುಂಬ ಅಪರೂಪ ಎಂಬ ಕೋಡು ಬೇರೆ. ಮನೆಯಲ್ಲಿ ಕೂಸೇ ಕೂಸೇ, ಊರವರಿಗೆ ಏನವ್ವ ತಂಗಿ, ಗೆಳತಿಯರಿಗೆ ಮತ್ತು ಹತ್ತಿರದವರಿಗೆ ಪೂರ್ಣಿ. ಏನಿದೆ ಅಲ್ಲಿ ತಲೆ ಕೆಡಿಸಿಕೊಳ್ಳಲು? ನಿಮ್ಮಿಬ್ಬರ ಹೆಸರು 'ಮಧು ಪೂರ್ಣಿಮಾ' ಅಲ್ವಾ...? ಹಾಗಿದ್ರೆ ನೀವು ಹನಿಮೂನ್ ಜೋಡಿ ಎಂದು ಗೆಳೆಯನೊಬ್ಬ ಛೇಡಿಸಿದಾಗ ನಾಚಿಕೊಂಡ ನೆನಪು ಕೂಡ ಇದೆ.

ನಾಲಿಗೆ ಹೊರಳದ ಜನರಿರುವ ಈ ದೇಶಕ್ಕೆ ಬರುವವರೆಗೂ ನನ್ನ ಹೆಸರಿನ ಬಗ್ಗೆ ಆಗಾಗ ಹೆಮ್ಮೆಪಡುತ್ತಿದ್ದೆ ಅಂತ ಹೇಳಲು ತುಸು ಸಂಕೋಚ! ಇಲ್ಲಿಗೆ ಬಂದ ನಂತರ ಹೆಸರನ್ನ ಹೇಗೆ ಸರಳ ಮಾಡೋದು. ಅಂತ ಹತ್ತಾರು ಬಾರಿ ಯೋಚನೆ ಮಾಡಿದ್ದಿದೆ. ಪ್ರತಿ ದಿನ ಹೆಸರಿನ ಕಗ್ಗೊಲೆ ಆಗೋದು ಕೇಳಿ ಮುಖ ಚಿಕ್ಕದು ಮಾಡಿದ್ದಿದೆ.

ಕೆಲಸ ಹುಡುಕಲು ಶುರುಮಾಡಿದಾಗಿನಿಂದ ಆರಂಭವಾದ ಈ ನಾಮಾಮೃತ ಅಧ್ವಾನಕ್ಕೆ ಒಂದು ಪೂರ್ಣವಿರಾಮ ಅಂತ ಇರುವುದು ಡೌಟೇ! ಬೆಳಗ್ಗೆ ಹತ್ತೂವರೆಗೆ ಕಾಲ್ ಮಾಡಿದ ಲಿಂಡಾ 'ಕ್ಯಾನ್ ಐ ಸ್ಪೀಕ್ ಟು ಪ್ಯುಮೀನಾ ಪ್ಲೀಸ್..' ಅಂದರೆ ಸಂಜೆ ಐದಕ್ಕೆ ಕಾಲ್ ಮಾಡಿದ ಜೀನ್ 'ಇಸ್ ಇಟ್ ಪರೀನಾ..' ಎನ್ನುತ್ತಾಳೆ. ಮಾರನೇ ದಿನ ಬ್ರ್ಯಾನ್ 'ಹಾಯ್ ದೇರ್ - ವಾಂಟೆಡ್ ಟು ಟಾಕ್ ಟು ಪುಮಿನಿ ಬಾಟ್' ಅಂದಾಗ 'ರಾಂಗ್ ನಂಬರ್ರ್' ಅಂತ ಒದರಿ ಫೋನ್ ಕುಕ್ಕಿ ಬಿಡುವಷ್ಟು ಸಿಟ್ಟು.

ಅಳತೆ ಸರಿಯಿರದ ಜಾಕೆಟ್ ವಾಪಸ್ ಕೊಡಲು ಹೋದೆ ಒಮ್ಮೆ. ಫಾರ್ಮ್ ತುಂಬತೊಡಗಿದ ಸೇಲ್ಸ್ ಹುಡುಗಿ ಫೋನ್ ನಂಬರ್ , ಅಡ್ರೆಸ್ ಎಲ್ಲ ಬರೆದಾದ ಮೇಲೆ ಕೇಳಿದ್ದು ಹೆಸರು. ನಿಧಾನವಾಗೇ ಉಲಿದೆ. ಅವಳ ಕಣ್ಣು ಕಿರಿದಾಯ್ತು. ಫಾರ್ಮ್ ಮತ್ತು ಪೆನ್ನು ನನ್ನ ಕೈಗೆ ಬಂತು! ಅರ್ರೇ, ಎಂಥ ಜನನಪ್ಪಾ ಎಂದು ಒಳಬಾಯಿಯಲ್ಲೇ ಹಲುಬುತ್ತ ಹೆಸರು ಬರೆದು ಫಾರ್ಮ್ ಹಿಂದಿರುಗಿಸಿದೆ. 'ಪೂರ್.. ನೀಮಾ ಬಟ್ - ಐ ಫೈಂಡ್ ಇಟ್ ಫನ್ನಿ! ಡೋಂಟ್ ಟೇಕ್ ಇಟ್ ಟು ಹಾರ್ಟ್' ಎಂಬ ಮಾತಿಗೆ 'ಡೂ ಯೂ ವಾಂಟ್ ಟು ನೋ ದಿ ಮೀನಿಂಗ್ ಆಫ್ ಇಟ್' ಅಂತ ಉರಿ ಉರಿ ಮುಖ ಮಾಡಿ ಹೇಳಿ ಬಂದೆ. ಆದರೂ ಆ 'ಫನ್ನಿ' ಎಂಬ ಶಬ್ದಕ್ಕೆ ಇಡೀ ದಿನ ಮೂಡ್ ಆಫ್ ಮಾಡಿಸುವ ದೈತ್ಯ ಶಕ್ತಿ.

ಆಫೀಸಿನಲ್ಲಿ ಹೆಸರನ್ನು ಅರೂಪಗೊಳಿಸುವ ಮೊದಲು ನಾನೇ 'ಐಮ್ ಪೂರ್ಣಿ' ಅಂತ ಪರಿಚಯ ಮಾಡಿಕೊಂಡೆ. ಕೆಲಸಕ್ಕೆ ಹೋಗ ತೊಡಗಿ ಒಂದು ತಿಂಗಳಾಗಿರಬಹುದು, ಎಲಿಯಟ್ ಬಂದು 'ವಿ ವಾಂಟ್ ಟು ರೀನೇಮ್ ಯೂ' ಅಂದ. ನನ್ನ ಮುಖದ ತುಂಬ ಪ್ರಶ್ನೆ. 'ಕ್ಯಾನ್ ಐ ಕಾಲ್ ಯೂ ಜಾನ್?' ಅಂದ! ಒಂದು ಕೋಳಿ ಕೂಗಿದ ಮೇಲೆ ಹಿಂಡು ಕೋಳಿ ಸುಮ್ಮನಾದೀತೆ? ಇನ್ನೊಬ್ಬಳು 'ಪ್ಯೂನಮಾ' ಅಂದಳು. ಮತ್ತೊಬ್ಬ 'ಪನಾಮಾ'. ಮಗದೊಬ್ಬ 'ಪನಿನಿ' (ಬ್ರೆಡ್ ರೋಲ್ ಮತ್ತು ಟೊಮ್ಯಾಟೋ ಸಾಸ್ ಜೊತೆಗೆ ಮಾಡುವ ಖಾದ್ಯ ಗೊತ್ತಲ್ಲ). ಆ ಮೂಲೆಯಿಂದ ಒಂದು ದನಿ 'ಪಾಲಿಮರ್'. ಅದೋ ರಿಚರ್ಡ್ ಹೇಳಿದ 'ಪುನ್ಮೀನಾ'. ಟೋನಿಗೆ 'ಪ್ಯೂನಂ' ಈಸಿಯಂತೆ! ಫಿಲಿಪ್ ಗೆ ವಾರದ ಹಿಂದೆ ನಾನು ಹೇಳಿದ ಮಾತೇ ನೆನಪಿದೆ. ಅವ ನನಗೆ 'ಫುಲ್ ಮೂನ್' ಅಂತಾನಂತೆ. 'ಇಷ್ಟೆಲ್ಲ ಹಿಂಸೆ ಕೊಡಬೇಡಿ ನನ್ನ ಹೆಸರಿಗೆ' ಎಂದು ಕೂಗುವವರೆಗೂ ನಡೆದೇ ಇತ್ತು ಶತನಾಮಾವಳಿ , ಸಹಸ್ರನಾಮಾರ್ಚನೆ.

ಅಂತೂ ಇಂತು ಕಷ್ಟಪಟ್ಟು 'ಪೂನಿ' ಎಂದು ಕರೆಯಲು ಕಲಿಸಬೇಕಾದರೆ ಬರೋಬ್ಬರಿ ಆರು ತಿಂಗಳು ಹಿಡಿಯಿತು. 'ಪೂರ್ಣಿ' ಅಂತ ಕರೆಯಬಾರದಾ ಎಂದು ಆಗಾಗ ಅನ್ನಿಸುವುದುಂಟು. ನನ್ನ ಹೆಸರು 'ಪ್ರಜ್ಞಾ' ಆಗಿದ್ದರೆ ಅದು ಇನ್ನೇನು ಆಗುತ್ತಿತ್ತೋ ಅನ್ನುವುದನ್ನು ಆಯಿಯ ಎದುರೇ ಹೇಳಿ 'ಕ್ಕೆ ಕ್ಕೆ ಕ್ಕೆ' ಅಂತ ನಗಬೇಕು ಈ ಬಾರಿ...ಊರಿಗೆ ಹೋದಾಗ.


(’ದಟ್ಸ್ ಕನ್ನಡ’ಕ್ಕೊಂದು ಬೆಚ್ಚನೆಯ ಥಾಂಕ್ಸ್!)

Thursday, 19 June 2008

ಸಾಕಿನ್ನು ಮರುಗಿದ್ದು

ತುಸು ಕಸಿವಿಸಿ
ಇಲ್ಲೇ ಎಲ್ಲೋ
ಮೂಲೆಯಲ್ಲಿ
ಮನಸೇ ಇರಬೇಕು
ಅಲ್ಲವಾದರೆ ಹೆಜ್ಜೆಯೇಕೆ
ತತ್ತರಿಸೀತು?

ಅದೋ, ಅವ ಹೇಳುತ್ತಿದ್ದಾನೆ
ದಿನದ ನಗುವಿಲ್ಲ
ಮುಖದಲ್ಲಿ
ಅಂಗಿ ಹಾಕಿದ್ದು
ತಿರುವುಮುರುವಂತೆ
ಅವಳು ಉಸುರಿದಳು
ಕಿವಿಯಲ್ಲಿ
ಅರೇ, ಇದು ಚಿತ್ತ ಸ್ವಾಸ್ಥ್ಯದ ಪ್ರಶ್ನೆಯೇ?
ಸುಮ್ಮನೇ ತಳಮಳ...

ನಡೆದದ್ದು ಅವರ
ಮೂಗಿನ ನೇರ ದಾರಿ ಹಿಡಿದೇ.
ಹಾಗಾದರೆ ತಪ್ಪಾಗಿದ್ದೆಲ್ಲಿ?
ಕೊನೆಗೂ ಮರೆತಿದ್ದು
ಮನೆಯ ಹಾದಿ!

ಕಣ್ಣ ಸುತ್ತಲಿನ ಕಪ್ಪು
ವರ್ತುಲ ಕಾಯುತ್ತಿರುವುದು
ನಿನ್ನ ಅಪ್ಪುಗೆಗಲ್ಲವೇ?
ತುಟಿಯ ಪಕ್ಕದ
ಮಚ್ಚೆಗೆ ಬೇಕಿರುವುದು
ಬೆಚ್ಚನೆಯ ನೇವರಿಕೆ ಅಲ್ಲವೇ?