Thursday 4 June 2009

ಒಳಗೋ? ಹೊರಗೊ..?

ಹೊರ ಬಿದ್ದಾಗ ತಿಳಿದಿದ್ದಿಷ್ಟು-

ಬೆಳಕೂ ಆರದ, ಕತ್ತಲೆಯೂ ಆಗದ
ಹಿರಣ್ಯಕಶಿಪುವಿನ ಮುಸ್ಸಂಜೆ
ಕುಣಿತ ಮುಗಿಸಿದ ಸೂರ್ಯ
ರಂಗಸ್ಥಳಕ್ಕಿಳಿಯದ ಚಂದ್ರ
ಕಣ್ಣಂಚಿನಲ್ಲಿ ದಿನವೊಂದು ಮುಳುಗಿ ಹೋಗುವ ಭಯ
ಮಹಡಿ ಮನೆಯಲ್ಲಿ ಮುಗಿಯದ ಮಾತು
ಅವಳದ್ದೇ ಮೇಲುಗೈ - ಎಂದಿನಂತೆ.
ಹೆಜ್ಜೆಗಳ ನಂಬಿಯೇ ಹೊರಟಿದ್ದು
ಅವೂ ದಾರಿತಪ್ಪಿದರೆ ತಲುಪುವುದೆಲ್ಲಿಗೆ?

ಒಳ ಹೊಕ್ಕಾಗ ಅರಿತಿದ್ದಿಷ್ಟು-

ಗೋಡೆಯ ಮೇಲಿನ ಚಿತ್ರದಲ್ಲಿ
ಅವಿತಂತಿದ್ದ ಪ್ರಲ್ಹಾದ ಛಾಯೆ
ಕಣ್ಮುಂದಿನ ಹೂಗಳೆಲ್ಲ ತಾರೆಯಾಗಿ
ಬದಲಾದದ್ದು ಎಂಥ ಮಾಯೆ?
ಹೊಸ ಹಗಲಿಗೆ ಹೆಗಲು ಕೊಡಲು
ಸುತ್ತುವರಿದವರ ಕಣ್ಣಲ್ಲಿ ಕಾತರತೆ
ದೂರದಲ್ಲಿ ಮಾತುಗಳೆಲ್ಲ ಮುಗಿದು
ಮೌನದ್ದೇ ದರ್ಬಾರು
ಪ್ರೀತಿಯೋ - ಭೀತಿಯೋ ಅಂತೂ ಬಗೆಹರಿದಂತೆ
ಹೆಜ್ಜೆಗಳೂ ಪಯಣ ಮುಗಿಸಿದ್ದು ನಡುಮನೆಯಲ್ಲಿಯೇ

ಪ್ರಶ್ನೆ ಬೃಹದಾಕಾರ
ಒಳಗೋ? ಹೊರಗೋ..?

9 comments:

Rajesh Manjunath - ರಾಜೇಶ್ ಮಂಜುನಾಥ್ said...

ಪೂರ್ಣಿಮ ಮೇಡಮ್,
ನಿಮ್ಮ ಈ ಕವನ ನನ್ನ ತಾರ್ಕಿಕ ಮಟ್ಟ ಮೀರಿದ್ದು, ತುಂಬಾನೆ ಪ್ರಬುದ್ಧ ಕವನ. ಪದ ಸಂಯೋಜನೆ ಮನೋಜ್ಞವಾಗಿದೆ.

ಸಾಗರದಾಚೆಯ ಇಂಚರ said...

ಪೂರ್ಣಿಮಾ,
ಒಳ್ಳೆಯ ಕವನ, ಭಾವನೆಗಳ ಮಿಳಿತ ಸೊಗಸಾಗಿದೆ,

ಶಾಂತಲಾ ಭಂಡಿ (ಸನ್ನಿಧಿ) said...

ಪೂಣಿ...
ಬೆಳಕೂ ಆರದ ರಾತ್ರಿಯೂ ಬಾರದ ಮನೋಹರ ಮುಸ್ಸಂಜೆಯೊಳಗೂ ಅಡಗಿರುವ ಚುಮುಗುಡುವ ಭಯದ ಸಾಲುಗಳು. ದಿನ ಮುಗಿದು ಹೋಗುವ ನೋವು. ನಮ್ಮಂಥ ಸೂಕ್ಷ್ಮ ಜೀವಿಗಳನ್ನು ಮಧ್ಯಾಹ್ನವೇ ಕಾಡುತ್ತಿದೆ ಮುಸ್ಸಂಜೆಯಾಗುವ ಭಯ, ಮತ್ತು ದಿನ ಮುಗಿದು ಹೋಗುವ ಭೀಕರ ಸತ್ಯ.
ದಿನ ಮುಗಿದುಹೋಗುವ ಮುನ್ನದ ಸಾಲುಗಳು ದಿನವಿಡೀ ಕಾಡುವಂತಿವೆ. ನೀನು ಮಾತ್ರ ಹೀಗೆ ಬರೆಯಲು ಸಾಧ್ಯ.

thandacool said...

namsakara, kvangalu chennagide.

Santhosh Rao said...

takshana enu artha aglilla. 2 sala oodida mele enoo ondh tara artha aada haage ide...

ಜಲನಯನ said...

ಪೂರ್ಣಿಮ, ಬಹಳ ಗಹನತೆಯ ಆಳಕ್ಕೆ ಭಾವನೆಗಳನ್ನು ತಳ್ಳಿಕೊಂಡು ಹೋಗುವಂತೆ ಭಾಸವಾಯ್ತು ನಿಮ್ಮ ಕವನ ಓದಿ...ಹೆಜ್ಜೆಗಳನ್ನು ನಂಬಿಹೊರಟರೆ..ಅವೇ ದಾರಿ ತಪ್ಪಿದರೆ....ಎಂತಹ ಕಲ್ಪನೆ..ನಂಬಿಕೆಗಳು ಹುಸಿಯಾಗಲು ಸೀಮೆಗಳು ಅಡ್ಡಿಯಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದೀರಿ... ನನಗೆ ಬಹಳ ಇಷ್ಟವಾದ ಸಾಲುಗಳಿವು....
ಗೋಡೆಯ ಮೇಲಿನ ಚಿತ್ರದಲ್ಲಿ
ಅವಿತಂತಿದ್ದ ಪ್ರಲ್ಹಾದ ಛಾಯೆ
ಕಣ್ಮುಂದಿನ ಹೂಗಳೆಲ್ಲ ತಾರೆಯಾಗಿ
ಬದಲಾದದ್ದು ಎಂಥ ಮಾಯೆ?

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

@ರಾಜೇಶ್, ನಿಮ್ಮ ಹೊಗಳಿಕೆಗೆ ಉಬ್ಬಿದ್ದೇನೆ - ಧನ್ಯವಾದಗಳು.
@ಗುರುಮೂರ್ತಿ- ಥಾಂಕ್ಯೂ..ಬರ್ತಾ ಇರಿ.
@ಶಾಂತಲಾ - ಹ್ಮ್, ಕಾಡುವ ಮಧ್ಯಾನ್ಹ - ಕರಗುವ ಸಂಜೆಯ ಬಗ್ಗೆ ಬರೆಯದಿರಲು ಸಾಧ್ಯವಾಗಲೇ ಇಲ್ಲ ನೋಡು! ಕವಿತೆ ನಿಂಗಿಷ್ಟವಾಗಿದ್ದು ಖುಶಿಯ ವಿಚಾರ :-)
@ಟಂಡಾ ಕೂಲ್- ಥಾಂಕ್ಸ್!
@ಸಂತೋಷ್ ಚಿದಂಬರ- ಛೇ.. ಎರಡೆರಡು ಬಾರಿ ಕವಿತೆ ಓದುವಾಂತೆ ಮಾಡಿಬಿಟ್ನಾ..? ಮುಂದಿನ ಬಾರಿ ಸರಳೀಕರಣಕ್ಕೆ ಖಂಡಿತ ಪ್ರಯತ್ನಿಸ್ತೇನೆ :-)
@ಜಲನಯನ- ಕವಿತೆ ಇಷ್ಟಪಟ್ಟಿದ್ದಕ್ಕೆ ಒಂದು ಸಲಾಮು. ಹ್ಮ್, ಈ ಸಾಲುಗಳು ತುಂಬ ಕಾಡಿಸಿದ್ದವು ನನ್ನನ್ನು - ಹೊರಬರದೆ!

Ragu Kattinakere said...

amazing, rarely found a good one in a blog.
First 6 lines:
20
13
10
15
22
14

There is some regularity by using the silence in between although it is not regular but sounds like:
20
15
15
15
20
15

ultimate!

poo.. said...

poomaka its very nice............